ಸೋಮವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ 10 ಜನ ಸಂಸದರು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ಎಂಟು, ಸಮಾಜವಾದಿ ಪಾರ್ಟಿ ಮತ್ತು ಬಹುಜನ ಸಮಾಜ ಪಾರ್ಟಿಯಿಂದ ತಲಾ ಒಬ್ಬರು ಸಂಸದರು ಆಯ್ಕೆಯಾಗಿದ್ದಾರೆ. ಇದರಲ್ಲಿ ಆಶ್ಚರ್ಯಕರ ವಿಚಾರವೇನೆಂದರೆ, ಬಿಜೆಪಿಯಿಂದ ಇನ್ನೊಬ್ಬ ಸದಸ್ಯರನ್ನು ರಾಜ್ಯಸಭೆಗೆ ಆಯ್ಕೆ ಮಾಡಲು ಅವಕಾಶವಿದ್ದರೂ, ಆ ಸ್ಥಾನವನ್ನು ಬಿಎಸ್‌ಪಿಗೆ ಬಿಟ್ಟುಕೊಡುವ ಮೂಲಕ ರಾಜಕೀಯ ತಂತ್ರಗಾರಿಕೆ ಹೆಣೆದಿದೆ.
ಕಳೆದ ವಾರ ಮಾಧ್ಯಮದವರೊಂದಿಗೆ ಮಾತನಾಡಿದ್ದ ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಅವರು, ಚುನಾವಣೆಯಲ್ಲಿ ಸಮಾಜವಾದಿ ಪಾರ್ಟಿಯನ್ನು ಸೋಲಿಸಲು ಬಿಜೆಪಿಯೊಂದಿಗೂ ಕೈಜೋಡಿಸಲು ಸಿದ್ದ ಎಂದು ಹೇಳಿದ್ದರು. ಸಮಾಜವಾದಿ ಪಾರ್ಟಿಗೆ ಬೆಂಬಲ ನೀಡಿದ್ದ ಏಳು ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಬೆಳವಣಿಗೆಯ ನಂತರ ಬಿಜೆಪಿಯು ರಾಜ್ಯಸಭೆಯಲ್ಲಿ ಹೆಚ್ಚುವರಿ ಒಂದು ಸ್ಥಾನವನ್ನು ಗಳಿಸುವ ಅವಕಾಶವಿದ್ದರೂ, ಅದನ್ನು ಬಿಎಸ್‌ಪಿಗೆ ಬಿಟ್ಟುಕೊಡುವ ಮೂಲಕ, ʼದಲಿತ-ವಿರೋಧಿʼ ಎಂಬ ಹಣೆಪಟ್ಟಿಯನ್ನು ಕಳಚಲು ಪ್ರಯತ್ನಿಸುತ್ತಿದೆ. ಬಿಎಸ್‌ಪಿಯ ರಾಮ್‌ಜಿ ಲಾಲ್ ಗೌತಮ್ ಅವರು ಈಗ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿಜೆಪಿಯ ಬಳಿ 22 ಮತಗಳು ಹೆಚ್ಚುವರಿಯಾಗಿದ್ದರೂ, ಒಂಬತ್ತನೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ಮುಂದೆ ಬರಲಿಲ್ಲ. ಈ 22 ಮತಗಳೊಂದಿಗೆ ಮೈತ್ರಿ ಪಕ್ಷವಾಗಿರುವ ಅಪ್ನಾ ದಳದ ಒಂಬತ್ತು ಹಾಗೂ ಮೂವರು ಪಕ್ಷೇತರರ ಬೆಂಬಲವಿದ್ದರೂ, ಬಿಜೆಪಿ ಒಂದು ಸ್ಥಾನವನ್ನು ಬಿಎಸ್‌ಪಿಗೆ ಬಿಟ್ಟುಕೊಟ್ಟಿದೆ. ಗೌತಮ್ ಅವರು ಕೇವಲ ಒಂಬತ್ತು ಜನರ ಬೆಂಬಲದೊಂದಿಗೆ ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
Also Read: ಹಥ್ರಾಸ್ ಪ್ರಕರಣ: ಸಿಬಿಐ ಭೀತಿಯ ಎದುರು ಉಡುಗಿಹೋಯ್ತೆ ದಲಿತ ನಾಯಕಿಯ ದನಿ?

ಚುನಾವಣೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ಮಾಯಾವತಿ, ನಾನು ಬಿಜೆಪಿಯೊಂದಿಗೆ ಕೈಜೋಡಿಸುತ್ತೇನೆ ಎಂದು ಹೇಳಿರುವ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡಿವೆ, ಸಮಾಜವಾದಿ ಪಾರ್ಟಿಯನ್ನು ಸೋಲಿಸಲು ʼಬೇಕಾದರೆʼ ಬಿಜೆಪಿಗೆ ಬೆಂಬಲಿಸುತ್ತೇನೆ ಎಂದು ಹೇಳಿದ್ದೆ. ಅದರ ಹೊರತಾಗಿ ಕೋಮುವಾದಿ ಮತ್ತು ಜಾತಿವಾದಿ ಪಕ್ಷವಾದ ಬಿಜೆಪಿಯನ್ನು ಬೆಂಬಲಿಸುವ ಪ್ರಶ್ನೆಯಿಲ್ಲ ಎಂದು ಹೇಳಿದ್ದಾರೆ.
ಮಾಯಾವತಿ ಅವರು ಈ ರೀತಿಯ ಸ್ಪಷ್ಟಣೆ ನೀಡಿದ್ದರೂ, ಬಿಜೆಪಿಯಿಂದ ದಲಿತ ಮತದಾರರನ್ನು ಓಲೈಸುವ ರಾಜಕಾರಣ ಉತ್ತರಪ್ರದೇಶದಲ್ಲಿ ನಡೆಯುತ್ತಿದೆ ಎಂಬುದಕ್ಕೆ ಈ ರಾಜ್ಯಸಭಾ ಚುನಾವಣೆ ಸಾಕ್ಷಿ. ದಲಿತ ವಿರೋಧಿ ಪಟ್ಟವನ್ನು ಕಳಚಿಕೊಳ್ಳುವ ಮೂಲಕ ಮುಂಬರುವ ಚುನಾವಣೆಗಳಲ್ಲಿ, ಪಕ್ಷದ ಅಸ್ಥಿತ್ವವನ್ನು ಇನ್ನಷ್ಟು ಬಲಪಡಿಸುವುದು ಬಿಜೆಪಿಯ ಗುರಿ. ಈಗಾಗಲೇ, ಹಾಥ್ರಾಸ್ ಪ್ರಕರಣದಿಂದಾಗಿ ಉತ್ತರ ಪ್ರದೇಶದ ಯೋಗಿ ಸರ್ಕಾರ ಕಳೆದುಕೊಂಡಿರುವ ʼಇಮೇಜ್ʼ ಅನ್ನು ಬಿಎಸ್‌ಪಿಗೆ ಪರೋಕ್ಷವಾಗಿ ಬೆಂಬಲ ನೀಡುವ ಮೂಲಕ ತಾನೂ ದಲಿತ ಪರ ಎಂಬುವುದನ್ನು ನಿರೂಪಿಸಲು ಹೊರಟಿದೆ.