ಕರೋನಾ ವನ್ನು ‘ಮಹಾಯುದ್ದ’ಕ್ಕೆ ಹೋಲಿಸಿರುವ ಪ್ರಧಾನಿ ನರೇಂದ್ರ ಮೋದಿ ಇವತ್ತು ರಾತ್ರಿ 8 ಗಂಟೆಗೆ ಆ ‘ಮಹಾಯುದ್ಧ’ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕಳೆದ ವಾರ ಮೊದಲ ಬಾರಿಗೆ ಕರೋನಾ ಬಗ್ಗೆ ತುಟಿಬಿಚ್ಚಿದ್ದ ಮೋದಿ ಜನತಾ ಕರ್ಫ್ಯೂಗೆ ಕರೆ ನೀಡಿದ್ದರು. ಚಪ್ಪಾಳೆ ತಟ್ಟುವಂತೆ ಕೇಳಿಕೊಂಡಿದ್ದರು. ಪ್ರತಿ ಬಾರಿ ರಾತ್ರಿ 8 ಗಂಟೆಯ ಪ್ರೈಮ್ ಟೈಮ್‌ನ್ನೇ ಆಯ್ಕೆ ಮಾಡಿಕೊಳ್ಳುವ ಪ್ರಧಾನಿ ಮೋದಿ ತಮ್ಮ ಪ್ರೈಮ್ ಸ್ಪೀಚ್‌ನಲ್ಲಿ ಏನು ಹೇಳಬಹುದು ಎಂಬ ಸಹಜ ಕುತೂಹಲ ಹುಟ್ಟುಕೊಂಡಿದೆ. ಹಿಂದಿನ ಪ್ರೈಮ್ ಸ್ಪೀಚ್‌ವೊಂದರಲ್ಲಿ ಡಿಮಾನಿಟೈಷೇಷನ್ ಘೋಷಣೆ ಮಾಡಿದ್ದರಿಂದ ಅವರ ಭಾಷಣದ ಬಗ್ಗೆ ಭಯವೂ ಇದೆ. ಆದರೆ ಈ ಬಾರಿ ಇವೆಲ್ಲಕ್ಕೂ ಮಿಗಿಲಾಗಿ ಇರುವುದು ನಿರೀಕ್ಷೆಗಳು.
ನಿರೀಕ್ಷೆ 1
ಕರೋನಾ ಎಂಬ ಮಹಾಮಾರಿ ಆರೋಗ್ಯವನ್ನು ಮಾತ್ರ ಆಹುತಿಗೆ ತೆಗೆದುಕೊಳ್ಳುತ್ತಿಲ್ಲ, ಜಗತ್ತಿನ ಜನಜೀವನವನ್ನೇ ತನ್ನ ಕಬಂಧ ಬಾಹುಗಳಿಂದ ಕಟ್ಟಿಹಾಕಿದೆ. ಮೊದಲೇ ಹಿಂಜರಿತ ಕಂಡಿದ್ದ ಆರ್ಥಿಕತೆಗೆ ಗಾಯದ ಮೇಲೆ ಬರೆ ಎಳೆದಂತೆ ಎನ್ನುವ ರೀತಿಯಲ್ಲಿ ಸದ್ಯಕ್ಕೆ ಚೇತರಿಸಿಕೊಳ್ಳಲಾಗದ ಪೆಟ್ಟುಕೊಟ್ಟಿದೆ. ಕೆಲ ದಿನಗಳಲ್ಲಿ ಕರೋನಾ ಸೋಂಕು ಹರಡುವುದು ಕಡಿಮೆ ಆಗಬಹುದು, ಆದರೆ ಕರೋನಾ ಕರಿನೆರಳಿನಿಂದ ಹೊರಬರಲು ದೊಡ್ಡ ಹೋರಾಟದ ಅಗತ್ಯವಿದೆ. ಸರ್ಕಾರ, ಸಮಾಜ, ಸಮಾನ್ಯರೆಲ್ಲರ ಸಹಯೋಗದ ಹೋರಾಟ ಬೇಕಾಗಿದೆ. ಈ ಹೋರಾಟಕ್ಕೆ ಅಣಿಯಾಗುವಂತೆ ಪ್ರೇರೇಪಿಸಲು ಮೋದಿ ಇವತ್ತು ವಿಶೇಷ ಪ್ಯಾಕೇಜ್ ಒಂದನ್ನು ಘೋಷಿಸಬಹುದು ಎಂಬ ನಿರೀಕ್ಷೆಗಳಿವೆ. ತಂತಜ್ಞಾನ, ಆವಿಷ್ಕಾರ, ಆರೋಗ್ಯ, ಆರ್ಥಿಕತೆ, ಸ್ವಚ್ಛತೆಯ ದಷ್ಟಿಯಲ್ಲಿ ಭಾರತಕ್ಕಿಂತ ಭಾರೀ ಮುಂದಿರುವ ಅಮೇರಿಕಾವು ಇಂಥ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.
ನಿರೀಕ್ಷೆ 2
ಕರೋನಾ ಸೋಂಕು ಹರಡದಂತೆ ತಡೆಯಲು ದೇಶಕ್ಕೆ ದೇಶವನ್ನೇ ಲಾಕ್‌ಡೌನ್ ಮಾಡದೆ ಬೇರೆ ದಾರಿಯೇ ಇಲ್ಲ. ಹಾಗೆ ಮಾಡಿದರೆ ಎಲ್ಲರಿಗಿಂತ ಹೆಚ್ಚು ತೊಂದರೆಗೆ ಸಿಲುಕುವವರು ಬಡವರು; ದಿನಗೂಲಿ ನೌಕರರು, ರಸ್ತೆ ಬದಿ ಮಾರಾಟಗಾರರು, ಅವತ್ತಿನ ಊಟವನ್ನು ಅವತ್ತೇ ಸಂಪಾದಿಸಿಕೊಳ್ಳುವವರು, ಕೂಲಿಗಳು, ಹಮಾಲಿಗಳು ಇತ್ಯಾದಿ ಇತ್ಯಾದಿ. ಇದೇ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಇಂದಿರಾ ಕ್ಯಾಂಟೀನ್ ಮೂಲಕ, ತಮಿಳುನಾಡಿನಲ್ಲಿ ಅಮ್ಮ ಕ್ಯಾಂಟೀನ್ ಮೂಲಕ ಊಟ ಕೊಡಲಾಗುತ್ತಿದೆ. ಮೋದಿ ಕೂಡ ಬಡವರ್ಗದವರ ಬಗ್ಗೆ ಏನನ್ನಾದರೂ ಹೇಳಬಹುದು ಎಂಬ ನಿರೀಕ್ಷೆಗಳಿವೆ.
ನಿರೀಕ್ಷೆ 3
ಮೋದಿ ಪ್ರಧಾನಿಯಾಗಿ ತಮ್ಮ ಹಿಂದಿನ ಅವಧಿಯಲ್ಲಿ ಎಲ್ಲರೂ ಬ್ಯಾಂಕ್ ಖಾತೆ ಹೊಂದಲೇಬೇಕು. ಸರ್ಕಾರ ಕೊಡುವ ರಿಯಾಯಿತಿ ನೇರವಾಗಿ ಫಲಾನುಭವಿಗಳ ಖಾತೆಗೇ ಜಮಾವಣೆ ಆಗಬೇಕು ಎಂದು ಹೇಳಿದ್ದರು. ಇದೇ ಹಿನ್ನೆಲೆಯಲ್ಲಿ ‘ಜನಧನ್ ಯೋಜನೆ’ಯನ್ನೂ ಜಾರಿಗೆ ತಂದಿದ್ದರು. ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರ ರಾಜ್ಯದಲ್ಲಿ ಎಪಿಎಲ್ ಬಿಪಿಎಲ್ ಎನ್ನದೆ ಎಲ್ಲರ ಖಾತೆಗಳಿಗೂ ಇಂತಿಷ್ಟು ಹಣ ಹಾಕಿ ಸ್ಪಂದಿಸಿದ್ದಾರೆ. ಮೋದಿ ಕೂಡ ಜನಧನ್ ಖಾತೆಗಳಿಗೆ ಹಣ ಹಾಕಿ ಜನರ ಅನಿವಾರ್ಯತೆಗೆ ಸ್ಪಂದಿಸುತ್ತಾರೇನೋ ಎಂಬ ನಿರೀಕ್ಷೆಗಳಿವೆ.

ನಿರೀಕ್ಷೆ 4
ಬಡವರ ಬವಣೆ ಇವಿಷ್ಟೇ ಅಲ್ಲ, ಇವು ಮೇಲುನೋಟಕ್ಕೆ ಸುಲಭವಾಗಿ ಕಾಣಿಸುವವು ಅಷ್ಟೇ. ಮಧ್ಯಮ ವರ್ಗದ ಸಮಸ್ಯೆ ಮತ್ತೊಂದು ಬಗೆಯದ್ದು. ಲಾಕ್‌ಡೌನ್ ಕಾರಣದಿಂದಾಗಿ ಕಂಪನಿಗಳು ಅಥವಾ ಸಂಸ್ಥೆಗಳು ತಮ್ಮ ಸಿಬ್ಬಂದಿ, ನೌಕರರು ಮತ್ತು ಕಾರ್ಮಿಕರಿಗೆ ಕೆಲವರಿಗೆ ‘ವರ್ಕ್ ಫ್ರಂ ಹೋಮ್’ ಎಂದು ಸೂಚಿಸಿವೆ. ಕೆಲವರಿಗೆ ಕಡ್ಡಾಯವಾಗಿ ರಜೆ ನೀಡಲಾಗಿದೆ. ಇದು ಸದ್ಯದ ಪರಿಸ್ಥಿತಿಯಲ್ಲಿ ಈ ಕಾರ್ಮಿಕರು, ಸಿಬ್ಬಂದಿ ಅಥವಾ ನೌಕರರನ್ನು ಆತಂಕಕ್ಕೆ ದೂಡಿದೆ. ಆರ್ಥಿಕ ಹಿಂಜರಿತದ ಕಡೆ ‘ಕಾಸ್ಟ್ ಕಟಿಂಗ್’ ಕಾಮನ್ ಎಂಬಂತಾಗಿರುವ ಪರಿಸ್ಥಿತಿಯಲ್ಲಿ ದುಡಿಯುವ ವರ್ಗ ಮನೆಯಲ್ಲಿ ನೆಮ್ಮದಿಯಿಂದ ಇರಲು ಕಷ್ಟವಾಗುತ್ತಿದೆ. ವರ್ಕ್ ಫ್ರಂ ಹೋಮ್ ಮುಗಿದಮೇಲೆ ಏನಾಗುತ್ತೋ? ರಜೆ ಮುಗಿದ ಮೇಲೆ ಮತ್ತೇನಾಗುತ್ತೋ? ಈ ತಿಂಗಳ ಸಂಬಳದಲ್ಲಿ ಎಷ್ಟು ಕಡಿತವಾಗುತ್ತದೋ ಎಂಬ ವಿಚಿತ್ರ ಬಳಲಿಕೆಯಲ್ಲಿದೆ ಈ ವರ್ಗ. ಇವರಿಗೆ ಉದ್ಯೋಗ ಭದ್ರತೆಯ ಅಭಯ ನೀಡುವರೇ ಮೋದಿ ಎಂಬ ನಿರೀಕ್ಷೆಗಳು ಕೂಡ ಇವೆ.
ನಿರೀಕ್ಷೆ 5
ಕರೋನಾ ಭೀತಿಯಿಂದ ಕಂಗೆಟ್ಟಿರುವ ಕೆಲವು ರಾಷ್ಟçಗಳು ಈಗಾಗಲೇ ‘ವೈದ್ಯಕೀಯ ತುರ್ತುಪರಿಸ್ಥತಿ’ ಎಂದು ಘೋಷಣೆ ಮಾಡಿವೆ. ಹೀಗೆ ಮಾಡುವ ಮೂಲಕ ಸದ್ಯಕ್ಕೆ ಮಿಕ್ಕಿದ್ದೆಲ್ಲವನ್ನೂ ಬಗಿಲಿಗಿಟ್ಟು ಕರೋನಾ ತಡೆಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿವೆ. ಭಾರತದಲ್ಲಿ ಕರೋನಾ ಎರಡನೇ ಹಂತ ದಾಟುತ್ತಿದ್ದು ಈ ಹಂತದಲ್ಲೇ ವೈದ್ಯಕೀಯ ತುರ್ತುಪರಿಸ್ಥಿತಿ ಘೋಷಣೆ ಮಾಡಿ ವ್ಯಾಪಕವಾಗಿ ಸೋಂಕು ಹರಡುವುದನ್ನು ತಡೆಗಟ್ಟಬಹುದು ಎಂಬ ನಿರೀಕ್ಷೆಗಳಿವೆ.
ನಿರೀಕ್ಷೆ 6
ಕರೋನಾ ಕಷ್ಟ ಕಾಣಿಸಿಕೊಂಡಾಗಿನಿಂದಲೂ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕೂಡ ದೇಶವಾಸಿಗಳಿಗೆ ಪರಿಸ್ಥಿತಿ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಬ್ರಿಟನ್‌ನಲ್ಲಿ ಸದ್ಯಕ್ಕೆ ಪರಿಸ್ಥಿತಿ ಹತೋಟಿಯಲ್ಲಿದೆ. ಆದರೂ ಅಲ್ಲಿನ ಪ್ರಧಾನಿ ಬೋರೀಸ್ ಜಾನ್ಸನ್ ಮುನ್ನಚ್ಚರಿಕಾ ಕ್ರಮ ಕೈಗೊಂಡಿದ್ದಾರೆ. ಅದರನ್ನು ತಮ್ಮ ನಾಗರೀಕರ ಮುಂದಿಟ್ಟಿದ್ದಾರೆ. ಜರ್ಮನಿಯ ಚಾನ್ಸಲರ್ ಅಂಗೇಲಾ ಮಾರ್ಕಲ್, ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೋನ್ಯಾರೋ ಕೂಡ ಇದೇ ಹಾದಿ ತುಳಿದಿದ್ದಾರೆ. ಅತ್ಯಂತ ಗಂಭೀರ ಸ್ಥಿತಿ ತಲುಪಿರುವ ಇಟಲಿಯ ಪ್ರಧಾನಿ ಜಿಉಸೆಪ್ಪೆ ಕೋನ್ಟೆ ಕಾಲಕಾಲಕ್ಕೆ ಜನರ ಮುಂದೆ ಬರುತ್ತಿದ್ದಾರೆ. ಸದ್ಯದ ಚಿತ್ರಣದ ಬಗ್ಗೆ ಮತ್ತು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಜಾಗತಿಕ ನಾಯಕರು ತಿಳಿಸಿಕೊಟ್ಟಿದ್ದಾರೆ. ಆದರೆ ಮೋದಿ ಇದೇ ಮಾರ್ಚ್ ೧೯ನೇ ತಾರೀಖು ‘ಜನ ಹೇಗಿರಬೇಕು? ಎಂದು ಹೇಳಿದರೇ ವಿನಃ ತಮ್ಮ ಸರ್ಕಾರ ಏನು ಮಾಡಿದೆ ಎಂದು ವಿವರಿಸಲಿಲ್ಲ. ಇವತ್ತಾದರೂ ವಿವರಣೆ ನೀಡಬಹುದು, ಆ ಮೂಲಕ ಆತಂಕಗೊಂಡಿರುವ ಜನರಲ್ಲಿ ವಿಶ್ವಾಸ ತುಂಬಬಹುದು ಎಂಬ ನಿರೀಕ್ಷೆಗಳಿವೆ.
ನಿರೀಕ್ಷೆ 7
ಜನ ಮೊದಲನೆಯದಾಗಿ ಕರೋನಾ ಬಗ್ಗೆ ಹೆದರಿದ್ದಾರೆ. ಸದ್ಯ ಸಿಗುತ್ತಿರುವುದೆಲ್ಲ ಅಪೂರ್ಣ ಮಾಹಿತಿಗಳು. ಇದರಿಂದ ಮತ್ತೂ ಆತಂಕದ ವಾತಾವರಣ ನಿರ್ಮಾಣವಾಗುತ್ತಿದೆ. ವೈಯಕ್ತಿಕವಾಗಿ ಬಹಳ ಒಳ್ಳೆಯವರು ಎನ್ನಲಾಗುವ ಕೇಂದ್ರ ಆರೋಗ್ಯ ಮಂತ್ರಿ ಡಾ. ಹರ್ಷವರ್ದನ್ ಅವರು ಈ ಸಂಕಷ್ಟದ ಕಾಲದಲ್ಲಿ ಕೆಲಸ ಮಾಡುತ್ತಿರುವುದು ಸಾಲದು ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಸೋಂಕು ಹರಡುವುದನ್ನು ತಡೆಯಲು, ಸೋಂಕು ಪತ್ತೆಯಾಗಿರುವವರ ಚಿಕಿತ್ಸೆಗೆ, ಕೌರಂಟೈನ್ ಹೋಮ್ ನಿರ್ಮಾಣಕ್ಕೆ, ವೆಂಟಿಲೇಟರ್‌ಗಳಿಗೆ, ಕರೋನಾ ನಾ ಸೋಂಕು ಪತ್ತೆಹಿಡಿಯುವ ಯಂತ್ರಗಳ ಖರೀದಿ ಮತ್ತು ಉತ್ಪತ್ತಿಗೆ ಏನೇನು ಕ್ರಮ ಕೈಗೊಂಡಿದೆ? ರಾಜ್ಯ ಸರ್ಕಾರಗಳನ್ನು ಹೇಗೆ ಅಣಿಗೊಳಿಸುತ್ತಿದೆ ಎಂಬ ಮಾಹಿತಿ ಹಂಚಿಕೊಳ್ಳಬಹುದು ಎಂಬ ನಿರೀಕ್ಷೆಗಳಿವೆ.
ನಿರೀಕ್ಷೆ 8
ಮೋದಿಯವರೇ ಈ ವಿಷಮ ಸ್ಥಿತಿಯನ್ನು ಯುದ್ಧಕಾಲ ಎಂದು ವ್ಯಾಖ್ಯಾನಿಸಿರುವುದರಿಂದ ತಮ್ಮ ಸರ್ಕಾರ ಇಂಥ ದುರ್ಗಮ ಹಾದಿಯನ್ನು ಯಾವ ರೀತಿ ಹಾದುಹೋಗಲಿದೆ ಎಂಬುದನ್ನು ತಿಳಿಸಬಹುದು. ಅದಕ್ಕಾಗಿ ಏನೇನು ತಯಾರಿ ಮಾಡಿಕೊಳ್ಳಲಾಗಿದೆ ಎಂಬುದನ್ನು ಹೇಳಬಹುದು. ಎಲ್ಲಾ ಹೇಳಿ ಜನ ಕೂಡ ಯಾವ ರೀತಿಯಲ್ಲಿ ಸಿದ್ದರಾಗಬೇಕು ಎಂಬ ಸುಳಿವು ನೀಡಬಹುದು ಎಂಬ ನಿರೀಕ್ಷೆಗಳಿವೆ.
ನಿರೀಕ್ಷೆ 9
ಕಡೆಯದಾಗಿ ಮಾರ್ಚ್ ೨೨ರ ಜನತಾ ಕರ್ಫ್ಯೂನಲ್ಲಿ ಜನ ಮನೆಬಿಟ್ಟು ಹೊರಗೆ ಬಂದಿರಲಿಲ್ಲ. ಆದರೆ ಮೋದಿ ಚಪ್ಪಾಳೆ ತಟ್ಟಲು ಕರೆ ಕೊಟ್ಟಿದ್ದರಿಂದ ಸಂಜೆ ಗುಂಪುಗುಂಪಾಗಿ ಜನ ಸಂಭ್ರಮಾಚರಣೆ ಮಾಡಿ ಇಡೀ ಉದ್ದೇಶವನ್ನೇ ಮಣ್ಣುಪಾಲು ಮಾಡಿದ್ದರು. ಇಲ್ಲಿ ಜನರ ತಪ್ಪು ಮಾತ್ರ ಇಲ್ಲ. ಆ ಹಂತದಲ್ಲ ಜನತಾ ಕರ್ಫ್ಯೂ ಅಗತ್ಯವಿತ್ತೇ ವಿನಃ ಚಪ್ಪಾಳೆಯ ಅಗತ್ಯ ಇರಲಿಲ್ಲ. ಚಪ್ಪಾಳೆ ತಟ್ಟುವುದರಿಂದ ವೈಜ್ಞಾನಿಕವಾಗಿ ಕರೋನಾವನ್ನು ತಡೆಗಟ್ಟುವುದಾಗಲಿ ಅಥವಾ ಮಾನಸಿಕವಾಗಿ ಸ್ಥೈರ್ಯವಂತರನ್ನಾಗಿ ಮಾಡಲು ಸಾಧ್ಯ ಇಲ್ಲದಿರುವುದರಿಂದ ಅಂತಹ ಅನಗತ್ಯವನ್ನು ಸೃಷ್ಟಿಸಲಾರರು. ಈ ಬಾರಿ ಬಹಳ ಪ್ರಬುದ್ಧವಾಗಿ, ಗಂಭೀರತೆಯಿಂದ ಮಾತನಾಡಬಹುದು ಎಂಬ ನಿರೀಕ್ಷೆಗಳಿವೆ.