ನಿರೀಕ್ಷೆಯಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ಅಧಿಕೃತ ಭಾರತ ಪ್ರವಾಸ ಆರಂಭಿಸಿದ್ದು, ಸೋಮವಾರ ಬೆಳಗ್ಗೆ 11.40ಕ್ಕೆ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಬಳಿಕ ನಿಗದಿಯಂತೆ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಬಳಿಕ ಮೊಟೆರಾ ಕ್ರೀಡಾಂಗಣದತ್ತ ರೋಡ್ ಶೋ ಆರಂಭಿಸಿದ್ದಾರೆ. ಅಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರೊಂದಿಗೆ ಅವರು ಭಾಗವಹಿಸಿದ್ದಾರೆ. ಬಳಿಕ ಸಂಜೆ ಆಗ್ರಾಕ್ಕೆ ಭೇಟಿ ನೀಡಿ ವಿಶ್ವವಿಖ್ಯಾತ ತಾಜ್ ಮಹಲ್ ವೀಕ್ಷಣೆ ಮಾಡಿ ನಂತರ ರಾಜಧಾನಿಗೆ ವಾಸ್ತವ್ಯಕ್ಕೆ ತೆರಳಲಿದ್ದಾರೆ.
ಇದು ಅವರ ಇಂದಿನ ಕಾರ್ಯಕ್ರಮಪಟ್ಟಿ. ಆದರೆ, ವಿಶ್ವದ ದೊಡ್ಡಣ್ಣನ ಈ ಭಾರತದ ಭೇಟಿ ಮೇಲ್ನೋಟಕ್ಕೆ ಟಿವಿ ಕ್ಯಾಮರಾಗಳ ಮೂಲಕ ಎಲ್ಲರ ಕಣ್ಣೆದುರಿಗೆ ಬಿಚ್ಚಿಕೊಳ್ಳುವ ಈ ಭೇಟಿ, ರೋಡ್ ಶೋ, ವೀಕ್ಷಣೆಗಳಿಗೆ ಮಾತ್ರವೇ ಸೀಮಿತವೆ? ಎಂದರೆ; ಅದಕ್ಕೆ ಉತ್ತರ ‘ಖಂಡಿತಾ ಇಲ್ಲ’ ಎಂದೇ!. ಏಕೆಂದರೆ, ಟ್ರಂಪ್ ಅಮೆರಿಕದ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಜಗತ್ತಿನ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಅಮೆರಿಕವನ್ನು ಹೊರತುಪಡಿಸಿ ತಮ್ಮ ರಿಯಲ್ ಎಸ್ಟೇಟ್ ಉದ್ಯಮದ ಅತಿ ಹೆಚ್ಚು ಟ್ರಂಪ್ ಟವರುಗಳನ್ನು ಹೊಂದಿರುವ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ರಿಲೆಯನ್ಸ್ ನಂತಹ ಅಮೆರಿಕದ ಪ್ರಮುಖ ತೈಲೋದ್ಯಮ ಕಂಪನಿಯ ತವರಿಗೆ ಭೇಟಿ ನೀಡುತ್ತಿದ್ದಾರೆ. ಹಾಗಾಗಿ ಟಿವಿ ಕ್ಯಾಮರಾಗಳ ಕಣ್ಣೋಟದ ಆಚೆಯ ವಿದ್ಯಮಾನಗಳಿಲ್ಲದೇ ಈ ಭೇಟಿ ಸಫಲವಾಗಲು ಸಾಧ್ಯವೇ ಇಲ್ಲ!
ಜೊತೆಗೆ ಅಮೆರಿಕದ ಹೈನುಗಾರಿಕೆ ಉತ್ಪನ್ನಗಳಿಗೆ ಭಾರತದಲ್ಲಿ ಮುಕ್ತ ಅವಕಾಶ ನೀಡುವ ಒಪ್ಪಂದದ ಕುರಿತ ಮಾತುಗಳೂ ಈ ಭೇಟಿಯಲ್ಲಿ ನಡೆಯಬಹುದು ಎಂಬ ನಿರೀಕ್ಷೆಗಳಿವೆ. ಸ್ವತಃ ಟ್ರಂಪ್ ಯಾವುದೇ ಒಪ್ಪಂದದ ಮಾತುಕತೆ ಇಲ್ಲ ಎಂದಿದ್ದರೂ, ಅವರೇ ಮೊತ್ತೊಮ್ಮೆ ವ್ಯಾಹಹಾರಿಕ ಮಾತುಕತೆಗಳೂ ಈ ಭೇಟಿಯಲ್ಲಿ ಸೇರಿವೆ ಎಂದಿದ್ದಾರೆ. ಹಾಗಾಗಿ ವ್ಯಾವಹಾರಿಕ ಒಪ್ಪಂದಗಳ ಸ್ವರೂಪ, ವಲಯ, ವಿಸ್ತಾರದಂತಹ ಮಾಹಿತಿಗಳು ಬಹಿರಂಗವಾಗದೇ ಹೋದರೂ, ಒಬ್ಬ ಉದ್ಯಮಿಯಾಗಿ, ಉದ್ಯಮವಲ್ಲದೆ ಇನ್ನಾವುದೇ ವಿಷಯಗಳ ಬಗ್ಗೆ ಆಸಕ್ತಿಯಾಗಲೀ, ಜಾಗತಿಕ ಆಗುಹೋಗುಗಳನ್ನು ವ್ಯಾಪಾರ-ವಹಿವಾಟು ಹೊರತುಪಡಿಸಿ ನೋಡುವ ಮುತ್ಸದ್ಧಿತನವಾಗಲೀ ಇಲ್ಲದ ಟ್ರಂಪ್ ಭೇಟಿಯಲ್ಲಿ ಖಂಡಿತವಾಗಿಯೂ ವ್ಯಾವಹಾರಿಕ ಉದ್ದೇಶಗಳಿಂದ ಹೊರತಾಗಿರಲು ಸಾಧ್ಯವೇ ಇಲ್ಲ ಎಂಬುದು ಜಾಗತಿಕ ಮಟ್ಟದಲ್ಲಿ ಬಹಿರಂಗ ಸತ್ಯ.
ಹಾಗೆ ನೋಡಿದರೆ, ಟ್ರಂಪ್ ಕಳೆದ 2016ರ ತಮ್ಮ ಅಧ್ಯಕ್ಷೀಯ ಚುನಾವಣೆಯ ಹೊತ್ತಲ್ಲಿ ಕೂಡ ಭಾರತದ ಬಗ್ಗೆ ಮೃದು ಧೋರಣೆ ತಳೆಯಲು ಇದ್ದ ಕಾರಣ ಕೂಡ ವ್ಯವಹಾರ ಹಿತಾಸಕ್ತಿಯೇ. ಅಮೆರಿಕ ಹೊರತುಪಡಿಸಿ ಟ್ರಂಪ್ ಉದ್ಯಮದ ಅತಿ ಹೆಚ್ಚು ರಿಯಲ್ ಎಸ್ಟೇಟ್ ಹೂಡಿಕೆ ಇರುವುದು ಭಾರತದಲ್ಲಿಯೇ. ಭಾರತದ ಪೂನಾ, ಮುಂಬೈ, ಕೋಲ್ಕತ್ತಾ, ಗುರುಗ್ರಾಮದಲ್ಲಿ ಬೃಹತ್ ಟ್ರಂಪ್ ಟವರ್ ಎಂಬ ವಸತಿ ಸಮುಚ್ಛಯಗಳಿವೆ. ಈ ನಾಲ್ಕು ಸ್ಥಳಗಳಲ್ಲಿ ಒಟ್ಟು ಆರು ಬೃಹತ್ ಟ್ರಂಪ್ ಟವರುಗಳಿದ್ದು, ಒಟ್ಟು ಮೌಲ್ಯ ಸುಮಾರು 1.5 ಬಿಲಿಯನ್ ಡಾಲರ್!. ಅಂದರೆ, ಸದ್ಯ ಈಗಾಗಲೇ ಕೇವಲ ರಿಯಲ್ ಎಸ್ಟೇಟ್ ವಲಯದಲ್ಲಿಯೇ ಟ್ರಂಪ್ ಕಂಪನಿ ಭಾರತದಲ್ಲಿ ಮಾಡಿರುವ ಹೂಡಿಕೆ, ಸುಮಾರು 10,800 ಕೋಟಿ ರೂ.! ಆದರೆ, ದೇಶದ ಆರ್ಥಿಕ ಹಿಂಜರಿತ ಪರಿಣಾಮವಾಗಿ ಆ ಬೃಹತ್ ಟವರುಗಳು ಬಹುತೇಕ ಫ್ಲಾಟುಗಳು ಖಾಲಿ ಬಿದ್ದಿವೆ. ಆದಾಗ್ಯೂ ದೇಶದ ಅತ್ಯಂತ ಪ್ರತಿಷ್ಠಿತ ಐಷಾರಾಮಿ ರಿಯಲ್ ಎಸ್ಟೇಟ್ ಆಸ್ತಿಗಳು ಎಂಬ ಹೆಗ್ಗಳಿಕೆ ಆ ಟವರುಗಳದ್ದು!
ಆ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ವಲಯಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವನ್ನು ಮಣಿಸಲು ಟ್ರಂಪ್ ಯಾವೆಲ್ಲಾ ಪಟ್ಟುಗಳನ್ನು ಹಾಕಬಹುದು? ಅದಕ್ಕೆ ಟ್ರಂಪ್ ಆತ್ಮೀಯ ಗೆಳೆಯರಾದ ನಮ್ಮ ಪ್ರಧಾನಿಗಳು ಹೇಗೆ ಸ್ಪಂದಿಸಬಹುದು ಎಂಬುದನ್ನು ಕಾದುನೋಡಬೇಕಿದೆ. ಟ್ರಂಪ್ ಭೇಟಿಯ ಹಿನ್ನೆಲೆಯಲ್ಲಿ ಭಾರತದ ಟ್ರಂಪ್ ಉದ್ಯಮ ಸಾಮ್ರಾಜ್ಯದ ಕುರಿತು ‘ದ ನ್ಯೂಯಾರ್ಕ್ ಟೈಮ್ಸ್’ ವಿವರ ವರದಿ ಮಾಡಿದ್ದು, ಭಾರತದ ಟ್ರಂಪ್ ಟವರುಗಳ ಸ್ಥಿತಿಗತಿ, ಭವಿಷ್ಯದ ಯೋಜನೆಗಳ ಕುರಿತ ಚರ್ಚೆ ನಡೆಸಲಾಗಿದೆ.
ಇನ್ನು ದೇಶದ ಆರ್ಥಿಕತೆಯಲ್ಲಿ ರಿಯಲ್ ಎಸ್ಟೇಟ್ ಗಿಂತ ಹೆಚ್ಚು ಪ್ರಾಮುಖ್ಯತೆ ಹೊಂದಿರುವ ಇಂಧನ ತೈಲ ವಲಯದಲ್ಲಿ ಆಗಿರುವ ಬೆಳವಣಿಗೆಗಳಿಗೂ, ಟ್ರಂಪ್ ಭೇಟಿಗೂ ಇರುವ ನಂಟು ಏನು ಎಂಬ ಕುತೂಹಲ ಸಹಜ.
ಹೌದು, ದೇಶದ ಸಾರ್ವಜನಿಕ ವಲಯದ ತೈಲ ಕಂಪನಿಗಳು ಕಳೆದ ಆರು ವರ್ಷಗಳಲ್ಲಿ ದಿಢೀರ್ ನಷ್ಟಕ್ಕೆ ಗುರಿಯಾಗಿ ಸಂಕಷ್ಟ ಎದುರಿಸುತ್ತಿರುವಾಗ, ಪ್ರಧಾನಿ ಮೋದಿಯವರ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮುಖೇಶ್ ಅಂಬಾನಿ ಅವರ ರಿಲೆಯನ್ಸ್ ಇಂಡಸ್ಟ್ರೀಸ್ ಲಿ(ಆರ್ ಐ ಎಲ್) ಮಾತ್ರ ತಮ್ಮ ಲಾಭದ ಗ್ರಾಫನ್ನು ಏರಿಸಿಕೊಳ್ಳುತ್ತಲೇ ಇದೆ. ಆರ್ ಐ ಎಲ್ ದೇಶದ ಅತಿದೊಡ್ಡ ತೈಲ ಸಂಸ್ಕರಣಾ ಘಟಕವನ್ನು ಮತ್ತು ಅದಕ್ಕೆ ಹೊಂದಿಕೊಂಡಂತೆ ಬೃಹತ್ ಬಂದರನ್ನು ಹೊಂದಿರುವ ಗುಜರಾತಿನಿಂದಲೇ ಟ್ರಂಪ್ ಅವರ ಭಾರತ ಭೇಟಿ ಆರಂಭವಾಗುತ್ತಿದೆ. ಇದು ಕೇವಲ ಕಾಕತಾಳೀಯವಿರಬಹುದು.
ಆದರೆ, ಟ್ರಂಪ್ ಈ ಭೇಟಿಯ ವೇಳೆ, ಬಹುತೇಕ ಕಳೆದ ಒಂದು ವರ್ಷದಿಂದ ಮುಖೇಶ್ ಅಂಬಾನಿ ಕಂಪನಿ ನಿರಂತರ ಪ್ರಯತ್ನ ಮಾಡುತ್ತಿರುವ ಒಂದು ಮಹತ್ವದ ವ್ಯವಹಾರಿಕ ಬಿಕ್ಕಟ್ಟಿಗೆ ಒಂದು ನಿರ್ಣಾಯಕ ಅಂತ್ಯ ಬೀಳಬಹುದು ಎಂಬ ನಿರೀಕ್ಷೆ ಉದ್ಯಮ ವಲಯದಲ್ಲಿದೆ. ಜಗತ್ತಿನ ಪ್ರಮುಖ ಪೆಟ್ರೋಲಿಯಂ ಉತ್ಪಾದಕ ರಾಷ್ಟ್ರ ವೆನಿಜ್ಯುವೆಲಾದ ಮೇಲೆ ಕಳೆದ ವರ್ಷ ಅಮೆರಿಕ ಹೇರಿದ ಆರ್ಥಿಕ ದಿಗ್ಬಂಧನ ಮತ್ತು ಆ ರಾಷ್ಟ್ರದೊಂದಿಗೆ ರಿಲೆಯನ್ಸ್ ಹೊಂದಿರುವ ತೈಲ ವಹಿವಾಟಿಗೆ ಸಂಬಂಧಿಸಿದ ಬಹುಕೋಟಿ ಡೀಲ್ ಸಂಗತಿ ಇದು.
ಟ್ರಂಪ್ ಭಾರತ ಭೇಟಿ ಮತ್ತು ಮುಖೇಶ್ ಅಂಬಾನಿ ಅವರ ಉದ್ಯಮ ಹಿತಾಸಕ್ತಿಯ ಲಾಬಿಯ ಕುರಿತು ‘ದ ಕ್ಯಾರವಾನ್’ ಜಾಲ ಸುದ್ದಿತಾಣ ವಿಶೇಷ ವರದಿ ಮಾಡಿದ್ದು, ಅಮೆರಿಕ ಹೇರಿರುವ ದಿಗ್ಬಂಧನವನ್ನು ಮೀರಿ ರಿಲೆಯನ್ಸ್ ಕಳೆದ ಒಂದು ವರ್ಷದಲ್ಲಿ ನಡೆಸಿರುವ ಬರೋಬ್ಬರಿ 27 ಸಾವಿರ ಕೋಟಿ ರೂ. ಕಚ್ಛಾ ತೈಲ ಇಂಧನ ವಹಿವಾಟಿನ ಹಿನ್ನೆಲೆಯಲ್ಲಿ ಟ್ರಂಪ್ ಭೇಟಿಯನ್ನು ವಿಶ್ಲೇಷಿಸಲಾಗಿದೆ.
ಮಧುರಾವೋ ಮತ್ತು ಜಾನ್ ಗುವೈಡೋ ನಡುವಿನ ಅಧಿಕಾರದ ಗುದ್ದಾಟದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದ ವೆನಿಜುವೆಲಾ, ಅರಾಜಕತೆಗೆ ಸಿಲುಕಿತ್ತು. ಗುವೈಡೋ ನೆರವು ಯಾಚಿಸಿ ಮೊರೆಹೋದದ್ದನ್ನೇ ನೆಪವಾಗಿಸಿಕೊಂಡು ಅಮೆರಿಕದ ಟ್ರಂಪ್ ಆಡಳಿತ ವೆನಿಜುವೆಲಾದ ಮೇಲೆ ಆರ್ಥಿಕ ದಿಗ್ಬಂಧನ ಹೇರಿ, ಆ ದೇಶದೊಂದಿಗೆ ಎಲ್ಲಾ ರೀತಿಯ ಆರ್ಥಿಕ ಸಂಬಂಧ ಕಡಿತುಕೊಂಡಿತು. ಜೊತೆಗೆ ಅಮೆರಿಕದಲ್ಲಿ ವಹಿವಾಟು ಹೊಂದಿರುವ ಮತ್ತು ಡಾಲರ್ ಮೂಲಕ ವಹಿವಾಟು ನಡೆಸುವ ಎಲ್ಲಾ ದೇಶಗಳೂ ಈ ದಿಗ್ಬಂಧನಕ್ಕೆ ಬದ್ಧರಾಗಿರಬೇಕು ಎಂಬ ಆದೇಶವೂ ಹೊರಬಿದ್ದಿತ್ತು. ಆದರೆ, ರಿಲೆಯನ್ಸ್ ತನ್ನ ರಿಫೈನರಿಯ ಪ್ರಮುಖ ಕಚ್ಛಾ ತೈಲ ಸರಬರಾಜು ಮೂಲವಾದ ವೆನಿಜುವೆಲಾದ ಸರ್ಕಾರಿ ಸ್ವಾಮ್ಯದ ಪಿಡಿವಿಎಸ್ ಎ ಯಿಂದ ಸುಮಾರು 27 ಸಾವಿರ ಕೋಟಿ ಕಚ್ಛಾ ತೈಲ ಆಮದುಮಾಡಿಕೊಂಡಿದೆ. ಆದರೆ, ರಿಲೆಯನ್ಸ್ ತನ್ನ ಆ ವ್ಯವಹಾರವನ್ನು ಡಾಲರಿನಲ್ಲೇ ನಡೆಸುತ್ತಿದೆ ಮತ್ತು ಅಮೆರಿಕದಲ್ಲಿ ಆರ್ ಐಎಲ್ ಯುಎಸ್ ಹೆಸರಿನ ತಮ್ಮ ಸಹಸಂಸ್ಥೆಯ ಮೂಲಕ ಇಂಧನ ಮತ್ತಿತರ ವಲಯಗಳಲ್ಲಿ ವ್ಯವಹಾರ ನಡೆಸುತ್ತಿದೆ.
ಹಾಗಾಗಿ, ದಿಗ್ಬಂಧನ ಉಲ್ಲಂಘಿಸಿ ವ್ಯವಹಾರ ನಡೆಸಿದ ಕಾರಣಕ್ಕೆ ಅಮೆರಿಕದ ಕೆಂಗಣ್ಣಿಗೆ ಗುರಿಯಾಗುವ ಆತಂಕದಲ್ಲಿ ರಿಲೆಯನ್ಸ್ ಇದೆ. ಆ ಹಿನ್ನೆಲೆಯಲ್ಲಿಯೇ ಅದು ಕಳೆದ ಒಂದು ವರ್ಷದಿಂದಲೇ ಅಮೆರಿಕದ ಪ್ರಮುಖ ಉದ್ಯಮ ಲಾಬಿ ಸಂಸ್ಥೆಗಳಾದ ಬಲ್ಲರ್ಡ್ ಪಾರ್ಟ್ನರ್ಸ್ ಮತ್ತು ಎವರ್ ಶೆಡ್ಸ್ ಸದರ್ ಲೆಂಡ್ ಕಂಪನಿಗಳ ಮೂಲಕ ಪ್ರಬಲ ಲಾಬಿ ನಡೆಸಿ, ದಿಗ್ಬಂಧನದಿಂದ ತನ್ನ ವಹಿವಾಟನ್ನು ಹೊರಗಿಡಿಸುವ ಪ್ರಯತ್ನ ನಡೆಸಿದೆ. ಅದಕ್ಕಾಗಿ ಆ ಎರಡೂ ಕಂಪನಿಗಳಿಗೆ ರಿಲೆಯನ್ಸ್ ಈಗಾಗಲೇ ಸುಮಾರು 6 ಕೋಟಿ ರೂ. ಪಾವತಿ ಮಾಡಿದೆ.
ಲಾಬಿಕೋರ ಕಂಪನಿಗಳಲ್ಲಿ ಪ್ರಮುಖವಾದ ಬಲ್ಲರ್ಡ್ ಪಾರ್ಟ್ನರ್ಸ್ ಕಂಪನಿ ಸ್ವತಃ ಟ್ರಂಪ್ ಅವರ ಆಪ್ತರೂ ಮತ್ತು ಅವರ ಪರ ನಿಧಿ ಸಂಗ್ರಾಹಕರಲ್ಲಿ ಪ್ರಮುಖರೂ ಆದ ಬ್ರಿಯಾನ್ ಬಲ್ಲರ್ಡ್ ಗೆ ಸೇರಿದ್ದು ಎಂಬುದು ವಿಶೇಷ. ಹಾಗೇ ಎವರ್ ಶೆಡ್ಸ್ ಸದರ್ ಲೆಂಡ್ ಕೂಡ ಟ್ರಂಪ್ ಪರ ಕಳೆದ ಚುಣಾವಣೆಯಲ್ಲಿ ಸಾಕಷ್ಟು ಕೆಲಸ ಮಾಡಿರುವ ಪ್ರಮುಖ ವ್ಯಕ್ತಿಯೊಬ್ಬರಿಗೆ ಸೇರಿದ್ದು. ಈ ಇಬ್ಬರು ಟ್ರಂಪ್ ಆಪ್ತರನ್ನೇ ತಮ್ಮ ಪರ ಲಾಬಿಗೆ ನೇಮಿಸಿಕೊಂಡಿರುವ ರಿಲೆಯನ್ಸ್, ಹೇಗಾದರೂ ಮಾಡಿ ದಿಗ್ಬಂಧನ ಉಲ್ಲಂಘನೆಯಿಂದ ಪಾರಾಗುವ ಮೂಲಕ ಈಗಾಗಲೇ ಒಂದು ವರ್ಷದಿಂದ ನಡೆಸಿರುವ ವಹಿವಾಟನ್ನು ಉಳಿಸಿಕೊಳ್ಳಬೇಕಿದೆ ಮತ್ತು ಭವಿಷ್ಯದ ಅನುಕೂಲಕ್ಕಾಗಿ ದಿಗ್ಬಂಧನದಿಂದ ರಿಯಾಯ್ತಿ ಪಡೆಯಬೇಕಿದೆ.
ಈಗಾಗಲೇ ಬಲ್ಲರ್ಡ್ ರಂತಹ ಪ್ರಭಾವಿಗಳ ಲಾಭಿಯ ಫಲವಾಗಿ ದಿಗ್ಬಂಧನ ಪ್ರಕ್ರಿಯೆ ನಿರ್ಧರಿಸುವ ಅಮೆರಿಕ ಸರ್ಕಾರದ ಖಜಾನೆ ಮತ್ತು ವಿದೇಶಾಂಗ ಇಲಾಖೆಗಳ ಮೃದು ಧೋರಣೆಯ ಅನುಗ್ರಹಕ್ಕೆ ಪಾತ್ತವಾಗಿರುವ ರಿಲೆಯನ್ಸ್, ಟ್ರಂಪ್ ಅವರ ಈ ಭೇಟಿ ವೇಳೆ ತಮ್ಮ ‘ಆಪ್ತ ನಾಯಕ’ರ ಮೂಲಕ ತನ್ನ ನಿರೀಕ್ಷೆಯನ್ನು ಈಡೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಅಂಬಾನಿಗಳು, ಪ್ರಧಾನಿ ಮೋದಿ ಮತ್ತು ಬಿಜೆಪಿ ನಡುವಿನ ನಂಟನ್ನು ಬಲ್ಲವರಿಗೆ ಈ ತೆರೆಮರೆಯ ವ್ಯವಹಾರದ ಒಳಸುಳಿಗಳನ್ನು ಊಹಿಸುವುದು ಕಷ್ಟವೇನಲ್ಲ. ಅದರಲ್ಲೂ ಪ್ರಮುಖವಾಗಿ ಸರ್ಕಾರಿ ಸ್ವಾಮ್ಯದ ಇಂಧನ, ಟೆಲಿಕಾಂ, ಗಣಿ ಸಂಸ್ಥೆಗಳು ನಷ್ಟದಲ್ಲಿರುವಾಗ, ಮುಚ್ಚುವ ಕ್ಷಣಗಣನೆಯಲ್ಲಿರುವಾಗ ಪ್ರಧಾನಿ ಆಪ್ತರಾಗಿರುವ ಅಂಬಾನಿ ಮತ್ತು ಅದಾನಿಗಳ ಗಳಿಕೆ ಮಾತ್ರ ವಿಸ್ತರಿಸುತ್ತಲೇ ಇರುವುದನ್ನು ಕಂಡಿರುವ ಭಾರತೀಯರಿಗೆ ಇಂತಹ ತೆರೆಮರೆಯ ಮಾತುಕತೆಗಳು ಅಚ್ಚರಿ ತರಿಸುವ ಸಂಗತಿಗಳೂ ಅಲ್ಲ!
ಮೊದಲ ದಿನ ರಾತ್ರಿ, ಇಲ್ಲವೇ ಎರಡನೇ ದಿನದ ವಿವಿಧ ಸ್ಥಳಗಳ ಭೇಟಿ ನಡುವಿನ ವೇಳೆಯಲ್ಲಿ ಈ ವಿಷಯಗಳು ಚರ್ಚೆಯಾಗುವ ಸಾಧ್ಯತೆ ಇದ್ದು, ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಇಂಧನತೈಲ ಸಂಸ್ಥೆಗಳಿಗೆ ಸಿಗದ ರಿಯಾಯ್ತಿ ಮತ್ತು ಅನುಕೂಲ ರಿಲೆಯನ್ಸ್ ಪಾಲಾಗುವ ಎಲ್ಲಾ ಘಳಿಗೆ ಸಮೀಪಿಸಿದೆ. ಭಾರತ- ಅಮೆರಿಕ ನಡುವಿನ ಅಧಿಕೃತ ವಾಣಿಜ್ಯ-ವಹಿವಾಟು ಒಪ್ಪಂದ ಕೈಗೂಡದೇ ಹೋದರೂ, ವ್ಯಕ್ತಿಗತವಾಗಿ ದೇಶದ ಪ್ರಭಾವಿಗಳಿಗೆ ಅನುಕೂಲಕರವಾದ ಇಂತಹ ಮಾತುಕತೆಗಳು ತೆರೆಮರೆಯಲ್ಲಿ ಸಾಂಗವಾಗಿ ನೆರವೇರಲಿವೆ ಎಂಬುದು ವಿಪರ್ಯಾಸ!