ಪುಟ್ಟ ಜಿಲ್ಲೆ ಕೊಡಗಿನಲ್ಲಿ ಇಂದಿಗೂ ದಲಿತ, ಆದಿವಾಸಿ ಕಾರ್ಮಿಕರ ಬದುಕು ದಯನೀಯವಾಗಿದೆ , ಒಂದೆಡೆ ಸರ್ಕಾರಿ ಸವಲತ್ತುಗಳು ಎಲ್ಲರಿಗೂ ತಲುಪುತ್ತಿಲ್ಲ ಜತೆಗೇ ಲಂಚ ನೀಡದೆ ಕೊಡಗಿನ ಸರ್ಕರಿ ಕಚೇರಿಗಳಲ್ಲಿ ಕೆಲಸವೂ ಆಗುತ್ತಿಲ್ಲ. ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಬೇಕಾದರೆ ದಿನದ ಕೂಲಿ ಕನಿಷ್ಟ 250-300 ರೂಪಾಯಿಗಳನ್ನು ಕಳೆದುಕೊಂಡು ಅಲೆಯಬೇಕಾಗಿದೆ. ಜಿಲ್ಲೆಯ ಕಾಫಿ ತೋಟಗಳಲ್ಲಿ ಇಂದಿಗೂ ಕಾರ್ಮಿಕರ ಕೊರತೆ ಇದೆ. ಉತ್ತರ ಭಾರತದ ರಾಜ್ಯಗಳಿಂದ ಕಾರ್ಮಿಕರು ಇಲ್ಲಿಗೆ ವಲಸೆ ಬರುತಿದ್ದಾರೆ. ಇವರೆಲ್ಲರೂ ಕಾಫಿ ತೋಟಗಳಲ್ಲಿ ಮಾಲೀಕರು ನೀಡುವ ಲೈನ್ ಮನೆಗಳಲ್ಲಿ ತಂಗುತಿದ್ದಾರೆ. ಆದರೆ ಇಲ್ಲಿಯೇ ಹುಟ್ಟಿ ಬೆಳೆದಿರುವ ಕಾರ್ಮಿಕ ವರ್ಗ ಇಂದಿಗೂ ಜೀವನಾಧಾರಕ್ಕೆ ಕಾಫಿ ತೋಟಗಳನ್ನೇ ಅವಲಂಬಿಸಿದ್ದು ಅಂಗೈಯಗಲದ ಜಾಗ ಪಡೆಯಲು ಸಾದ್ಯವಾಗುತ್ತಿಲ್ಲ ಎಂಬುದು ನಿಜಕ್ಕೂ ನೋವಿನ ಸಂಗತಿಯಾಗಿದೆ .
ಮತ್ತೊಂದೆಡೆ ಶ್ರೀಮಂತರು ಬಹಳ ಹಿಂದೆಯೇ ಖಾಲಿ ಇದ್ದ ಸರ್ಕಾರಿ , ಕೆರೆ ಜಾಗಗಳು , ಗೋಮಾಳ ಇದನ್ನೆಲ್ಲ ಒತ್ತುವರಿ ಮಾಡಿಕೊಂಡು ಉತ್ತಮ ಬದುಕು ಸಾಗಿಸುತಿದ್ದಾರೆ. ಇಂದು ಜಿಲ್ಲೆಯಲ್ಲಿ ಸರ್ಕಾರಿ ಭುಮಿ ಇರುವುದೇ ಬೆರಳೆಣಿಕೆಯಷ್ಟು ಊರುಗಳಲ್ಲಿ ಮಾತ್ರ. ಅದಕ್ಕೂ ಈ ಭೂದಾಹಿಗಳ ಕಣ್ಣು ಬಿದ್ದಿದ್ದರೂ ಸಂಬಂಧಪಟ್ಟ ಗ್ರಾಮ ಪಂಚಾಯ್ತಿಗಳು , ಸ್ಥಳೀಯ ಆಡಳಿತ ಕಾವಲು ಕಾಯುತ್ತಿರುವುದರಿಂ ದ ಉಳಿದುಕೊಂಡಿವೆ ಅಷ್ಟೆ.
2016 ರಲ್ಲಿ ಸಿದ್ದಾಪುರ ಸಮೀಪದ ದಿಡ್ಡಳ್ಳಿಯಲ್ಲಿ ಭೂ ರಹಿತರು ಮನೆ ನಿವೇಶನಕ್ಕಾಗಿ ನಡೆಸಿದ ಹೋರಾಟ ಇಡೀ ರಾಜ್ಯದಲ್ಲೇ ಪ್ರತಿಧ್ವನಿಸಿತ್ತು. ಬಹುಶಃ ಕೆಳವರ್ಗದವರ ಹೋರಾಟವೊಂದು ಇಷ್ಟು ದೊಡ್ಡದಾಗಿ ನಡೆದದ್ದು ಜಿಲ್ಲೆಯ ಇತಿಹಾಸದಲ್ಲೇ ಮೊದಲು. ಹೋರಾಟದ ತೀವ್ರತೆಗೆ ಸ್ವತಃ ಮುಖ್ಯಮಂತ್ರಿಗಳೂ , ಕಂದಾಯ ಸಚಿವರೂ ಧರಣಿ ನಿರತರ ಬಳಿಗೆ ಬಂದು ಮೊರೆ ಆಲಿಸಿದ್ದು , ಹಿರಿಯ ಸ್ವತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರೂ ಭೇಟಿ ನೀಡಿದ್ದು ವಿಶೇಷವಾಗಿತ್ತು. ದಿಡ್ಡಳ್ಳಿಯ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು ಪಟ್ಟಿ ಮಾಡಿದ್ದ 538 ಕಾರ್ಮಿಕ ಕುಟುಂಬಗಳಿಗೂ ಮನೆಯೇ ದೊರೆತಿದೆ.

ಇದೀಗ ದಕ್ಷಿಣ ಕೊಡಗಿನ ವಿರಾಜಪೇಟೆ ತಾಲ್ಲೂಕು ಬಿಟ್ಟಂಗಾಲ ಪಂಚಾಯ್ತಿ ವ್ಯಾಪ್ತಿಯ ಬಾಳುಗೋಡು ಗ್ರಾಮದಲ್ಲೂ ದಿಡ್ಡಳ್ಳಿ ಮಾದರಿಯ ಸನ್ನಿವೇಶವೇ ನಿರ್ಮಾಣವಾಗಿದೆ. ಬಾಳುಗೋಡು ಗ್ರಾಮದ ಸರ್ವೆ ನಂ. 337/1ರ ಸರಕಾರಿ ಜಾಗದಲ್ಲಿ ವಸತಿರಹಿತ ಆದಿವಾಸಿಗಳು, ದಲಿತರು, ಎರಡು ತಿಂಗಳ ಹಿಂದೆ ಗುಡಿಸಲುಗಳನ್ನು ಕಟ್ಟಿಕೊಂಡಿದ್ದರು. ಆದರೆ ಬುಧವಾರ ಮಧ್ಯಾಹ್ನ 12:30ರ ಸಮಯದಲ್ಲಿ ಪೊಲೀಸರ ಸಮ್ಮುಖದಲ್ಲಿ ಆಗಮಿಸಿದ ವೀರಾಜಪೇಟೆ ತಹಶಿಲ್ದಾರ್ ಮಹೇಶ್, ರೆವಿನ್ಯೂ ಇನ್ಸ್‌ಪೆಕ್ಟರ್ ರಂಗಪ್ಪ ಸೇರಿದಂತೆ ಹಲವು ಅಧಿಕಾರಿಗಳು ಅಲ್ಲಿ ಕಟ್ಟಿಕೊಂಡಿದ್ದ ಗುಡಿಸಲುಗಳನ್ನು ನೆಲಸಮ ಮಾಡಿದ್ದಾರೆ.
ಅಲ್ಲದೆ ಇದನ್ನು ಪ್ರಶ್ನಿಸಿದ ಭೂಮಿ-ವಸತಿ ಹೋರಾಟ ಸಮಿತಿಯ ಯುವ ಕಾರ್ಯಕರ್ತ ಹೇಮಂತ್ ಎಂಬುವವರ ಮೇಲೆ ಪೋಲೀಸರು ಹಲ್ಲೆ ಮಾಡಿದ್ದಾರೆ. ಗುಡಿಸಲುಗಳನ್ನು ತೆರವುಗೊಳಿಸಲು ಅಡ್ಡಿಪಡಿಸಿದವರ ಮೇಲೆ ಕೇಸು ಹಾಕುವುದಾಗಿ ಎಸಿ, ತಹಸೀಲ್ದಾರ್‌ರವರು ಪೊಲೀಸ್ ಇನ್ಸ್‌ಪೆಕ್ಟರ್ ರಾಮರೆಡ್ಡಿ ಮೂಲಕ ಬೆದರಿಕೆ ಹಾಕಿದ್ದಾರೆ.
ಈ ಬಡ ಜನರ ಗುಡಿಸಲುಗಳನ್ನು ತೆರವುಗೊಳಿಸಿ ಇದೇ ಜಾಗದಲ್ಲಿ ಕಸ ವಿಲೇವಾರಿ ಘಟಕ ಮಾಡಬೇಕೆಂದು ಜಿಲ್ಲಾಡಳಿತದ ಯೋಜನೆಯಾಗಿದೆ. ಅದಕ್ಕಾಗಿ ಇಂದು ತೆರವು ಕಾರ್ಯಚರಣೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಈ ಜಾಗದಲ್ಲಿ ಸದ್ಯಕ್ಕೆ ವಾಸವಿದ್ದ ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳ 57 ಕುಟುಂಬಗಳ ಸುಮಾರು 200ಕ್ಕೂ ಹೆಚ್ಚು ಜನ ನೆಲೆ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ತಮ್ಮ ಮೇಲಾದ ಏಕಾಏಕಿ ದಾಳಿಯಿಂದ ದಿಕ್ಕುತೋಚದೆ ಜನ ಕಂಗಾಲಾಗಿದ್ದು ಹೋರಾಟ ಮುಂದುವರೆಸಿದ್ದಾರೆ.
ಹಲ್ಲೆಗೊಳಗಾದ ಯುವ ಹೋರಾಟಗಾರ ಹೇಮಂತ್ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ ಕಂದಾಯ ಇಲಾಖೆಯ ಅಧಿಕಾರಿಗಳು ನಡೆಸಿದ ತೆರವು ಕಾರ್ಯಾಚರಣೆಯ ಕುರಿತು ಮಾತನಾಡಿದ ಅವರು ಕಾರ್ಮಿಕ ವರ್ಗದವರು ತೋಟಗಳ ಮಾಲೀಕರು ಒದಗಿಸಿರುವ ಲೈನ್ ಮನೆಗಳಲ್ಲಿ ಶೋಷಣೆ ತಾಳಲಾರದೇ ಬಹಳ ವರ್ಷಗಳಿಂದ ಈ ಸರ್ಕಾರಿ ಜಾಗದಲ್ಲಿ ವಾಸ ಮಾಡುತ್ತಿದ್ದಾರೆ. ಇಂತಹ ಅಮಾಯಕ ಜನರ ಮೇಲೆ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಲಾಗಿದೆ. ಬಡಜನರ ಜೀವನಾವಶ್ಯಕ ವಸ್ತುಗಳನ್ನು, ದಿನಸಿಗಳನ್ನು ಪೊಲೀಸರು ಹೊತ್ತೋಯ್ಯುತ್ತಿದ್ದಾರೆ. ಅವರ ಬೆದರಿಕೆಗೆ ಮಣಿಯುವುದಿಲ್ಲ ಬಡಜನರು ಹೋರಾಟ ತೀವ್ರಗೊಳಿಸುತ್ತೇವೆ ಎಂದಿದ್ದಾರೆ.

ಈ ಜಾಗದಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದ ದಲಿತ, ಆದಿವಾಸಿ ಕುಟುಂಬಗಳು ಜಿಲ್ಲಾಧಿಕಾರಿಗಳಿಗೆ, ತಹಸೀಲ್ದಾರ್‌ರವರಿಗೆ ಹಲವಾರು ಭಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮಗಳನ್ನು ಜಿಲ್ಲಾಡಳಿತ ಇಲ್ಲಿಯವರಗೂ ತೆಗೆದುಕೊಂಡಿರಲಿಲ್ಲ. ಈಗ ಏಕಾಏಕಿ ಪೋಲೀಸರನ್ನು ಕರೆದುಕೊಂಡು ಬಂದು ಬಡವರನ್ನು ಬೆದರಿಸಿ ಗುಡಿಸಲುಗಳನ್ನು ಕಿತ್ತುಹಾಕಿದ್ದಾರೆ ಎಂದು ವಸತಿ ರಹಿತರ ಸ್ಥಳೀಯ ಜಿಲ್ಲಾ ಮುಖಂಡರಾದ ಮೊಣ್ಣಪ್ಪರವರು ಆರೋಪಿಸಿದ್ದಾರೆ. ದೇಶದ ಮೂಲ ನಿವಾಸಿಗಳಿಗೆ ಬದುಕಲು, ನೆಲೆಸಲು ಒಂದು ಜಾಗವನ್ನೂ ಗುರುತಿಸದೆ, ಪರ್ಯಾಯ ಜಾಗವನ್ನೂ ನೀಡದೇ ಸ್ಥಳೀಯ ಶಾಸಕ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಅವರ ಕುಮ್ಮಕ್ಕಿನಿಂದ ಗುಡಿಸಲು ತೆರವುಗೊಳಿಸುವ ಕೆಲಸ ನಡೆಯುತ್ತಿದೆ ಎಂದು ಅವರು ದೂರಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಕೊಡಗು ಉಪ ವಿಭಾಗದ ಸಹಾಯಕ ಕಮಿಷನರ್ ಜವರೇ ಗೌಡ ಅವರು ಈ ಅತಿಕ್ರಿಮಿಸಿದ ಸ್ಥಳವು ಸರ್ಕಾರಿ ಭೂಮಿಯಾಗಿದ್ದು ಇದರಲ್ಲಿ ಒಂದು ಎಕರೆಯಷ್ಟು ಭೂಮಿಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಎರಡು ವರ್ಷಗಳ ಹಿಂದೆಯೇ ಸರ್ವೆ ಮಾಡಿ ಗುರ್ತಿಸಲಾಗಿದೆ. ವಸತಿ ರಹಿತರಿಗೆ ಇಲ್ಲಿಯೇ ಪರ್ಯಾಯ ವ್ಯವಸ್ಥೆ ಮೂಲಕ ಮುಂದಿನ 15 ದಿನಗಳಲ್ಲಿ ನಿವೇಶನಗಳನ್ನು ನೀಡಲಾಗುವುದು ಎಂದು ಹೇಳಿದರು.
ಅದರೆ ವಸತಿ ರಹಿತರು ಇಲ್ಲಿಯೇ ನಿವೇಶನಗಳನ್ನು ನೀಡಬೇಕೆಂದು ಪಟ್ಟು ಹಿಡಿದಿದ್ದು ಮುಂದಿನ 15 ದಿನಗಳಲ್ಲಿ ನಿವೇಶನವನ್ನು ಒದಗಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿದೆ ಅಲ್ಲದೆ ನಿವೇಶನಗಳನ್ನು ನೀಡುವತನಕವೂ ಧರಣಿ ಮುಂದುವರೆಸುವುದಾಗಿ ಹೇಳಿದೆ.