ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ದೇಶದಲ್ಲಿನ ಈರುಳ್ಳಿ ದರದ ಬಗ್ಗೆ ‘ಅರಿ’ವಿಲ್ಲದಿರಬಹುದು. ಏಕೆಂದರೆ ಅವರ ಮನೆಯಲ್ಲಿ ಹೆಚ್ಚು ಈರುಳ್ಳಿಯನ್ನು ಬಳಸುವುದಿಲ್ಲ! ಅವರು ವಿತ್ತ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ದೇಶದ ಆರ್ಥಿಕತೆ ಮತ್ತಷ್ಟು ಕುಸಿದಿರಬಹುದು (ಹಾಗಂತ ದೇಶದ ಆರ್ಥಿಕತೆ ಬಗ್ಗೆ ಅವರಿಗೆ ಅರಿವಿಲ್ಲ ಅಂತಾ ನಾವು ಹೇಳಲ್ಲಾ!), ಹಣದುಬ್ಬರವು ಜಿಗಿದಿರಬಹುದು. ಆದರೆ, ಜಾಗತಿಕ ಮಟ್ಟದಲ್ಲಿ ಅವರ ಪ್ರಭಾವವಂತೂ ದೇಶದ ಆರ್ಥಿಕತೆಯಂತೆ ಕುಸಿದಿಲ್ಲ. ಬದಲಿಗೆ ಚಿಲ್ಲರೆ ಹಣದುಬ್ಬರದಂತೆ, ಈರುಳ್ಳಿ ದರದಂತೆ ತ್ವರಿತವಾಗಿ ಜಿಗಿದಿದೆ!
ನಿರ್ಮಲಾ ಸೀತಾರಾಮನ್ ಅವರೀಗ ನ್ಯೂಜಿಲೆಂಡ್ ಪ್ರಧಾನಿ ಜೆಸಿಂದ ಆರ್ಡೆನ್ ಅವರಿಗಿಂತಲೂ ಒಂದು ಕೈ ಮೇಲೆಯೇ! ಅವರ ಪ್ರಭಾವ ಎಷ್ಟು ಜಿಗಿದಿದೆ ಎಂದರೆ ಜಗತ್ತಿನ ‘ಪ್ರಭಾವಶಾಲಿ ಶತ ಮಹಿಳೆಯರ ಪಟ್ಟಿ’ಯಲ್ಲಿ ಅವರ ಹೆಸರು ಸೇರಿದೆ. ಅಷ್ಟೇ ಅಲ್ಲ ಅವರು ಬ್ರಿಟನ್ ರಾಣಿ ಎಲಿಜಬೆತ್ 2 ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಸಲಹೆಗಾರ್ತಿಯಾಗಿರುವ ಅವರ ಪುತ್ರಿ ಇವಾಂಕ ಟ್ರಂಪ್ ಗಿಂತ ಹಲವು ಹೆಜ್ಜೆ ಮುಂದಿದ್ದಾರೆ.
ಫೋರ್ಬ್ಸ್ ಪ್ರಕಟಿಸಿರುವ ಜಗತ್ತಿನ ‘ಪ್ರಭಾವಶಾಲಿ ಶತ ಮಹಿಳೆಯರ ಪಟ್ಟಿ’ಯಲ್ಲಿ ನಮ್ಮ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ 34ನೇ ಸ್ಥಾನ. ರಾಣಿ ಎಲಿಜಬೆತ್ 40ನೇ ಸ್ಥಾನದಲ್ಲಿದ್ದರೆ, ಇವಾಂಕ ಟ್ರಂಪ್ 42 ನೇ ಸ್ಥಾನದಲ್ಲಿದ್ದಾರೆ. ಜಗತ್ತಿನ ಹಲವು ದೇಶಗಳ ಪ್ರಭಾವಿ ಮಹಿಳೆಯರನ್ನೂ ಹಿಂದಿಕ್ಕಿ ನಿರ್ಮಲಾ ಸೀತಾರಾಮನ್ 34ನೇ ಸ್ಥಾನಕ್ಕೇರಿರುವುದು ಜಾಗತಿಕ ಮಟ್ಟದಲ್ಲಿ ಭಾರತ ಶಕ್ತಿಶಾಲಿಯಾಗಿ ಉದಯಿಸುತ್ತಿರುವುದರ ಸಂಕೇತವಾಗಿದೆ. ಫೋರ್ಸ್ಬ್ ಪಟ್ಟಿಯಲ್ಲಿ ಭಾರತದ ರೋಷ್ನಿ ನಾಡರ್ ಮಲ್ಹೋತ್ರ 54ನೇ ಸ್ಥಾನದಲ್ಲಿ, ಬೆಂಗಳೂರು ಮೂಲದ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಂಜುಮ್ದಾರ್ ಷಾ ಅವರು 65ನೇ ಸ್ಥಾನದಲ್ಲಿದ್ದಾರೆ. ಸಾಹಿತಿ, ಹಾಡುಗಾರ್ತಿ ಬಿಯೋನ್ಸೊ ನಾವೆಲ್ಸ್ 66ನೇ ಸ್ಥಾನದಲ್ಲಿದ್ದರೆ, ಅಮೆರಿಕದ ಹಾಡುಗಾರ್ತಿ ಟೇಲರ್ ಸ್ವಿಫ್ಟ್ 71 ಮತ್ತು ಟೆನ್ನಿಸ್ ತಾರೆ ಸರೇನಾ ವಿಲಿಯಮ್ಸ್ 81 ಸ್ಥಾನದಲ್ಲಿ ಮತ್ತು ಅಮೆರಿಕದ ಚಿತ್ರನಟಿ ರೀಸ್ ವಿಥರ್ಸ್ಪೂನ್ 90ನೇ ಸ್ಥಾನದಲ್ಲಿದ್ದಾರೆ.

ಜರ್ಮನ್ ಚಾನ್ಸಲರ್ ಏಂಜೆಲಾ ಮಾರ್ಕೆಲ್, ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥೆ ಕ್ರಿಸ್ಟಿನ್ ಲಗಾರ್ಡೆ, ಅಮೆರಿಕದ ಡೆಮಕ್ರಾಟಿಕ್ ಪಾರ್ಟಿಯ ನ್ಯಾನ್ಸಿ ಪೆಲೋಸಿ, ಯೂರೋಪಿಯನ್ ಕಮಿಷನ್ ಅಧ್ಯಕ್ಷೆ, ಜರ್ಮನಿಯ ರಾಜಕಾರಣಿ ಉರ್ಸುಲಾ ವೋನ್ ದೆರ್ ಲಿಯೆನ್, ಜನರಲ್ ಮೋಟಾರ್ಸ್ ಅಧ್ಯಕ್ಷೆ ಮೆರಿ ಥೆರೆಸಾ ಬರ್ರಾ, ಮೈಕ್ರೊಸಾಫ್ಟ್ ಮಾಜಿ ಉದ್ಯೋಗಿ, ಬಿಲ್ ಗೇಟ್ ಪತ್ನಿ ಮಿಲಿಂಡಾ ಗೇಟ್, ಅಮೆರಿಕದ ಬಹುಕೋಟಿ ಉದ್ಯಮಿ ಅಬಿಗಿಲ್ ಜಾನ್ಸನ್, ಸ್ಪ್ಯಾನಿಷ್ ಬ್ಯಾಂಕರ್ ಮತ್ತು ಸ್ಯಾಂಟಾಡರ್ ಗ್ರೂಪ್ ಎಕ್ಸಿಕ್ಯೂಟಿವ್ ಚೇರ್ ಪರ್ಸನ್ ಆನಾ ಪೆಟ್ರಿಷಿಯಾ ಬೊಟಿನ್, ಐಬಿಎಂ ಸಿಇಒ ವರ್ಜಿನಿಯಾ ಮೇರಿ ರೊಮೆಟ್ಟಿ, ಹಾಗೂ ಯುದ್ಧ ವಿಮಾನ ತಯಾರಿಸುವ ಲಖ್ಹೀದ್ ಮಾರ್ಟಿನ್ ಕಂಪನಿಯ ಸಿಇಒ ಮೆರ್ಲಿನ್ ಹೆವ್ಸನ್ ಕ್ರಮವಾಗಿ ಮೊದಲ ಹತ್ತು ಸ್ಥಾನದಲ್ಲಿದ್ದಾರೆ.
ಕಳೆದ ನಾಲ್ಕು ವರ್ಷಗಳವರೆಗೂ ಜಗತ್ತಿನಲ್ಲಿ ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದ ಮತ್ತು ಚೀನಾವನ್ನು ಹಿಂದಿಕ್ಕಿದ್ದ ಭಾರತದ ವಿತ್ತ ಸಚಿವೆಯಾಗಿ ಕಾರ್ಯನಿರ್ವಹಿಸುವುದು ಅತ್ಯಂತ ಸವಾಲಿನ ಕೆಲಸ. ಅದರಲ್ಲೂ ದೇಶದ ಆರ್ಥಿಕತೆ ಕುಸಿತದ ಹಾದಿಯಲ್ಲಿರುವಾಗ ದೇಶದ ಹಣಕಾಸು ಖಾತೆಯನ್ನು ನಿಭಾಯಿಸುವುದು ಮತ್ತಷ್ಟು ಕಠಿಣವಾದ ಕೆಲಸ. ಒಂದು ಕಡೆ ನೆರೆಯ ಬಡದೇಶಗಳೂ ಶೇ.6ಕ್ಕಿಂತಲೂ ಹೆಚ್ಚಿನ ಆರ್ಥಿಕ ಅಭಿವೃದ್ಧಿ ದಾಖಲಿಸುತ್ತಿರುವಾಗ ಭಾರತದ ಆರ್ಥಿಕತೆಯು ಶೇ.8ರಿಂದ ಸತತವಾಗಿ ಕುಸಿಯುತ್ತಾ ಬಂದು ಶೇ.4.5ಕ್ಕೆ ಇಳಿದಿರುವ ಹೊತ್ತಿನಲ್ಲಿ ದೇಶದ ಆರ್ಥಿಕತೆ ಸದೃಢವಾಗಿದೆ ಎಂದು ಬಿಂಬಿಸುತ್ತಾ, ಸರ್ಕಾರಕ್ಕೆ ಆಗುವ ಮುಜುಗರವನ್ನು ತಪ್ಪಿಸುತ್ತಾ ದೇಶದ ಆರ್ಥಿಕತೆ ಮುನ್ನಡೆಸುವುದು ಕತ್ತಿಯ ಅಲಗಿನ ಮೇಲೆ ನಡೆದಷ್ಟೇ ಕಠಿಣ. ಇಂತಹ ಕಠಿಣ ಸಂದರ್ಭದಲ್ಲಿ ವಿತ್ತ ಸಚಿವೆಯಾಗಿ ಸಮರ್ಥವಾಗಿ ನಿಭಾಯಿಸುತ್ತಿರುವುದರಿಂದ ನಿರ್ಮಲಾ ಸೀತಾರಾಮನ್ ಅವರು ಪ್ರಭಾವಶಾಲಿ ಶತ ಮಹಿಳೆಯರ ಪಟ್ಟಿಯಲ್ಲಿ 34ನೇ ಸ್ಥಾನ ಪಡೆದಿದ್ದಾರೆ.

ಅಮೆರಿಕದಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದೂ ನಿರ್ಮಲಾ ಸೀತಾರಾಮನ್ ಅವರ ಹೆಗ್ಗಳಿಕೆ. ಹೌಡಿ ಮೋದಿ ಕಾರ್ಯಕ್ರಮದ ಮೂರು ದಿನ ಮುಂಚಿತವಾಗಿಯೇ ಕಾರ್ಪೊರೆಟ್ ತೆರಿಗೆಯನ್ನು ಶೇ.24ಕ್ಕೆ ತಗ್ಗಿಸಿ, ದೇಶದ ಉದ್ಯಮಿಗಳಿಗೆ 1.40 ಲಕ್ಷ ಕೋಟಿ ರುಪಾಯಿ ತೆರಿಗೆ ರಿಯಾಯ್ತಿಯ ಉಡುಗೊರೆ ನೀಡಿದರು. ಆ ಮೂಲಕ ಹೌಡಿ ಮೋದಿ ಕಾರ್ಯಕ್ರಮಕ್ಕೂ ಮುನ್ನವೇ ಇಡೀ ಜಗತ್ತಿನ ಪ್ರಮುಖ ಮಾಧ್ಯಮಗಳೆಲ್ಲವೂ ಮೋದಿ ಸರ್ಕಾರದ ತೆರಿಗೆ ನೀತಿಯನ್ನು ಹೊಗಳುವಂತೆ, ಚರ್ಚಿಸುವಂತೆ ಮಾಡಿದರು. ಮತ್ತು ಹೌಡಿ ಮೋದಿ ಕಾರ್ಯಕ್ರಮದ ವೇಳೆ, ದೇಶದ ಹದಗೆಟ್ಟ ಆರ್ಥಿಕ ಪರಿಸ್ಥಿತಿಯ ಬಗ್ಗೆ ಯಾರೋಬ್ಬರೂ ಚರ್ಚಿಸದಂತೆ, ಪ್ರಶ್ನಿಸದಂತೆ ಕಾರ್ಪೊರೆಟ್ ತೆರಿಗೆ ರಿಯಾಯ್ತಿಯ ಹವಾ ಸೃಷ್ಟಿಸಿದ್ದರು. ಕಾರ್ಪೊರೆಟ್ ತೆರಿಗೆ ಕಡಿತ ಮಾಡಿದ್ದರಿಂದಾಗಿ ಭಾರತವು ಜಾಗತಿಕ ಮಟ್ಟಕ್ಕೆ ಸರಿಸಮನಾಗಿ ತೆರಿಗೆ ವಿಧಿಸುತ್ತಿದೆ, ಹೆಚ್ಚಿನ ತೆರಿಗೆ ತೆಗೆದು ಹಾಕಿದೆ ಎಂಬುದನ್ನು ಬಿಂಬಿಸಲು ಯತ್ನಿಸಿದರು. ಹೌಡಿ ಮೋದಿ ಹೊತ್ತಿನಲ್ಲಿ ನಿರ್ಮಲಾ ಸೀತಾರಾಮನ್ ಅವರು ವಿವಿಧ ಆರ್ಥಿಕ ಸಂಘಟನೆಗಳು ಮತ್ತು ಲಾಬಿ ಸಂಸ್ಥೆಗಳನ್ನು ನಿಭಾಯಿಸಿದ ರೀತಿಯನ್ನೂ ಫೋರ್ಸ್ಬ್ ನಿಯತಕಾಲಿಕ ಪರಿಗಣಿಸಿರಬಹುದು.
ನಿರ್ಮಲಾ ಸೀತಾರಾಮನ್ ಅವರು ನಿಜವಾದ ಪ್ರಭಾವಶಾಲಿ ಮತ್ತು ಸಮರ್ಥ ಮಹಿಳೆ. ಈಗ ನರೇಂದ್ರ ಮೋದಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿರುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಕಲಿತ ನಿರ್ಮಲಾ ಸೀತಾರಾಮನ್ ಬಿಜೆಪಿ ರಾಷ್ಟ್ರೀಯ ವಕ್ತಾರೆಯಾಗಿ, ನಂತರ ಮೋದಿ ಸರ್ಕಾರದಲ್ಲಿ ವಾಣಿಜ್ಯ ಮತ್ತು ರಕ್ಷಣಾ ಸಚಿವೆಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದರು. ಅವರ ಆ ಸಾಮರ್ಥ್ಯ ಮೆಚ್ಚಿಯೇ ಮೋದಿ ಅವರು ತಮ್ಮ ಎರಡನೇ ಅವಧಿಯಲ್ಲಿ ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು ಖಾತೆಯ ಜವಾಬ್ದಾರಿ ವಹಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ದಿಟ್ಟತನದ ಮಹಿಳೆ. ಇಡೀ ದೇಶವೇ ಆರ್ಥಿಕ ಕುಸಿತದ ಬಗ್ಗೆ ಮಾತನಾಡುತ್ತಿದ್ದಾಗ ಏನೂ ಆಗಿಯೇ ಇಲ್ಲ ಎಂದು ಸಮರ್ಥಿಸಿಕೊಂಡು ಬಂದವರು. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಜಿಡಿಪಿ ಕುಸಿಯುತ್ತಿದ್ದರೂ ಆರ್ಥಿಕತೆ ಸದೃಢವಾಗಿದೆ ಎಂದೇ ವಾದಿಸುತ್ತಾ ಬಂದವರು. ಅವರ ವಾದವನ್ನು ಬಹಳ ಮಂದಿ ಮೊಂಡುವಾದ ಎಂದರೂ ಅವರು ತಲೆಕೆಡಿಸಿಕೊಳ್ಳಲಿಲ್ಲ.
ಈರುಳ್ಳಿ ಬೆಲೆ ಗಗನಕ್ಕೆ ಜಿಗಿದಾಗಲೂ ಅವರು ದಿಟ್ಟತನ ಪ್ರದರ್ಶಿಸಿದರು. ನಮ್ಮ ಮನೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ಹೆಚ್ಚು ಬಳಸುವುದಿಲ್ಲ, ಹೀಗಾಗಿ ಅದರ ಬೆಲೆ ಏರಿಕೆ ಬಗ್ಗೆ ನನಗೆ ಚಿಂತೆಯಿಲ್ಲ, ನಾನು ಈರುಳ್ಳಿ ಬಳಸದ ಕುಟುಂಬದಿಂದ ಬಂದವಳು ಎಂದು ಸಮರ್ಥಿಸಿಕೊಂಡಿದ್ದರು. ಅದಾದ ನಂತರ ರಾಷ್ಟ್ರವ್ಯಾಪಿ ಟೀಕೆಗಳು ವ್ಯಕ್ತವಾದವು. ಈರುಳ್ಳಿ ಕುರಿತಾದ ಅವರ ಮಾತುಗಳು ಜಾತೀಯತೆಯನ್ನು ಪ್ರತಿಬಿಂಬಿಸುತ್ತದೆ ಎಂಬ ಟೀಕೆಯೂ ವ್ಯಕ್ತವಾಗಿತ್ತು. ಅದಕ್ಕೆಲ್ಲ ಅವರು ತಲೆಕೆಡಿಸಿಕೊಳ್ಳಲೇ ಇಲ್ಲಾ!