ಭೀಮಾ ಕೋರೇಗಾಂವ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಬಂಧಿಸಿರುವ ಲೇಖಕರು, ಸಾಮಾಜಿಕ ಹೋರಾಟಗಾರರಲ್ಲಿ ಒಬ್ಬರಾದ ತೆಲುಗು ಖ್ಯಾತ ಕವಿ ವರವರ ರಾವ್ ಅವರಿಗೆ ಜೈಲಿನಲ್ಲಿ ಕೋವಿಡ್ ಸೋಂಕು ತಗಲಿರುವುದು ದೃಢಪಟ್ಟಿದೆ.
ಕಳೆದ 22 ತಿಂಗಳುಗಳಿಂದ ಜೈಲಿನಲ್ಲಿರುವ 81 ವರ್ಷದ ವರವರ ರಾವ್ ಅವರು ಕರೋನಾ ಆರಂಭದಿಂದಲೂ ವೈದ್ಯಕೀಯ ಕಾರಣದ ಮೇಲೆ ಜಾಮೀನು ನೀಡುವಂತೆ ಎನ್ ಐಎ ವಿಶೇಷ ನ್ಯಾಯಾಲಯದ ಮುಂದೆ ಪದೇಪದೆ ಮನವಿ ಮಾಡುತ್ತಲೇ ಬಂದಿದ್ದರು. ತೆಲಂಗಾಣ ಮೂಲದ ಹಿರಿಯ ಹೋರಾಟಗಾರ ಮತ್ತು ಕವಿಯನ್ನು ಬಂಧಿಸಿಡಲಾಗಿದ್ದ ನವಿ ಮುಂಬೈನ ತಲೋಜ ಜೈಲಿನ ಅಧಿಕಾರಿಗಳಿಗೆ ಭಾನುವಾರ ಮನವಿ ಮಾಡಿದ್ದ ಅವರ ಕುಟುಂಬ ಮತ್ತು ದೇಶದ ವಿವಿಧ ಹೋರಾಟಗಾರರು ಮತ್ತು ಲೇಖಕರು, ಅವರ ಆರೋಗ್ಯ ತೀರಾ ಹದಗೆಟ್ಟಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸುವಂತೆ ಕೋರಿದ್ದರು.
ವರವರ ರಾವ್ ಅವರು ಸೋಮವಾರ ಮುಂಬೈ ಹೈಕೋರ್ಟಿನಲ್ಲಿ ಎರಡು ಪ್ರತ್ಯೇಕ ಮೇಲ್ಮನವಿ ಸಲ್ಲಿಸಿ, ತಮ್ಮ ತೀವ್ರ ಜರ್ಝರಿತ ಆರೋಗ್ಯ ಸ್ಥಿತಿ ಹಿನ್ನೆಲೆಯಲ್ಲಿ ತಾತ್ಕಾಲಿಕ ಜಾಮೀನು ನೀಡುವಂತೆಯೂ ಮತ್ತು ತಮ್ಮ ವೈದ್ಯಕೀಯ ದಾಖಲೆಗಳೊಂದಿಗೆ ಆಸ್ಪತ್ರೆಗೆ ಸೇರಿಸುವಂತೆಯೂ ಜೈಲು ಅಧಿಕಾರಿಗಳಿಗೆ ಸೂಚಿಸಲು ಕೋರಿದ್ದರು.
Also Read: ಪುಣೆ ಜೈಲಿನಲ್ಲಿ ವರವರರಾವ್ ಪ್ರಾಣಕ್ಕೆ ಅಪಾಯವಿದೆಯೇ?
ಆ ಬಳಿಕ ಸೋಮವಾರ ರಾತ್ರಿ ಅವರು ತೀವ್ರ ಅನಾರೋಗ್ಯಕ್ಕೀಡಾಗಿ ತಲೆಸುತ್ತು ಬಂದು ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಅವರನ್ನು ಜೈಲು ಅಧಿಕಾರಿಗಳು ಜೆಜೆ ಆಸ್ಪತ್ರೆಗೆ ದಾಖಲಿಸಿದ್ದರು. ಆ ಬಳಿಕ ಅವರನ್ನು ಆಸ್ಪತ್ರೆಯ ನ್ಯೂರಾಲಜಿ ವಿಭಾಗದಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ಡೀನ್ ಡಾ ರಂಜಿತ್ ಮಂಕೇಶ್ವರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಅದೇ ವೇಳೆ ಅವರ ಗಂಟಲು ಮತ್ತು ರಕ್ತ ಮಾದರಿಯನ್ನು ಕೋವಿಡ್ ಪರೀಕ್ಷೆಗೆ ಕಳಿಸಲಾಗಿತ್ತು. ಗುರುವಾರ ಪರೀಕ್ಷೆಯ ಫಲಿತಾಂಶ ಬಂದಿದ್ದು, ವರವರ ರಾವ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಸೇಂಟ್ ಜಾರ್ಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭೀಮಾ ಕೋರೇಗಾಂವ್ ಗಲಭೆಗೆ ಸಂಬಂಧಿಸಿದಂತೆ ಎಲ್ಗಾರ್ ಪರಿಷತ್ ಎಂಬ ಸಂಘಟನೆಯ ಕೈವಾಡವಿದೆ ಎಂಬ ಶಂಕೆಯ ಮೇಲೆ ನಿಷೇಧಿತ ಮಾವೋವಾದಿ ಸಂಘಟನೆಯ ನಂಟಿನ ಆರೋಪದ ಮೇಲೆ ವರವರ ರಾವ್ ಸೇರಿದಂತೆ ಹತ್ತು ಮಂದಿಯನ್ನು ವಶಕ್ಕೆ ಪಡೆದಿದ್ದ ಪುಣೆ ಪೊಲೀಸರು, ಪ್ರಧಾನಿ ಹತ್ಯೆಯ ಸಂಚು ರೂಪಿಸಿದ ಬಗ್ಗೆಯೂ ಆರೋಪಪಟ್ಟಿಯಲ್ಲಿ ಪ್ರಸ್ತಾಪಿಸಿದ್ದರು. ಆ ಬಳಿಕ ಕಳೆದ ಜನವರಿಯಲ್ಲಿ ಪ್ರಕರಣದ ತನಿಖೆಯನ್ನು ಎನ್ ಐಎಗೆ ವಹಿಸಲಾಗಿತ್ತು.
ಆ ಬಳಿಕ ವರವರ ರಾವ್, ಆನಂದ್ ತೇಲ್ತುಂಬ್ಡೆ, ಗೌತಮ್ ನವಲೇಖಾ, ರೋನಾ ವಿಲ್ಸನ್, ಅರುಣ್ ಫೆರೇರಾ, ಸುಧಾ ಭಾರದ್ವಾಜ್ ಸೇರಿದಂತೆ ಹತ್ತು ಮಂದಿಯನ್ನು ವಶಕ್ಕೆ ಪಡೆದ ಎನ್ ಐಎ ಅವರ ವಿರುದ್ಧ ವಿಚಾರಣೆ ಮುಂದುವರಿಸಿತ್ತು. ಈ ನಡುವೆ, ಬಂಧಿತ ಲೇಖಕರು ಮತ್ತು ಹೋರಾಟಗಾರರ ಇ ಮೇಲ್ ಹ್ಯಾಕ್ ಮಾಡಿ, ಅವರ ವಿರುದ್ಧ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂಬ ವರದಿಗಳೂ ಕೇಳಿಬಂದಿದ್ದವು.
ಈ ನಡುವೆ ಕೋವಿಡ್ ಸೋಂಕು ದೇಶದ ಜೈಲುಗಳಿಗೂ ಆವರಿಸಿದ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದಲೂ ವರವರ ರಾವ್ ಮತ್ತು ಸುಧಾ ಭಾರದ್ವಾಜ್ ಅವರನ್ನು ಅವರ ದೈಹಿಕ ಆರೋಗ್ಯ ಮತ್ತು ವಯೋಮಾನದ ಕಾರಣಕ್ಕೆ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ದೇಶಾದ್ಯಂತ ಪ್ರಗತಿಪರ ಹೋರಾಟಗಾರರು ಮತ್ತು ಲೇಖಕರು ಆನ್ ಲೈನ್ ಅಭಿಯಾನವನ್ನೂ ಮಾಡಿದ್ದರು. ಬಂಧಿತರ ಕುಟುಂಬದವರೂ ಜೈಲು ಪ್ರಾಧಿಕಾರಿಗಳಿಗೆ ಮತ್ತು ಸರ್ಕಾರಗಳಿಗೆ ಮನವಿ ಮಾಡಿದ್ದರು. ಸ್ವತಃ ಬಂಧಿತರು ಕೂಡ ನ್ಯಾಯಾಲಯದಲ್ಲಿ ಜಾಮೀನಿಗೆ ಕಾನೂನು ಹೋರಾಟ ನಡೆಸಿದ್ದರು. ಆದರೂ, ಭೀಕರ ಸೋಂಕಿನ ಭಯವಿದ್ದರೂ ನ್ಯಾಯಾಲಯವಾಗಲೀ, ಜೈಲು ಅಧಿಕಾರಿಗಳಾಗಲೀ ಅವರಿಗೆ ಸೋಂಕು ತಗಲದಂತೆ ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾದವು ಎಂಬುದು ಇದೀಗ ವರವರ ರಾವ್ ಸ್ವತಃ ಸೋಂಕಿಗೀಡಾಗುವ ಮೂಲಕ ಸಾಬೀತಾಗಿದೆ. ವಿಶ್ವಾದ್ಯಂತ ಕರೋನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಕೈದಿಗಳ ಜೀವಕ್ಕೆ ಅಪಾಯ ಎದುರಾಗಬಹುದು ಎಂದು ಹೀನ ಅಪರಾಧ ಕೃತ್ಯ ಎಸಗಿದರವರನ್ನು ಕೂಡ ಜಾಮೀನಿನ ಮೇಲೆ ಬಿಡುಗಡೆ ಮಾಡಿರುವಾಗ, ಭಾರತದಲ್ಲಿ ಮಾತ್ರ ವ್ಯತಿರಿಕ್ತ ಸ್ಥಿತಿ ನಿರ್ಮಾಣವಾಗಿದೆ ಎಂಬ ಆತಂಕ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.
Also Read: ಪ್ರಧಾನಿ ಹತ್ಯೆ ಸಂಚು ವಿವಾದ; ಶರದ್ ಪವಾರ್ ಹೊಡೆತಕ್ಕೆ ‘ಮೋಶಾ’ ಕಂಗಾಲು