ನಾಳೆ ಆತ್ಮಹತ್ಯೆ ತಡೆ ದಿನಾಚರಣೆಯಂತೆ…
ಈ ಸಮಾಜ ಅಜೀರ್ಣದಿಂದ ಸಾಯುವವರ ಬಗ್ಗೆ ಅತಿ ಹೆಚ್ಚು ಚರ್ಚೆಮಾಡಿ ಆತಂಕ ವ್ಯಕ್ತಪಡಿಸುತ್ತೆ. ಹಸಿವಿನಿಂದ ಸತ್ತವನ ಬಗ್ಗೆ ದಿವ್ಯ ನಿರ್ಲಕ್ಷ್ಯ..
ಇದೇ ಈ ಸಮಾಜದ ಕ್ರಮ – ಹೀಗೇ ಮುಂದುವರಿಯಲಿದೆ ಎನ್ನುವುದೇ ಆದರೆ.. ಕರೋನದಿಂದ ಹಿಡಿದು ನಿರುದ್ಯೋಗ , ಬಡತನದವರೆಗಿನ ಎಲ್ಲ ದುರಂತಗಳಿಗೂ ಈ ಸಮಾಜ ಅರ್ಹ..
ಹೀಗೆಂದು ಆಕ್ರೋಶಭರಿತವಾಗಿ ಪೋಸ್ಟ್ ಹಾಕಿದವರು ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕ ಜಯತೀರ್ಥ.. ಸೌಮ್ಯ ಸ್ವಭಾವದ ಜಯತೀರ್ಥ ಇಷ್ಟೊಂದು ಆಕ್ರೋಶಭರಿತರಾಗಿ ಫೇಸ್ಬುಕ್ ಪೋಸ್ಟ್ ಹಾಕಿರುವುದನ್ನು ಕಂಡು ಪ್ರತಿಧ್ವನಿ ತಂಡ ಜಯತೀರ್ಥರನ್ನು ಸಂಪರ್ಕಿಸಿ, ಅವರ ಅಕ್ರೋಶದ ಹಿಂದಿರುವ ಕಾರಣವನ್ನು ಕೆದಕಿದಾಗ ಅವರು ನೀಡಿದ ಉತ್ತರ ಇದು.
“ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ರಾಗಿಣಿ ಹಾಗೂ ಸಂಜನಾರ ಸುದ್ದಿಗಳೇ ರಾರಾಜಿಸುತ್ತಿವೆ. ಹಿಂದಿ ಚಾನೆಲ್ಗಳಲ್ಲಿ ಕಂಗನಾ ಹಾಗೂ ರಿಹಾ ಚಕ್ರವರ್ತಿಯ ಸುದ್ದಿಗಳೇ ತುಂಬಿವೆ. ಇವರು(ಮಾಧ್ಯಮಗಳು) ದೇಶದಲ್ಲಿ ಬೇರೆ ವಿಷಯಗಳೇ ಇಲ್ಲದ ರೀತಿಯಲ್ಲಿ, ಬೇರೆ ಸಮಸ್ಯೆಗಳೇ ಇಲ್ಲದ ರೀತಿ ವರ್ತಿಸುತ್ತಿದ್ದಾರೆ.
![](https://pratidhvani.in/wp-content/uploads/2021/02/Support_us_Banner_New_3-337.png)
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನಾಳೆ ಆತ್ಮಹತ್ಯಾ ತಡೆ ದಿನವಂತೆ, ಬದುಕುವ ಅದಮ್ಯ ಬಯಕೆಯೊಂದಿಗೆ ಜನರು ಎಷ್ಟು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಲಾಕ್ಡೌನ್ ಸಮಯದಲ್ಲೂ ಸಾವಿರಾರು ಕಿಮೀ ಬರಿಗಾಲಿನಲ್ಲಿ, ಬೆತ್ತಲೆ ಪಾದದಲ್ಲಿ ನಡೆದು ಊರು ಸೇರಿದ್ದಾರೆ. ಏನೂ ಇಲ್ಲದೆ ಬದುಕಬೇಕೆಂಬ ಉದ್ದೇಶದಿಂದ ಜನರು ಇಷ್ಟೆಲ್ಲಾ ಕಷ್ಟಪಡುತ್ತಿರುವಾಗ.., ಹೆಸರು, ಖ್ಯಾತಿ, ಆಸ್ತಿ- ಪಾಸ್ತಿ ಎಲ್ಲಾ ಇದ್ದು ಆತ್ಮಹತ್ಯೆ ಮಾಡಿಕೊಳ್ಳುವವರ ಕುರಿತು ನಾವು ಅಷ್ಟೊಂದು ಚರ್ಚೆ ನಡೆಸಬೇಕಾ? ಅಷ್ಟೊಂದು ಅನುಕಂಪ ತೋರಿಸಬೇಕಾ? ನ್ಯಾಯ ಕೊಡಿಸಬೇಕೆಂದು ಹೋರಾಡಬೇಕಾ? ಎಂದು ಜಯತೀರ್ಥ ಪ್ರಶ್ನಿಸಿದ್ದಾರೆ.
ಅಲ್ಲದೆ ಉತ್ತರವನ್ನೂ ಅವರೇ ನೀಡಿದ್ದಾರೆ., “ನಿಜಾರ್ಥದಲ್ಲಿ ನ್ಯಾಯ ಕೊಡಿಸಬೇಕಾಗಿರುವುದು, ಅನುಕಂಪ ಪಡಬೇಕಿರುವುದು, ಮಾಧ್ಯಮಗಳಲ್ಲಿ- ಸಮಾಜದಲ್ಲಿ ಚರ್ಚೆ ಮಾಡಬೇಕಿರುವುದು; ಲಾಕ್ಡೌನ್ ಸಂಧರ್ಭದಲ್ಲಿ ರೈಲು ನಿಲ್ದಾಣದಲ್ಲಿ ಅನಾಥವಾಗಿ ಮೃತಪಟ್ಟ ಆ ಮಹಿಳೆಯ ಸಾವಿಗೆ, ಬದುಕಬೇಕು ಎಂಬ ಒಂದೇ ಕಾರಣಕ್ಕೆ ಉತ್ತರಪ್ರದೇಶದಲ್ಲಿ ಗರಿಕೆ ಹುಲ್ಲನ್ನು ನೆನೆಹಾಕಿ- ಉಪ್ಪುಹಾಕಿ ಬೇಯಿಸಿ ತಿನ್ನುತ್ತಾರಲ್ಲಾ ಅವರಿಗೆ, ಹಸಿವೆಯಿಂದ ಬಳಲಿ ಸಾಯುವವರಿಗೆ, ಸಾವಿರಾರು ಮೈಲಿ ನಡೆದು ಆಯಾಸದಲ್ಲಿ ಪ್ರಾಣಬಿಟ್ಟ ವಲಸೆ ಕಾರ್ಮಿಕರಿಗೆ.. ನ್ಯಾಯ ಬೇಕಿರುವುದು, ಚರ್ಚೆ ಮಾಡಬೇಕಿರುವುದು ಇಂತಹವರ ಬದುಕು- ಸಾವಿನ ಕುರಿತು.”
ನಾಳೆ ಆತ್ಮಹತ್ಯೆ ತಡೆ ದಿನಾಚರಣೆಯಂತೆ…
ಹಸಿದವನೊಬ್ಬ ಬದುಕಲೇ ಬೇಕು ಎಂಬ ಮಹದುದ್ದೇಶದಿಂದ lockdown ಇದ್ದಾಗ್ಯೂ ರಾಜಸ್ತಾನದ ಹೈವೇನಲ್ಲಿ…Posted by JayaThirtha Jayanna on Wednesday, September 9, 2020
“ಅಜೀರ್ಣದಿಂದ ಸತ್ತವರ ಬಗ್ಗೆ ಇಷ್ಟೊಂದು ಟ್ವೀಟು, ಇಷ್ಟೊಂದು ಚರ್ಚೆ, ಇಷ್ಟೊಂದು ಸಮಯ ವ್ಯಯಿಸುತ್ತೇವೆ, ಹಸಿವಿನಿಂದ ಸತ್ತವರ ಬಗ್ಗೆ ನಾವು ಯಾಕೆ ಚರ್ಚೆ ಮಾಡುತ್ತಿಲ್ಲ.. ಇದು ಈ ದೇಶದ ಭೌದ್ಧಿಕ ದಾರಿದ್ರ್ಯತನವನ್ನು ವ್ಯಕ್ತಪಡಿಸುತ್ತಿದೆ. ಇದು ಬರೀ ಮಾಧ್ಯಮದವರು ಮಾತ್ರವಲ್ಲ.. ಪ್ರತಿಯೊಬ್ಬರೂ ಅದೇ ತಪ್ಪು ಮಾಡುತ್ತಿದ್ದಾರೆ, ಫೇಸ್ಬುಕ್, ವಾಟ್ಸಪ್ ಮೊದಲಾದ ಸಾಮಾಜಿಕ ಜಾಲತಾಣದಲ್ಲೂ ಅಜೀರ್ಣದಿಂದ ಸತ್ತವರ ಚರ್ಚೆಯೇ ನಡೆಯುತ್ತಿದೆ.
![](https://pratidhvani.in/wp-content/uploads/2021/02/child_tries_bihar_wake_dead_mother_station_007d436e_a0b7_11ea_9c65_1b2d349a0abd-20210216-132501.jpeg)
Also Read: ಸತ್ತು ಮಲಗಿದ ತಾಯಿಯನ್ನು ಎಬ್ಬಿಸುತ್ತಿರುವ ಮಗು : ಲಾಕ್ ಡೌನ್ ಅಧ್ಯಾಯ ಸೇರಿದ ಕಣ್ಣೀರ ಕಥೆ.!
ಸಮಾಜಕ್ಕೆ ಇದೇ ಬೇಕು, ಇದಷ್ಟೇ ಚರ್ಚೆ ಮಾಡುತ್ತೇವೆ, ನಮ್ಮ ಬದುಕಿನ ರೀತಿಯೇ ಇದು, ಇದರಲ್ಲೇ ನಮಗೆ ಸಂತೋಷ ಎನ್ನುವುದಾದರೆ ಭಾರತದಲ್ಲಿ ನಡೆಯುತ್ತಿರುವ ಪ್ರತಿ ಅನಾಹುತ, ವಿಕೋಪ, ದುರಂತಗಳಿಗೂ ಈ ಸಮಾಜ ಅರ್ಹ… ಅಂದರೆ ಸುನಾಮಿಯಿರಲಿ, ನೆರೆ-ಬರ, ಚೀನಾದೊಂದಿಗಿನ ಸಂಘರ್ಷ, ಆರ್ಥಿಕ ಸಂಕಷ್ಟ, ನಿರುದ್ಯೋಗ ಸಮಸ್ಯೆ ಮುಂತಾದ ಎಲ್ಲಾ ದುರಂತಗಳಿಗೂ ನಾವು ಅರ್ಹರು.ʼʼ ಎಂದು ತಮ್ಮ ಎದೆಯಾಳದ ನೋವು ಪ್ರತಿಧ್ವನಿಯೊಂದಿಗೆ ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ ಜಯತೀರ್ಥರನ್ನು ಕಾಡುವ ನೋವು, ಇಡೀ ಸಮಾಜವನ್ನು ಕಾಡಬೇಕು, ಪಶ್ಚಾತ್ತಾಪದಲ್ಲಿ ಕನಲಬೇಕು. ಯಾಕೆಂದರೆ ಆಸ್ತಿ ಪಾಸ್ತಿ ಎಲ್ಲಾ ಇದ್ದು, ಅತಿಯಾದ ಭಾವುಕತೆ- ವೈಯಕ್ತಿಕ ಬದುಕಿನ ಸಮಸ್ಯೆಗಳಿಂದಾಗಿ ಆತ್ಮಹತ್ಯೆ ಮಾಡುವವರ ಸಾವಿಗಿಂತಲೂ ಸಮಾಜದ ವ್ಯವಸ್ಥೆಯೇ ಮಾಡುವ ಕೊಲೆಗಳಿದೆಯಲ್ಲಾ, ಆ ಮರಣಗಳಿಗೆ ಒಟ್ಟು ಮೊತ್ತ ಸಮಾಜವೇ ಉತ್ತರದಾಯಿತ್ವ ವಹಿಸಬೇಕು. ಹಸಿವಿನಿಂದ ಸತ್ತ ಪ್ರತಿ ಜೀವಿಯದ್ದೂ ಅನ್ಯಾಯದ ಸಾವು. ನ್ಯಾಯ ಕಾಣದ ಬದುಕು. ಹಾಗೂ ಅಂತಹ ಎಲ್ಲಾ ಸಾವೂ ʼವ್ಯವಸ್ಥೆʼಯೇ ಮಾಡಿದ ಕೊಲೆ. ಸಮಾಜವೇ ಕೊಲೆಗಾರ…!