“ಹೇಳಿಕೊಳ್ಳಲು ಇದುವರೆಗೆ ಮಾಡಿದ್ದು ಅಂತಹದ್ದೇನೂ ಇಲ್ಲ, ಮುಂದೆ ಮಾಡಬೇಕಾಗಿರುವ ಕೆಲಸಗಳ ಬಗ್ಗೆ ಪೂರ್ಣ ಸ್ಪಷ್ಟತೆ ಇಲ್ಲ”.
ವಿಧಾನಮಂಡಲದ ಜಂಟಿ ಅದಿವೇಶನವನ್ನುದ್ದೇಶಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯಪಾಲರಿಂದ ಮಾಡಿಸಿದ ಭಾಷಣ ಕೇಳಿದಾಗ ಅರ್ಥವಾಗುವುದು ಇಷ್ಟು.
ರಾಜ್ಯಪಾಲರು ಜಂಟಿ ಅಧಿವೇಶನವನ್ನುದ್ದೇಶಿಸಿ ಮಾಡುವ ಭಾಷಣ ಸರ್ಕಾರದ ಇದುವರೆಗಿನ ಸಾಧನೆಗಳು ಮತ್ತು ಮುಂದಿನ ಸಾಗಬೇಕಾದ ದಾರಿ, ಸರ್ಕಾರದ ಆದ್ಯತೆಗಳ ಬಗ್ಗೆ ಚಿತ್ರಣ ನೀಡುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಅದು ಕೇವಲ ಸರ್ಕಾರದ ಸಾಧನೆಗಳನ್ನು ಹೇಳಿಕೊಳ್ಳುವುದಷ್ಟಕ್ಕೇ ಸೀಮಿತವಾಗಿದ್ದು, ಸರ್ಕಾರದ ಆದ್ಯತೆಗಳು, ರಾಜ್ಯದ ಅಭಿವೃದ್ಧಿ ನಿಟ್ಟಿನಲ್ಲಿ ಸರ್ಕಾರದ ಧೋರಣೆಗಳೇನು ಎಂಬುದನ್ನು ಹೇಳುವುದಿಲ್ಲ. ಈ ಬಾರಿಯೂ ರಾಜ್ಯಪಾಲರ ಭಾಷಣ ಅದೇ ರೀತಿಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ರಾಜ್ಯಪಾಲರ ಭಾಷಣದ ಕುರಿತು ಪ್ರತಿಪಕ್ಷ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿರುವ ಒಂದು ಟ್ವೀಟ್ ಇಡೀ ಭಾಷಣದ ಒಳ-ಹೊರಗುಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ‘ನಮ್ಮ ಸರ್ಕಾರದ ಐದು ವರ್ಷದ ಸಾಧನೆಗಳನ್ನು ರಾಜ್ಯಪಾಲರ ಭಾಷಣದ ಮೂಲಕ ಗುರುತಿಸಿ, ಶ್ಲಾಘಿಸಿದ ಮತ್ತು ತಮ್ಮ ಸರ್ಕಾರದ ಸಾಧನೆಗಳು ಹೇಳಿಕೊಳ್ಳುವಂತಹದ್ದು ಏನೂ ಇಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಧನ್ಯವಾದಗಳು’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ಬಗ್ಗೆ ವ್ಯಂಗ್ಯವಾಗಿ ಈ ಮಾತು ಹೇಳಿರಬಹುದು. ಆದರೆ, ರಾಜ್ಯಪಾಲರ ಭಾಷಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲಿನ ಸಾಧನೆಗಳನ್ನು ವಿವರಿಸಲು ಆದ್ಯತೆ ಕೊಟ್ಟಿರುವುದನ್ನು ಅವರ ಟ್ವೀಟ್ ಸ್ಪಷ್ಟಪಡಿಸುತ್ತದೆ.
ಪೊಲೀಸ್ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ. 25ರಷ್ಟು ಮೀಸಲು ನಿಗದಿಪಡಿಸುವುದು, ಹೆಚ್ಚಿನ ಕಾರಾಗೃಹಗಳ ನಿರ್ಮಾಣ ಮುಂತಾದ ಒಂದೆರಡು ಹೊಸ ಕಾರ್ಯಕ್ರಮಗಳನ್ನು ಬಿಟ್ಟರೆ ರಾಜ್ಯಪಾಲರ ಭಾಷಣ ಇದುವರೆಗಿನ ಸಾಧನೆಗಳನ್ನು ವಿವರಿಸಲಷ್ಟೇ ಸೀಮಿತವಾಗಿತ್ತು. ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದಂತೆ ಸರ್ಕಾರದ ಗುಣಗಾನ ಮಾಡಿರುವ ರಾಜ್ಯಪಾಲರು, ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಮಾರ್ಗನಕ್ಷೆಯನ್ನು ರೂಪಿಸಿದ ಮೊದಲ ರಾಜ್ಯ ಕರ್ನಾಟಕ. ನಿಗದಿಪಡಿಸಲಾದ ಆರ್ಥಿಕ ಮತ್ತು ಸಾಲ ಕ್ರೋಡೀಕರಣದ ಗುರಿಯನ್ನು ರಾಜ್ಯವು ಕಾಲಮಿತಿಯೊಳಗೆ ಸಾಧಿಸಿದೆ ಎಂದರು. ಉಳಿದಂತೆ ಪ್ರವಾಹ ಮತ್ತು ಪರಿಹಾರ, ಕೃಷಿ ಮತ್ತು ರೈತರಿಗೆ ನೆರವು, ನೀರಾವರಿ ಯೋಜನೆಗಳು, ಹೆಣ್ಣು ಮಕ್ಕಳ ಕಲ್ಯಾಣ ಕಾರ್ಯಕ್ರಮಗಳು, ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದವರ ಕಲ್ಯಾಣ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸರ್ಕಾರ ಇದುವರೆಗೆ ಮಾಡಿರುವ ಸಾಧನೆಗಳನ್ನು ವಿವರಿಸಿದರು.
ಇವುಗಳಲ್ಲಿ ಬಹುತೇಕ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದಿರುವ ಯೋಜನೆಗಳೇ ಆಗಿವೆ. ಪ್ರಸ್ತುತ ಅಧಿವೇಶನದಲ್ಲಿ ವಿಚಾರ ವಿಮರ್ಶೆ ಮತ್ತು ಚರ್ಚೆಗಳ ಗುಣಾತ್ಮಕತೆಯನ್ನು ಸದಸ್ಯರು ನಿರ್ವಹಿಸಬೇಕೆಂದು ಸಲಹೆ ಮಾಡಿದ ಅವರು, ವಿಚಾರ ಮಂಥನದಿಂದ ಹೊರಹೊಮ್ಮುವ ಹೊಸ ಆಲೋಚನೆಗಳು, ವಿಚಾರಗಳು ರಾಜ್ಯವನ್ನು ಅತ್ಯುನ್ನತ ಬೆಳವಣಿಗೆ ಮತ್ತು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಿ ಎಂದು ಆಶಿಸಿ ತಮ್ಮ ಭಾಷಣಕ್ಕೆ ತೆರೆ ಎಳೆದರು.
ರಾಜ್ಯಪಾಲರ ಭಾಷಣದಲ್ಲಿ ಹೇಳಲು ಅಂತಹದ್ದೇನೂ ಆಗಿಯೇ ಇಲ್ಲ
ರಾಜ್ಯಪಾಲರ ಭಾಷಣ ಹಿಂದಿನ ಸರ್ಕಾರಗಳ ಸಾಧನೆಗಳ ಮೇಲೆಯೇ ಅವಲಂಬಿತವಾಗಿತ್ತು. ಹೊಸದೇನೂ ಇಲ್ಲ ಎಂದು ಪ್ರತಿಪಕ್ಷಗಳು ಟೀಕಿಸಿವೆ. ಇದು ನಿಜವೂ ಹೌದು. ಏಕೆಂದರೆ, ಮೈತ್ರಿ ಸರ್ಕಾರ ಉರುಳಿಸಿ ಕಳೆದ ಜುಲೈ ತಿಂಗಳಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಆರು ತಿಂಗಳಿಗೂ ಹೆಚ್ಚು ಕಾಲ ನೆರೆ ಪರಿಹಾರ, ಸಂಪುಟ ರಚನೆ ಗೊಂದಲ, ಉಪ ಚುನಾವಣೆ. ಸಂಪುಟ ವಿಸ್ತರಣೆ ಕಸರತ್ತು ಹೀಗೆ ವಿವಾದ, ಗೊಂದಲಗಳಲ್ಲೇ ಕಾಲ ಕಳೆಯುವಂತಾಯಿತು. ಮೇಲಾಗಿ ಈ ಹಿಂದಿನ ಮೈತ್ರಿ ಸರ್ಕಾರದಲ್ಲಿ ಮಂಡಿಸಿದ ಬಜೆಟನ್ನೇ ಮುಂದುವರಿಸಿದ್ದರಿಂದ ಹೊಸ ಕಾರ್ಯಕ್ರಮಗಳ್ನು ಘೋಷಿಸಿಲ್ಲ. ಇದಕ್ಕೆ ಹಣಕಾಸಿನ ಕೊರತೆಯೂ ಇತ್ತು. ಏಕೆಂದರೆ, ಭೀಕರ ಪ್ರವಾಹದಿಂದ ಸಾವಿರಾರು ಕೋಟಿ ರೂ. ಹಾನಿಯಾಗಿತ್ತು. ಪರಿಹಾರ ಕಾರ್ಯಗಳಿಗೆ ಸರ್ಕಾರ 56 ಸಾವಿರ ಕೋಟಿ ರುಪಾಯಿಗಿಂತಲೂ ಹೆಚ್ಚಿನ ಹಣ ಬಿಡುಗಡೆ ಮಾಡಿದ್ದು, ಕೇಂದ್ರದಿಂದ ಎರಡು ಸಾವಿರ ಕೋಟಿ ರುಪಾಯಿಯಷ್ಟು ಮಾತ್ರ ನೆರವು ಬಂದಿತ್ತು. ಇನ್ನು ಆರ್ಥಿಕ ಹಿಂಜರಿತದಿಂದಾಗಿ ತೆರಿಗೆ ಹಂಚಿಕೆ ಸೇರಿದಂತೆ ಕೇಂದ್ರದಿಂದ ನಿರೀಕ್ಷಿತ ಅನುದಾನವೂ ಬಂದಿರಲಿಲ್ಲ. ಹೀಗಾಗಿ ಕಳೆದ ಆರು ತಿಂಗಳಿಗೂ ಹೆಚ್ಚು ಅವಧಿಯಲ್ಲಿ ಹೊಸ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಹೀಗಾಗಿ ರಾಜ್ಯಪಾಲರ ಭಾಷಣದಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ಹೇಳಿಕೊಳ್ಳಲು ಅಂತಹದ್ದೇನೂ ಆಗಿಯೇ ಇಲ್ಲ ಎನ್ನುವಂತಾಗಿತ್ತು.
ಮೇಲಾಗಿ ಮಾರ್ಚ್ 5ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು 2020-21ನೇ ಸಾಲಿನ ಬಜೆಟ್ ಮಂಡಿಸಲಿದ್ದು, ಇದರಲ್ಲಿ ಹಲವು ಪ್ರಮುಖ ಘೋಷಣೆಗಳನ್ನು ಮಾಡಬೇಕಾಗಿದೆ. ಅದಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಹೀಗಿರುವಾಗ ಬಜೆಟ್ ನಲ್ಲಿ ಏನೇನಿರುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ಬಾಷಣವನ್ನು ಈ ಹಿಂದಿನಂತೆ ಸರ್ಕಾರದ ಸಾಧನೆಗಳನ್ನು ಹೇಳುವುದಕ್ಕಷ್ಟೇ ಸೀಮಿತ ಮಾಡಲಾಗಿದೆ.
ವಿವಾದಗಳನ್ನು ಮೈಮೇಲೆಳೆದುಕೊಳ್ಳದ ಸರ್ಕಾರ
ಈ ಮಧ್ಯೆ ವಿವಾದಗಳಿಗೆ ಅವಕಾಶವಾಗದಂತೆ ರಾಜ್ಯಪಾಲರಿಂದ ಸರ್ಕಾರ ಭಾಷಣ ಮಾಡಿಸಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿದೆ. ಕೇಂದ್ರ ಸರ್ಕಾರ ಈಗಾಗಲೇ ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ತಂದಿದ್ದು, ಅದರೊಂದಿಗೆ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಜಾರಿಗೊಳಿಸುವ ಬಗ್ಗೆಯೂ ಪ್ರಸ್ತಾಪಿಸಿದೆ. ಸಿಎಎ ಕಾಯ್ದೆ ಕುರಿತು ನಿರ್ಣಯ ಕೈಗೊಳ್ಳಲು ರಾಜ್ಯಗಳಿಗೆ ಅವಕಾಶ ಇಲ್ಲದ ಕಾರಣ ಈ ಕಾಯ್ದೆ ಜಾರಿಗೊಳಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಈ ಮಧ್ಯೆ ಎನ್ ಆರ್ ಸಿ ಜಾರಿಗೊಳಿಸುವ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಈ ಹಿಂದೆಯೇ ಹೇಳಿದ್ದರು. ಹೀಗಾಗಿ ಈ ಎರಡು ವಿಚಾರಗಳನ್ನು ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪಿಸಿ ಅವುಗಳನ್ನು ಜಾರಿಗೊಳಿಸುವ ಬಗ್ಗೆ ಸರ್ಕಾರ ಘೋಷಣೆ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಹಾಗೇನಾದರೂ ಸರ್ಕಾರ ರಾಜ್ಯಪಾಲರಿಂದ ಈ ವಿಚಾರ ಹೇಳಿಸಿದರೆ ಪ್ರತಿಭಟಿಸಲು ಪ್ರತಿಪಕ್ಷಗಳೂ ಸಜ್ಜಾಗಿದ್ದವು. ಆದರೆ, ಈ ವಿಚಾರದಲ್ಲಿ ವಿವಾದಗಳನ್ನು ಮೈಮೇಲೆಳೆದುಕೊಳ್ಳಲು ಸಿದ್ಧವಿಲ್ಲದ ಸರ್ಕಾರ ಸಿಎಎ ಮತ್ತು ಎನ್ ಆರ್ ಸಿ ಬಗ್ಗೆ ಮೌನ ವಹಿಸುವ ಮೂಲಕ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ.