ತೆಲಂಗಾಣದ ಅತ್ಯಾಚಾರ ಆರೋಪಿಗಳ ಎನ್ ಕೌಂಟರ್ ನಡೆಸಿದ ಪೊಲೀಸರ ವಿರುದ್ಧ ನಿರೀಕ್ಷೆಯಂತೆ ಕೇಸು ದಾಖಲಾಗಿದೆ. ಇದೊಂದು ನಕಲಿ ಎನ್ ಕೌಂಟರ್ ಆಗಿದ್ದು ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ವಕೀಲರಾದ ಜಿ.ಎಸ್.ಮಣಿ ಮತ್ತು ಪ್ರದೀಪ್ ಕುಮಾರ್ ಯಾದವ್ ಹಾಗೂ ಮತ್ತೋರ್ವ ವಕೀಲರಾದ ಎಂ,ಎಲ್.ಶರ್ಮಾ ಅವರು ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಶನಿವಾರ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ್ದಾರೆ.
ಮತ್ತೊಂದೆಡೆ, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತನಿಖೆಯನ್ನು ಆರಂಭಿಸಿದೆ.
ಈ ಮಧ್ಯೆ, ಎನ್ ಕೌಂಟರ್ ಬಗ್ಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಕೆಲವು ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೇ, ಇದೊಂದು ನಕಲಿ ಎನ್ ಕೌಂಟರ್ ಆಗಿದ್ದು, ಪೊಲೀಸರು ಕಾನೂನನ್ನು ಉಲ್ಲಂಘನೆ ಮಾಡಿ ಆರೋಪಿಗಳನ್ನು ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿದ್ದಾರೆ ಎಂಬ ಅನುಮಾನಗಳು ಬರತೊಡಗಿವೆ.
ವಕೀಲರು ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯಲ್ಲಿ, ಪೊಲೀಸರು ಮಹಜರು ಮಾಡುವ ನೆಪದಲ್ಲಿ ಘಟನೆ ನಡೆದ ಸ್ಥಳಕ್ಕೆ ಆರೋಪಿಗಳನ್ನು ಕರೆದೊಯ್ದು ಹತ್ಯೆ ಮಾಡಿದ್ದಾರೆ. ಇದನ್ನು ಗಮನಿಸಿದರೆ ಇದೊಂದು ಪೂರ್ವನಿಯೋಜಿತವಾಗಿ ಕೃತ್ಯ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಆರೋಪಿಗಳು ವಿರುದ್ಧ ಅತ್ಯಾಚಾರ ಮತ್ತು ಕೊಲೆ ಮಾಡಿದ್ದಾರೆ ಎಂಬುದು ಇನ್ನೂ ಸಾಬೀತಾಗದಿರುವ ಸಂದರ್ಭದಲ್ಲಿಯೇ ತೆಲಂಗಾಣ ಪೊಲೀಸರು ಕಾನೂನನ್ನು ಕೈಗೆತ್ತಿಕೊಂಡು ಕೊಲೆ ಮಾಡಿದ್ದಾರೆ ಎಂದು ಪಿಐಎಲ್ ನಲ್ಲಿ ವಕೀಲರು ದೂರಿದ್ದಾರೆ.
ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡುವುದನ್ನು ಯಾರೂ ಒಪ್ಪುವುದಿಲ್ಲ. ಆದರೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಮತ್ತು ನ್ಯಾಯಾಲಯ ತೀರ್ಪು ಕೊಡುವ ಮುನ್ನವೇ ಕಾನೂನನ್ನು ಕೈಗೆತ್ತಿಕೊಂಡ ಪೊಲೀಸರು ನಾಲ್ವರನ್ನು ಹತ್ಯೆ ಮಾಡಿರುವುದು ಮಾತ್ರ ಖಂಡನೀಯ ಎಂದು ತಮ್ಮ ಪಿಐಎಲ್ ನಲ್ಲಿ ಪ್ರಸ್ತಾಪಿಸಿದ್ದಾರೆ.
ಮತ್ತೊಂದೆಡೆ, ಎನ್ ಕೌಂಟರ್ ವಿರುದ್ಧ ತೆಲಂಗಾಣ ಹೈಕೋರ್ಟಿನಲ್ಲಿ ರಿಟ್ ಅರ್ಜಿಯೊಂದು ಸಲ್ಲಿಕೆಯಾಗಿದ್ದು ಇದು ಇನ್ನೂ ವಿಚಾರಣೆಗೆ ಬರಬೇಕಿದೆ.
ಈ ಎನ್ ಕೌಂಟರ್ ಮೂಲಕ ಮಾನವಹಕ್ಕುಗಳ ಉಲ್ಲಂಘನೆಯಾಗಿದೆ ಎಂಬ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ದೂರನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ದಾಖಲಿಸಿಕೊಂಡಿದೆ. ಇದರನ್ವಯ ಹೈದ್ರಾಬಾದ್ ಹೊರವಲಯದಲ್ಲಿರುವ ಚಟಾನ್ ಪಲ್ಲಿಯಲ್ಲಿ ನಡೆದ ಘಟನಾ ಸ್ಥಳಕ್ಕೆ ತೆರಳಿ ತನಿಖೆ ನಡೆಸಲಿದೆ. ಅಲ್ಲದೇ, ಎನ್ ಕೌಂಟರ್ ನಡೆದ ಸಂದರ್ಭದಲ್ಲಿ ಅಥವಾ ಘಟನೆಯನ್ನು ನೋಡಿದ ವ್ಯಕ್ತಿಗಳಿಂದ ಮಾಹಿತಿಗಳ ಸಂಗ್ರಹ ಆರಂಭಿಸಿದೆ. ಅದೇ ರೀತಿ, ಎನ್ ಕೌಂಟರ್ ನಲ್ಲಿ ಭಾಗಿಯಾಗಿದ್ದ ಪೊಲೀಸರನ್ನೂ ವಿಚಾರಣೆ ನಡೆಸಲಿದೆ.
ಎನ್ ಎಚ್ ಆರ್ ಸಿ ವಿರುದ್ಧ ಪಶು ವೈದ್ಯೆ ಪ್ರಿಯಾಂಕ ರೆಡ್ಡಿ ಕುಟುಂಬದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಮಗಳಿಗೆ ಚಿತ್ರಹಿಂಸೆ ನೀಡಿ ಕೊಲೆಗೈದಾಗ ಮಾನವ ಹಕ್ಕುಗಳ ಉಲ್ಲಂಘನೆಯಾಗಿರಲಿಲ್ಲವೇ? ಎನ್ ಕೌಂಟರ್ ಅನ್ನು ವಿರೋಧಿಸುತ್ತಿರುವವರು ನಮ್ಮ ಮಗಳ ಮೇಲೆ ಪೈಶಾಚಿಕ ಕೃತ್ಯ ಎಸಗಿದ್ದರ ವಿರುದ್ಧವೇಕೆ ಧ್ವನಿ ಎತ್ತಲಿಲ್ಲ? ಎಂಬಿತ್ಯಾದಿ ಪ್ರಶ್ನೆಗಳನ್ನು ಹಾಕತೊಡಗಿದ್ದಾರೆ. ಇವರಿಗೆ ಸಾರ್ವಜನಿಕ ವಲಯದಿಂದಲೂ ಬೆಂಬಲ ದೊರೆಯುತ್ತಿದೆ.
ಇಕ್ಕಟ್ಟಿನಲ್ಲಿ ಪೊಲೀಸರು
ಇನ್ನು ತೆಲಂಗಾಣ ಪೊಲೀಸರ ವಿರುದ್ಧ ಒಂದರ ಮೇಲೆ ಒಂದರಂತೆ ಕೇಸುಗಳು ಬೀಳತೊಡಗಿವೆ. ಸುಪ್ರೀಂಕೋರ್ಟಿನಲ್ಲಿ ಸಲ್ಲಿಕೆಯಾಗಿರುವ ಪಿಐಎಲ್ ಗಳ ವಿಚಾರಣೆ ನಡೆಸುವ ಸಂದರ್ಭದಲ್ಲಿ ಪೊಲೀಸರು ಎನ್ ಕೌಂಟರ್ ಮಾಡಲು ನಿಖರ ಕಾರಣವೇನಿತ್ತು ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಇದು ಅಷ್ಟು ಸುಲಭದ ಕೆಲಸವಲ್ಲ. ಏಕೆಂದರೆ, ದೇಶಾದ್ಯಂತ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ನಡೆದ ಎನ್ ಕೌಂಟರ್ ಗಳಲ್ಲಿ ಬಹುತೇಕ ನಕಲಿ ಎನ್ ಕೌಂಟರ್ ಗಳು ಎಂಬುದು ಸಾಬೀತಾಗಿದೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಶಿಕ್ಷೆಯೂ ಆಗಿದೆ.
ಹೀಗಾಗಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಎಷ್ಟೇ ಗಂಭೀರ ವಿಚಾರವಾದರೂ ನೆಲದ ಕಾನೂನು ತನ್ನ ಕೆಲಸವನ್ನು ತಾನು ಮಾಡುತ್ತದೆ. ಈ ನೆಲೆಗಟ್ಟಿನಲ್ಲಿಯೇ ದೇಶದಲ್ಲಿ ನಡೆದ ಅದೆಷ್ಟೋ ಎನ್ ಕೌಂಟರ್ ಗಳಿಗೆ ಸಕಾರಣಗಳನ್ನು ನೀಡಲು ಸಾಧ್ಯವಾಗದ ಪೊಲೀಸರು ಶಿಕ್ಷೆಗೆ ಒಳಗಾಗಿದ್ದಾರೆ. ಏಕೆಂದರೆ, ಇವು ಯಾವುದೋ ಒತ್ತಡಕ್ಕೋ, ಪ್ರಭಾವಕ್ಕೋ ಅಥವಾ ಒತ್ತಾಯಪೂರ್ವಕವಾದ ಆದೇಶಗಳಿಂದಾಗಿ ನಡೆದಿರುತ್ತವೆ.
ಇಂತಹ ಆದೇಶಗಳಿಗೆ ಯಾವುದೇ ದಾಖಲಾತಿಗಳಿರುವುದಿಲ್ಲ. ಪ್ರಭಾವಿಗಳು ನೀಡುವ ಮೌಖಿಕ ಆದೇಶಗಳನ್ನು ಪಾಲಿಸಿ ಪೊಲೀಸರು ಎನ್ ಕೌಂಟರ್ ನಡೆಸಿರುತ್ತಾರೆ. ದಾಖಲೆಗಳು ಇಲ್ಲದಿರುವ ಕಾರಣ ಎನ್ ಕೌಂಟರ್ ಗಳನ್ನು ಸಮರ್ಥನೆ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಾರೆ.
ಒಂದು ವೇಳೆ, ತೆಲಂಗಾಣ ಎನ್ ಕೌಂಟರ್ ನಕಲಿ ಎಂಬುದು ಸಾಬೀತಾದರೆ ಗುಂಡಿಕ್ಕಿದ ಪೊಲೀಸರಿಗೆ ಜೀವಾವಧಿವರೆಗೆ ಶಿಕ್ಷೆ ಕಟ್ಟಿಟ್ಟ ಬುತ್ತಿಯಾಗಿರುತ್ತದೆ.