ಇಲ್ಲಿ ಮೂಡಿ ಅಲ್ಲಿ ಸರಿದು ಹೋಗುವ ನೆರಳಿನಂತೆ ಬದುಕಿದ್ದ ಬಾಗ್ದಾದಿ. ಸಾರ್ವಜನಿಕವಾಗಿ ಅವನು ಕಾಣಿಸಿಕೊಂಡಿದ್ದು ಕೈ ಬೆರಳುಗಳಲ್ಲಿ ಎಣಿಸಬಹುದಾದಷ್ಟು ಸಲ ಮಾತ್ರ. ಅವನ ದನಿ ಹೊರಗೆ ಕೇಳಿಬಂದದ್ದೂ ವಿರಳವೇ. ಇಸ್ಲಾಮ್ ಧರ್ಮದ ಪಠ್ಯಗಳ ಅತಿ ಕಠಿಣ ಕ್ರೂರ ವ್ಯಾಖ್ಯಾನಗಳಿಗೆ ಹೆಸರಾಗಿದ್ದ ಅವನು. ಇಸ್ಲಾಮಿ ವಿರೋಧಿಗಳಿಗೆ ಅವನು ನಿಗದಿ ಮಾಡಿದ್ದ ಏಕೈಕ ಶಿಕ್ಷೆ ಮರಣ. ತೀವ್ರವಾದಿ ಸಿದ್ಧಾಂತ ಮತ್ತು ವಾಸ್ತವವಾದಿ ಮಿಲಿಟರಿ ಬಲದ ಹದವರಿತ ಮಿಶ್ರಣವೇ ಇವನ ಕ್ಷಣಿಕ ಯಶಸ್ಸಿನ ಗುಟ್ಟು. ಸೋತ ಸದ್ದಾಮ್ ಹುಸೇನನ ಸೇನೆಯ ಬಹುತೇಕ ದಳಪತಿಗಳು ಇವನ ನೇತೃತ್ವದ ಇಸ್ಲಾಮಿಕ್ ಸ್ಟೇಟ್ ಬೆನ್ನಿಗೆ ನಿಂತಿದ್ದರು.
ಖಿಲಾಫತ್ತು ಎಂಬುದು ಕಾಲ್ಪನಿಕ ಮುಸ್ಲಿಂ ಪ್ರಭುತ್ವ. ಅದರ ಮುಖ್ಯಸ್ಥ ಖಲೀಫಾ. ಮಹಮ್ಮದ್ ಪೈಗಂಬರರ ರಾಜಕೀಯ-ಧಾರ್ಮಿಕ ಉತ್ತರಾಧಿಕಾರಿ ಹಾಗೂ ಇಡೀ ಮುಸ್ಲಿಂ ಸಮುದಾಯದ ಮುಖ್ಯಸ್ಥ ಎಂದು ಅರ್ಥ. ಇರಾಕಿನವನಾದ ಬಾಗ್ದಾದಿಯನ್ನು 2014ರಲ್ಲಿ ಇಸ್ಲಾಮಿಕ್ ಸ್ಟೇಟ್ ಖಲೀಫ ಎಂದು ಆಯ್ಕೆ ಮಾಡಿಕೊಂಡಿತ್ತು.
ಯಾಜಿದಿಗಳನ್ನು ಲೈಂಗಿಕ ಗುಲಾಮರನ್ನಾಗಿ ಬಳಕೆ ಮಾಡಿಕೊಂಡು ಅವರ ಮಾರಣಹೋಮ ನಡೆಸಿದ್ದ. ಸಂಘಟಿತ ಅತ್ಯಾಚಾರ, ಮರಣದಂಡನೆಗಳನ್ನು ಜರುಗಿಸಿದ. ನರಸಂಹಾರಗಳನ್ನು ನಿರ್ದೇಶಿಸಿದ. ಸಾಮೂಹಿಕವಾಗಿ ಶಿಲುಬೆಗೇರಿಸಿದ, ಜನಾಂಗೀಯ ಹತ್ಯೆ ನಡೆಸಿದ, ಲೈಂಗಿಕ ಗುಲಾಮಗಿರಿಯ ಹಾಗೂ ಕೊಚ್ಚುವ, ಕಲ್ಲಿನಿಂದ ಹೊಡೆಯುವ ಹಾಗೂ ಸುಡುವ ಮೂಲಕ ಕೊಲ್ಲುವ ವಿಡಿಯೋಗಳನ್ನು ಮಾಡಿ ಜಗತ್ತಿನಾದ್ಯಂತ ಇಸ್ಲಾಮಿಕ್ ಸ್ಟೇಟ್ ನ ಪ್ರಚಾರ ನಡೆಸಿದ. ಮಿತಿಯಿಲ್ಲದ ಕ್ರೌರ್ಯ ಅವನದಾಗಿತ್ತು.
ಕನಿಷ್ಠ ಮೂರು ಸಲ ಮದುವೆಯಾಗಿದ್ದ ಅವನಿಗೆ ಕನಿಷ್ಠ ಆರು ಮಕ್ಕಳಿದ್ದರು ಎನ್ನಲಾಗಿದೆ. ಆದರೆ, 2013ರಲ್ಲಿ ಸಿರಿಯಾದಿಂದ ಅಪಹರಿಸಲಾದ ಅಮೆರಿಕೆಯ ಮಾನವ ಹಕ್ಕು ಹೋರಾಟಗಾರ್ತಿ 26 ವರ್ಷ ವಯಸ್ಸಿನ ಕೇಲಾ ಮುಲ್ಲರ್ ಸೇರಿದಂತೆ ಲೆಕ್ಕವಿಲ್ಲದಷ್ಟು ಯಾಜಿದಿ ಹೆಣ್ಣು ಸೆರೆಯಾಳುಗಳನ್ನು ತನ್ನ ಲೈಂಗಿಕ ಗುಲಾಮರನ್ನಾಗಿಸಿ ಇರಿಸಿಕೊಂಡಿದ್ದ. 2015ರಲ್ಲಿ ಮುಲ್ಲರ್ ಳನ್ನು ತಲೆಕಡಿದು ಬರ್ಬರ ಹತ್ಯೆಗೆ ಗುರಿ ಮಾಡಿದ. ಇಸ್ಲಾಮ್ ಮತಾವಲಂಬಿಗಳಲ್ಲದ ಯಾಜಿದಿ ಹೆಣ್ಣುಮಕ್ಕಳ ಸಾಮೂಹಿಕ ಅತ್ಯಾಚಾರದಲ್ಲಿ ನೇರವಾಗಿ ಪಾಲ್ಗೊಂಡಿದ್ದ ಬಾಗ್ದಾದಿ. ಹದಿನೈದು ವರ್ಷದ ಬಾಲೆಯನ್ನು ಎಳೆದೊಯ್ದು ಅತ್ಯಾಚಾರ ನಡೆಸಿದ್ದ.
ನಲವತ್ತಮೂರನೆಯ ವಯಸ್ಸಿಗಾಗಲೇ ಜಾಗತಿಕ ಭಯೋತ್ಪಾದನಾ ಜಾಲವನ್ನು ಕಟ್ಟಿ ಬೆಳೆಸಿದ್ದ. ನೂರು ದೇಶಗಳಿಂದ ಸಾವಿರಾರು ಮಂದಿ ಮುಸ್ಲಿಂ ಯುವಕರನ್ನು ಈ ಜಾಲಕ್ಕೆ ಸೆಳೆದು ಸೇರಿಸಿಕೊಂಡ. ಇವನ ಭಯೋತ್ಪಾದಕ ಸಂಘಟನೆ ಒಂದು ಹಂತದಲ್ಲಿ ಬ್ರಿಟನ್ನಿನಷ್ಟು ದೊಡ್ಡ ಭೂಪ್ರದೇಶವನ್ನು ನಿಯಂತ್ರಿಸುತ್ತಿತ್ತು. 36ಕ್ಕೂ ಹೆಚ್ಚು ದೇಶಗಳಲ್ಲಿ ಭಯೋತ್ಪಾದನೆ ಚಟುವಟಿಕೆಯನ್ನು ನಿರ್ದೇಶಿಸಿದ ಮತ್ತು ಪ್ರೇರೇಪಿಸಿದ.
ಸತ್ತಾಗ ಅವನ ವಯಸ್ಸು 48 ವರ್ಷ. 2014ರಿಂದ 2019ರ ನಡುವಣ ಐದು ವರ್ಷಗಳ ಕಾಲ ಭಯೋತ್ಪಾದನೆಯ ನೆತ್ತರಿನ ಹುಚ್ಚು ಹೊಳೆಯನ್ನೇ ಹರಿಸಿದ. 80 ದೇಶಗಳ 30-35 ಸಾವಿರ ಇಸ್ಲಾಮಿಕ್ ಹೋರಾಟಗಾರರು ಐ.ಎಸ್. ನಲ್ಲಿದ್ದರು. 2014ರಲ್ಲಿ ಖಿಲಾಫತ್ ನ್ನು (ಮುಸ್ಲಿಮ್ ಸಾಮ್ರಾಜ್ಯ) ಘೋಷಣೆ ಮಾಡಿದಾಗ ಒಂದು ಲಕ್ಷ ಚದರ ಕಿ.ಮೀ. ಪ್ರದೇಶ ಐ.ಎಸ್. ಅಧೀನದಲ್ಲಿತ್ತು. ಒಂದು ಹಂತದಲ್ಲಿ ಐ.ಎಸ್. ನ ದಿನನಿತ್ಯದ ತೈಲ ಆದಾಯ ಹತ್ತು ಲಕ್ಷದಿಂದ 20 ಲಕ್ಷ ಡಾಲರುಗಳಷ್ಟಿತ್ತು. 200 ಕೋಟಿ ಡಾಲರುಗಳಷ್ಟು ಆಸ್ತಿಪಾಸ್ತಿ ಹೊಂದಿತ್ತು. ವಿಶ್ವದಲ್ಲೇ ಅತ್ಯಂತ ಶ್ರೀಮಂತ ಭಯೋತ್ಪಾದನಾ ಸಂಘಟನೆ ಎನಿಸಿತ್ತು. ಐ.ಎಸ್.ವಶಪಡಿಸಿಕೊಂಡಿದ್ದ ಭೂಪ್ರದೇಶವನ್ನು ಸಂಪೂರ್ಣವಾಗಿ ಬಿಡಿಸಿಕೊಳ್ಳಲು ಐದು ವರ್ಷಗಳೇ ಹಿಡಿದಿದ್ದವು.
ಶತಮಾನಗಳಷ್ಟು ಹಳೆಯ ಚರ್ಚುಗಳನ್ನು ಬಾಂಬ್ ಫ್ಯಾಕ್ಟರಿಗಳನ್ನಾಗಿ ಪರಿವರ್ತಿಸಿದ್ದ.
2017ರಲ್ಲಿ ಇವನ ಅವನತಿ ಆರಂಭ ಆಗಿತ್ತು. ಸಿರಿಯಾದ ರಾಜಧಾನಿ ರಾಕ್ಕಾ ಮತ್ತು ಇರಾಕ್ ನ ಮೋಸುಲ್ ಪಟ್ಟಣಗಳ ಮೇಲೆ ಐ.ಎಸ್. ಹಿಡಿತ ಕಳೆದುಕೊಂಡಿತ್ತು 2019ರ ಮಾರ್ಚ್ ವೇಳೆಗೆ ಅದರ ಕಟ್ಟಕಡೆಯ ನೆಲೆಯಾದ ಬಾಘುಜ್ ನಿಂದಲೂ ಓಡಿಸಲಾಗಿತ್ತು. ಹತ್ತು ವರ್ಷಗಳ ಕಾಲ ಇವನಿಗಾಗಿ ಜಾಗತಿಕ ಬೇಟೆ ಜರುಗಿತು. ತುಂಬ ನಂಬಿಕೆಯ ಸಹವರ್ತಿಗಳನ್ನು ಭೇಟಿ ಮಾಡುವಾಗಲೂ ತೀರಾ ಅತಿರೇಕದ ಸುರಕ್ಷಾ ಮುನ್ನೆಚ್ಚರಿಕೆ ವಹಿಸುತ್ತಿದ್ದ. ಯಾರನ್ನೂ ನಂಬುತ್ತಿರಲಿಲ್ಲ. ಇವನನ್ನು ಜೀವಸಹಿತ ಇಲ್ಲವೇ ಜೀವರಹಿತ ಹಿಡಿದು ತಂದವರಿಗೆ ಎರಡೂವರೆ ಕೋಟಿ ಡಾಲರುಗಳ ಬಹುಮಾನವನ್ನು ಘೋಷಿಸಿತ್ತು ಅಮೆರಿಕಾ ಸರ್ಕಾರ.
ಇವನ ಆಡಳಿತದಲ್ಲಿ ಹಾದರದ ಅಪಾದನೆ ಹೊತ್ತ ಹೆಂಗಸರನ್ನು ಕಲ್ಲುಗಳಿಂದ ಹೊಡೆದು ಕೊಲ್ಲಲಾಯಿತು. ಕಳ್ಳರ ಕೈಗಳನ್ನು ಕತ್ತರಿಸಲಾಯಿತು. ಈ ಭಯೋತ್ಪಾದಕರ ಆದೇಶ ಮೀರಿದವರ ತಲೆ ಕಡಿಯಲಾಯಿತು. ಇಸ್ಲಾಮಿಕ್ ಧರ್ಮಗ್ರಂಥಗಳಲ್ಲೂ ಕಾಣದ ಶಿಕ್ಷೆಗಳನ್ನು ನೀಡಲಾಯಿತು. ಜೋರ್ಡಾನಿನ ಪೈಲಟ್ ಒಬ್ಬನನ್ನು ಜೀವಂತ ಸುಡಲಾಯಿತು. ಡ್ರೋನ್ ವಿಮಾನಗಳನ್ನು ಬಳಸಿ ಸುಡುವ ಚಿತ್ರೀಕರಣ ಮಾಡಲಾಯಿತು. ಗೂಢಚಾರಿಕೆಯ ಆರೋಪ ಹೊತ್ತವರನ್ನು ಪಂಜರದಲ್ಲಿ ಕೂಡಿ ಹಾಕಿ ನೀರಿನಲ್ಲಿ ಮುಳುಗಿಸಲಾಯಿತು. ಅವರು ಕಡೆಯ ಉಸಿರೆಳೆಯುವ ಸಂಕಟವನ್ನು ನೀರಿನಡಿ ಚಿತ್ರೀಕರಿಸಲಾಯಿತು. ಟಿ-55 ಟ್ಯಾಂಕ್ ಗಳನ್ನು ಹತ್ತಿಸಿ ಜಜ್ಜಿ ಕೊಲ್ಲಲ್ಪಟ್ಟವರು ಅದೆಷ್ಟೋ ಮಂದಿ. ಕಸಾಯಿ ಖಾನೆಗಳಲ್ಲಿ ತಲೆ ಕೆಳಗಾಗಿ ತೂಗು ಹಾಕಿ ಮಾಂಸದ ಪ್ರಾಣಿಗಳನ್ನು ಕತ್ತರಿಸುವಂತೆ ಕತ್ತರಿಸುತ್ತಿದ್ದುದೂ ಉಂಟು. ಇವುಗಳ ಚಿತ್ರೀಕರಣವನ್ನು ಅಂತರ್ಜಾಲದಲ್ಲಿ ಪ್ರಸಾರ ಮಾಡಲಾಗುತ್ತಿತ್ತು.
ಇವನ ಕ್ರೌರ್ಯ, ಹಿಂಸೆ ಆಟಾಟೋಪಗಳು ಇವನನ್ನು ಬಗ್ಗು ಬಡಿಯಬೇಕೆಂಬ ಅಮೆರಿಕಾ ನೇತೃತ್ವದ ಸಮ್ಮಿಶ್ರ ಪಡೆಗಳ ಸಂಕಲ್ಪವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದವು. ಹತ್ತು ವರ್ಷಗಳ ಹಿಂದೆಯೇ ಅವನು ಮೊಬೈಲ್ ಫೋನ್ ಬಳಕೆಯನ್ನು ಕೈ ಬಿಟ್ಟಿದ್ದ. ದೂತರು ತಲುಪಿಸುತ್ತಿದ್ದ ಸಂದೇಶಗಳನ್ನೇ ನೆಚ್ಚುತ್ತಿದ್ದ.