ಮಹಾರಾಷ್ಟ್ರ ಚುನಾವಣೆ ಪ್ರಚಾರದಲ್ಲಿ ಅಮಿತ್ ಶಾ, ಎನ್ಸಿಪಿ ಮುಖಂಡ ಪ್ರಫುಲ್ ಪಟೇಲ್ ಭಯೋತ್ಪಾದಕರಿಂದ ಆಸ್ತಿ ಖರೀದಿಸಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಈಗ ಬಿಜೆಪಿಯೇ ಭಯೋತ್ಪಾದಕರಿಗೆ ಹಣ ಸಹಾಯ ಮಾಡುತ್ತಿದ್ದ ಕಂಪನಿಯಿಂದ ದೇಣಿಗೆ ಪಡೆಯುತ್ತಿದೆ.
ದೇಶಭಕ್ತಿಯ ಮುಖವಾಡ ಧರಿಸಿಕೊಂಡು ಆಡಳಿತಕ್ಕೆ ಬಂದಿರುವ ಬಿಜೆಪಿ ಒಂದೊಂದೇ ಕರಾಳ ಮುಖ ಅನಾವರಣಗೊಳ್ಳುತ್ತಿದೆ. ಉಗ್ರಗಾಮಿಗಳಿಗೆ ಧನ ಸಹಾಯ ಮಾಡುತ್ತಿದ್ದ ರಿಯಲ್ ಎಸ್ಟೇಟ್ ಕಂಪನಿಯೊಂದರಿಂದಲೇ ಬಿಜೆಪಿ ಅಪಾರ ಪ್ರಮಾಣದ ದೇಣಿಗೆ ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ.
ಆಂಗ್ಲ ಸುದ್ದಿಜಾಲ `ದಿ ವೈರ್’ ಈ ದೇಣಿಗೆ ಪ್ರಕರಣದ ಬಗ್ಗೆ ವಿಸ್ತೃತವಾದ ಎಕ್ಸ್ ಕ್ಲೂಸಿವ್ ಸುದ್ದಿಯೊಂದನ್ನು ಪ್ರಕಟಿಸಿದೆ. ಈ ಸುದ್ದಿಯ ಪ್ರಕಾರ ಮುಂಬೈ ಮೂಲದ ಆರ್ಕೆಡಬ್ಲ್ಯೂ ಡೆವಲಪರ್ಸ್ ಲಿಮಿಟೆಡ್ ಕಂಪನಿಯು 1993 ರ ಮುಂಬೈ ಬಾಂಬ್ ಸ್ಫೋಟದ ಪ್ರಮುಖ ರೂವಾರಿಯಾಗಿದ್ದ ಇಕ್ಬಾಲ್ ಮೆಮೊನ್ ಅಲಿಯಾಸ್ ಇಕ್ಬಾಲ್ ಮಿರ್ಚಿಯ (ಈತ ಭಯೋತ್ಪಾದಕ ದಾವೂದ್ ಇಬ್ರಾಹಿಂ ಅನುಯಾಯಿಯಾಗಿದ್ದ) ಜತೆ ಸೇರಿ ಆಸ್ತಿ ಮಾರಾಟ-ಖರೀದಿ ವ್ಯವಹಾರಗಳನ್ನು ನಡೆಸಿದ್ದರ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಈ ಕಂಪನಿಯು ಉಗ್ರಗಾಮಿಗಳಿಗೆ ಹಣ ನೀಡುತ್ತಿತ್ತು ಎಂಬ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಇಡಿ ತನಿಖೆ ನಡೆಸುತ್ತಿದೆ.
ಇಂತಹ ಕಂಪನಿಯಿಂದಲೇ ಬಿಜೆಪಿ 2014-15 ನೇ ಸಾಲಿನಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದೆ. ಹಣ ಪಡೆದಿರುವ ಈ ವಿಚಾರವನ್ನು ಸ್ವತಃ ಬಿಜೆಪಿಯೇ ಘೋಷಣೆ ಮಾಡಿಕೊಂಡಿದೆ.
ಮಹಾರಾಷ್ಟ್ರ ಚುನಾವಣೆ ಪ್ರಚಾರದ ವೇಳೆಯಲ್ಲಿ ಬಿಜೆಪಿ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಎನ್ ಸಿಪಿ ಮುಖಂಡ ಪ್ರಫುಲ್ ಪಟೇಲ್ ಅವರು ಭಯೋತ್ಪಾದಕನ ಪತ್ನಿಯಿಂದ ಆಸ್ತಿ ಖರೀದಿ ಮಾಡುವ ಮೂಲಕ ದೇಶದ್ರೋಹದ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈಗ ಅವರೇ ಮುನ್ನಡೆಸುತ್ತಿರುವ ಬಿಜೆಪಿಯೇ ಭಯೋತ್ಪಾದಕರಿಗೆ ಹಣ ಸಹಾಯ ಮಾಡುತ್ತಿದ್ದ ಕಂಪನಿಯಿಂದ ದೇಣಿಗೆ ಪಡೆದಿರುವ ವಿಚಾರ ಬಹಿರಂಗವಾಗಿದ್ದು, ಬಿಜೆಪಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆಯಷ್ಟೇ ಅಲ್ಲ ಹೊಸ ವಿವಾದದ ಕೇಂದ್ರ ಬಿಂದುವಾಗಿದೆ.
ಚುನಾವಣೆ ಆಯೋಗಕ್ಕೆ ಬಿಜೆಪಿ ಸಲ್ಲಿಸಿರುವ ಆದಾಯದ ವಿವರಗಳಲ್ಲಿ ಆರ್ಕೆಡಬ್ಲ್ಯೂ ಡೆವಲಪರ್ಸ್ನಿಂದ 10 ಕೋಟಿ ರೂಪಾಯಿ ದೇಣಿಗೆ ಬಂದಿದೆ ಎಂದು ಸ್ಪಷ್ಟಪಡಿಸಿದೆ.
ಬಿಜೆಪಿ ನಿರಂತರವಾಗಿ ವಿವಿಧ ಟ್ರಸ್ಟ್ ಗಳು, ಕಾರ್ಪೊರೇಟ್ ಸಂಸ್ಥೆಗಳಿಂದ ದೇಣಿಗೆಯನ್ನು ಸಂಗ್ರಹಿಸುತ್ತಾ ಬಂದಿದೆ. ಯಾವುದೇ ಕಂಪನಿ ಸ್ವಯಂಪ್ರೇರಿತವಾಗಿ ಆರ್ಕೆಡಬ್ಲ್ಯೂ ರೀತಿಯಲ್ಲಿ ದೇಣಿಗೆ ನೀಡಲು ಮುಂದೆ ಬಂದಿಲ್ಲ. ಚುನಾವಣಾ ಬಾಂಡ್ ಗಳ ವಿಚಾರದಲ್ಲಿ ಎದ್ದಿರುವ ವಿವಾದದಿಂದಾಗಿ ಆರ್ಕೆಡಬ್ಲ್ಯೂ ದೇಣಿಗೆ ಪ್ರಕರಣ ಬೆಳಕಿಗೆ ಬಂದಿದೆ.
ಈ ಕಂಪನಿಯ ಮಾಜಿ ನಿರ್ದೇಶಕ ರಂಜಿತ್ ಬಿಂದ್ರಾ ಅವರನ್ನು ಇಕ್ಬಾಲ್ ಮಿರ್ಚಿ ಮತ್ತು ಕಂಪನಿಗಳ ಜತೆ ಡೀಲ್ ಕುದುರಿಸುವ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಆರೋಪದಲ್ಲಿ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಇದಲ್ಲದೇ, ಮಿರ್ಚಿಯ ಆಸ್ತಿಗಳನ್ನು ಖರೀದಿ ಮಾಡುತ್ತಿದ್ದ ಸನ್ ಬ್ಲಿಂಕ್ ರಿಯಲ್ ಎಸ್ಟೇಟ್ ನಿಂದಲೂ ಬಿಜೆಪಿ 2 ಕೋಟಿ ರೂಪಾಯಿಗಳ ದೇಣಿಗೆ ಪಡೆದಿದೆ.
ಸನ್ ಬ್ಲಿಂಕ್ ನ ನಿರ್ದೇಶಕ ಮೆಹುಲ್ ಅನಿಲ್ ಬಿವಿಶಿ ಎಂಬುವರು ಸ್ಕಿಲ್ ರಿಯಾಲ್ಟರ್ಸ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರೂ ಆಗಿದ್ದಾರೆ. ಇದೇ ಸ್ಕಿಲ್ ರಿಯಾಲ್ಟರ್ಸ್ ನಿಂದ ಬಿಜೆಪಿ 2 ಕೋಟಿ ರೂಪಾಯಿ ಪಡೆದಿದೆ.
ಇಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಆರ್ ಕೆಡಬ್ಲ್ಯೂ ಡೆವಲಪರ್ಸ್ ನ ನಿರ್ದೇಶಕರಾಗಿರುವ ಪ್ಲೇಸಿಡ್ ಜಾಕಬ್ ನರೋನಾ ದರ್ಶನ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನ ಕಂಪನಿಯ ನಿರ್ದೇಶಕರೂ ಆಗಿದ್ದಾರೆ. ಇದೇ ದರ್ಶನ್ ಕಂಪನಿ ಬಿಜೆಪಿಗೆ 2016-17 ರಲ್ಲಿ 7.5 ಕೋಟಿ ರೂಪಾಯಿಗಳ ದೇಣಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ನರೋನಾ ಅವರನ್ನೂ ಇಡಿ ವಿಚಾರಣೆಗೆ ಒಳಪಡಿಸುತ್ತಿದೆ.
ಮಿರ್ಚಿಯ ಆಸ್ತಿಯನ್ನು ಮಾರಾಟ ಮಾಡಲು ಆರ್ ಕೆಡಬ್ಲ್ಯೂ ಡೆವಲಪರ್ಸ್ ನೆರವಾಗಿದ್ದರೆ, ಬಿಂದ್ರಾ ಈ ವ್ಯವಹಾರವನ್ನು ಕುದುರಿಸಿದ್ದಕ್ಕಾಗಿ 30 ಕೋಟಿ ರೂಪಾಯಿಗಳ ಕಮೀಷನ್ ಪಡೆದಿದ್ದಾರೆ ಎಂಬ ಆರೋಪ ಇಡಿ ಅಧಿಕಾರಿಗಳಿಂದ ಬಂದಿದೆ.
ಆರ್ ಕೆಡಬ್ಲ್ಯೂ ಡೆವಲಪರ್ಸ್ ಜತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ನಿರ್ದೇಶಕಿಯಾಗಿರುವ ಎಸೆನ್ಷಿಯಲ್ ಹಾಸ್ಪಿಟಾಲಿಟಿ ವ್ಯವಹಾರಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಅವರ ಪತಿ ರಾಜ್ ಕುಂದ್ರಾ ಅವರನ್ನೂ ಇಡಿ ವಿಚಾರಣೆಗೆ ಒಳಪಡಿಸಿದೆ.
ಮಹಾರಾಷ್ಟ್ರ ಚುನಾವಣೆ ವೇಳೆ ಕೇಂದ್ರ ಸರ್ಕಾರಿ ಸ್ವಾಮ್ಯದ ಇಡಿ ಸಂಸ್ಥೆ ಆ ರಾಜ್ಯದ ಹಲವಾರು ರಿಯಲ್ ಎಸ್ಟೇಟ್ ಕಂಪನಿಗಳ ಮೇಲೆ ದಾಳಿ ನಡೆಸಿತ್ತು. ಅದರಲ್ಲಿ ಪ್ರಮುಖವಾಗಿ ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿ ನಾಯಕ ಪ್ರಫುಲ್ ಪಟೇಲ್ ಒಡೆತನದ ಮಿಲೇನಿಯಂ ಡೆವಲಪರ್ಸ್ ಮಿರ್ಚಿಯ ಆಸ್ತಿ ಖರೀದಿಯಲ್ಲಿ ಪಾತ್ರ ವಹಿಸಿರುವುದರ ಬಗ್ಗೆ ತನಿಖೆ ನಡೆಸುತ್ತಾ ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಪಟೇಲ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ಬಿಂದ್ರಾ ಸೇರಿದಂತೆ ಇಬ್ಬರನ್ನು ಅರೆಸ್ಟ್ ಮಾಡಿದೆ.
ಮಹಾರಾಷ್ಟ್ರದ ಪ್ರಭಾವಿ ನಾಯಕರಾಗಿರುವ ಪ್ರಫುಲ್ ಪಟೇಲ್ ಅವರನ್ನು ಚುನಾವಣೆ ವೇಳೆ ಅಣಿಯಲು ಪ್ರಯತ್ನ ನಡೆಸಿದ್ದ ಬಿಜೆಪಿಯೇ ಈಗ ತಾನೇ ಇಕ್ಕಟ್ಟಿಗೆ ಸಿಲುಕಿದೆ.
ಮಹಾರಾಷ್ಟ್ರ ಚುನಾವಣೆ ವೇಳೆ ಮುಂಬೈ ಬಾಂಬ್ ದಾಳಿ ಪ್ರಕರಣವನ್ನು ಪದೇಪದೆ ಪ್ರಸ್ತಾಪ ಮಾಡಿದ್ದ ಬಿಜೆಪಿ ನಾಯಕರು ಭಯೋತ್ಪಾದಕರಿಗೆ ನೆರವಾದ ಸಂಸ್ಥೆಗಳಿಂದಲೇ ದೇಣಿಗೆ ಪಡೆದಿರುವುದನ್ನು ಮರೆತಂತೆ ವರ್ತಿಸಿದ್ದರು ಎಂದು ಕಾಣುತ್ತದೆ. ಆದರೆ, ಈ ಬಗ್ಗೆ ಈಗ ಬಿಜೆಪಿ ನಾಯಕರು ಏನು ಹೇಳುತ್ತಾರೆ ಎಂಬುದು ಪ್ರಶ್ನೆಯಾಗಿದೆ.
(ಕೃಪೆ: ದಿ ವೈರ್)