ಹೈದ್ರಾಬಾದ್ ನಲ್ಲಿ ನಡೆದ ಪೊಲೀಸ್ ಎನ್ ಕೌಂಟರ್ ವಿಚಾರ ಈಗ ದೇಶದೆಲ್ಲೆಡೆ ಬಹುಚರ್ಚಿತ ವಿಚಾರವಾಗಿದೆ. ಪಶುವೈದ್ಯೆಯನ್ನು ಅಪಹರಣ ಮಾಡಿ ಅತ್ಯಾಚಾರ ನಡೆಸಿ ಆಕೆಯ ಮೇಲೆ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟು ಹಾಕಿರುವುದು ಒಂದು ಪೈಶಾಚಿಕ ಕೃತ್ಯವೇ ಸರಿ. ಇದೊಂದು ಮಾನವ ಸಮಾಜ ಕ್ಷಮಿಸಲಾರದಂತಹ ಕುಕೃತ್ಯವಾಗಿದೆ.
ಇಂತಹ ಹೀನ ಕೃತ್ಯಗಳನ್ನು ಎಸಗುವವರಿಗೆ ತಕ್ಕ ಶಿಕ್ಷೆ ಆಗಬೇಕೆಂಬುದು ಎಲ್ಲರ ಹಕ್ಕೊತ್ತಾಯವಾಗಿರುತ್ತದೆ. ಆದರೆ, ಅದಕ್ಕೊಂದು ರೀತಿ ರಿವಾಜು ಇರುತ್ತದೆ. ಯಾವುದೇ ಪ್ರಕರಣಗಳಿಗಾಗಲೀ ಅಥವಾ ವ್ಯಾಜ್ಯಗಳಿಗಾಗಲೀ ಅವುಗಳನ್ನು ಇತ್ಯರ್ಥಪಡಿಸಲೆಂದು ನಾವೇ ರೂಪಿಸಿಕೊಂಡ ನೆಲದ ಕಾನೂನು ಇರುತ್ತದೆ. ಹೀಗಾಗಿ ನಮ್ಮದೇ ಕಾನೂನನ್ನು ನಾವು ಕೈಗೆ ತೆಗೆದುಕೊಂಡರೆ ಅದು ಮತ್ತೊಂದು ಅಪರಾಧಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.
ಈಗ ಹೈದ್ರಾಬಾದ್ ಎನ್ ಕೌಂಟರ್ ಪ್ರಕರಣದಲ್ಲಿಯೂ ಅದೇ ರೀತಿಯ ವಿವಾದ ಸೃಷ್ಟಿಯಾಗಿರುವುದು. ಸಾಮಾನ್ಯವಾಗಿ ಪೊಲೀಸರು ಯಾವುದೇ ಎನ್ ಕೌಂಟರ್ ಮಾಡಲಿ ಅದಕ್ಕೆ ಆತ್ಮರಕ್ಷಣೆಯ ಕವಚವನ್ನು ತೊಟ್ಟುಕೊಂಡಿರುತ್ತಾರೆ. ಹೈದ್ರಾಬಾದ್ ನ ಎನ್ ಕೌಂಟರ್ ಪ್ರಕರಣದಲ್ಲಿಯೂ ಪೊಲೀಸರು ಆತ್ಮರಕ್ಷಣೆ ಎಂಬ ರಕ್ಷಾಗವಸನ್ನು ತೊಟ್ಟಿದ್ದಾರೆ.
ಮೇಲ್ನೋಟಕ್ಕೆ ಪೊಲೀಸರು ಅತ್ಯಾಚಾರ ಆರೋಪಿಗಳನ್ನು ಹತ್ಯೆ ಮಾಡಿರುವುದು ಸರಿ ಎಂದು ಸಾಕಷ್ಟು ಮಂದಿ ಹೇಳುತ್ತಿದ್ದಾರೆ. ಆದರೆ, ಪೊಲೀಸರೇ ನ್ಯಾಯದಾನ ಮಾಡುವ ನಿರ್ಧಾರಕ್ಕೆ ಬಂದರೆ ನ್ಯಾಯಾಂಗ ವ್ಯವಸ್ಥೆ ಇರುವುದು ಏತಕ್ಕೆ? ಕೋರ್ಟ್, ಕಾನೂನು ಕಟ್ಟಳೆಗಳು ಇರುವುದು ಏತಕ್ಕೆ? ಎಂಬ ಪ್ರಶ್ನೆಗಳು ಎದ್ದಿವೆ.
ಇಲ್ಲಿ ಸ್ವತಃ ಸುಪ್ರೀಂಕೋರ್ಟಿನ ಮುಖ್ಯನ್ಯಾಯಾಧೀಶರಾದ ಎಸ್.ಎ.ಬೋಬ್ಡೆ ಅವರೇ, ನ್ಯಾಯವನ್ನು ಪ್ರತೀಕಾರದ ರೂಪದಲ್ಲಿ ಪಡೆಯಬಾರದು. ಹಾಗೊಂದು ವೇಳೆ ಪ್ರತೀಕಾರ ರೂಪದಲ್ಲಿ ನ್ಯಾಯವನ್ನು ಪಡೆದಿದ್ದೇ ಆದಲ್ಲಿ ನ್ಯಾಯ ತನ್ನ ಸ್ವರೂಪವನ್ನೇ ಕಳೆದುಕೊಳ್ಳುತ್ತದೆ. ಹೀಗಾಗಿ ನ್ಯಾಯಾಂಗ ವ್ಯವಸ್ಥೆಗೆ ಎಲ್ಲರೂ ತಲೆ ಬಾಗಬೇಕೆಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.
ಮುಖ್ಯ ನ್ಯಾಯಾಧೀಶರು ಹೈದ್ರಾಬಾದ್ ಎನ್ ಕೌಂಟರ್ ಬಗ್ಗೆ ನೇರವಾಗಿ ಪ್ರಸ್ತಾಪಿಸದೇ ಇದ್ದರೂ ಅವರ ಹೇಳಿಕೆಯ ಹಿಂದಿನ ಉದ್ದೇಶವೂ ಸಹ ಎನ್ ಕೌಂಟರ್ ಗೆ ಸಂಬಂಧಿಸಿದ್ದಾಗಿತ್ತು. ಯಾವುದೇ ಪ್ರಕರಣಗಳನ್ನು ಇತ್ಯರ್ಥಪಡಿಸಲು ಲಭ್ಯವಿರುವ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಸಂಧಾನದಂತಹ ಮಾರ್ಗಗಳ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಅವರು ಆಡಳಿತ ವ್ಯವಸ್ಥೆಗೆ ಮನವರಿಕೆ ಮಾಡಿಕೊಡುವ ರೀತಿಯಲ್ಲಿ ಸೂಚಿಸಿದ್ದಾರೆ.
ಇದಲ್ಲದೇ, ವಿವಾದಗಳನ್ನು ಆದಷ್ಟೂ ಬೇಗ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕು. ಈ ಮೂಲಕ ಜನರಿಗೆ ತ್ವರಿತವಾಗಿ ನ್ಯಾಯ ದೊರಕಿಸಿಕೊಡಬೇಕಾದ ಬದ್ಧತೆಯನ್ನು ಉಳಿಸಿಕೊಳ್ಳಬೇಕಾಗಿದೆ ಎಂಬುದನ್ನು ಮುಖ್ಯನ್ಯಾಯಾಧೀಶರು ಬಲವಾಗಿ ಪ್ರತಿಪಾದಿಸಿದ್ದಾರೆ.
ಒಂದು ಸಂಸ್ಥೆಯಾಗಿ ಇರುವ ಮಾರ್ಗಗಳನ್ನು ಬಲಪಡಿಸಿ ಮತ್ತು ವಿವಾದಗಳನ್ನು ಬಹುಬೇಗ ಇತ್ಯರ್ಥ ಪಡಿಸಲು ಹೊಸ ಮಾರ್ಗಗಳನ್ನು ಅಳವಡಿಸಿಕೊಂಡು ಜನರಿಗೆ ನ್ಯಾಯ ದೊರಕಿಸಿಕೊಡಬೇಕಾದ ಬದ್ಧತೆಯಿಂದ ಉಳಿದುಕೊಳ್ಳಬೇಕಾಗಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿನ ವಿಳಂಬ ನೀತಿ ಅರ್ಜಿದಾರರ ಕಾರ್ಯನಿರ್ವಹಣೆಗೆ ತೊಡಕಾಗಿದೆ. ಹೀಗಾಗಿ ನ್ಯಾಯಾಂಗ ವ್ಯವಸ್ಥೆ ಮತ್ತು ದಾವೆ ಹೂಡುವಲ್ಲಿನ ಬದಲಾವಣೆಗಳ ಬಗ್ಗೆ ನಾವೆಲ್ಲರೂ ತಿಳಿಯಬೇಕಿದೆ ಎಂದರು
ನ್ಯಾಯಾಂಗ ವ್ಯವಸ್ಥೆಯಲ್ಲಿ ಹೊಸ ತಂತ್ರಜ್ಞಾನಗಳ ಪರಿಚಯ ಹಾಗೂ ಸಂಧಾನ ಸೇರಿದಂತೆ ವಿವಾದಗಳನ್ನು ಬಗೆಹರಿಸುವಲ್ಲಿ ಇರುವ ಪರ್ಯಾಯ ವ್ಯವಸ್ಥೆಗಳನ್ನು ಬಲಪಡಿಸಬೇಕಾಗಿದೆ ಎಂದರು.
ಹೈದರಾಬಾದ್ ಎನ್ಕೌಂಟರ್ ಕುರಿತು ನ್ಯಾಯಾಂಗ ಸುಧಾರಣೆ, ಮರಣದಂಡನೆ ಹಾಗೂ ಬಹುಬೇಗ ನ್ಯಾಯ ದೊರಕುವ ವಿಚಾರವಾಗಿ ದೇಶದಲ್ಲೆಡೆ ನಡೆಯುತ್ತಿರುವ ಚರ್ಚೆಯನ್ನು ಗಮನದಲ್ಲಿಟ್ಟುಕೊಂಡು ಬೊಬ್ಡೆ ಈ ಮಾತುಗಳನ್ನು ಹೇಳಿದ್ದಾರೆ.
ಯಾವುದೇ ನಾಗರಿಕ ಸಮಾಜಕ್ಕಾಗಲಿ ಅದಕ್ಕೊಂದು ನೆಲದ ಕಾನೂನು ಇರುತ್ತದೆ. ಅದರ ಕಟ್ಟುಪಾಡುಗಳಿಗೆ ಎಲ್ಲರೂ ಬದ್ಧರಾಗಿರಬೇಕು. ಈ ಕಾನೂನಿಗೆ ಬಡವ-ಬಲ್ಲಿದ, ಧರ್ಮದ ಅಂಗು ಇರುವುದಿಲ್ಲ. ಈ ಕಾನೂನಿನಡಿ ಎಲ್ಲರೂ ಸರಿಸಮಾನರು. ಹೀಗಾಗಿ ಕಾನೂನಿಗೆ ಗೌರವಿಸಬೇಕಾದದ್ದು ಎಲ್ಲರ ಕರ್ತವ್ಯವಾಗಿದೆ. ಯಾರೂ ಕೂಡ ನ್ಯಾಯಾಂಗದ ತಳಹದಿಯ ಆಚೆಗೆ ಕಾನೂನನ್ನು ಕೈಗೆತ್ತಿಕೊಳ್ಳುವಂತಿಲ್ಲ. ಇದು ಕಾನೂನು ಪಾಲಕರಾದ ಪೊಲೀಸರಿಗೂ ಅನ್ವಯವಾಗುತ್ತದೆ.
ಆದರೆ, ಪೊಲೀಸರು ಇಂತಹ ಕಾನೂನುಗಳನ್ನು ಉಲ್ಲಂಘನೆ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಮೊನ್ನೆ ಹೈದ್ರಾಬಾದ್ ನಲ್ಲಿ ನಡೆದ ಎನ್ ಕೌಂಟರ್ ಪ್ರಕರಣದಲ್ಲಿಯೂ ಪೊಲೀಸರು ದುಡುಕಿ ಕಾನೂನನ್ನು ಕೈಗೆತ್ತಿಕೊಂಡಿದ್ದರ ಪರಿಣಾಮ ದೇಶಾದ್ಯಂತ ಈ ಬಗ್ಗೆ ಪರ-ವಿರೋಧಗಳ ಚರ್ಚೆಗಳು ನಡೆಯುತ್ತಿವೆ.
ಹೇಗಿದ್ದರೂ, ಪಶುವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನ್ಯಾಯಾಲಯದ ಕಟಕಟೆ ಏರಿಯಾಗಿತ್ತು. ಇನ್ನು ಆರೋಪಿಗಳ ವಿಚಾರದಲ್ಲಿ ನ್ಯಾಯಾಂಗವೇ ನ್ಯಾಯ ಹೇಳಲಿ ಎಂದು ಪೊಲೀಸರು ಕೈಬಿಡಬಹುದಿತ್ತು. ಆದರೆ, ಅದಕ್ಕೆ ಅವಕಾಶವನ್ನೇ ನೀಡದೆ ಪೊಲೀಸರು ಬೆಳಗಿನ ಜಾವ ಮಹಜರು ನೆಪದಲ್ಲಿ ನಾಲ್ವರು ಆರೋಪಿಗಳನ್ನು ಸ್ಥಳಕ್ಕೆ ಕರೆದೊಯ್ದು ಅವರ ಮೇಲೆ ಗುಂಡು ಹಾರಿಸಿರುವ ಮೂಲಕ ಇಲ್ಲದ ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ.
ಇಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಪೊಲೀಸರ ನಡೆ ಬಗ್ಗೆ ಹಲವು ಅನುಮಾನಗಳು ಬಾರದೇ ಇರಲಾರವು. ಹೇಗಿದ್ದರೂ ನ್ಯಾಯಾಲಯ ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಿತ್ತು. ತಮ್ಮ ವಶಕ್ಕೆ ಬಂದ ಆರೋಪಿಗಳನ್ನು ವಿಚಾರಣೆ ಮಾಡಲು ನಾನಾ ಹಾದಿಗಳಿದ್ದವು. ಸ್ಥಳ ಮಹಜರು ಮಾಡಲು ಸಾಕಷ್ಟು ಸಮಯಾವಕಾಶವೂ ಇತ್ತು. ಆದರೆ, ಪೊಲೀಸರು ಎಲ್ಲರೂ ಗಾಢ ನಿದ್ದೆಯಲ್ಲಿದ್ದಾಗ ಈ ಆರೋಪಿಗಳನ್ನು ಬೆಳಗಿನ ಜಾವ ಕರೆದೊಯ್ದು ಮಹಜರು ಮಾಡಲು ಮುಂದಾಗಿದ್ದುದನ್ನು ಗಮನಿಸಿದರೆ ಅವರ ಹಿಂದಿನ ಉದ್ದೇಶ ಏನಿತ್ತು? ಎಂಬುದು ತಿಳಿಯದೇ ಇರಲಾರದು. ಏಕೆಂದರೆ, ಹಗಲಿನ ವೇಳೆ ಕರೆದೊಯ್ದು ಮಹಜರು ಮಾಡಬಹುದಿತ್ತು. ಒಂದು ವೇಳೆ ಭದ್ರತಾ ಸಮಸ್ಯೆ ಎದುರಾಗಿದ್ದರೆ ಸಾಕಷ್ಟು ಭದ್ರತೆಯನ್ನು ಒದಗಿಸಿ ಅದರಡಿಯಲ್ಲೇ ಮಹಜರು ನಡೆಸಬೇಕಿತ್ತು. ಆದರೆ, ಪೊಲೀಸರು ಈ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ.
ಪ್ರತೀಕಾರ ರೂಪದ ನ್ಯಾಯ
ದೇಶದ ಮುಖ್ಯ ನ್ಯಾಯಾಧೀಶರು ದ್ವೇಷದ ರೂಪದ ನ್ಯಾಯ ಸಮ್ಮತವಲ್ಲ ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ. ಇಲ್ಲಿ ಹೈದ್ರಾಬಾದ್ ಪೊಲೀಸರ ಕ್ರಮವನ್ನು ಗಮನಿಸಿದರೆ ಇದೊಂದು ಪ್ರತೀಕಾರ ರೂಪದ ನ್ಯಾಯವಾಗಿದೆ ಎಂದರೆ ತಪ್ಪಾಗಲಾರದು. ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯ ವಿಚಾರಣೆಯನ್ನು ಪೂರ್ಣಗೊಳಿಸುವ ಮುನ್ನವೇ ಪೊಲೀಸರು ಎನ್ ಕೌಂಟರ್ ಮಾಡುವ ಮೂಲಕ ತಮ್ಮದೇ ರೂಪದಲ್ಲಿ ತೀರ್ಪನ್ನು ನೀಡಿದ್ದಾರೆ.
ಅವನು ಎಂತಹದ್ದೇ ಆರೋಪಿಯಾಗಿರಲಿ, ಎಂತಹದ್ದೇ ಅಪರಾಧಗಳನ್ನು ನಡೆಸಿರಲಿ. ಅಂತಹ ವ್ಯಕ್ತಿಗೆ ನ್ಯಾಯಾಂಗ ಹೊರತುಪಡಿಸಿ ಯಾರೂ ಶಿಕ್ಷೆ ನೀಡುವಂತಿಲ್ಲ ಎನ್ನುತ್ತದೆ ನಮ್ಮ ಕಾನೂನು. ಹಾಗೊಂದು ವೇಳೆ ಕಾನೂನನ್ನು ಕೈಗೆತ್ತಿಕೊಂಡರೆ ಅದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ.
ಇಂತಹ ಹಲವಾರು ಎನ್ ಕೌಂಟರ್ ಪ್ರಕರಣಗಳಲ್ಲಿ ಪೊಲೀಸರಿಗೇ ಹೆಚ್ಚು ಶಿಕ್ಷೆಗಳಾಗಿವೆ. ಏಕೆಂದರೆ, ಎನ್ ಕೌಂಟರ್ ಗಳಲ್ಲಿ ಬಹುತೇಕ ಪ್ರತೀಕಾರದ ರೂಪದ ತೀರ್ಪುಗಳಾಗಿವೆ ಎಂಬುದು ಸಾಬೀತಾಗಿದೆ.
ಹೈದ್ರಾಬಾದ್ ಪ್ರಕರಣದಲ್ಲಿಯೂ ಸಹ ಪೊಲೀಸರು ಎನ್ ಕೌಂಟರ್ ನಡೆಸಿ ತಪ್ಪೆಸಗಿರಬಹುದು ಎಂಬ ಗುಮಾನಿ ಇರುವುದರಿಂದ ಈ ಕುರಿತು ಸಮಗ್ರ ತನಿಖೆ ನಡೆಯುವುದು ಸೂಕ್ತವಾಗಿದೆ.