ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ಟಾರ್ಟಪ್ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಮತ್ತು ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಐಟಿ ಉದ್ಯಮ ಚಟುವಟಿಕೆ ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಿಲ್ಲಾ ಕೇಂದ್ರಗಳಲ್ಲಿ ಆರಂಭಿಸಿದ್ದ ಇನ್ ಕ್ಯೂಬೇಷನ್ ಸೆಂಟರನ್ನು ಹಾಲಿ ಸರ್ಕಾರದ ಪ್ರಭಾವಿ ಸಚಿವರೊಬ್ಬರು ತಮ್ಮ ಕುಟುಂಬದ ಸ್ವಂತ ಕಂಪನಿಗೆ ಅನಾಮತ್ತಾಗಿ ಬಳಸಿಕೊಂಡ ಪ್ರಕರಣ ಇದು.
ಹತ್ತು ವರ್ಷಗಳ ಹಿಂದೆ ಬೆಂಗಳೂರು ಹೊರತುಪಡಿಸಿ ಪ್ರಮುಖ ಜಿಲ್ಲಾ ಕೇಂದ್ರಗಳಿಗೆ ಐಟಿ ಉದ್ಯಮ ಚಟುವಟಿಕೆ ವಿಸ್ತರಿಸುವ ಮೂಲಕ ರಾಜಧಾನಿ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಶಿವಮೊಗ್ಗ ಮತ್ತು ಕಲಬುರಗಿ ಐಟಿ ಪಾರ್ಕ್ಗಳಲ್ಲಿ ಇನ್ ಕ್ಯೂಬೇಷನ್ ಸೆಂಟರ್ ತೆರೆಯಲು ಮಂಜೂರಾತಿ ನೀಡಲಾಗಿತ್ತು. ಆ ಪ್ರಕಾರ ತಲಾ ಒಂದು ಕೋಟಿಯಂತೆ ಒಟ್ಟು ಎರಡು ಕೋಟಿ ರೂ.ಗಳ ಅನುದಾನವನ್ನೂ ಹಂತಹಂತವಾಗಿ ಬಿಡುಗಡೆ ಮಾಡಲಾಗಿತ್ತು. ಶಿವಮೊಗ್ಗ ಹೊರವಲಯದ ಮಾಚೇನಹಳ್ಳಿಯ ಐಟಿ ಪಾರ್ಕಿನ ಮೂರನೇ ಮಹಡಿಯಲ್ಲಿ ಸುಸಜ್ಜಿತ ಇನ್ ಕ್ಯೂಬೇಷನ್ ಸೆಂಟರ್ ನಿರ್ಮಾಣವೂ ಆಗಿತ್ತು. ಐಟಿ ಪಾರ್ಕ್ ನಿರ್ವಹಣೆ ಮಾಡುತ್ತಿರುವ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ(ಕಿಯೋನಿಕ್ಸ್)ವೇ ಈ ಕೇಂದ್ರವನ್ನೂ ನಿರ್ಮಿಸಿ, ಅದರ ನಿರ್ವಹಣೆಯ ಹೊಣೆಯನ್ನೂ ಹೊತ್ತಿತ್ತು.
ಐಟಿ ಪಾರ್ಕಿನ ಮೂರನೇ ಮಹಡಿಯಲ್ಲಿ ಸುಮಾರು 3960 ಚದರಡಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಿದ್ದ ಇನ್ ಕ್ಯೂಬೇಷನ್ ಸೆಂಟರಿನಲ್ಲಿ ಉಚಿತ ವಿದ್ಯುತ್, ಹೈಸ್ಪೀಡ್ ಇಂಟರ್ ನೆಟ್, ಎಸಿ, ಪವರ್ ಬ್ಯಾಕ್ ಅಪ್, ಪ್ಯಾಂಟ್ರಿ, ಲಾಬಿ, ಬೋರ್ಡ್ ರೂಂ, ಪ್ರೊಜೆಕ್ಟರ್, ಫ್ರಂಟ್ ಆಫೀಸ್, ಭದ್ರತಾ ವ್ಯವಸ್ಥೆ ಸೇರಿದಂತೆ ಪ್ರತಿಷ್ಠಿತ ಐಟಿ ಕಂಪನಿಯೊಂದು ಹೊಂದಿರಬಹುದಾದ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದ ಸುಮಾರು 21 ಕ್ಯೂಬಿಕಲ್ಸ್ ಗಳನ್ನು ನಿರ್ಮಿಸಲಾಗಿತ್ತು. ಪ್ರತಿ ಕ್ಯೂಬಿಕಲ್ಸ್ ನಲ್ಲಿ ಬಳಕೆಗೆ ಲ್ಯಾಪ್ ಮತ್ತು ಕಂಪ್ಯೂಟರ್ ಗಳನ್ನು ಕೂಡ ನೀಡಲಾಗಿತ್ತು ಎಂದು ಸ್ವತಃ ಕಿಯೋನಿಕ್ಸ್ ಹೇಳಿದೆ.
ಶಿವಮೊಗ್ಗದ ಹಿರಿಯ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಕೆ ಪಿ ಶ್ರೀಪಾಲ್ ಅವರು ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗೆ ಕಿಯೋನಿಕ್ಸ್ ನೀಡಿರುವ ಅಧಿಕೃತ ಪ್ರತಿಕ್ರಿಯೆಯಲ್ಲಿ ಕಿಯೋನಿಕ್ಸ್, ಇನ್ ಕ್ಯೂಬೇಷನ್ ಸೆಂಟರಿನ ಮೂಲಸೌಕರ್ಯಗಳ ಬಗ್ಗೆ ವಿವರ ಮಾಹಿತಿ ನೀಡಿದೆ.
ಆದರೆ, ಮಲೆನಾಡು ಭಾಗದ ಯುವ ಐಟಿ ಉದ್ಯಮಿಗಳು, ಸ್ವಂತ ಬಲದ ಮೇಲೆ ಸುಸಜ್ಜಿತ ಕಂಪನಿ ಕಟ್ಟಲಾಗದ ಉದ್ಯಮಶೀಲ ಉತ್ಸಾಹಿಗಳ ಕನಸು ನನಸಾಗಿಸಬೇಕಿದ್ದ ಈ ಸುಸಜ್ಜಿತ ಇನ್ ಕ್ಯೂಬೇಷನ್ ಸೆಂಟರ್ 2012-13ರಿಂದ 2018-19ರವರೆಗೆ ಐದಾರು ವರ್ಷಗಳ ಕಾಲ ನಯಾಪೈಸೆಯಷ್ಟು ಬಳಕೆಯಾಗದೆ ಖಾಲಿ ಬಿದ್ದಿತ್ತು! ಅದಕ್ಕೆ ಕಾರಣ; ಯುವ ಜನತೆ ಆಸಕ್ತಿ ತೋರಿಸದೇ ಇರುವುದಲ್ಲ; ಬದಲಾಗಿ, ಕಿಯೋನಿಕ್ಸ್ ಸಂಸ್ಥೆ ಇಂತಹದ್ದೊಂದು ಕೇಂದ್ರ ಇದೆ. ಐಟಿ ಉದ್ಯಮಾಸಕ್ತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂಬ ಮಾಹಿತಿಯನ್ನೇ ನೀಡದೆ, ಯಾವುದೇ ಪ್ರಚಾರ ಮಾಡದೇ, ತನ್ನ ವೆಬ್ ತಾಣದಲ್ಲೂ ಪ್ರಕಟಿಸದೆ, ಕನಿಷ್ಠ ಐಟಿ ಪಾರ್ಕಿನಲ್ಲಿ ಒಂದು ಬೋರ್ಡನ್ನು ಕೂಡ ಹಾಕದೇ ಮುಚ್ಚಿಟ್ಟಿದ್ದು. ಕ್ಯೂಬಿಕಲ್ ಲೆಕ್ಕದಲ್ಲಿ ತಿಂಗಳಿಗೆ ಕೇವಲ 1800-2000 ರೂ. ಬಾಡಿಗೆ ಲೆಕ್ಕದಲ್ಲಿ ಬಳಸಿಕೊಂಡು ಸಣ್ಣ ಪ್ರಮಾಣದಲ್ಲಿ ಉದ್ಯಮ ಚಟುವಟಿಕೆ ಆರಂಭಿಸಲು ಅವಕಾಶ ನೀಡುವುದೇ ಕೇಂದ್ರದ ಉದ್ದೇಶವಾಗಿದ್ದರೂ, ಕಿಯೋನಿಕ್ಸ್ ಆ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೇ ಮುಗುಮ್ಮಾಗಿ ಕೈಕಟ್ಟಿ ಕುಳಿತಿತ್ತು. ಹಲವು ಉದ್ಯಮಾಸಕ್ತ ಯುವಕರು ಹೇಗೋ ಮಾಹಿತಿ ಪಡೆದುಕೊಂಡು ಅರ್ಜಿ ಹಾಕಿದರೂ ಕಿಯೋನಿಕ್ಸ್ ಪ್ರಭಾವ ಮತ್ತು ಬಲವಿಲ್ಲದ ಅಂತಹ ಯುವಕರ ಬೇಡಿಕೆಗೆ ಪ್ರತಿಕ್ರಿಯಿಸುವ ಗೋಜಿಗೂ ಹೋಗಿರಲಿಲ್ಲ ಎಂಬ ಸಂಗತಿ ಕೂಡ ಮಾಹಿತಿ ಹಕ್ಕು ಅರ್ಜಿಯ ಮೂಲಕ ತಡವಾಗಿ ಬೆಳಕಿಗೆ ಬಂದಿದೆ.
ಈ ನಡುವೆ, ಯಾರಿಗಾಗಿ ಸಾರ್ವಜನಿಕ ತೆರಿಗೆ ಹಣದಲ್ಲಿ ಆ ಕೇಂದ್ರವನ್ನು ನಿರ್ಮಿಸಲಾಗಿತ್ತೋ ಅವರಿಗೆ ನೀಡುವ ಬಗ್ಗೆ ಬರೋಬ್ಬರಿ ಆರು ವರ್ಷಗಳ ಕಾಲ ಕಿಂಚಿತ್ತೂ ಪ್ರಯತ್ನ ನಡೆಸದ ಕಿಯೋನಿಕ್ಸ್, ಪ್ರಭಾವಿ ನಾಯಕರೊಬ್ಬರು ಸ್ವತಃ ತಮ್ಮ ಪುತ್ರ ನಿರ್ದೇಶಕರಾಗಿರುವ ಮತ್ತು ಮೊಮ್ಮಗನ ಹೆಸರಿನಲ್ಲಿರುವ, ಹಾಗೂ ಸ್ವತಃ ತಮ್ಮದೇ ವಾಸದ ಮನೆಯ ವಿಳಾಸಕ್ಕೆ ನೋಂದಣಿಯಾಗಿದ್ದ ಕಂಪನಿಗೆ ಜಾಗ ಕೊಡಿ ಎಂದು ಪತ್ರ ಬರೆದ ಕೂಡಲೇ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿ, ಅವರಿಗೆ ಇಡೀ ಇನ್ ಕ್ಯೂಬೇಷನ್ ಸೆಂಟರನ್ನೇ ಅನಾಮತ್ತಾಗಿ ನೀಡಿದೆ(ಆರ್ ಟಿಐ ಅರ್ಜಿ ಮಾಹಿತಿ: KSEDC/Assets/K-ITPS/RTI-109/2018-19. Dated:13.03.2019)!
2018ರ ಅಕ್ಟೋಬರ್ 23ರಂದು ಶಿವಮೊಗ್ಗ ಶಾಸಕರಾಗಿದ್ದ ಹಾಲಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು, ತಮ್ಮ ಮೊಮ್ಮಗ ಎನ್ ಪ್ರಥ್ವಿರಾಜ್ ವ್ಯವಸ್ಥಾಪಕ ನಿರ್ದೇಶಕರಾಗಿರುವ ‘ವಿವನ್ ಸಾಫ್ಟವೇರ್ ಸಲ್ಯೂಷನ್ಸ್ ಕಂಪನಿ’ಗೆ ಮಾಚೇನಹಳ್ಳಿ ಐಟಿ ಪಾರ್ಕಿನಲ್ಲಿ ಜಾಗ ಕೊಡಿ’ ಎಂದು ಸೂಚಿಸಿದ್ದರು. ಅದರಲ್ಲೂ ಐಟಿ ಪಾರ್ಕಿನ ಮೂರನೇ ಮಹಡಿಯ ಇನ್ ಕ್ಯೂಬೇಷನ್ ಸೆಂಟರಿನ ಜಾಗ ಮತ್ತು ಮೊದಲ ಮಹಡಿಯ ಜಾಗವನ್ನು ನೀಡುವಂತೆ ನಿಖರವಾಗಿ ಪತ್ರದಲ್ಲಿ ನಮೂದಿಸಿದ್ದರು. ಈ ಪತ್ರ ತಲುಪಿದ ಎರಡನೇ ದಿನವೇ ಆ ಬಗ್ಗೆ ಕ್ರಮಕ್ಕೆ ಮುಂದಾದ ಕಿಯೋನಿಕ್ಸ್ ಅಂದಿನ ಎಂಡಿ ಓ. ಪಾಲಯ್ಯ ಅವರು, ‘ತುರ್ತು ಗಮನ’ಕ್ಕೆ ಎಂದು ಆ ಪತ್ರದ ಮೇಲೆ ಷರಾ ಬರೆದು, ‘ಮಂದಿನ ಕ್ರಮ’ ಕೈಗೊಳ್ಳುವಂತೆ ಶಿವಮೊಗ್ಗ ಐಟಿ ಪಾರ್ಕ್ ಸಹಾಯಕ ವ್ಯವಸ್ಥಾಪಕರಿಗೆ ಸೂಚಿಸಿದ್ದರು.
ಆದರೆ, ಅಂದು ಶಿವಮೊಗ್ಗ ಐಟಿ ಪಾರ್ಕ್ ಸಹಾಯಕ ವ್ಯವಸ್ಥಾಪಕರಾಗಿದ್ದ ಸುಧಾಕರ್ ನಾಯಕ್ ಆ ಬಗ್ಗೆ ಪ್ರತಿಕ್ರಿಯೆ ನೀಡಿ, “ಐಟಿ ಪಾರ್ಕಿನ ಮೂರನೇ ಮಹಡಿಯಲ್ಲಿ ಈಗಾಗಲೇ 3900 ಚ. ಅಡಿ ಸುಸಜ್ಜಿತವಾದ ಇನ್ ಕ್ಯೂಬೇಷನ್ ಸೆಂಟರ್ ಇದ್ದು, ಯಾವುದೇ ಜಾಗ ಖಾಲಿ ಇಲ್ಲ. ಒಂದನೇ ಮಹಡಿ ಮತ್ತು ನೆಲಮಹಡಿಯಲ್ಲಿ ಮಾತ್ರ ಖಾಲಿ ಜಾಗ ಲಭ್ಯವಿದೆ’ ಎಂದು ಮಾಹಿತಿ ನೀಡಿದ್ದರು. ಆದರೆ, ಪಾಲಯ್ಯ, ಅವರ ಮಾಹಿತಿಯನ್ನು ಗಣನೆಗೇ ತೆಗೆದುಕೊಳ್ಳದೆ, ಅಂದೇ(25.10.2018) ಮೂರನೇ ಮಹಡಿಯ ಇನ್ ಕ್ಯೂಬೇಷನ್ ಸೆಂಟರಿನ ಎಲ್ಲಾ ಉಪಕರಣಗಳನ್ನೂ ನೆಲಮಾಳಿಗೆಗೆ ಸ್ಥಳಾಂತರಗೊಳಿಸಿ, ಇಡೀ ಮೂರನೇ ಮಹಡಿಯನ್ನು ವಿವನ್ ಸಾಫ್ಟವೇರ್ ಸಲ್ಯೂಷನ್ಸ್ ಕಂಪನಿಗೆ ನೀಡುವಂತೆ ಲಿಖಿತ ಸೂಚನೆ ನೀಡಿದ್ದರು!
ಈ ನಡುವೆ ‘ವಿವನ್’ ಕಂಪನಿ ತನ್ನ ಹೆಸರನ್ನು ‘ಇಷ್ಟಾರ್ಥ ಸಾಫ್ಟವೇರ್ ಸಲ್ಯೂಷನ್ಸ್’ ಎಂದು ಬದಲಾಯಿಸಿಕೊಂಡಿತು! ಸ್ವಾರಸ್ಯಕರ ಸಂಗತಿಯೆಂದರೆ; ವಿವನ್ ಕಂಪನಿಗೆ ಜಾಗ ನೀಡಲು ಸೂಚಿಸಿ ಶಾಸಕರು (ಹಾಲಿ ಸಚಿವರು) ಪತ್ರ ಬರೆದ ಮಾರನೇ ದಿನವೇ ಕಿಯೋನಿಕ್ಸ್ ಎಂಡಿ ಪಾಲಯ್ಯ ಅವರು ಐಟಿ ಇಲಾಖೆ ಕಾರ್ಯದರ್ಶಿಗಳ ಗಮನಕ್ಕೂ ವಿಷಯ ತಾರದೆ, ಸರ್ಕಾರದ ಅನುಮತಿ ಪಡೆಯದೆ(KSEDC/Assets/K-ITPS/RTI-109/2018-19. Dated:13.03.2019) ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಡಿ ನಿರ್ಮಾಣವಾದ ಇನ್ ಕ್ಯೂಬೇಷನ್ ಸೆಂಟರ್ ರದ್ದು ಮಾಡಿ, ಆ ಇಡೀ ಜಾಗವನ್ನು ಶಾಸಕರ ಖಾಸಗೀ ಕಂಪನಿಗೆ ನೀಡಲು ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಾರೆ ಮತ್ತು ಕೆಳ ಅಧಿಕಾರಿಗೆ ಅದರಂತೆ ಕ್ರಮಕೈಗೊಳ್ಳಲು ಸೂಚಿಸುತ್ತಾರೆ. ಅಕ್ಟೊಬರ್ 25ರಂದು ಎಂಡಿ ಪಾಲಯ್ಯ ಆದೇಶ ನೀಡಿದ ಬೆನ್ನಲ್ಲೇ, ಅಕ್ಟೋಬರ್ 29ರಂದು ವಿವನ್ ಕಂಪನಿಯ ಪೂರ್ಣ ವಿಳಾಸ ಮಾಹಿತಿ ಕೊಡುವಂತೆ ಕಂಪನಿಗೆ ಕಿಯೋನಿಕ್ಸ್ ಪತ್ರ ಬರೆಯುತ್ತದೆ. ಅಂದರೆ; ವಿಳಾಸ ಕೂಡ ನೀಡದ ಕಂಪನಿಗೆ, ಕೇವಲ ಶಾಸಕರ ಒಂದು ಸಾಲಿನ ಪತ್ರದ ಮೇಲೆ ಬರೋಬ್ಬರಿ ಒಂದು ಕೋಟಿ ರೂ. ವೆಚ್ಚದ ಇನ್ ಕ್ಯೂಬೇಷನ್ ಸೆಂಟರನ್ನು ಎಲ್ಲಾ ನಿಯಮ, ಕಾನೂನು ಮೀರಿ ಬಾಡಿಗೆಗೆ ನೀಡಲು ಪಾಲಯ್ಯ ತೀರ್ಮಾನಿಸಿದ್ದರು!
ಕಂಪನಿಯ ವಿಳಾಸ ಕೇಳಿ ಪತ್ರಬಂದ ಮಾರನೇ ದಿನವೇ ಅಂದರೆ; 30.10.2018ರಂದು(ಜಾಗ ನೀಡುವ ಕುರಿತ ಪಾಲಯ್ಯ ಆದೇಶದ ನಾಲ್ಕು ದಿನಗಳ ಬಳಿಕ) ಕಂಪನಿ ತನ್ನ ಹೆಸರನ್ನು ವಿವನ್ ಬದಲಿಗೆ ಇಷ್ಟಾರ್ಥ ಎಂದು ಬಲಾಯಿಸಿಕೊಂಡಿರುವುದಾಗಿ ಸಾದಾ ಕಾಗದದಲ್ಲಿ ಎನ್ ಪ್ರಥ್ವಿರಾಜ್ ಪರವಾಗಿ ಬೇರೊಬ್ಬರು ಕೈಬರಹದ ಪತ್ರ ನೀಡುತ್ತಾರೆ. ಅದನ್ನೇ ಅಧಿಕೃತ ದಾಖಲೆಯಾಗಿ ಪರಿಗಣಿಸಿ ಕಿಯೋನಿಕ್ಸ್ ಇಷ್ಟಾರ್ಥ ಸಾಫ್ಟವೇರ್ ಸಲ್ಯೂಷನ್ಸ್ ಕಂಪನಿಯ ಹೆಸರಿಗೆ ಅದೇ ದಿನ (30.10.2018ರಂದು) ಜಾಗ ಹಂಚಿಕೆ (ಅಲಾಟ್ ಮೆಂಟ್) ಪತ್ರ ನೀಡುತ್ತದೆ! ಅಂದರೆ, ಕಂಪನಿಗೆ ಜಾಗ ಮಂಜೂರಾಗಿ ಹಂಚಿಕೆಯಾದ ದಿನವೇ ಕಂಪನಿಯ ಹೆಸರೂ ಬದಲಾಗುತ್ತದೆ!
ಜೊತೆಗೆ ಮತ್ತೊಂದು ಗಮನಾರ್ಹ ಸಂಗತಿಯೆಂದರೆ; ಈ ಇಷ್ಟಾರ್ಥ ಕಂಪನಿಯ ಇಬ್ಬರು ನಿರ್ದೇಶಕರಲ್ಲಿ ಸ್ವತಃ ಕೆ ಎಸ್ ಈಶ್ವರಪ್ಪ ಅವರ ಪುತ್ರ ಕೆ ಇ ಕಾಂತೇಶ್ ಕೂಡ ಒಬ್ಬರು! ಅಂದರೆ; ಕಿಯೋನಿಕ್ಸ್ ಸಂಸ್ಥೆ ಸರ್ಕಾರದ ಕೋಟ್ಯಂತರ ರೂ, ಮೌಲ್ಯದ ಆಸ್ತಿಯನ್ನು ಉದ್ದೇಶಿತ ಉದ್ಯಮಿಗಳ ಬದಲಾಗಿ, ಸಚಿವರ ಪುತ್ರನ ಕಂಪನಿಗೆ ನಿಯಮಬಾಹಿರವಾಗಿ ನೀಡಲಾಗಿದೆ!
ಈ ಕ್ರೊನಾಲಜಿ ಅಷ್ಟಕ್ಕೇ ನಿಲ್ಲುವುದಿಲ್ಲ! ಜಾಗ ಹಂಚಿಕೆ ಪತ್ರ ನೀಡಿದ ಬಳಿಕ, ಇಷ್ಟಾರ್ಥ ಕಂಪನಿ ಮೂರನೇ ಮಹಡಿಯಲ್ಲಿರುವ ಇನ್ ಕ್ಯೂಬೇಷನ್ ಸೆಂಟರಿನ ಕ್ಯೂಬಿಕಲ್ಸ್ ಗಳನ್ನು ಹೊರತುಪಡಿಸಿ ಬ್ಯಾಟರಿ, ಎಸಿ, ಕಂಪ್ಯೂಟರ್, ಫ್ರಂಟ್ ಆಫೀಸ್ ಸೇರಿದಂತೆ ಉಳಿದೆಲ್ಲಾ ಉಪಕರಣಗಳನ್ನು ತಮಗೇ ನೀಡಬೇಕು ಎಂದು ಕೋರುತ್ತದೆ. ಎಂಡಿ ಪಾಲಯ್ಯ ಅದಕ್ಕೂ ಅನುಮತಿ ನೀಡುತ್ತಾರೆ! ಮತ್ತು ಆ ಉಪಕರಣಗಳಿಗೆ ಒಂದು ಬಾಡಿಗೆ ದರ ನಿಗದಿ ಮಾಡುವಂತೆ ಮೂವರು ಅಧಿಕಾರಿಗಳ ಒಂದು ಸಮಿತಿ ರಚಿಸುತ್ತಾರೆ. ಆದರೆ, ಅಷ್ಟರಲ್ಲಾಗಲೇ ಬರೋಬ್ಬರಿ 3960 ಚ. ಅಡಿಯಷ್ಟು ವಿಸ್ತಾರದ ಹೈಟೆಕ್ ಸೌಲಭ್ಯವನ್ನು ಒಳಗೊಂಡ ಇನ್ ಕ್ಯೂಬೇಷನ್ ಸೆಂಟರನ್ನು ಆ ಐಟಿ ಪಾರ್ಕಿನಲ್ಲಿ ಖಾಲಿ ಜಾಗಕ್ಕೆ ನೀಡುವ ಬಾಡಿಗೆ ದರ(ಚದರ ಅಡಿಗೆ 5ರೂ ಬಾಡಿಗೆ ಮತ್ತು ಒಂದು ರೂ. ನಿರ್ವಹಣೆ ವೆಚ್ಚ)ದಲ್ಲಿ ನೀಡಲಾಗಿರುತ್ತದೆ ಮತ್ತು ಉಪಕರಣಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲು ಸಮಿತಿ ರಚನೆ ಕೇವಲ ತಾಂತ್ರಿಕ ನೆಪ ಎಂಬುದು ವಾಸ್ತವ!
ಈ ನಡುವೆ; ‘ಐಟಿ ಪಾರ್ಕಿನಲ್ಲಿ ಖಾಲಿ ಜಾಗಕ್ಕೆ ಚದರ ಅಡಿಗೆ 6 ರೂ.(5+1 ರೂ.) ನಿಗದಿ ಮಾಡಲಾಗಿದೆ. ಆದರೆ ಇಷ್ಟಾರ್ಥ ಕಂಪನಿಗೆ ನೀಡುತ್ತಿರುವ ಮೂರನೇ ಮಹಡಿಯಲ್ಲಿ ಇನ್ ಕ್ಯೂಬೇಷನ್ ಸೆಂಟರ್ ಇರುವುದರಿಂದ ಅದಕ್ಕೆ ಪ್ರತ್ಯೇಕ ದರ ನಿಗದಿ ಮಾಡಬೇಕಾಗುತ್ತದೆ’ ಎಂದು ದರ ಮತ್ತು ಜಾಗದ ವಿಷಯದಲ್ಲಿ ಆಕ್ಷೇಪವೆತ್ತಿದ ಕಾರಣಕ್ಕೆ ಶಿವಮೊಗ್ಗ ಕಿಯೋನಿಕ್ಸ್ ಸಹಾಯಕ ವ್ಯವಸ್ಥಾಪಕರನ್ನು ರಾತ್ರೋರಾತ್ರಿ ಎತ್ತಂಗಡಿ ಮಾಡಿ, ಅವರ ಜಾಗಕ್ಕೆ ಕಚೇರಿಯ ಗುಮಾಸ್ತರನ್ನೇ ತಂದು ಕೂರಿಸಲಾಗಿದೆ ಎಂಬ ಮಾಹಿತಿಯೂ ಇದೆ!
ಜೊತೆಗೆ ಇನ್ ಕ್ಯೂಬೇಷನ್ ಸೆಂಟರಿನ ಉಪಕರಣಗಳ ದರ ನಿಗದಿಗೆ ಮುನ್ನವೇ ಎಂಡಿ ಪಾಲಯ್ಯ ಅವರು ಅವುಗಳೆಲ್ಲವನ್ನೂ(ಕಂಪನಿಗೆ ಬಳಕೆಗೆ ಬಾರದ ಕ್ಯೂಬಿಕಲ್ಸ್ ಗಳನ್ನು ಹೊರತುಪಡಿಸಿ ಉಳಿದೆಲ್ಲಾ) ಇಷ್ಟಾರ್ಥ ಕಂಪನಿಗೆ ನೀಡಲು ಆದೇಶಿಸಿದ್ದರು. ಹಾಗಾಗಿ ಮಾಹಿತಿ ಹಕ್ಕು ಅರ್ಜಿಗೆ 25.01.2019ರಂದು ಪ್ರತಿಕ್ರಿಯೆ ನೀಡಿದ ಕಿಯೋನಿಕ್ಸ್, ‘2018ರ ನವೆಂಬರ್ ವರೆಗೆ ಮಾತ್ರ ಶಿವಮೊಗ್ಗದಲ್ಲಿ ಇನ್ ಕ್ಯೂಬೇಷನ್ ಸೆಂಟರ್ ಇತ್ತು. ಆ ಬಳಿಕ ಆ ವರ್ಷದ ಡಿಸೆಂಬರಿನಲ್ಲಿ ಕ್ಯೂಬಿಕಲ್ಸ್ ಗಳನ್ನು ತೆಗೆದುಹಾಕಲಾಗಿದೆ(ಇಷ್ಟಾರ್ಥ ಕಂಪನಿಗೆ ಸ್ವಾಧೀನ ಪತ್ರ ನೀಡಿದ್ದು ದಿನಾಂಕ: 10-12-2018ರಂದು!). ಹಾಗಾಗಿ ಶಿವಮೊಗ್ಗದ ಐಟಿ ಪಾರ್ಕಿನಲ್ಲೇ ಯಾವುದೇ ಇನ್ ಕ್ಯೂಬೇಷನ್ ಸೆಂಟರ್ ಸದ್ಯಕ್ಕೆ ಇಲ್ಲ’ ಎಂದು ಹೇಳಿದೆ.
ಆದರೆ, ಅದಾಗಿ ಒಂದೂವರೆ ತಿಂಗಳಲ್ಲೇ; ಅಂದರೆ, 2019ರ ಮಾರ್ಚ್ 2ರಂದು ಮತ್ತೊಂದು ಮಾಹಿತಿ ಹಕ್ಕು ಅರ್ಜಿಗೆ ಪ್ರತಿಕ್ರಿಯಿಸಿ, ‘ಶಿವಮೊಗ್ಗ ಐಟಿ ಪಾರ್ಕಿನ ಒಂದೇ ಮಹಡಿಯಲ್ಲಿ ಹೊಸದಾಗಿ ನಿರ್ಮಿಸಿರುವ ಇನ್ ಕ್ಯೂಬೇಷನ್ ಸೆಂಟರಿನಲ್ಲಿ 21 ಕ್ಯೂಬಿಕಲ್ ಬಾಡಿಗೆಗೆ ನೀಡಲು ಲಭ್ಯವಿದೆ. ಆದರೆ, ಅವಕ್ಕೆ ಬಾಡಿಗೆ ನಿಗದಿ ಮಾಡಿಲ್ಲ’ ಎಂದು ಮಾಹಿತಿ ನೀಡಿದೆ! ಅಂದರೆ ಮೊದಲ ಮಾಹಿತಿ ಹಕ್ಕು ಅರ್ಜಿ ಸಲ್ಲಿಕೆಯಾದ ಬಳಿಕ, ಇನ್ ಕ್ಯುಬೇಷನ್ ಸೆಂಟರ್ ಇದೆ ಎಂಬುದನ್ನು ತೋರಿಸುವ ಅನಿವಾರ್ಯತೆ ಎದುರಾಗಿದೆ ಎಂದು ಕಿಯೋನಿಕ್ಸ್ ಅಧಿಕಾರಿಗಳು ಅರಿತು, ತರಾತುರಿಯಲ್ಲಿ ಮೂರನೇ ಮಹಡಿಯಿಂದ ಕಿತ್ತು ಕ್ಯೂಬಿಕಲ್ಸ್ ಗಳನ್ನು ಇರಿಸಿದ್ದ ನೆಲಮಹಡಿಯ ಜಾಗವನ್ನೇ ಅಧಿಕೃತವಾಗಿ ಇನ್ ಕ್ಯೂಬೇಷನ್ ಸೆಂಟರ್ ಎಂದು ಮಾಹಿತಿಹಕ್ಕು ಅರ್ಜಿದಾರರ ದಿಕ್ಕುತಪ್ಪಿಸುವ ಯತ್ನ ಮಾಡಿದ್ದಾರೆ! ಕೇವಲ ಒಂದು ತಿಂಗಳ ಹಿಂದೆ ಇಲ್ಲದ ಇನ್ ಕ್ಯೂಬೇಷನ್ ಸೆಂಟರ್, ದಿಢೀರನೇ ಕಾಣಿಸಿಕೊಂಡ ಹಿಂದಿನ ಮರ್ಮ ಇದು!
ಆದಾಗ್ಯೂ ಕೆಲವು ಆಸಕ್ತ ನವೋದ್ಯಮಿಗಳು ಇನ್ ಕ್ಯೂಬೇಷನ್ ಸೆಂಟರಿನಲ್ಲಿ ಜಾಗ ಕೋರಿ ಅರ್ಜಿ ಸಲ್ಲಿಸಿ ಎರಡು ವರ್ಷ ಕಳೆದಿದ್ದರೂ, ಕಿಯೋನಿಕ್ಸ್ ಅವರಿಗೆ ಜಾಗವನ್ನೂ ನೀಡಿಲ್ಲ. ಇನ್ ಕ್ಯೂಬೇಷನ್ ಸೆಂಟರಿನ ಕುರಿತು ಮಾಹಿತಿಯನ್ನೂ ನೀಡುತ್ತಿಲ್ಲ!
ಅಂದರೆ; ಯಾರ ಅನುಕೂಲಕ್ಕಾಗಿ ಇನ್ ಕ್ಯೂಬೇಷನ್ ಸೆಂಟರ್ ನಿರ್ಮಾಣ ಮಾಡಲಾಗಿತ್ತೋ ಅಂತಹ ಅರ್ಹರಿಗೆ ಕನಿಷ್ಠ ಅವಕಾಶವನ್ನೂ ನೀಡದೇ ಹೊರಗಿಡುವ ಕಿಯೋನಿಕ್ಸ್, ಪ್ರಭಾವಿ ವ್ಯಕ್ತಿಯ ಸ್ವಂತ ಕಂಪನಿಗೆ ಎಲ್ಲಾ ನಿಯಮ- ಕಾನೂನು ಮೀರಿ, ಯಾವುದೇ ಅನುಮತಿಯನ್ನೂ ಪಡೆಯದೆ; ಇಡೀ ಇನ್ ಕ್ಯೂಬೇಷನ್ ಸೆಂಟರನ್ನು ನೀಡಿದೆ! ಮೇಲ್ನೋಟಕ್ಕೇ ಕಾಣುವಂತೆ ನವೋದ್ಯಮಿಗಳ ನೆರವಿಗೆ ಬರಬೇಕಾಗಿದ್ದ ಇನ್ ಕ್ಯೂಬೇಷನ್ ಸೆಂಟರನ್ನು ಖಾಸಗಿ ಕಂಪನಿಗೆ ಧಾರೆ ಎರೆಯಲಾಗಿದೆ. ಯಾವುದೇ ಒಂದು ಕಂಪನಿಗೆ ಇಡೀ ಸೆಂಟರನ್ನು ನೀಡಲು ನಿಯಮಾವಳಿಯಲ್ಲಿ ಅವಕಾಶವೇ ಇಲ್ಲ. ಬದಲಾಗಿ ಕ್ಯೂಬಿಕಲ್ ಲೆಕ್ಕದಲ್ಲಿ ಅರ್ಹ ಉದ್ಯಮಿಗಳಿಗೆ ಹಂಚಬಹುದು. ಜೊತೆಗೆ ಶಾಸಕರ ಶಿಫಾರಸಿನ ಮೇಲೆ, ಸುಸಜ್ಜಿತ ಇನ್ ಕ್ಯೂಬೇಷನ್ ಸೆಂಟರನ್ನು, ಖಾಲಿ ಜಾಗದ ಬಾಡಿಗೆ ದರದಲ್ಲಿ ಅವರ ಪುತ್ರ ನಿರ್ದೇಶಕರಾಗಿರುವ, ಮೊಮ್ಮಗನ ಕಂಪನಿಗೆ ನೀಡಲಾಗಿದೆ! ಉದ್ದೇಶಿತ ಫಲಾನುಭವಿಗಳಿಂದ ಸೆಂಟರ್ ಇರುವ ಮಾಹಿತಿಯನ್ನು ಬರೋಬ್ಬರಿ ಆರು ವರ್ಷಗಳ ಕಾಲ ಮುಚ್ಚಿಟ್ಟಿದ್ದ ಕಿಯೋನಿಕ್ಸ್, ಸಚಿವರ ಪತ್ರ ಬರುತ್ತಲೇ ಮಾರನೇ ದಿನವೇ ಜಾಗ ನೀಡಲು ನಿರ್ಧಾರ ಕೈಗೊಂಡಿದೆ!
ಹೀಗೆ ಇಡೀ ಪ್ರಕರಣದಲ್ಲಿ ಕಿಯೋನಿಕ್ಸ್ ಆಡಳಿತ; ಪ್ರಮುಖವಾಗಿ ಎಂಡಿ ಪಾಲಯ್ಯ; ಅಧಿಕಾರ ದುರುಪಯೋಗಪಡಿಸಿಕೊಂಡು ಪ್ರಭಾವಿಗಳಿಗೆ ಅನುಕೂಲ ಮಾಡಿಕೊಟ್ಟಿರುವುದು ಮತ್ತು ಅರ್ಹರನ್ನು ಸರ್ಕಾರಿ ಸೌಲಭ್ಯದಿಂದ ವಂಚಿತರನ್ನಾಗಿ ಮಾಡಿರುವುದು ಸ್ವತಃ ಕಿಯೋನಿಕ್ಸ್ ನೀಡಿದ ಅಧಿಕೃತ ಮಾಹಿತಿಯಲ್ಲೇ ಬಹಿರಂಗವಾಗಿದೆ. ಮತ್ತೊಂದು ಕಡೆ, ಸಾರ್ವಜನಿಕ ಬಳಕೆಗಾಗಿ ಇರುವ ಸೌಲಭ್ಯವನ್ನು ತಮ್ಮ ಪ್ರಭಾವ ಬಳಸಿ ಸ್ವಂತಕ್ಕೆ ಬಳಸಿಕೊಂಡಿರುವ ಹಾಲಿ ಸಚಿವರು, ಸರ್ಕಾರಿ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡಿರುವ ಶಂಕೆ ಕೂಡ ವ್ಯಕ್ತವಾಗಿದೆ.
ಆ ಹಿನ್ನೆಲೆಯಲ್ಲಿ ಇಡೀ ಪ್ರಕರಣದ ತನಿಖೆಯಾಗಿ, ಸುಮಾರು ಒಂದು ಕೋಟಿ ರೂ. ಮೌಲ್ಯದ ಸರ್ಕಾರಿ ಸೌಲಭ್ಯದ ದುರುಪಯೋಗ ಮತ್ತು ವಂಚನೆಯ ಹಿಂದಿನ ಹಕೀಕತ್ತು ಬಯಲಾಗಬೇಕಿದೆ!