ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರ ಜಾರಿಯಾಗಿ ಸುದ್ದಿಯಾಗಿದ್ದ ಇಂಟರ್ನೆಟ್ ಬಂದ್ ಈಗ ದಕ್ಷಿಣ ಕನ್ನಡ ಜಿಲ್ಲೆಗೂ ತಲಪಿದೆ. ಪೌರತ್ವ ಕಾಯ್ದೆ ತಿದ್ದುಪಡಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರೋಧಿಸಿ ಮಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಮಂಗಳೂರಿಗೆ ಆಗಮಿಸಿದ್ದಾರೆ.
ಡಿಸೆಂಬರ್ 19ರಂದು ರಾಜ್ಯ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಹೆಚ್ಚು ಜನ ಸೇರಿದ್ದರೂ ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆದಿದೆ. ನಿಷೇದಾಜ್ಞೆ ಉಲ್ಲಂಘಿಸಿ ಪ್ರತಿಭಟನೆಗಳು ನಡೆದಿತ್ತು ಎಂಬುದು ಗಮನಾರ್ಹ. ಆದರೆ, ಮಂಗಳೂರಿನಲ್ಲಿ ಮಾತ್ರ ಪ್ರತಿಭಟನೆ ವೇಳೆ ಹಿಂಸಾಚಾರ ಆರಂಭವಾಗಿ ಪೊಲೀಸರು ಗೋಲಿಬಾರು ಮಾಡುವ ತನಕ ಮುಂದುವರಿಯಿತು.
ಡಿಸೆಂಬರ್ 18ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಒಟ್ಟು ಏಳು ಪ್ರತಿಭಟನೆಗಳು ಪೌರತ್ವ ಕಾಯ್ದೆ ತಿದ್ದುಪಡಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರೋಧಿಸಿ ನಡೆದಿತ್ತು. ಇಳಿ ಸಂಜೆ ವೇಳೆ ಮಂಗಳೂರು ವಿದ್ಯಾರ್ಥಿಗಳು ಎಂದುಕೊಂಡ ನೂರಾರು ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನೆ ಮಾಡಿ ಘೋಷಣೆ ಕೂಗಿ ಹಿಂತಿರುಗಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಸ್ವಲ್ಪ ಗೊಂದಲದಲ್ಲಿದ್ದರು. ಪ್ರತಿಭಟನೆ ಮುಗಿಯುತ್ತಿದ್ದಂತೆ ಸೆಕ್ಷನ್ 144ರ ಪ್ರಕಾರ ನಿಷೇದಾಜ್ಞೆ ಕೂಡ ಹೇರಲಾಯಿತು.
ಮರುದಿನ ಡಿಸೆಂಬರ್ 19ರಂದು ಜಿಲ್ಲಾಧಿಕಾರಿ ಕಚೇರಿ ಮುಂದುಗಡೆ, ಸುತ್ತುಮುತ್ತಲು ಹೆಚ್ಚುವರಿ ಪೊಲೀಸ್ ನಿಯೋಜಿಸಲಾಗಿತ್ತು. ಮಧ್ಯಾಹ್ನದ ವೇಳೆಗೆ ಯುವಕರು ಜಮಾಯಿಸತೊಡಗಿದ್ದರು. ಮಧ್ಯಾಹ್ನ 2 ಗಂಟೆ ವೇಳೆಗೆ ಜಿಲ್ಲಾಧಿಕಾರಿ ಕಚೇರಿ ಎದುರಗಡೆ ಸ್ಟೇಟ್ ಬ್ಯಾಂಕ್ ವೃತ್ತದ ಸಮೀಪ ನೆಲ್ಲಿಕಾಯಿ ರಸ್ತೆಯಲ್ಲಿ ಜನ ಜಮಾಯಿಸಿದ್ದರು. ಅಲ್ಲಿದ್ದ ಒಂದಿಬ್ಬರು ಪ್ರತಿಭಟನಾಕಾರರ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದಂತೆ ಕಲ್ಲು ತೂರಾಟ ಆರಂಭವಾಗಿತ್ತು. ಅನಂತರ ಸ್ಟೇಟ್ ಬ್ಯಾಂಕ್ ವೃತ್ತದಲ್ಲಿ ಪ್ರತಿಭಟಿಸಲು ಮುಂದಾದಾಗ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಲು ಯತ್ನಿಸಿದರು.
ಹೀಗೆ ಶುರುವಾದ ಪ್ರತಿಭಟನೆ ಅನಂತರ ಸನಿಹದ ರಾವ್ ಆಂಡ್ ರಾವ್ ವೃತ್ತ, ಸರ್ವೀಸ್ ಬಸ್ ಸ್ಟೇಂಡ್ ಸಮೀಪ, ಕೇಂದ್ರ ಮಾರುಕಟ್ಟೆ ಪರಿಸರ, ಬೀಬಿ ಆಲಾಬಿ ರಸ್ತೆ, ಬಂದರು ಪೊಲೀಸ್ ಠಾಣೆ ತನಕ ಹಬ್ಬಿತ್ತು. ಪೊಲೀಸರ ಮೇಲೆ ಕಲ್ಲು ತೂರಾಟ, ಟಯರಿಗೆ ಬೆಂಕಿ ಹಾಕುವುದು, ಪ್ರತಿಯಾಗಿ ಪೊಲೀಸರ ಲಾಠಿ ಪ್ರಹಾರ, ಆಶ್ರುವಾಯು ಪ್ರಯೋಗ ಸಂಜೆ ತನಕ ನಡೆದಿತ್ತು.
ಮಂಗಳೂರು ಬಂದರು ಪೊಲೀಸ್ ಠಾಣೆ ಸಮೀಪ ಪರಿಸ್ಥಿತಿ ಬಿಗಡಾಯಿಸಿ ಪೊಲೀಸ್ ಗೋಲಿಬಾರ್ ನಡೆದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಮಂಗಳೂರು ಹಳೇ ಬಂದರು ಪ್ರದೇಶದ ನಿವಾಸಿಗಳಾದ 23 ವರ್ಷದ ನೌಶೀನ್ ಮತ್ತು 49 ವರ್ಷದ ಜಲೀಲ್ ಎಂಬುವರು ಮೃತಪಟ್ಟವರು.
ಜಲೀಲ್ ನಗರದ ಮೀನುಗಾರಿಕಾ ಬಂದರಿನಲ್ಲಿ ಮೀನು ಮಾರುವ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಅವರಿಗೆ ಇಬ್ಬರು ಮಕ್ಕಳು, ಪತ್ನಿ ಇದ್ದಾರೆ. ಮನೆಯ ಹೊರಭಾಗದಲ್ಲಿ ಗದ್ದಲದಂಥಹ ಶಬ್ದ ಕೇಳಿ, ಹೊರಬಂದಿದ್ದು, ಈ ವೇಳೆಗೆ ನಡೆದ ದಾಳಿಗೆ ಜಲೀಲ್ ಗಂಭೀರ ಗಾಯಗೊಂಡಿದ್ದರು.
ಮೃತದೇಹಗಳನ್ನು ಫಳ್ನೀರ್ ಹೈಲೇಂಡ್ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಕಳೆದ ರಾತ್ರಿ ಅಲ್ಲಿ ಜಮಾಯಿಸಿದ ಜನರು ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಪೊಲೀಸರು ಜನರನ್ನು ಲಘು ಲಾಠಿ ಪ್ರಹಾರ ಮಾಡಿ ಚದುರಿಸಿದರು.
ಬಂದರು ಪೊಲೀಸ್ ಠಾಣೆ ಸನಿಹದಲ್ಲಿ ಪ್ರತಿಭಟನಾಕಾರರು ಹೆಚ್ಚಿನ ಸಂಖ್ಯೆಯಲ್ಲಿ ಕಾನೂನು ಉಲ್ಲಂಘಿಸಿ ಜಮಾಯಿಸಿದ ಪರಿಣಾಮ ಪೊಲೀಸರು ಬಲ ಪ್ರಯೋಗ ಮಾಡುವುದು ಅನಿವಾರ್ಯ ಆಗಿತ್ತು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಪಿ.ಎಸ್.ಹರ್ಷ ತಿಳಿಸಿದ್ದಾರೆ.
ಅಲ್ಲಲ್ಲಿ ನಡೆದ ಗಲಭೆ ವೇಳೆ 20 ಮಂದಿ ಪೊಲೀಸರು ಸೇರಿದಂತೆ ಹಲವರಿಗೆ ಗಾಯವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಗರ ಕೇಂದ್ರ ಉಪವಿಭಾಗ ವ್ಯಾಪ್ತಿಯಲ್ಲಿ ನಗರ ಪೊಲೀಸ್ ಆಯುಕ್ತರು ಕರ್ಫ್ಯೂ ಜಾರಿ ಮಾಡಿದ್ದಾರೆ. ಅನಂತರ ಕರ್ಪ್ಯೂವನ್ನು ಇಡೀ ಕಮೀಷನರೇಟ್ ಪ್ರದೇಶಕ್ಕೆ ಡಿಸೆಂಬರ್ 22ರ ತನಕ ವಿಸ್ತರಿಸಲಾಯಿತು.
ಇಂಟರನೆಟ್ ಸ್ಥಗಿತ
ಶಾಂತಿ ಮತ್ತು ಕಾನೂನು ಕಾಪಾಡುವ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂಟರನೆಟ್ ಸೇವೆಯನ್ನು ಸ್ಥಗಿತಗೊಳಿಸಿ ರಾಜ್ಯ ಸರಕಾರದ ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ರಜನೀಶ್ ಗೋಯಲ್ ಆದೇಶ ನೀಡಿದ್ದಾರೆ. ಡಿಸೆಂಬರ್ ರಾತ್ರಿಯಿಂದ 48 ಗಂಟೆಗಳ ಕಾಲ ಮೊಬೈಲ್ ಫೋನುಗಳಲ್ಲಿ ಇಂಟರನೆಟ್ ಡಾಟಾ ಸೇವೆಯನ್ನು ನಿಲುಗಡೆ ಮಾಡಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ಇಲಾಖೆಯ ಶಿಫಾರಸಿನ ಮೇರೆಗೆ ರಾಜ್ಯ ಸರಕಾರ ಇಂಟರನೆಟ್ ಸೇವೆ ಸ್ಥಗಿತಗೊಳಿಸುವ ಆದೇಶ ಜಾರಿ ಮಾಡಿದೆ.
ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್ ಕೆ.ಅಶ್ರಫ್, ಮುಸ್ತಫಾ ಕೆಂಪಿ, ಅಥಾವುಲ್ಲಾ ಜೋಕಟ್ಟೆ, ಜಲೀಲ್ ಕೃಷ್ಣಾಪುರ, ಮುಸ್ತಫಾ, ಅಹ್ಮದ್ ಬಾವ, ಕಾರ್ಪೊರೇಟರ್‌ಗಳಾದ ಸಂಶುದ್ದೀನ್, ಮುನೀರ್ ಬೆಂಗ್ರೆ ಮತ್ತಿತರರು ಪೊಲೀಸರ ಮನವಿ ಮೇರೆಗೆ ಪ್ರತಿಭಟನಾಕಾರರನ್ನು ಶಾಂತರಾಗುವಂತೆ ವಿನಂತಿಸಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಮತ್ತೆ ಕಲ್ಲು ತೂರಾಟ ನಡೆಯಿತು. ಶಾಂತಿಗಾಗಿ ಆಗಮಿಸಿದ ಮಾಜಿ ಮೇಯರ್ ಮೇಲೆ ಕೂಡ ಹಲ್ಲೆ ನಡೆಯಿತು.
ಮಂಗಳೂರು ಗಲಭೆಗೆ ಮುಖ್ಯಮಂತ್ರಿ ಯಡಿಯೂರಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಮಾಜಿ ಸಚಿವ ಯು.ಟಿ.ಖಾದರ್ ನೀಡಿದ್ದಾರೆ ಎನ್ನಲಾದ ಹೇಳಿಕೆ ಇದಕ್ಕೆಲ್ಲ ಕಾರಣ ಎನ್ನಲಾಗುತ್ತಿದೆ. ಕರಾವಳಿಯ ಯುವ ಸಮೂಹ ಯಾವುದೇ ರಾಜಕೀಯ ಪಕ್ಷದ ಅಥವ ಮುಖಂಡರ ಮಾತುಗಳನ್ನು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ಡಿಸೆಂಬರ್ 18ರಂದು ಪ್ರತಿಭಟನಾಕಾರರು ಮುಖಂಡರ ಬಗ್ಗೆಯೇ ಸೋಶಿಯಲ್ ಮಿಡಿಯಾಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಕೆಲವು ರಾಜಕೀಯ ಪಕ್ಷಗಳ ಬಗ್ಗೆ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. ಒಂದು ಬಲವಾದ ಹೋರಾಟಕ್ಕೆ ಯುವ ಸಮೂಹ ಮುಂದಾಗಿತ್ತು. ಇಂತಹ ವಿದ್ಯಮಾನದಲ್ಲಿ ಯು.ಟಿ.ಖಾದರ್ ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನ ಪಡಬಹುದೇ ಹೊರತು ಯಾವ ಮುಖಂಡರ ಮಾತು ಕೇಳಲು ಇವರು ಸಿದ್ಧರಿಲ್ಲ ಎಂಬುದಕ್ಕೆ ಮಾಜಿ ಮೇಯರ್ ಆಶ್ರಫ್ ಮೇಲೆ ನಡೆದಿರುವ ಹಲ್ಲೆಯೇ ಸಾಕ್ಷಿ.