ರಾಜ್ಯ ವಿಧಾನಸಭೆಯ ಉಪ ಚುನಾವಣೆ ಕಣ ರಂಗೇರುತ್ತಿದೆ. ಈ ಸಂದರ್ಭದಲ್ಲಿ ಒಗ್ಗಟ್ಟಿನ ಪ್ರದರ್ಶನದ ಮೂಲಕ ಆಡಳಿತಾರೂಢ ಬಿಜೆಪಿ ವಿರುದ್ಧ ಹೋರಾಡಬೇಕಾದ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಆಂತರಿಕ ಕಚ್ಚಾಟದಲ್ಲಿ ಒದ್ದಾಡುತ್ತಿದೆ. ನಾಯಕರಿಗೆ ಪಕ್ಷದ ಗೆಲುವಿಗಿಂತ ತಮಗಾಗದವರ ಮೇಲೆ ಸೇಡು ತೀರಿಸಿಕೊಳ್ಳುವುದೇ ಮುಖ್ಯ ಎನಿಸುತ್ತಿದ್ದು, ಪರಸ್ಪರ ಕತ್ತಿ ಮಸೆಯುತ್ತಾ ಕಾಲ ಕಳೆಯುತ್ತಿದ್ದಾರೆ. ನಾಯಕರ ಈ ಕಿತ್ತಾಟ ಕಾರ್ಯಕರ್ತರ ಮಟ್ಟಕ್ಕೂ ತಲುಪಿದ್ದು, ಚುನಾವಣೆ ಘೋಷಣೆಯಾದಾಗ ಇದ್ದ ಉತ್ಸಾಹ ಮತದಾನದ ದಿನ ಸಮೀಪಿಸುತ್ತಿದ್ದಂತೆ ಕಡಿಮೆಯಾಗುತ್ತಿದೆ.
ಉಪ ಚುನಾವಣೆಯಲ್ಲಿ ನೇತೃತ್ವ ವಹಿಸಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಪಕ್ಷದ ಹಿರಿಯ ನಾಯಕರು ಬಂಡೆದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಸಿದ್ದರಾಮಯ್ಯ ಅವರ ಕಾರ್ಯವೈಖರಿ ಬಗ್ಗೆ ಸಮಾಧಾನವಿಲ್ಲದಿದ್ದರೂ ಅದನ್ನು ತೋರಿಸಿಕೊಡದೆ ಅವರ ಬೆನ್ನಿಗೆ ನಿಂತಿದ್ದಾರೆ. ಇದು ಹಿರಿಯ ನಾಯಕರ ಆಕ್ರೋಶವನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಇದರ ಪರಿಣಾಮ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಡೆದ ಪಕ್ಷದ ಸಭೆಗೆ ಹಿರಿಯ ನಾಯಕರೇ ಗೈರು ಹಾಜರಾಗಿದ್ದರು. ಸುಮಾರು 28 ನಾಯಕರಿಗೆ ಸಭೆಗೆ ಆಹ್ವಾನವಿದ್ದರೂ ಹತ್ತಕ್ಕೂ ಹೆಚ್ಚು ಮಂದಿ ಬಂದಿರಲಿಲ್ಲ. ಇವರಲ್ಲಿ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ಎಚ್.ಕೆ.ಪಾಟೀಲ್, ಬಿ.ಕೆ.ಹರಿಪ್ರಸಾದ್, ರಾಮಲಿಂಗಾರೆಡ್ಡಿ ಪ್ರಮುಖರು. ಮಲ್ಲಿಕಾರ್ಜುನ ಖರ್ಗೆ ಅವರು ಮಹಾರಾಷ್ಟ್ರ ಸರ್ಕಾರ ರಚನೆ ಗೊಂದಲ ಬಗೆಹರಿಸುವ ಪ್ರಯತ್ನದಲ್ಲಿ ಸಿಲುಕಿಕೊಂಡಿರುವುದರಿಂದ ಗೈರು ಹಾಜರಾಗಿದ್ದರೆ, ಡಿ.ಕೆ.ಶಿವಕುಮಾರ್ ಅನಾರೋಗ್ಯದ ಕಾರಣದಿಂದ ದೂರ ಉಳಿದಿದ್ದರು. ಉಳಿದವರ ಗೈರು ಹಾಜರಿಗೆ ಕಾರಣ ಸಿದ್ದರಾಮಯ್ಯ ಅವರ ಮೇಲಿನ ಅಸಮಾಧಾನ.
ವಿಶೇಷವೆಂದರೆ ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರೇ ಸಭೆಗೆ ಬಂದಿರಲಿಲ್ಲ. ಇತ್ತೀಚೆಗೆ ನಡೆದಿದ್ದ ಪಕ್ಷದ ಸಭೆಯಲ್ಲಿ ವೇಣುಗೋಪಾಲ್ ಅವರ ಸಮ್ಮುಖದಲ್ಲೇ ಕೆ.ಎಚ್.ಮುನಿಯಪ್ಪ ಮತ್ತು ಬಿ.ಕೆ.ಹರಿಪ್ರಸಾದ್ ಅವರು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದರು. ಇದಲ್ಲದೆ, ಮತ್ತೊಂದು ಸಭೆಯಲ್ಲಿ ಸಿದ್ದರಾಮಯ್ಯ ನಡವಳಿಕೆಯಿಂದ ಅಸಮ್ಧಾನಗೊಂಡು ಈ ಇಬ್ಬರೂ ಸಭೆಯಿಂದ ಅರ್ಧಕ್ಕೆ ಹೊರನಡೆದಿದ್ದರು. ಮತ್ತೆ ಸಭೆಯಲ್ಲಿ ಆ ರೀತಿಯ ಚಟುವಟಿಕೆಗಳು ನಡೆದರೆ ಮುಜುಗರವಾಗುತ್ತದೆ ಎಂಬ ಕಾರಣಕ್ಕೆ ವೇಣುಗೋಪಾಲ್ ಅವರು ಸಭೆಯಿಂದ ದೂರ ಉಳಿದಿದ್ದರು.
ಇಲ್ಲಿ ಈ ಎಲ್ಲಾ ನಾಯಕರು ಸಭೆಯಿಂದ ದೂರ ಉಳಿಯಲು ಮತ್ತೊಂದು ಕಾರಣ ಬೆಳಗಾವಿ ಜಿಲ್ಲೆಯ ಗೋಕಾಕ್ ಕ್ಷೇತ್ರದ ಅಭ್ಯರ್ಥಿ ಆಯ್ಕೆ. ಶಾಸಕರಾಗಿದ್ದ ರಮೇಶ್ ಜಾರಕಿಹೊಳಿ ಅನರ್ಹಗೊಂಡು ಬಿಜೆಪಿ ಸೇರಿದ್ದಾರೆ. ಈ ಜಾಗಕ್ಕೆ ಜಾರಕಿಹೊಳಿ ಕುಟುಂಬದ ಮತ್ತೊಬ್ಬ ಸದಸ್ಯ ಲಖನ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಬೇಕು ಎಂಬುದು ಅವರ ಸಹೋದರ ಸತೀಶ್ ಜಾರಕಿಹೊಳಿ ಅವರ ಅಭಿಪ್ರಾಯ. ಇದಕ್ಕೆ ಸಿದ್ದರಾಮಯ್ಯ ಕೂಡ ಸಾಥ್ ನೀಡಿದ್ದಾರೆ. ಆದರೆ, ಜಾರಕಿಹೊಳಿ ಕುಟುಂಬ ಬೆಳಗಾವಿ ರಾಜಕಾರಣದಲ್ಲಿ ನಡೆದುಕೊಳ್ಳುತ್ತಿರುವ ರೀತಿ ಕಾಂಗ್ರೆಸ್ ಪಕ್ಷದ ಹಲವು ಹಿರಿಯ ನಾಯಕರಿಗೆ ಇಷ್ಟವಿಲ್ಲ. ಹೀಗಾಗಿ ಅವರ ಬಲ ಕಡಿಮೆ ಮಾಡಬೇಕು ಎಂಬ ಉದ್ದೇಶದಿಂದ ಬಿಜೆಪಿ ಟಿಕೆಟ್ ಸಿಗದೆ ಅಸಮಾಧಾನಗೊಂಡಿರುವ ಅಶೋಕ್ ಪೂಜಾರಿ ಅವರನ್ನು ಪಕ್ಷಕ್ಕೆ ಕರೆಸಿ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು ಎಂಬ ಪ್ರಯತ್ನ ಮಾಡುತ್ತಿದ್ದರು. ಆದರೆ, ಸತೀಶ್ ಜಾರಕಿಹೊಳಿ ಮತ್ತು ಸಿದ್ದರಾಮಯ್ಯ ಇದಕ್ಕೆ ಸುತಾರಾಂ ಒಪ್ಪುತ್ತಿಲ್ಲ.
ಇದಲ್ಲದೆ, ಇತ್ತೀಚೆಗೆ ಎಂಟು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಪಕ್ಷದ ಹಿರಿಯ ನಾಯಕರ ಅಭಿಪ್ರಾಯಗಳಿಗೆ ಮನ್ನಣೆ ಸಿಕ್ಕಿರಲಿಲ್ಲ. ಸಿದ್ದರಾಮಯ್ಯ ಅವರ ಕೈ ಮೇಲಾಗಿ ಬಹುತೇಕ ಅವರ ಆಪ್ತರೇ ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಸಿದ್ದರಾಮಯ್ಯ ನೇತೃತ್ವದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತಿತರರು ಅಂತಿಮಗೊಳಿಸಿದ್ದ ಅಭ್ಯರ್ಥಿಗಳ ಪಟ್ಟಿಗೆ ವರಿಷ್ಠರು ಕಣ್ಣು ಮುಚ್ಚಿ ಸಮ್ಮತಿಸಿದ್ದರು. ಹೀಗಾಗಿ ಮತ್ತೆ ಏಳು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯಲ್ಲೂ ತಮ್ಮ ಮಾತಿಗೆ ಬೆಲೆ ಸಿಗುವುದಿಲ್ಲ ಎಂದು ಈ ಹಿರಿಯ ನಾಯಕರಿಗೆ ಗೊತ್ತಿತ್ತು. ಹೀಗಾಗಿ ಕೈ ತೋರಿಸಿ ಅವಲಕ್ಷಣ ಹೇಳಿಸಿಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಅವರೆಲ್ಲರೂ ಸಭೆಯಿಂದ ದೂರವೇ ಉಳಿದಿದ್ದರು.
ತಳಮಟ್ಟಕ್ಕೂ ವಿಸ್ತರಿಸುತ್ತಿದೆ ಈ ಅಸಮಾಧಾನ
2018ರ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿಯಲ್ಲಿ ಇದ್ದ ಪರಿಸ್ಥಿತಿಯೇ ಈಗ ಕಾಂಗ್ರೆಸ್ ಪಕ್ಷದಲ್ಲೂ ಉಂಟಾಗಿದೆ. ಆ ಸಂದರ್ಭದಲ್ಲಿ ರಾಜ್ಯ ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಬಣ ಮತ್ತು ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬಣ ಎಂದು ಎರಡು ಗುಂಪುಗಳಿದ್ದವು. ರಾಜ್ಯ ಮಟ್ಟದಿಂದ ಬೂತ್ ಮಟ್ಟಕ್ಕೂ ಈ ಬಣ ರಾಜಕಾರಣ ಹಬ್ಬಿತ್ತು. ಇದರ ಪರಿಣಾಮವೇ ಬಿಜೆಪಿ ಕೆಲವು ಕಡೆ ಸೋಲು ಅನುಭವಿಸಿದ್ದೂ ಆಯಿತು. ಇದೀಗ ಕಾಂಗ್ರೆಸ್ ನಲ್ಲೂ ಅದೇ ಬಣ ರಾಜಕಾರಣ ಗ್ರಾಮ ಮಟ್ಟದವರೆಗೆ ಹಬ್ಬಿದೆ. ಪಕ್ಷದ ಟಿಕೆಟ್ ಸಿಗದೇ ಇದ್ದವರು ರಾಜ್ಯ ನಾಯಕರ ಹೆಸರು ಹೇಳಿಕೊಂಡು ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಪ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಕಾರ್ಯಕರ್ತರಲ್ಲಿ ಅಷ್ಟೊಂದು ಹುಮ್ಮಸ್ಸು, ಹೋರಾಟದ ಕೆಚ್ಚು ಉಳಿದುಕೊಂಡಿಲ್ಲ.
ಆದರೆ, ಇದು ಗೊತ್ತಿದ್ದರೂ ರಾಜ್ಯ ಮಟ್ಟದ ನಾಯಕರು ತಪ್ಪು ಸರಿಪಡಿಸಿಕೊಂಡು ಒಟ್ಟಿಗೆ ಹೋಗುವ ಮನಸ್ಸು ಮಾಡುತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಮಣೆ ಹಾಕುತ್ತಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಬಹುತೇಕ ಹಿರಿಯ ನಾಯಕರಿಗೆ ಉಪ ಚುನಾವಣೆ ಗಲ್ಲುವುದಕ್ಕಿಂತ ಸೋಲುವ ಮೂಲಕ ಸಿದ್ದರಾಮಯ್ಯ ಅವರ ವೈಫಲ್ಯವನ್ನು ವರಿಷ್ಠರಿಗೆ ಮನವರಿಕೆ ಮಾಡಬೇಕು ಎಂಬುದೇ ಪ್ರಮುಖ ಗುರಿಯಾಗಿದೆ. ಅದಕ್ಕೆ ತಕ್ಕಂತೆ ತಮ್ಮ ಬೆಂಬಲಿಗರ ಮೂಲಕ ಕಾರ್ಯಕರ್ತರನ್ನೂ ಸಿದ್ಧಗೊಳಿಸುತ್ತಿದ್ದಾರೆ.
ಕಾಂಗ್ರೆಸ್ ಭಿನ್ನಾಭಿಪ್ರಾಯದ ಲಾಭ ಪಡೆಯಲು ಬಿಜೆಪಿ ಯತ್ನ
ಉಪ ಚುನಾವಣೆ ನಡೆಯಲಿರುವ 15 ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ನಿಂದ ಬಂದಿರುವ ಅನರ್ಹ ಶಾಸಕರಿದ್ದರೆ, 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ನ ಅನರ್ಹ ಶಾಸಕರಿದ್ದಾರೆ. ಇವರೆಲ್ಲರೂ ಈಗ ಬಿಜೆಪಿ ಅಭ್ಯರ್ಥಿಗಳು ಈ ಹತ್ತು ಮಂದಿ ಮೂಲತಃ ಕಾಂಗ್ರೆಸ್ಸಿಗರಾಗಿರುವುದರಿಂದ ಸಹಜವಾಗಿಯೇ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರ ಸಂಪರ್ಕ ಹೊಂದಿದ್ದಾರೆ. ಇದೀಗ ಬಿಜೆಪಿ ಈ ಅಭ್ಯರ್ಥಿಗಳ ಮೂಲಕವೇ ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ಸಿನ ಅಸಮಾಧಾನಿತ ಮುಖಂಡರು ಮತ್ತು ಕಾರ್ಯಕರ್ತರಿಗೆ ಗಾಳ ಹಾಕುವ ಪ್ರಯತ್ನಕ್ಕೆ ಇಳಿದಿದೆ. ಅನರ್ಹ ಶಾಸಕರನ್ನು ಮತ್ತೆ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿಕೊಟ್ಟರೆ ಭವಿಷ್ಯದಲ್ಲಿ ಅವರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡುವುದು ಇಲ್ಲವೇ ಸರ್ಕಾರದಿಂದ ನಡೆಯುವ ಸ್ಥಳೀಯ ನೇಮಕಾತಿಗಳಲ್ಲಿ ಅವಕಾಶ ಕಲ್ಪಿಸುವ ಭರವಸೆ ನೀಡಲಾಗಿದೆ.
ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್ ರಾಜ್ಯ ಮಟ್ಟದ ನಾಯಕರು ಎಚ್ಚೆತ್ತುಕೊಂಡು ಒಗ್ಗಟ್ಟಿನ ಮಂತ್ರ ಪಠಿಸದಿದ್ದರೆ ಉಪ ಚುನಾವಣೆಯಲ್ಲಿ ಅದರ ಲಾಭ ಬಿಜೆಪಿಗೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಏಕೆಂದರೆ, ಜೆಡಿಎಸ್ ಕೂಡ ಕಣದಲ್ಲಿದ್ದು, ಪಕ್ಷದ ಅಭ್ಯರ್ಥಿಗಳು ಬಿಜೆಪಿಗಿಂತ ಕಾಂಗ್ರೆಸ್ ಮತಗಳಿಗೇ ಹೆಚ್ಚು ಕನ್ನ ಹಾಕುತ್ತಾರೆ. ಎರಡೂ ಪಕ್ಷಗಳು ಕಾಂಗ್ರೆಸ್ ನ ಮತಗಳು ವಿಭಜನೆಯಾಗುವಂತೆ ನೋಡಿಕೊಂಡರೆ ಫಲಿತಾಂಶ ಕಾಂಗ್ರೆಸ್ಸಿಗೆ ವ್ಯತಿರಿಕ್ತವಾಗಿ ಬರಬಹುದು. ಇದನ್ನು ತಪ್ಪಿಸಲು ನಾಯಕರು ಈಗಲೇ ಕಾರ್ಯಪ್ರವೃತ್ತರಾಗಬೇಕಾಗಿದೆ.