ಗದಗ ಜಿಲ್ಲೆಯ ರೋಣ ತಾಲೂಕಿನ ಕರ್ಕಿಕಟ್ಟಿ ಎಂಬ ಪುಟ್ಟ ಗ್ರಾಮದಲ್ಲೊಬ್ಬ ಅಪ್ಪಟ ಕನ್ನಡ ಪ್ರೇಮಿ ಇದ್ದಾರೆ. ಅದೊಂದು ಚಿಕ್ಕ ಹೋಟೆಲ್, ಅಲ್ಲಿ ಎಲ್ಲಿ ನೋಡಿದರೂ ಕನ್ನಡ ಸುಭಾಷಿತಗಳು. ಹೋಟೆಲಿನ ಬಾಗಿಲಿನ ಮೇಲೆ, ಸುತ್ತ ಮುತ್ತಲ ಗೋಡೆಗಳ ಮೇಲೆ ಎಲ್ಲೆಡೆ ನೋಡಿದರೂ ಕನ್ನಡ ಸುಭಾಷಿತಗಳು ಕಾಣ ಸಿಗುತ್ತವೆ. ಇವರು ನವೆಂಬರ್ ಕನ್ನಡಿಗ ಅಲ್ಲ, ಸದಾ ಕನ್ನಡವನ್ನು ಆರಾಧಿಸುವ ಭಕ್ತರೆಂದರೆ ಅತಿಶಯೋಕ್ತಿಯಾಗಲಾರದು.
ಇದು ಮುತ್ತಣ್ಣ ತಿರ್ಲಾಪುರ ಅವರ ಉಪಹಾರ ಗೃಹ. ಇವರೇನೂ ಅಂತಹ ಸ್ಥಿತಿವಂತರಲ್ಲ, ದುಡಿದ ಮೇಲೆಯೆ ಜೀವನ ಸಾಗಬೇಕು, ಶ್ರಮ ಜೀವಿ, ಯಾರಿಗೂ ಕೈವೊಡ್ಡಿಲ್ಲ, ಅಪ್ಪಟ ಗಾಂಧೀವಾದಿ ಕೂಡ ಹೌದು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನರಗುಂದದ ಮಹಾದಾಯಿ ಹೋರಾಟದಲ್ಲಿ ಗಾಂಧೀಜಿ ವೇಷ ಧರಿಸಿ ನಾಡಿನ ತುಂಬ ಪ್ರಖ್ಯಾತಿ ಪಡೆದಿದ್ದಾರೆ. ಇವರನ್ನು ಉತ್ತರ ಕರ್ನಾಟಕದ ಗಾಂಧೀಜಿ ಎಂದೇ ಎಷ್ಟೊ ಜನರು ಈಗಲೂ ಕರೆಯುತ್ತಾರೆ.
ಮೊನ್ನೆ ಇವರ ಹೋಟೆಲ್ ಹೋದಾಗ ಇವರ ಕ್ನನಡ ಪ್ರೇಮದ ಬಗ್ಗೆ ನೋಡಿ ಖುಷಿಯೆನಿಸಿತು. ಚಹ ಹೀರುತ್ತ ಮೇಲೆ ನೋಡಿದರೆ ಮೇಲ್ಛಾವಣಿ (ತಗಡಿನ) ಮೇಲೂ ಕನ್ನಡದ ಗಾದೆ ಗಳದ್ದೇ ಕಾರುಬಾರು. ಅಬ್ಬ ಇದೇನು ಅಂತ ಕೇಳಿದಾಗ ಮುತ್ತಣ್ಣ ಉವಾಚ ಹೀಗಿತ್ತು.
“ಸರ್ ನಾನು ಬಡಕುಟುಂಬದಲ್ಲಿ ಜನಿಸಿದ್ದೇನೆ. ಆದರೆ ಕಷ್ಟಪಟ್ಟು ದುಡಿಯುತ್ತಿದ್ದೇನೆ. ಆಗ ಕಲಿಯುವ ಶಕ್ತಿ ನನ್ನಲಿರಲಿಲ್ಲ. ಆದರೆ ಭಾಷೆಯ ಮೇಲಿನ ಪ್ರೇಮ ಕಡಿಮೆಯಾಗಲಿಲ್ಲ. ಅದ್ದರಿಂದ ನನ್ನ ಹೋಟೆಲ್ ನ ಎಲ್ಲ ಗೋಡೆಗಳಲ್ಲೂ ಕನ್ನಡದ ಗಾದೆಮಾತುಗಳು ಹಾಗೂ ಆಯ್ದ ಸುಭಾಷಿತಗಳನ್ನು ಬರೆದಿದ್ದೇನೆ. ನನ್ನ ಅಂಗಡಿಗೆ ಬಂದರೆ ಬರೀ ಹಸಿವಷ್ಟೇ ಅಲ್ಲ ಏನಾದರೂ ಹೊಸತು ತಿಳಿದುಕೊಂಡು ಹೋಗಬೇಕು ಎಂಬುದು ನನ್ನ ಆಸೆ. ಅದರ ಜೊತೆಗೆ ಒಂದು ಚಿಕ್ಕ ಗ್ರಂಥಾಲಯವನ್ನೂ ಮಾಡಿದ್ದೇನೆ. ಆಸಕ್ತರು ಪುಸ್ತಕಗಳನ್ನು ತೆಗೆದುಕೊಂಡು ಓದಿ ಹಾಗೆಯೇ ಮರಳಿಸಬೇಕು. ಇದು ಎಲ್ಲರಿಗೂ ಉಚಿತ”.
ವೀರೇಶ ಪತ್ತಾರ, ಪಕ್ಕದ ಶಿರೋಳದಲ್ಲಿರುವ ಮುತ್ತಣ್ಣ ಅವರ ಸ್ನೇಹಿತ ಹೇಳಿದ್ದು ಹೀಗೆ, “ಮುತ್ತಣ್ಣ ಮೊದಲಿನಿಂದಲೂ ಏನಾದರೂ ಹೊಸತನ್ನು ಮಾಡಬೇಕು ಎಂದು ಹಂಬಲಿಸುವವರು. ಕನ್ನಡ ಭಾಷೆಯ ಮೇಲಂತೂ ಅದಮ್ಯ ಪ್ರೇಮ. ಹೋಟೆಲಿಗೆ ಬಂದು ಯಾರಾದರೂ ತೆಲಗು ಅಥವಾ ಹಿಂದಿ ಮಾತನಾಡಿದರೂ ದಯವಿಟ್ಟು ಕನ್ನಡದಲ್ಲಿ ಮಾತನಾಡಿ ಎಂದು ಹೇಳುವವರು. ಇವರು ಪ್ರಚಾರ ಪ್ರಿಯರಲ್ಲ. ಿವರ ಹೋಟೆಲ್ ನಲ್ಲಿ ಗುಟ್ಕಾ ತಿನ್ನುವವರಿಗೆ ಚಹಾ ತಿಂಡಿ ನೀಡಲ್ಲ, ಮದ್ಯಪಾನ ಮಾಡುವವರಿಗೆ ಪ್ರವೇಶವಿಲ್ಲ. ಇದು ಈ ಹೋಟೆಲ್ ನ ಇನ್ನೊಂದು ವಿಶೇಷತೆ”.