ದೇಶಾದ್ಯಂತ ವಿವಾದದ ಕೇಂದ್ರ ಬಿಂದುವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಸಲ್ಲಿಕೆಯಾಗಿರುವ ಬರೋಬ್ಬರಿ 140 ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ನಡೆಸಲಿದೆ. ಈ ಮೂಲಕ ಇಡೀ ದೇಶದ ಕಣ್ಣು ಇಂದು ಸುಪ್ರೀಂ ಕೋರ್ಟಿನ ಮೇಲಿದೆ.
ಮುಖ್ಯನ್ಯಾಯಮೂರ್ತಿ ಎಸ್.ಎ.ಬೋಬ್ಡೆ, ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಜೀರ್ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠವು ಈ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಈಗಾಗಲೇ ಕೇಂದ್ರ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದ್ದು, ಇಂಡಿಯನ್ ಮುಸ್ಲಿಂ ಲೀಗ್ (ಜೆಯುಎಂಎಲ್) ಮತ್ತು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಸೇರಿದಂತೆ ಸಲ್ಲಿಕೆಯಾಗಿರುವ 140 ಕ್ಕೂ ಹೆಚ್ಚು ಅರ್ಜಿಗಳನ್ನು ಒಟ್ಟಾಗಿ ವಿಚಾರಣೆ ನಡೆಸಲಿದೆ.
ಜನವರಿ 9 ರಂದು ಈ ವಿಚಾರವನ್ನು ತಕ್ಷಣಕ್ಕೆ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ನಿರಾಕರಿಸಿತ್ತು. ಈ ಸಿಎಎ ದೇಶದ ಜನರಿಗೆ ಇರುವ ಸಮಾನತೆಯ ಹಕ್ಕನ್ನು ಕಸಿದುಕೊಳ್ಳುತ್ತಿದ್ದು, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಧರ್ಮದ ಆಧಾರದಲ್ಲಿ ತರಲುದ್ದೇಶಿಸಿರುವ ಈ ಕಾಯ್ದೆಯಿಂದ ಕೆಲವು ಧರ್ಮಗಳಿಗೆ ಅನ್ಯಾಯವಾಗುತ್ತದೆ ಮತ್ತು ಅವರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ನೋಡಲಾಗುತ್ತದೆ. ಇಂತಹ ತಾರತಮ್ಯದ ಕಾನೂನಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸಹಿ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಇದರ ಜಾರಿಗೆ ಅವಕಾಶ ಮಾಡಿಕೊಡಬಾರದು ಎಂದು ಅರ್ಜಿದಾರರು ಸುಪ್ರೀಂಕೋರ್ಟಿಗೆ ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರವು ಅಫ್ಘಾನಿಸ್ಥಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದಿರುವ ಕೇವಲ ಹಿಂದೂ, ಪಾರ್ಸಿಗಳು, ಜೈನರು, ಸಿಖ್ಖರು, ಬೌದ್ಧರು ಮತ್ತು ಕ್ರೈಸ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಈ ಕಾನೂನನ್ನು ರೂಪಿಸಿದೆ. ಆದರೆ ಮುಸ್ಲಿಂರನ್ನು ಹೊರಗಿಟ್ಟಿದೆ. ಈ ಮೂಲಕ ಮುಸ್ಲಿಂರನ್ನು ಕಡೆಗಣಿಸಿದ್ದು, ಕೇವಲ ಕೆಲವೇ ಕೆಲವು ಧರ್ಮಗಳನ್ನು ಓಲೈಸಲು ಮತ್ತು ಮುಸ್ಲಿಂರನ್ನು ತುಚ್ಛೀಕರಿಸಲೆಂದೇ ಈ ಕಾನೂನನ್ನು ತರುತ್ತಿದೆ. ಇದು ಸಂವಿಧಾನ ವಿರೋಧಿ ನೀತಿಯಾಗಿದೆ. ಇದರಿಂದ ತಾರತಮ್ಯವಾಗಲಿದೆ ಎಂದು ಜೆಯುಎಂಎಲ್ ತನ್ನ ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಿದೆ.
ಇನ್ನು ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಅವರು, ಮೂಲಭೂತ ಹಕ್ಕುಗಳ ಮೇಲೆ ಇದು ಕೇಂದ್ರ ಸರ್ಕಾರದ ಲಜ್ಜೆಗೆಟ್ಟ ದಾಳಿ ಎಂದು ವ್ಯಂಗ್ಯವಾಡಿದ್ದು, ಸಮಾನರಲ್ಲಿ ಅಸಮಾನತೆಯನ್ನು ತಂದೊಡ್ಡುವ ಕಾನೂನನ್ನು ತರುವ ಮೂಲಕ ದೇಶವನ್ನು ಧರ್ಮದ ಆಧಾರದಲ್ಲಿ ವಿಭಜನೆ ಮಾಡುವ ಹುನ್ನಾರವನ್ನು ಹೊಂದಿದೆ ಎಂದು ದೂರಿದ್ದಾರೆ.
ದೇಶಾದ್ಯಂತ ಈ ಸಿಎಎ ವಿರುದ್ಧ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಕರ್ನಾಟಕ, ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ. ಅಲ್ಲದೇ, ಅವರ ಮೇಲೆ ಗೋಲಿಬಾರ್ ನಡೆಸಿ ಅಮಾಯಕರನ್ನು ಹತ್ಯೆ ಮಾಡಿದ್ದಾರೆ. ಈ ಮೂಲಕ ದೇಶದೆಲ್ಲೆಡೆ ಪ್ರತಿಭಟನೆಗಳು ತೀವ್ರಗೊಳ್ಳುತ್ತಿವೆ.
ಆದರೆ, ಸರ್ಕಾರ ಮಾತ್ರ ತನ್ನ ಹಿಂದೂರಾಷ್ಟ್ರದ ಪರಿಕಲ್ಪನೆಯ ಹಿಡನ್ ಅಜೆಂಡಾವನ್ನು ಈ ಕಾನೂನಿನ ಮೂಲಕ ತರಲು ಹೊರಟಿದೆ. ಯಾವುದೇ ಕಾರಣಕ್ಕೂ ಈ ಪ್ರಸ್ತಾವಿತ ಕಾನೂನು ಜಾರಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕಾನೂನು ತಿದ್ದುಪಡಿಯ ರೂವಾರಿ ಎನಿಸಿರುವ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಈ ಮೂಲಕ ಅಮಿತ್ ಶಾ ಉರಿಯುವ ಗಾಯಕ್ಕೆ ಉಪ್ಪು ಸುರಿದಿದ್ದಾರೆ.
ಈ ಮಧ್ಯೆ, ಬಿಜೆಪಿ ಸರ್ಕಾರವಂತೂ ತಮ್ಮ ನೆರವಿಗೆ ಬರುವುದಿಲ್ಲ ಎಂಬುದನ್ನು ಖಾತರಿಪಡಿಸಿಕೊಂಡಿರುವ ನಾಗರಿಕರು ವಿವಿಧ ಸಂಘಟನೆಗಳ ಮೂಲಕ ಪ್ರಸ್ತಾವಿತ ಕಾನೂನಿನ ವಿರುದ್ಧ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಲಿದ್ದಾರೆ. ಅಲ್ಲಾದರೂ ಕಾನೂನನ್ನು ರದ್ದುಪಡಿಸುವಂತೆ ನ್ಯಾಯಾಲಯ ತೀರ್ಪು ನೀಡಿ ತಮಗೆ ನ್ಯಾಯ ದೊರಕಿಸಿಕೊಡಲಿದೆ ಎಂಬ ಆಶಾವಾದದಿಂದ ನಾಗರಿಕರು ಇದ್ದಾರೆ.
ಆದಾಗ್ಯೂ, ಕಾನೂನು ಪಂಡಿತರ ಪ್ರಕಾರ ರಾಷ್ಟ್ರಪತಿಗಳು ಸಹಿ ಹಾಕಿರುವ ಹಿನ್ನೆಲೆಯಲ್ಲಿ ತಿದ್ದುಪಡಿ ಕಾನೂನಿಗೆ ನ್ಯಾಯಾಲಯ ತಡೆ ನೀಡುವ ಸಾಧ್ಯತೆಗಳು ಕಡಿಮೆ ಇವೆ. ಆದರೆ, ಕೆಲವೊಂದು ವಿಶೇಷ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ಸರ್ಕಾರ ಜಾರಿಗೆ ತಂದಿರುವ ಹಲವು ಕಾನೂನುಗಳನ್ನು ಜಾರಿಗೆ ತರಲು ನಿರಾಕರಿಸಿದ ನಿದರ್ಶನಗಳೂ ಇವೆ. ಹೀಗಾಗಿ ಸಿಎಎ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜನತೆಯ ಆಶೋತ್ತರಗಳಿಗೆ ಬೆಲೆ ನೀಡಲಿದೆ ಎಂಬ ಆಶಾವಾದ ನಾಗರಿಕರಿಗೆ ಇದ್ದರೂ, ಒಂದು ವೇಳೆ ತಡೆ ನೀಡದಿದ್ದರೆ ಕೇಂದ್ರ ಸರ್ಕಾರಕ್ಕೆ ಬಲ ಬಂದಂತಾಗಿ ಪ್ರತಿಭಟನಾಕಾರರ ಮೇಲೆ ದೌರ್ಜನ್ಯವನ್ನು ಮತ್ತಷ್ಟು ಹೆಚ್ಚು ಮಾಡಲಿದೆ ಎಂಬ ಆತಂಕವೂ ಮನೆ ಮಾಡಿದೆ.