ದೀಪಾವಳಿಯಲ್ಲಿ ಪಟಾಕಿಯನ್ನು ಹಾರಿಸುವುದು ನಿಷೇಧ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಈ ಕುರಿತಂತೆ ಸರ್ಕಾರ ಈಗಾಗಲೇ ಚರ್ಚೆ ಮಾಡಲಾಗಿದೆ. ಶೀಘ್ರದಲ್ಲೇ ಸುತ್ತೋಲೆ ಹೊರಡಿಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ, ಕರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ಬಾರಿ ದೀಪಾವಳಿ ಹಬ್ಬದ ವೇಳೆ ಪಟಾಕಿ ಮಾರುವಂತಿಲ್ಲ ಹಾಗೂ ಪಟಾಕಿ ಹಚ್ಚುವಂತಿಲ್ಲ ಎಂದು ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸರ್ಕಾರದ ಈ ಧಿಡೀರ್ ಪಟಾಕಿ ನಿಷೇಧದಿಂದಾಗಿ ಈ ಬಾರಿ ಮಾರಾಟ ಮಾಡಲು ಪಟಾಕಿ ಖರೀದಿಸಿದವರಿಗೆ ಆಘಾತವಾಗಿದೆ. ನವೆಂಬರ್ 14 ರಂದು ಕರ್ನಾಟಕದಲ್ಲಿ ದೀಪಾವಳಿ ಆಚರಿಸಲಾಗುತ್ತಿದ್ದು, ಪಟಾಕಿ ಹಚ್ಚಿ ಸಂಭ್ರಮಿಸಲು ತಯಾರಾದವರಿಗೆ ನಿರಾಶೆಯಾಗಿದೆ.
ಕೋವಿಡ್ ರೋಗಿಗಳಿಗೆ ಶ್ವಾಸಕೋಶ ಸಂಬಂಧಿತ ಸಮಸ್ಯೆ ಹೆಚ್ಚಾಗಬಾರದೆಂಬ ಕಾರಣಕ್ಕೆ ಈ ಹಿಂದೆ ಅಶೋಕ್ ಗೆಹಲೋಟ್ ನೇತೃತ್ವದ ರಾಜಸ್ಥಾನ ಸರ್ಕಾರ ಕೂಡಾ ಪಟಾಕಿ ನಿಷೇಧಿಸಿತ್ತು, ಅದರ ಬೆನ್ನಲ್ಲೇ ದೆಹಲಿ ಸರ್ಕಾರ ಕೂಡಾ ಪಟಾಕಿ ನಿಷೇಧಿಸಿತ್ತು.
ಇನ್ನು ರಾಜ್ಯ ಸರ್ಕಾರದ ನಿರ್ಧಾರಕ್ಕೆ ಪರ ಹಾಗೂ ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಪರಿಸರವಾದಿಗಳು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದರೆ, ಪಟಾಕಿ ಹಚ್ಚಿ ಸಂಭ್ರಮಿಸುವವರು ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ.