”Dear Customer, As per the Government instructions, the internet services have been temporarily stopped in your area”
ಇದು ಈಗ ಮಂಗಳೂರಿಗರ ಮೊಬೈಲ್‌ಗೆ ಬರುತ್ತಿರುವ ಸಂದೇಶ. ಎಲ್ಲ ಟೆಲಿಕಾಂ ಕಂಪನಿಗಳು ಇಂಟರ್ನೆಟ್ ಸೇವೆಯನ್ನು ಸರ್ಕಾರದ ಆದೇಶದ ಮೇರೆಗೆ ಸ್ಥಗಿತಗೊಳಿಸಿವೆ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕ ನೋಂದಣಿ ಕಾನೂನು ವಿರೋಧಿಸಿ ನಡೆಸಿದ ಪ್ರತಿಭಟನೆ ಹಿಂಸಾ ಸ್ವರೂಪ ಪಡೆಯಿತು. ಕಾನೂನು ಸುವ್ಯವಸ್ಥೆ ಕಾಪಾಡುವ ಕಾರಣಕ್ಕೆ ಭಾರತ ಸರ್ಕಾರ ಇಂಟರ್ನೆಟ್ ಬಂದ್ ಮಾಡಿಸಿದೆ.
ಇದು ಮೊದಲೇನಲ್ಲ. ಕಾಶ್ಮೀರದ ವಿಶೇಷ ಸ್ಥಾನವನ್ನು ಹಿಂಪಡೆದ ಸಂದರ್ಭದಲ್ಲಿ ನಡೆದ ಪ್ರತಿಭಟನೆ ಹತ್ತಿಕ್ಕಲು ಕೇಂದ್ರ ಸರ್ಕಾರ ಅಲ್ಲಿನ ಇಂಟರ್ನೆಟ್ ಕತ್ತರಿಸಿತು. ಕಾಶ್ಮೀರದಲ್ಲಿ ಕಳೆದ ನೂರ ನಲವತ್ತು ದಿನಗಳಲ್ಲಿ ಇಂಟರ್ನೆಟ್ ಸೇವೆ ಇಲ್ಲ. ಪೌರತ್ವ ಕಾಯ್ದೆ ಜಾರಿಯಿಂದ ಆರಂಭವಾದ ಪ್ರತಿಭಟನೆ ನಿಯಂತ್ರಿಸಲು ಡಿಸೆಂಬರ್ 10ರಂದು ತ್ರಿಪುರದಲ್ಲಿ, ಡಿಸೆಂಬರ್ 11ರಂದು ಅಸ್ಸಾಮ್‌ನಲ್ಲಿ, ಡಿಸೆಂಬರ್ 12ರಂದು ಮೇಘಾಲಯ, ಅರುಣಾಚಲ ಪ್ರದೇಶಗಳಲ್ಲಿ 24 ಗಂಟೆಗಳ ಅವಧಿಗೆ ಇಂಟರ್ನೆಟ್ ಬಂದ್ ಮಾಡಲಾಯಿತು.
ಉತ್ತರ ಪ್ರದೇಶದ ಅಲಿಗಢ ವಿವಿ ಪ್ರದೇಶದಲ್ಲಿ, ದೆಹಲಿಯಲ್ಲೂ ಇದು ಮುಂದುವರೆದು, ಈಗ ಮಂಗಳೂರಿನಲ್ಲಿ ಎರಡು ದಿನಗಳ ಅವಧಿಗೆ ಇಂಟರ್ನೆಟ್ ಬಂದ್ ಮಾಡಲಾಗಿದೆ.
ಇಂಟರ್ನೆಟ್ ಶಟ್‌ಡೌನ್ ಟ್ರ್ಯಾಕರ್ ನೀಡುವ ಅಂಕಿ ಅಂಶಗಳ ಪ್ರಕಾರ 2019 ವರ್ಷವೊಂದರಲ್ಲೇ ಭಾರತದಲ್ಲಿ 91 ಇಂಟರ್ನೆಟ್ ಸ್ಥಗಿತ ಪ್ರಕರಣಗಳು ವರದಿಯಾಗಿವೆ. ಇದು ವಿಶ್ವದಲ್ಲೇ ಅತಿ ಹೆಚ್ಚು ಸಂಖ್ಯೆಯ ಪ್ರಕರಣಗಳಿವು.
ಇಂಟರ್ನೆಟ್ ಸಮಾನ ಆಲೋಚನೆ ವ್ಯಕ್ತಿಗಳು ಸೇರಲು, ವಿಚಾರಗಳನ್ನು ಹಂಚಿಕೊಳ್ಳಲು ಮತ್ತು ಅಭಿವ್ಯಕ್ತಿಗೆ ದೊಡ್ಡ ಬಲ ತುಂಬಿದ ತಂತ್ರಜ್ಞಾನ. ಸಾಮಾಜಿಕ ಜಾಲತಾಣಗಳು ಇನ್ನಷ್ಟು ಪರಿಣಾಮಕಾರಿಯಾಗಿ ನೆರವಾದವು. ಯಾವುದೇ ಅನ್ಯಾಯ, ಅವ್ಯವಸ್ಥೆ, ಅಕ್ರಮದ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ದೊಡ್ಡ ಪ್ರಭಾವ ಬೀರುತ್ತವೆ. ಈ ರೀತಿಯಾಗಿ ವ್ಯಕ್ತವಾಗುವ ಪ್ರತಿರೋಧವನ್ನು ಹತ್ತಿಕ್ಕುವುದಕ್ಕೆ ಇಂಟರ್ನೆಟ್ ಸೇವೆಯನ್ನೇ ಸ್ಥಗಿತಗೊಳಿಸುವುದು ಸುಲಭದ ದಾರಿ ಎಂಬುದನ್ನು ಸರ್ಕಾರ ಕಂಡುಕೊಂಡಿದೆ.

ಕಳೆದ ವರ್ಷ ಭಾರತದಲ್ಲಿ 134 ಬಾರಿ ಇಂರ್ಟನೆಟ್ ಸೇವೆ ಸ್ಥಗಿತಗೊಳಿಸಲಾಗಿದ್ದು, ಈ ವರ್ಷದಲ್ಲಿ ಇದುವರೆಗು 91 ಬಾರಿ ಇಂಟರ್ನೆಟ್ ಸೇವೆಗೆ ಕತ್ತರಿ ಹಾಕಿದ ಉದಾಹರಣೆಗಳಿವೆ.
ಭಾರತ ಸರ್ಕಾರ ಇಂಟರ್ನೆಟ್ ಸ್ಥಗಿತಗೊಳಿಸುವ ಕ್ರಮವನ್ನು ಪದೇಪದೇ ಅನುಸರಿಸುತ್ತಿದ್ದು, ಜಗತ್ತಿನ ಇಂಟರ್ನೆಟ್ ಶಟ್‌ಡೌನ್ ರಾಜಧಾನಿ ಎಂದು ಜಾಗತಿಕ ಟೀಕೆಗೆ ಗುರಿಯಾಗುತ್ತಿದೆ.
ಕಳೆದ ಆರು ತಿಂಗಳುಗಳಿಂದ ಭಾರತ ಸರ್ಕಾರ ಅನುಸರಿಸುತ್ತಿರುವ ಈ ವಿಧಾನವನ್ನು ಜಾಗತಿಕ ಪತ್ರಿಕೆಗಳು ಟೀಕಿಸಿದ್ದು, ಸರ್ವಾಧಿಕಾರಿ ಹಾದಿಯನ್ನು ತುಳಿಯುತ್ತಿರುವ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿವೆ.
ಇಂಟರ್ನೆಟ್ ಕೂಡ ಮೂಲಭೂತ ಹಕ್ಕೆ!
ಪ್ರಸ್ತುತ ಎರಡನೆಯ ಅವಧಿಗೆ ಅಧಿಕಾರ ಹಿಡಿದಿರುವ ಬಿಜೆಪಿ ನೇತೃತ್ವ ಸರ್ಕಾರವೇ ಅತ್ಯಂತ ವ್ಯಾಪಕವಾಗಿ ಹಾಗೂ ಕ್ಷಿಪ್ರವಾಗಿ ಡಿಜಿಟಲ್ ಸೇವೆಯನ್ನು ಎಲ್ಲೆಡೆಗೂ ಜಾರಿ ತರುವುದಕ್ಕೆ ಟೊಂಕ ಕಟ್ಟಿ ಕೆಲಸ ಮಾಡಿದೆ. ಈ ರೀತಿಯಾಗಿ ದೇಶದ ಪ್ರತಿಯೊಬ್ಬ ನಾಗರಿಕ ಇಂಟರ್ನೆಟ್ ಮೂಲಕವೇ ವ್ಯವಹರಿಸುವಂತಹ ಅನಿವಾರ್ಯತೆಯನ್ನು ಸೃಷ್ಟಿಸಿದ್ದಾರೆ. ಈಗ ಇಂಟರ್ನೆಟ್ ಅನ್ನು ನಿರ್ಬಂಧಿಸಿರುವುದು ನಿಜಕ್ಕೂ ವ್ಯಂಗ್ಯ.
ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಮಂಡಳಿ 2016ರಲ್ಲಿ ಸಂಗೀಕರಿಸಿದ ನಿರ್ಣಯವೊಂದರ ಪ್ರಕಾರ, ” ಆನ್‌ಲೈನ್ ಮೂಲಕ ಮಾಹಿತಿ ಪಡೆಯುವ ಅಥವಾ ಹಂಚಿಕೊಳ್ಳಲು, ಉದ್ದೇಶಪೂರ್ವಕವಾಗಿ ತಡೆಯುವ ಅಥವಾ ವ್ಯತ್ಯಯಗೊಳಿಸಲು ನಡೆಸುವ ಯಾವುದೇ ಪ್ರಯತ್ನ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಉಲ್ಲಂಘನೆ” ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಿದಂತೆ ಎಂದು ವ್ಯಾಖ್ಯಾನಿಸಿ ಮಾನವ ಹಕ್ಕುಗಳ ಮಂಡಳಿ ಇಂಟರ್ನೆಟ್ ಮೂಲಭೂತ ಅಗತ್ಯ ಎಂಬುದನ್ನು ಎತ್ತಿಹಿಡಿಯುತ್ತದೆ. ಆದರೆ ಭಾರತದ ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ವಿರುದ್ಧವಾದ ಈ ಇಂಟರ್ನೆಟ್ ನಿರ್ಬಂಧದ ನಡೆ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಡಿಜಿಟಲ್ ಇಂಡಿಯಾದಲ್ಲಿ ಇಂಟರ್ನೆಟ್ಟೇ ಇಲ್ಲ!
ಮೂರು ವರ್ಷಗಳ ಹಿಂದೆ ನೋಟ್‌ಬ್ಯಾನ್ ನಡೆಯಿತು. ಕಪ್ಪು ಹಣವನ್ನು ನಿಯಂತ್ರಿಸುವುದಕ್ಕೆಂದು ಈ ಕ್ರಮ ಅನುಸರಿಸುವುದಾಗಿ ಕೇಂದ್ರ ಸರ್ಕಾರ ಸಮಜಾಯಿಷಿ ನೀಡಿತ್ತು. ಅದೇ ವೇಳೆ ಸರ್ಕಾರ ಪ್ರಚಾರ ಮಾಡಿದ್ದು ಕ್ಯಾಷ್‌ಲೆಸ್ ಎಕನಾಮಿ, ಡಿಜಿಟಲ್ ಎಕನಾಮಿಯನ್ನು. ಅಂದರೆ ನಗದು ರಹಿತ, ಡಿಜಿಟಲ್ ಆರ್ಥಿಕತೆ.
ಇದಾದ ಬಳಿಕ ಸ್ವತಃ ಪ್ರಧಾನ ಮಂತ್ರಿಯವರು ಪೇಟಿಯಂ ಎಂಬ ಖಾಸಗಿ ಸಂಸ್ಥೆಯೊಂದರ ಡಿಜಿಟಲ್ ವ್ಯಾಲೆಟ್ ಅನ್ನು ಪ್ರಚಾರದ ಜಾಹೀರಾತಿನಲ್ಲಿ ಕಾಣಿಸಿಕೊಂಡರು. ನಂತರದ ದಿನಗಳಲ್ಲಿ ಫೋನ್ ಪೆ, ಗೂಗಲ್ ಪೇ ಸೇರಿದಂತೆ ಹಲವು ಡಿಜಿಟಲ್ ಹಣಕಾಸಿನ ವಹಿವಾಟು ಮಾಡುವ ಮೊಬೈಲ್ ಅಪ್ಲಿಕೇಷನ್‌ಗಳು ಹೆಚ್ಚು ಬಳಕೆಗೆ ಬಂದವು.
ಸರ್ಕಾರ ಸ್ವತಃ ಡಿಜಿಟಲ್ ಲಾಕರ್, ಪಿಎಫ್ ಸೇವೆ ಬಹುತೇಕ ಸರ್ಕಾರಿ ಸೇವೆಗಳನ್ನು ಕಡ್ಡಾಯ ಡಿಜಿಟಲ್ ಸ್ವರೂಪಕ್ಕೆ ರೂಪಾಂತರಿಸಿದೆ. ಇನ್ನು ಖಾಸಗಿಯಾಗಿ, ಎಲ್ಲ ರೀತಿಯ ಖರೀದಿ, ವಾಹನ ಸೇವೆ, ಬ್ಯಾಂಕಿಂಗ್ ವ್ಯವಹಾರಗಳು ಇತ್ಯಾದಿಗಳಿಗೂ ಇಂಟರ್ನೆಟ್ ಅವಲಂಬಿಸಿದ್ದೇವೆ. ಹೀಗಿರುವಾಗ ಇಂಟರ್ನೆಟ್ ಇಲ್ಲದ ದಿನಗಳು ಕೇವಲ ಸೇವೆಯಲ್ಲಿ ವ್ಯತ್ಯಾಸ ಉಂಟು ಮಾಡುವುದಲ್ಲ, ಈ ಸೇವೆಗಳೊಂದಿಗಿನ ಆರ್ಥಿಕತೆಗೂ ಭಾರಿ ಪೆಟ್ಟು ಬೀಳುತ್ತದೆ.
ಇಂಡಿಯನ್ ಕೌನ್ಸಿಲ್ ಫಾರ್ ರೀಸರ್ಚ್ ಆನ್ ಇಂಟರ್‌ನ್ಯಾಷನಲ್ ಎಕಾನಿಮಿಕ್ ರಿಲೇಷನ್ಸ್ ವರದಿಯ ಪ್ರಕಾರ 201 2ರಿಂದ 2017ರ ಅವಧಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ ಪ್ರಕರಣಗಳಿಂದ ನಮ್ಮ ಜಿಡಿಪಿಯ 0.4 ರಿಂದ 2%ರಷ್ಟು ಅಂದರೆ ಸುಮಾರು 3 ಬಿಲಿಯನ್ ಡಾಲರ್‌ಗಳಷ್ಟು ನಷ್ಟವಾಗಿದೆ.
ಕೃಪೆ: ಟೆಕ್ ಕನ್ನಡ