ಇತ್ತೀಚಿನ ತಿಂಗಳುಗಳಲ್ಲಿ ಕೆಟ್ಟ ಸುದ್ದಿಗಳಿಗೆ ಯಾವುದೇ ಕೊರತೆ ಇಲ್ಲ ಎನ್ನುವಂತಾಗಿದೆ. 370ನೇ ವಿಧಿ ರದ್ದುಪಡಿಸಿದ ನಂತರ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಆದ ಬೆಳವಣಿಗೆಗಳು, ಎನ್ ಆರ್ ಸಿ ಪ್ರಕ್ರಿಯೆ ನಡೆದ ಅಸ್ಸಾಂನಲ್ಲಿ ಭುಗಿಲೆದ್ದ ಅಸಮಾಧಾನ- ಇವೆಲ್ಲಾ ಆತಂಕಕಾರಿ ಘಟನೆಗಳು. ಆದರೆ ಬಹುತೇಕ ಭಾರತೀಯರಿಗೆ ಕಾಶ್ಮೀರ ಮತ್ತು ಅಸ್ಸಾ ರಾಜ್ಯಗಳಲ್ಲಿ ನಡೆಯುತ್ತಿರುವ ಘಟನೆಗಳು ಇನ್ನೂ ‘ದೂರದ’ ವಿಷಯಗಳಾಗೇ ಕಂಡುಬರುತ್ತಿವೆ. ಆದ್ದರಿಂದಲೇ ಕಾಶ್ಮೀರದ ದುರಂತ ಮತ್ತು ಅಸ್ಸಾಂನಲ್ಲಿನ ಅಶಾಂತಿ ನಮ್ಮನ್ನು ಕಾಡುವುದಿಲ್ಲ. ಈ ಎರಡೂ ರಾಜ್ಯಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಕೆಲವೇ ಪದಗಳಲ್ಲಿ ಅನುಕಂಪ ವ್ಯಕ್ತಪಡಿಸುವ ಮೂಲಕ ನಿರ್ಲಕ್ಷಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಹೆಚ್ಚು ಓದಿದ ಸ್ಟೋರಿಗಳು
ಕುಸಿಯುತ್ತಿರುವ ಆರ್ಥಿಕತೆ, ನಿರುದ್ಯೋಗ, ಹಿಂಸೆ, ಅತ್ಯಾಚಾರ ಮತ್ತು ಕೊಲೆ, ಗಗನಕ್ಕೇರುತ್ತಿರುವ ಬೆಲೆಗಳು ನಮ್ಮನ್ನು ಚಿಂತೆಗೀಡು ಮಾಡಿರುವ ಇನ್ನಿತರೆ ಸಂಗತಿಗಳಾಗಿವೆ. ಆದರೆ ಎಲ್ಲದಕ್ಕಿಂತ ಅಪಾಯಕಾರಿ ಬೆಳವಣಿಗೆ ಎಂದರೆ, ವಿರೋಧ ಪಕ್ಷಗಳ ಅಸ್ತಿತ್ವವೇ ಇಲ್ಲದಂತಾಗುತ್ತಿರುವುದು. ಈ ಸ್ಥಿತಿಯು ಆಳುವ ಸರ್ಕಾರವು ತನಗೆ ಬೇಕಾದಂತೆ ವರ್ತಿಸಲು ಎಡೆಮಾಡಿಕೊಡುತ್ತಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದು ವಿನಾಶಕಾರಿ ದುಃಸ್ವಪ್ನದ ಆರಂಭ ಎಂದೇ ಹೇಳಬೇಕಾಗುತ್ತದೆ. ಸಂಸತ್ತಿನಲ್ಲಿ ವಿಪಕ್ಷಗಳು ಈ ಕುರಿತು ದೊಡ್ಡದಾಗಿ ದನಿ ಎತ್ತಿದರೂ ಸಂಖ್ಯಾಬಲದ ಕೊರತೆಯಿಂದಾಗಿ ಆಸಹಾಯಕವಾಗಿವೆ. ನಿರೀಕ್ಷೆಯಂತೆ ಪೌರತ್ವ ತಿದ್ದುಪಡಿ ಮಸೂದೆಯು ಸಂಸತ್ತಿನ ಉಭಯಸದನಗಳಲ್ಲೂ ಅನುಮೋದನೆಗೊಂಡು, ರಾಷ್ಟ್ರಪತಿಯವರ ಅಂಕಿತವನ್ನೂ ಹಾಕಿಸಿಕೊಂಡು ಕಾಯ್ದೆಯಾಗಿ ಜಾರಿಗೊಂಡಿದೆ. ಆದರೆ ಸಿಎಎ ಮತ್ತು ಎನ್ಆರ್ ಸಿ ವಿರುದ್ಧ ಇದ್ದಕ್ಕಿದ್ದಂತೆ ಪ್ರತಿಭಟನೆಗಳು ಬುಗಿಲೆದ್ದಿದ್ದು ಮಾತ್ರ ಅನಿರೀಕ್ಷಿತ. ಅದರಲ್ಲೂ ಆಶ್ಚರ್ಯಕರ ಸಂಗತಿ ಎಂದರೆ, ಯುವಜನರು ಪ್ರತಿಭಟನೆ ಆರಂಭಿಸಿರುವುದು. ಇಂದಿನ ಯುವಜನರಿಗೆ ತಮ್ಮ ಆಸೆ, ಆಕಾಂಕ್ಷೆಗಳು, ಆಧುನಿಕ ಸಲಕರಣೆಗಳು, ಯಶಸ್ಸು ಮತ್ತು ಉತ್ತಮ ಜೀವನದ ಕನಸು ಬಿಟ್ಟರೆ ಬೇರೇನೂ ಬೇಕಾಗಿಲ್ಲ ಎಂಬುದಾಗಿ ನಾವು ಆಲೋಚಿಸುತ್ತಿದ್ದೆವು. ಆದರೆ ನಮ್ಮ ಅಭಿಪ್ರಾಯ ಸುಳ್ಳು ಎಂಬುದನ್ನು ಸಾಬೀತುಪಡಿಸಲೋ ಎಂಬಂತೆ ವಿದ್ಯಾರ್ಥಿಗಳು ಒಟ್ಟಾಗಿ ಬೀದಿಗಳಿದರು, ರಸ್ತೆ ತಡೆ ಮಾಡಿದರು, ಘೋಷಣೆ ಕೂಗಿದರು ಹಾಗೂ ತಾವೇಕೆ ಪ್ರತಿಭಟಿಸುತ್ತಿದ್ದೇವೆ ಎಂಬುದನ್ನು ಜಗತ್ತಿಗೆ ಸಾರುವ ಬ್ಯಾನರ್ ಗಳು ಮತ್ತು ಭಿತ್ತಿ ಫಲಕಗಳನ್ನು ಹಿಡಿದು ಒಟ್ಟಿಗೆ ಸಾಗಿದರು.

ಅವರು ಗಾಂಧಿ, ಅಂಬೇಡ್ಕರ್ ಮತ್ತು ಭಾರತದ ಸಂವಿಧಾನದ ಕುರಿತು ಆಡಿದ ಮಾತುಗಳನ್ನು ನಾವು ಅಪನಂಬಿಕೆಯಿಂದಲೇ ಕೇಳಿದೆವು. ಏಕೆಂದರೆ ಇಂದಿನ ವಿದ್ಯಾರ್ಥಿಗಳಿಗೆ ಇದಾವುದೂ ಬೇಕಾಗಿಲ್ಲ ಎಂಬುದಾಗಿ ಭಾವಿಸಿದ್ದವರಲ್ಲವೆ ನಾವು. “ನಾವು ವಿಭಜನೆಗೊಳ್ಳುವುದಿಲ್ಲ”, “ಅವರು ನಮ್ಮನ್ನು ವಿಭಜಿಸಲು ಸಾಧ್ಯವಿಲ್ಲ”, “ಇದು ನಮ್ಮ ದೇಶ” ಎಂಬ ಘೋಷಣೆಗಳನ್ನು ಕೇಳಿದ ನಮಗೆ, ಯುವಜನರು ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಿದ್ದಾರೆ ಎಂಬ ವಾಸ್ತವದ ಅರಿವುಂಟಾಗಿದೆ.
ವಿದ್ಯಾರ್ಥಿ, ಯುವಜನರು ಆರಂಭಿಸಿರುವ ಈ ಆಂದೋಲನವು ಯಶ ಕಾಣುವುದೋ, ಹಂತಹಂತವಾಗಿ ಕ್ಷೀಣಿಸುವುದೋ, ಕೆಟ್ಟ ಹಿತಾಸಕ್ತಿಗಳ ಕೈಗೆ ಸಿಲುಕಿ ಹಿಂಸೆಯಿಂದ ಕಳಂಕಗೊಳ್ಳುವುದೋ, ಇದೊಂದು ಐತಿಹಾಸಿಕ ಕಾಲಘಟ್ಟವೋ, ಅಥವಾ ಈ ಆಂದೋಲನವನ್ನು ಯಶಸ್ವಿಯಾಗಿ ದಮನ ಮಾಡಲಾಗುವುದೋ ಕಾಲವೇ ಉತ್ತರಿಸ ಬೇಕು. ಜನರ ನೆನಪಿನ ಶಕ್ತಿಯು ವಯೋವೃದ್ಧರ ನೆನಪಿನ ಶಕ್ತಿಯಷ್ಟೇ ಕ್ಷಣಿಕವಾದುದು. “ಮಾನವರಿಗೆ ಮರಣ ತಪ್ಪಿದ್ದಲ್ಲ”, ಅದೇ ರೀತಿ “ಆಲೋಚನೆಗಳಿಗೆ” ಮತ್ತು “ಆಂದೋಲನಗಳಿಗೆ” ಅಂತ್ಯ ಇದ್ದೇ ಇರುತ್ತದೆ. ಆದರೆ ಬೆಂಕಿ ಆರಿದರೂ ಕೆಂಡ ಹೊಗೆಯಾಡುತ್ತಿರುತ್ತದೆ, ಇಂತಹ ಕಾಲದಲ್ಲಿ ಅದ್ಭುತ ಸಂಗತಿಗಳು ಘಟಿಸಿದವು ಎಂಬುದನ್ನು ನಮಗೆ ನೆನಪಿಸುತ್ತದೆ.
ಈ ಆಂದೋಲನದ ಮೂಲಕ ಗಾಂಧಿ ಮತ್ತೆ ನಮ್ಮ ನಡುವೆ ಬಂದಿದ್ದು ಅತ್ಯಂತ ಅದ್ಭುತ ಮತ್ತು ವರ್ಣಿಸಲಾಗದ ಸಂಗತಿಗಳಲ್ಲೊಂದು. ಪೋಸ್ಟರ್ ಮತ್ತು ಬ್ಯಾನರ್ ಗಳಲ್ಲಿ ಗಾಂಧಿಯ ಭಾವಚಿತ್ರಗಳಲ್ಲದೆ, ಅವರ ಸಂದೇಶಗಳು ಕಾಣಿಸಿಕೊಂಡವು. ಜೊತೆಗೆ ಭಾರತ ಕುರಿತಾದ ಗಾಂಧೀಜಿಯ ಕಲ್ಪನೆಯು ಸ್ಪಷ್ಟಗೊಂಡಿತು. ಎಲ್ಲಾ ಸಮುದಾಯಗಳು, ವಿಶೇಷವಾಗಿ ಮುಸ್ಲಿಮರು ಮತ್ತು ಹಿಂದುಗಳು ಶಾಂತಿ ಮತ್ತು ಸೌಹಾರ್ದತೆಯಿಂದ ಒಟ್ಟಾಗಿ ಬಾಳಬೇಕು ಎಂಬ ಭಾರತದ ಮೂಲ ಉದ್ದೇಶ ಸ್ಪುಟಗೊಂಡಿತು. ಯಾವ ಉದ್ದೇಶಕ್ಕಾಗಿ ಗಾಂಧೀಜಿ ಬದುಕಿದರೋ ಮತ್ತು ಅದಕ್ಕಾಗಿ ಪ್ರಾಣ ತೆತ್ತರೋ, ಆ ಉದ್ದೇಶ ಮತ್ತೆ ಈ ಯುವ ಪ್ರತಿಭಟನಾಕಾರರಿಂದ ಮುನ್ನೆಲೆಗೆ ಬಂದಿತು.

ಭಾರತದ ಸ್ವಾತಂತ್ರ್ಯಕ್ಕಾಗಿ ದಶಕಗಳ ಕಾಲ ಹೋರಾಡಿದ್ದ ಗಾಂಧೀಜಿಯು ಎಲ್ಲಾ ರೀತಿಯ ಸ್ವಾತಂತ್ರ್ಯ ಸಂಭ್ರಮಾಚರಣೆಗಳಿಂದ ದೂರ ಉಳಿದಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಅಗತ್ಯ. ಭಾರತಕ್ಕೆ ಸ್ವಾತಂತ್ರ್ಯ ದೊರೆತ ದಿನ ಗಾಂಧೀಜಿ ಪೂರ್ವ ಬಂಗಾಳದಲ್ಲಿದ್ದರು. ಕೋಮು ಹಿಂಸೆಗೆ ಬಲಿಯಾಗಿದ್ದ ಜನರ ಕಣ್ಣೀರು ಒರೆಸುವ ಪ್ರಯತ್ನ ನಡೆಸುತ್ತಿದ್ದರು. ಕೋಮು ಹತ್ಯೆಗಳಲ್ಲಿ ತೊಡಗಿದ್ದ ಜನರ ಹೃದಯ ಪರಿವರ್ತನೆಗೆ ಶ್ರಮಿಸುತ್ತಿದ್ದರು. ಗಾಂಧೀಜಿ ಸಹ ರಾಮರಾಜ್ಯ ಅಂದರೆ ಪರಿಪೂರ್ಣ ರಾಜ್ಯ ಬಯಸುತ್ತಿದ್ದರು. ಭವ್ಯ ರಾಮಮಂದಿರವನ್ನಲ್ಲ ಎಂಬುದನ್ನು ನಾವು ನೆನಪಿಡಬೇಕಾದ ಅಗತ್ಯವಿದೆ.
ಈ ಆಂದೋಲನದ ಮೂಲಕ ಅಂಬೇಡ್ಕರ್ ಸಹ ವಾಪಸ್ ಬಂದರು. ಕೊಳಚೆ ಪ್ರದೇಶಗಳ ಹೊರಭಾಗದಲ್ಲಿ ಮಾತ್ರ ಕಂಡುಬರುತ್ತಿದ್ದ ಅವರ ಚಿತ್ರಗಳು ಆಂದೋಲನದ ಭಾಗವಾದವು. ಅಂಬೇಡ್ಕರ್ ನಮಗೆ “ಸುಂದರ ಸಂವಿಧಾನ’ ನೀಡಿದ ವ್ಯಕ್ತಿ ಎಂಬುದಾಗಿ ವಿದ್ಯಾರ್ಥಿಗಳು ಬಣ್ಣಿಸಿದರು. ಜಾತಿ ಶ್ರೇಣೀಕರಣ ವ್ಯವಸ್ಥೆಯಿಂದಾಗಿ ಹಿಂದುತ್ವವು ಜನರಿಗೆ ಮಾಡಿರುವ ಅನ್ಯಾಯವನ್ನು ಸರಿಪಡಿಸಲು ಅಂಬೇಡ್ಕರ್ ತಮ್ಮ ಜೀವಮಾನ ಪೂರ್ತಿ ಶ್ರಮಿಸಿದವರು. ಧರ್ಮದ ಹೆಸರಲ್ಲಿ ಮಹಿಳೆಯರ ಮೇಲಾಗುತ್ತಿದ್ದ ಹಕ್ಕುಗಳ ದಮನವನ್ನು ತಡೆಯಲು ರೂಪಿಸಿದ್ದ ಹಿಂದು ಕೋಡ್ ಬಿಲ್ ಅನ್ನು ಸರ್ಕಾರವು ಇದ್ದಕ್ಕಿದ್ದಂತೆ ಕೈಬಿಟ್ಟಿದ್ದನ್ನು ಪ್ರತಿಭಟಿಸಿ ಅಂಬೇಡ್ಕರ್ ಅವರು ಕಾನೂನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದವರು. ಹಿಂದು ಕೋಡ್ ಬಿಲ್ ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ ಎಂಬುದಾಗಿ ಪ್ರಧಾನಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಆದರೆ ಅಂಬೇಡ್ಕರ್ ಅವರ ಸಮಾನತೆಯ ಉದ್ದೇಶವು ಇಂತಹ ಹೇಡಿತನವನ್ನು ಸಹಿಸುತ್ತಿರಲಿಲ್ಲ. ಹೌದು, ನಮಗೆ ನಿಜಕ್ಕೂ ಈಗ ಅಂಬೇಡ್ಕರ್ ಪ್ರಸ್ತುತ.

ಈ ಆಂದೋಲನದಿಂದಾಗಿ ಸಂವಿಧಾನ ಸಹ ನ್ಯಾಯಾಲಯಗಳಿಂದ, ವಕೀಲರು ಮತ್ತು ನ್ಯಾಯಾಧೀಶರ ಕೈಗಳಿಂದ ಹೊರಗೆ ಬಂದಿದೆ. ಸಂವಿಧಾನ ನಮಗೆ ಹಕ್ಕುಗಳನ್ನು ನೀಡಿದೆ, ಅವುಗಳನ್ನು ಸುಲಭವಾಗಿ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂಬ ಸತ್ಯ ಪ್ರತಿಭಟನಾಕಾರರಿಗೆ ಅರ್ಥವಾಗಿದೆ. ಸಂವಿಧಾನದ 14, 15 ಮತ್ತು 21 ನೇ ವಿಧಿಗಳ ಕುರಿತು ಅವರು ಮಾತನಾಡಲಾರಂಭಿಸಿದ್ದಾರೆ. ನಿಮ್ಮ ಹಕ್ಕುಗಳನ್ನು ಪಡೆಯಲು ಇರುವ ಮೊದಲ ಹೆಜ್ಜೆ ಎಂದರೆ, ಆ ಹಕ್ಕುಗಳ ಕುರಿತು ತಿಳಿದುಕೊಳ್ಳುವುದು.
“ಜಾತ್ಯತೀತ” ಎಂಬ ಪದವೂ ಮತ್ತೆ ಮುಂಚೂಣಿಗೆ ಬಂದಿದೆ. ಸಂವಿಧಾನದ ಪ್ರಸ್ತಾವನೆಯಲ್ಲಿ ಪರಿಚಯಿಸಲಾಗಿರುವ ಈ ಪದವು ನಮ್ಮ ದೇಶದ ಚೌಕಟ್ಟಿನ ಅಂಗವಾಗಿದೆ. ಆದರೆ ರಾಜಕಾರಣಿಗಳು ಈ ಪದವನ್ನು ತಪ್ಪಾಗಿ ಬಳಕೆ ಮಾಡಿಕೊಂಡು ಬರುತ್ತಲೇ ಇದ್ದಾರೆ. ಈ ಪದವನ್ನು ತಿರಸ್ಕಾರಕ್ಕೊಳಗಾಗಿಸಲಾಗಿದೆ ಮತ್ತು ಅಣಕಿಸಲಾಗುತ್ತಿದೆ. ಬಹುಧರ್ಮಗಳ ಈ ದೇಶಕ್ಕೆ ಅತ್ಯಗತ್ಯವಾಗಿರುವ ಈ ಪದದ ವಿಶೇಷ ಅರ್ಥವನ್ನು ನಾವೀಗ ಮರುಕಂಡುಕೊಳ್ಳುತ್ತಿರುವಂತೆ ಕಾಣುತ್ತಿದೆ. ‘ಜಾತ್ಯತೀತ’ ಎಂದರೆ ಪದಕೋಶ ನೀಡುವ ‘ಧರ್ಮ ನಿರಪೇಕ್ಷತೆ’ ಅಲ್ಲ. ಎಲ್ಲಾ ಧರ್ಮಗಳನ್ನು ಒಳಗೊಳ್ಳುವ, ಅಂದರೆ ಎಲ್ಲಾ ಧರ್ಮಗಳ ಸಮಾನತೆಯ ಅರ್ಥ ನಮಗೆ ಬೇಕಾಗಿದೆ.
ತಾವು ಬಯಸಿದ್ದನ್ನು ಮಾಡದೇ ಇರುವವರನ್ನು ದೇಶದ್ರೋಹಿ ಎಂದು ದೂಷಿಸುವ ಮತ್ತು ಬೆದರಿಸುವ ಸುಳ್ಳು ದೇಶಭಕ್ತಿಗೆ ವಿರುದ್ಧವಾಗಿ ನಿಜವಾದ ದೇಶಭಕ್ತಿ ಮತ್ತೆ ವ್ಯಕ್ತವಾಗುತ್ತಿದೆ. ಎಲ್ಲಾ ಭಾರತೀಯರು ಸಮಾನರಾಗಿರುವ ಈ ದೇಶದಲ್ಲಿ ದ್ವೇಷವನ್ನು ಧಿಕ್ಕರಿಸುವ ಮತ್ತು ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಆಲೋಚನೆಯಲ್ಲಿ ನಂಬಿಕೆ ಇಡುವುದೇ ನಿಜವಾದ ದೇಶಭಕ್ತಿ.
ಕೆಲವು ಚಿತ್ರಗಳು ಕಣ್ಮುಂದೆ ಹಾಗೇ ಉಳಿಯಲಿವೆ. ಗ್ರಂಥಾಲಯದಲ್ಲಿ ಪೊಲೀಸರು ವಿದ್ಯಾರ್ಥಿಗಳನ್ನು ಅಟ್ಟಾಡಿಸಿ ಹೊಡೆದು, ಗ್ರಂಥಾಲಯದ ಗಾಜಿನ ಕಪಾಟುಗಳು ಮತ್ತು ಗ್ರಂಥಗಳನ್ನು ಹಾಳುಗೆಡುವಿದ ನೋವಿನ ದೃಶ್ಯ ನಮ್ಮನ್ನು ಕಾಡಲಿದೆ. ಜೊತೆಗೆ ನಮ್ಮ ತಲೆಯನ್ನು ಹೆಮ್ಮೆಯಿಂದ ಎತ್ತುವಂತೆ ಮಾಡಿರುವ ಚಿತ್ರಗಳೂ ಇವೆ. ಯುವ ವಿದ್ಯಾರ್ಥಿನಿಯರ ಗುಂಪೊಂದು ತಮ್ಮ ಪುರುಷ ಸಹಪಾಠಿಯನ್ನು ಪೊಲೀಸರ ಲಾಠಿ ಏಟಿನಿಂದ ತಪ್ಪಿಸಲು ಧೈರ್ಯವಾಗಿ ಪೊಲೀಸರೊಂದಿಗೆ ಜಗಳಕ್ಕೆ ಬಿದ್ದಿದ್ದು, ‘ನೀನು ಯಾವ ಸಂಘಟನೆಯವನು’ ಎಂದು ಯುವಕನೊಬ್ಬನನ್ನು ಕೇಳಿದಾಗ, ಕೊರಳ ಸುತ್ತ ರಾಷ್ಟ್ರಧ್ವಜವನ್ನು ಹೊದ್ದಿದ್ದ ಆತ ‘ನನ್ನ ದೇಶವೇ ನನ್ನ ಸಂಘಟನೆ’ ಎಂದುತ್ತರಿಸಿದ್ದು, ‘ನಾನು ಕ್ರಿಶ್ಚಿಯನ್, ನನ್ನ ಗಂಡ ಹಿಂದು ಮತ್ತು ನಮ್ಮ ಮಕ್ಕಳು ಭಾರತೀಯರು’ ಎಂಬುದಾಗಿ ಪ್ರತಿಭಟನೆಯಲ್ಲಿ ತನ್ನ ಮಗಳೊಂದಿಗೆ ಭಾಗವಹಿಸಿದ್ದ ಮಹಿಳೆಯೊಬ್ಬಳು ಹೇಳಿದ್ದು ಆಶಾದಾಯಕ ಚಿತ್ರಗಳು.
ಭಾರತದ ಪ್ರತಿ ಪ್ರಜೆಗೆ ಸಂವಿಧಾನವು ನೀಡಿರುವ ಸಮಾನತೆಯ ಹಕ್ಕಿಗೆ ಅಪಾಯ ತರುವ ಕಾನೂನಿನ ವಿರುದ್ಧದ ಹೋರಾಟದಲ್ಲಿ ಯಾವುದೇ ರಾಜಕೀಯ ಪಕ್ಷವನ್ನು ಮೀರಿಸುವಂತೆ ಯುವಜನರು ಪ್ರಮುಖ ಪಾತ್ರ ವಹಿಸುತ್ತಿರುವುದು ಮಹತ್ವದ್ದಾಗಿದೆ. ಭಾರತದ ಮೂಲತತ್ವವಾದ ಜಾತ್ಯತೀತ ಪ್ರಜಾಪ್ರಭುತ್ವನ್ನು ಮರಳಿ ತರಲು ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ಶ್ರಮಿಸುತ್ತಿದ್ದಾರೆ. ಅವರು ಹೋರಾಡುತ್ತಿರುವುದು ಸರಿಯಾಗಿಯೇ ಇದೆ ಮತ್ತು ಇದು ಈಗ ಅವರ ಪ್ರಪಂಚ.