ಬೆಂಗಳೂರಿಗೆ ತಂತ್ರಾಂಶಗಳ ರಾಜಧಾನಿ ಬಿರುದನ್ನು ತಂದುಕೊಟ್ಟ ಇನ್ಫೊಸಿಸ್ ಅಂಗಳದಲ್ಲೀಗ ಅದರ ಸಿಇಒ ವಿರುದ್ಧವೇ ಅಧಿಕಾರ ಮತ್ತು ಹಣದುರ್ಬಳಕೆಯ ಆರೋಪಗಳ ಬಿರುಗಾಳಿ ಎದ್ದಿದೆ. ಎರಡು ತಿಂಗಳ ಅವಧಿಯಲ್ಲಿ ಸಿಇಒ ಸಲೀಲ್ ಪಾರೀಖ್ ವಿರುದ್ಧ ಎರಡನೇ ಬಾರಿಗೆ ಆರೋಪ ಕೇಳಿಬಂದಿರುವುದು ಕಾರ್ಪೊರೆಟ್ ವಲಯದಲ್ಲಿ, ಮುಖ್ಯವಾಗಿ ಇನ್ಪೊಸಿಸ್ ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಮೊದಲ ವಿಷಲ್ ಬ್ಲೋವರ್ ಪತ್ರ ಹೊರ ಬಿದ್ದ ಸಂದರ್ಭದಲ್ಲಿ ಷೇರುಪೇಟೆಯಲ್ಲಿ ಇನ್ಫೊಸಿಸ್ ಷೇರು ಶೇ.18ರಷ್ಟು ಕುಸಿತ ಕಂಡಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಇನ್ಫೊಸಿಸ್ ಆಡಳಿತ ಮಂಡಳಿಯು ವಿಷಲ್ ಬ್ಲೋವರ್ ಮಾಡಿರುವ ಆರೋಪಗಳ ಕುರಿತಂತೆ ಆಂತರಿಕ ತನಿಖೆ ನಡೆಸಲು ಮತ್ತು ಸ್ವತಂತ್ರ ಸಂಸ್ಥೆಯೊಂದರಿಂದ ಪ್ರತ್ಯೇಕ ತನಿಖೆ ನಡೆಸಲು ನಿರ್ಧರಿಸಿತ್ತು. ಜತೆಗೆ ಇನ್ಫೊಸಿಸ್ ಅಧ್ಯಕ್ಷ ನಂದನ್ ನಿಲೇಕಣಿ ಅವರು ಇನ್ಫೊಸಿಸ್ ಸಂಸ್ಥೆಯಲ್ಲಿನ ಲೆಕ್ಕಪತ್ರಗಳ ಪಾವಿತ್ರ್ಯತೆಯನ್ನು ಆ ದೇವರೂ ಕೂಡ ಸಂಶಯಿಸಲು ಸಾಧ್ಯವಿಲ್ಲ ಎಂದು ಹೇಳಿ ಪರೋಕ್ಷವಾಗಿ ಸಿಇಒ ಸಲೀಲ್ ಪಾರೀಖ್ ಅವರನ್ನು ಸಮರ್ಥಿಸಿಕೊಂಡಿದ್ದರು. ಆದಾದ ನಂತರ ಇನ್ಫೊಸಿಸ್ ಷೇರುದರ ಕೊಂಚ ಏರಿಕೆ ಕಂಡಿತ್ತು.
ಸೆಪ್ಟೆಂಬರ್ 20 ರಂದು ಹೊರಬಿದ್ದ ಮೊದಲ ವಿಷಲ್ ಬ್ಲೋವರ್ ಪತ್ರ ಮತ್ತು ಈಗ ಹೊರಬಿದ್ದಿರುವ ಎರಡನೇ ವಿಷಲ್ ಬ್ಲೋವರ್ ಪತ್ರದಲ್ಲಿ ಮಾಡಿರುವ ಆರೋಪಗಳ ಸ್ವರೂಪ ಬೇರೆಯಾಗಿದ್ದರೂ, ಅವುಗಳ ದನಿ ಒಂದೇ ಆಗಿದೆ. ಅದು ಸಿಇಒ ಸಲೀಲ್ ಪಾರೀಖ್ ಅವರು ಇನ್ಫೊಸಿಸ್ ಕಾಪಾಡಿಕೊಂಡು ಬಂದಿರುವ ಕಾರ್ಪೊರೆಟ್ ಆಡಳಿತದ ಪಾವಿತ್ರ್ಯತೆಗೆ ಧಕ್ಕೆ ಬರುವಂತೆ ನಡೆದುಕೊಂಡಿದ್ದಾರೆ ಎಂಬುದು.
ಮೊದಲ ಪತ್ರದಲ್ಲಿ ಮಾಡಿದ್ದ ಆರೋಪಗಳು ತೀವ್ರ ಗಂಭೀರ ಸ್ವರೂಪದ್ದಾಗಿತ್ತು. ಇನ್ಫೊಸಿಸ್ ಷೇರು ಬೆಲೆ ಗರಿಷ್ಠ ಏರಿಕೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಕಂಪನಿಯ ಲೆಕ್ಕಪತ್ರಗಳನ್ನು ತಿರುಚಲಾಗಿದೆ. ಕಂಪನಿ ಗಳಿಸಿದ ಲಾಭದ ಪ್ರಮಾಣವನ್ನು ಉತ್ಪ್ರೇಕ್ಷಿತ ಮಾಡಲಾಗಿದೆ ಮತ್ತು ಇನ್ಫೊಸಿಸ್ ವಿವಿಧ ಕಂಪನಿಗಳ ನಡುವೆ ಮಾಡಿಕೊಂಡಿರುವ ಒಡಂಬಡಿಕೆಗಳಲ್ಲಿ ಲಾಭದ ಪ್ರಮಾಣವು ಅತ್ಯಲ್ಪ ಅಥವಾ ಶೂನ್ಯ ಇದ್ದರೂ ಅದನ್ನು ಲೆಕ್ಕಪತ್ರಗಳಲ್ಲಿ ನಮೂದಿಸಿಲ್ಲ, ಆಡಳಿತ ಮಂಡಳಿ ಗಮನಕ್ಕೆ ತಂದಿಲ್ಲ ಎಂಬುದಾಗಿತ್ತು. ಒಟ್ಟಾರೆ ಸಿಇಒ ಸಲೀಲ್ ಪಾರೀಖ್ ಮತ್ತು ಸಿಎಫ್ಒ ನಿಲಾಂಜನ ರಾಯ್ ಅವರು ಲೆಕ್ಕಪತ್ರಗಳನ್ನು ತಿರುಚಿದ್ದಾರೆ ಎಂಬರ್ಥದ ಆರೋಪಗಳನ್ನು ಮಾಡಲಾಗಿತ್ತು ಮತ್ತು ಈ ಕುರಿತಂತೆ ತಮ್ಮ ಬಳಿ ದಾಖಲೆ ಇರುವುದಾಗಿಯೂ ವಿಷಲ್ ಬ್ಲೋವರ್ ಹೇಳಿಕೊಂಡಿದ್ದರು.
ಇದೀಗ ಹೊರಬಿದ್ದಿರುವ ಎರಡನೇ ವಿಷಲ್ ಬ್ಲೋವರ್ ಪತ್ರದಲ್ಲಿ ಮಾಡಲಾಗಿರುವ ಆರೋಪಗಳು ಕಾರ್ಪೊರೆಟ್ ಆಡಳಿತದ ಪಾವಿತ್ರ್ಯತೆಗೆ ಮತ್ತು ಅಧಿಕಾರ ಮತ್ತು ಹಣದ ದುರ್ಬಳಕೆಗೆ ಸಂಬಂಧಿಸಿದ್ದಾಗಿದೆ. ಒಂದೂವರೆ ವರ್ಷದ ಹಿಂದೆ ಸಲೀಲ್ ಪಾರೀಖ್ ಇನ್ಫೊಸಿಸ್ ಸಿಇಒ ಆಗಿ ನೇಮಕಗೊಂಡಾಗ ಬೆಂಗಳೂರನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಅಲ್ಲಿಂದಲೇ ಕಾರ್ಯನಿರ್ವಹಿಸಬೇಕು ಎಂಬ ಷರತ್ತನ್ನು ವಿಧಿಸಲಾಗಿತ್ತು. ಆದರೆ, ಸಿಇಒ ಪಾರೀಖ್ ಬೆಂಗಳೂರಿನಲ್ಲಿ ವಾಸಿಸದೇ ಮುಂಬೈನಲ್ಲೇ ವಾಸಿಸುತ್ತಿದ್ದು, ಅಲ್ಲಿಂದಿಲ್ಲಿಗೆ ವಿಮಾನದಲ್ಲಿ ಹಾರಾಟ ನಡೆಸುತ್ತಿದ್ದಾರೆ. ಮುಂಬೈ- ಬೆಂಗಳೂರು ವಿಮಾನ ಹಾರಾಟ ಮತ್ತು ವಿಮಾನ ನಿಲ್ದಾಣದಿಂದ ಕಂಪನಿಗೆ ವಾಹನ ಬಳಕೆ ಇತ್ಯಾದಿ ವೆಚ್ಚಗಳಿಂದಾಗಿ ಇನ್ಫೊಸಿಸ್ ಗೆ 22 ಲಕ್ಷ ರುಪಾಯಿ ಹೆಚ್ಚುವರಿ ಹೊರೆ ಬಿದ್ದಿದೆ. ಕಂಪನಿಯ ಹಣವನ್ನು ದುರ್ಬಳಕೆ ಮಾಡಲಾಗಿದೆ. ಬೆಂಗಳೂರಿನಲ್ಲೇ ಇದ್ದು ಕಾರ್ಯನಿರ್ವಹಿಸದೇ ಬೆಂಗಳೂರು- ಮುಂಬೈ ನಡುವೆ ಹಾರಾಟ ಮಾಡುತ್ತಿರುವುದರಿಂದ ಸಿಇಒ ಅವರು ಕಂಪನಿ ಬಗ್ಗೆ ಹೆಚ್ಚಿನ ಲಕ್ಷ್ಯ ನೀಡುತ್ತಿಲ್ಲ. ಸಿಇಒ ಸಲೀಲ್ ಪಾರೀಖ್ ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದು, ಅವುಗಳ ಮೇಲ್ವಿಚಾರಣೆಗಾಗಿ ಮುಂಬೈಗೆ ತೆರಳುತ್ತಿದ್ದಾರೆ. ಇನ್ಫೊಸಿಸ್ ಹಿತಾಸಕ್ತಿಗಿಂದ ಅವರು ಹೂಡಿಕೆ ಮಾಡಿರುವ ಕಂಪನಿಗಳ ಮೇಲಿನ ಕಾಳಜಿಯೇ ಅವರಿಗೆ ಹೆಚ್ಚಾಗಿದೆ ಎಂಬುದು ಎರಡನೇ ವಿಷಲ್ ಬ್ಲೋವರ್ ಮಾಡಿರುವ ಆರೋಪ. ಕಂಪನಿ ಅಧ್ಯಕ್ಷ ನಂದನ್ ನಿಲೇಕಣಿ ಮತ್ತು ಆಡಳಿತ ಮಂಡಳಿ ಸದಸ್ಯರಿಗೆ ಈ ಪತ್ರವನ್ನು ರವಾನಿಸಲಾಗಿದೆ.
ಎರಡನೇ ಪತ್ರ ಕುರಿತಂತೆ ಇನ್ಫೊಸಿಸ್ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ ಪತ್ರ ಹೊರಬಿದ್ದ ದಿನ (ನವೆಂಬರ್ 12) ಗುರುನಾನಕ್ ಜಯಂತಿ ಪ್ರಯುಕ್ತ ಷೇರುಪೇಟೆಗೆ ರಜೆ. ಹೀಗಾಗಿ ಅದರ ಷೇರುದರದ ಮೇಲೆ ಯಾವ ಪರಿಣಾಮವೂ ಆಗಿಲ್ಲ. ಆದರೆ, ಬುಧವಾರ ಅಂದರೆ ನವೆಂಬರ್ 13ರಂದು ಷೇರುಪೇಟೆ ವಹಿವಾಟು ಆರಂಭಿಸಿದ ನಂತರ ಅದರ ಪರಿಣಾಮ ಗೊತ್ತಾಗಲಿದೆ.
ಮೊದಲ ಪತ್ರ ಹೊರ ಬಿದ್ದಾಗ ಷೇರುಪೇಟೆಯಲ್ಲಿಯಲ್ಲಿ ಇನ್ಫೊಸಿಸ್ ದರ ಶೇ.18ರಷ್ಟು ಕುಸಿತ ಕಂಡಿತ್ತು. ಈ ಬಗ್ಗೆ ಈಗಾಗಲೇ ಭಾರತೀಯ ಷೇರು ವಿನಿಮಯ ಮಂಡಳಿ (ಸೆಬಿ) ತನಿಖೆ ಆರಂಭಿಸಿದೆ. ಸೆಬಿಯು ಲೆಕ್ಕಪತ್ರ ತಿರುಚಿರುವ ಆರೋಪಗಳ ಜತೆಗೆ, ಆರೋಪ ಮಾಡಿ ಷೇರು ದರ ತೀವ್ರ ಕುಸಿತಕ್ಕೆ ಕಾರಣವಾದ ಹಿಂದಿನ ವಾರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಷೇರುಗಳ ವಿನಿಮಯ ಅಥವಾ ವಹಿವಾಟು ನಡೆದಿರುವ ಬಗ್ಗೆಯೂ ತನಿಖೆ ನಡೆಸುತ್ತಿದೆ. ಸೆಬಿ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಆದರೆ, ವಿಷಲ್ ಬ್ಲೋವರ್ ಪತ್ರ ಹೊರಬಿದ್ದು, ಇನ್ಫೊಸಿಸ್ ಷೇರುದರ ಶೇ.18ರಷ್ಟು ಕುಸಿದ ಹಿಂದಿನ ವಾರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಷೇರು ವಹಿವಾಟು ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎನ್ನಲಾಗಿದೆ.
ಈ ನಡುವೆ, ಇನ್ಫೊಸಿಸ್ ಅಂಕಿ ಅಂಶಗಳನ್ನು ಆ ದೇವರು ಕೂಡಾ ಸಂಶಯಿಸಲಾರ ಎಂದು ಅಧ್ಯಕ್ಷ ನಂದನ್ ನಿಲೇಕಣಿ ನೀಡಿರುವ ಹೇಳಿಕೆ ಕುರಿತಂತೆ ಸೆಬಿ ಅಧ್ಯಕ್ಷ ಅಜಯ್ ತ್ಯಾಗಿ, ಇನ್ಫೋಸಿಸ್ ಹಣಕಾಸು ಅಂಕಿಅಂಶಗಳನ್ನು ಪರಿಶೀಲಿಸಲು ಬಯಸುವ ಜನರು “ದೇವರನ್ನು ಕೇಳಬೇಕು” ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ಫೊಸಿಸ್ ಮೇಲಿನ ಆರೋಪಗಳಲ್ಲಿ ಹುರುಳಿಲ್ಲದಿಲ್ಲ, ತನಿಖೆ ಪೂರ್ಣಗೊಂಡನಂತರ ಎಲ್ಲವೂ ಗೊತ್ತಾಗಲಿದೆ ಎಂಬುದು ಅಜಯ್ ತ್ಯಾಗಿ ಅವರ ಮಾತಿನ ಅರ್ಥ.
ಒಂದು ಕಾಲದಲ್ಲಿ ದೇಶದ ಅತಿದೊಡ್ಡ ತಂತ್ರಾಂಶ ಕಂಪನಿಯಾಗಿದ್ದ ಇನ್ಫೊಸಿಸ್ ಈಗ ಟಿಸಿಎಸ್ ನಂತರದ ಸ್ಥಾನದಲ್ಲಿದೆ. 2,99,962.55 ಕೋಟಿ ಮಾರುಕಟ್ಟೆ ಮೌಲ್ಯ (ಸೋಮವಾರ ಷೇರುಪೇಟೆ ವಹಿವಾಟು ಅಂತ್ಯಗೊಂಡಾಗ) ಹೊಂದಿರುವ ಇನ್ಫೊಸಿಸ್ ತಾನೇ ರೂಪಿಸಿರುವ ಕಾರ್ಪೊರೆಟ್ ಆಡಳಿತ ಕಟ್ಟುಪಾಡುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಿದೆ.
ಸಲೀಲ್ ಪಾರೀಖ್ ಇನ್ಫೊಸಿಸ್ ಚುಕ್ಕಾಣಿ ಹಿಡಿದ ಎರಡನೇ ಹೊರಗಿನ ಸಿಇಒ. ಈ ಹಿಂದೆ ವಿಶಾಲ್ ಸಿಖ್ಖಾ ಹೊರಗಿನ ಮೊದಲ ಇನ್ಫೊಸಿಸ್ ಸಿಇಒ ಆಗಿದ್ದರು. ಅದೂವರೆಗೂ ಇನ್ಫೊಸಿಸ್ ಕಂಪನಿಯ ಸ್ಥಾಪಕರು, ಪ್ರವರ್ತಕರು ಮತ್ತು ಹಲವು ವರ್ಷಗಳಿಂದ ಕಂಪನಿಯಲ್ಲೇ ಸೇವೆ ಸಲ್ಲಿಸಿದ್ದವರು ಸಿಇಒ ಹುದ್ದೆ ಅಲಂಕರಿಸುತ್ತಿದ್ದರು. ಇನ್ಫೊಸಿಸ್ ಸ್ಥಾಪಕ ನಾರಾಯಣಮೂರ್ತಿ ಅವರೇ ಆಯ್ಕೆ ಮಾಡಿದ್ದ ವಿಶಾಲ್ ಸಿಖ್ಖಾ ಮೂರು ವರ್ಷದ ನಂತರ ಸಂಸ್ಥೆಯನ್ನು ತೊರೆದಿದ್ದರು. ಕಾರ್ಪೊರೆಟ್ ಆಡಳಿತ ಕುರಿತಂತೆ ನಾರಾಯಣ ಮೂರ್ತಿ ಅವರೊಂದಿಗೆ ತಾತ್ವಿಕ ಸಂಘರ್ಷ ಇತ್ತು. ಅಲ್ಲದೇ, ಸಿಖ್ಕಾ ಪಡೆಯುತ್ತಿದ್ದ ಭಾರಿ ವೇತನದ ಬಗ್ಗೆ ನಾರಾಯಣಮೂರ್ತಿ ಅವರ ಆಕ್ಷೇಪ ಇತ್ತು. ಕಂಪನಿಯ ಹಿರಿಯಾಳುಗಳು ಕಂಪನಿಯ ಕೊನೆಯ ಹಂತದ ಸಿಬ್ಬಂದಿಗಿಂತ ನೂರಾರು ಪಟ್ಟು ವೇತನ ಪಡೆಯುವುದು ಸರಿ ಅಲ್ಲ ಎಂಬುದು ನಾರಾಯಣಮೂರ್ತಿ ಅವರ ನಿಲುವು. ವಿಶಾಲ್ ಸಿಖ್ಖಾ ತಾವು ಹೆಚ್ಚಿನ ವೇತನ ಪಡೆಯುವುದರ ಜತೆಗೆ ಅಂದಿನ ಕೇಂದ್ರ ಹಣಕಾಸು ಸಚಿವ ಜಯಂತ್ ಸಿನ್ಹಾ ಪತ್ನಿ ಪುನಿತಾ ಸಿನ್ಹಾ ಅವರನ್ನು ಸ್ವತಂತ್ರ ನಿರ್ದೇಶಕರನ್ನಾಗಿ ನೇಮಕ ಮಾಡಿದ್ದು, ಮಾಜಿ ಸಿಎಫ್ಒ ರಾಜೀವ್ ಬನ್ಸಾಲ್ ಅವರಿಗೆ 17.50 ಕೋಟಿ ಸೆವರೆನ್ಸ್ ಪ್ಯಾಕೇಜ್ (ಬೇರ್ಪಡಿಕೆ ಪರಿಹಾರ) ನೀಡಿದ್ದರ ಕುರಿತಂತೆ ನಾರಾಯಣಮೂರ್ತಿ ಆಕ್ಷೇಪಿಸಿದ್ದರು. ಹೀಗಾಗಿ ವಿಶಾಲ್ ಸಿಖ್ಖಾ ಅವರು ಕಂಪನಿ ತೊರೆದಿದ್ದರು. ಹದಿನೆಂಟು ತಿಂಗಳ ಹಿಂದೆ ಸಲೀಲ್ ಪಾರೀಖ್ ಇನ್ಫೊಸಿಸ್ ಚುಕ್ಕಾಣಿ ಹಿಡಿದಿದ್ದಾರೆ. ಇನ್ಪೊಸಿಸ್ ನಲ್ಲಿ ವಲಸಿಗರ ಹಾವಳಿಯಿಂದ ಮೂಲನಿವಾಸಿಗಳ ಅಸ್ತಿತ್ವಕ್ಕೆ ಧಕ್ಕೆ ಬಂದು, ಉನ್ನತ ಹುದ್ದೆಯಲ್ಲಿದ್ದ ಹಲವರು ಕಂಪನಿ ತೊರೆದಿದ್ದಾರೆ. ಈಗ ಸಲೀಲ್ ಪಾರೀಖ್ ವಿರುದ್ಧ ನಡೆದಿರುವ ವಿಷಲ್ ಬ್ಲೋವರ್ ಪತ್ರಗಳ ಸಮರದ ಹಿನ್ನೆಲೆಯಲ್ಲಿ ಮೂಲನಿವಾಸಿಗಳ ಕೈವಾಡ ಇದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ, ತನಿಖೆ ನಂತರವಷ್ಟೇ ಇದರ ಸತ್ಯಾಸತ್ಯತೆ ಗೊತ್ತಾಗುತ್ತದೆ.