ಕರೋನಾ ವೈರಸ್ ಹರಡುತ್ತಿರುವ ವೇಗ ನೋಡಿ ಇಡಿ ವಿಶ್ವವೇ ತಲೆ ಮೇಲೆ ಕೈ ಹೊತ್ತು ಕುಳಿತಿದೆ. ಭಾರತದಲ್ಲೂ ಕರೋನಾ ಹರಡುವಿಕೆ ಮಟ್ಟ ಜಾಸ್ತಿಯಾಗಿದ್ದು, ಔಷಧಿ ಇಲ್ಲದ ಕಾಯಿಲೆಗೆ ಮದ್ದು ಸಿಗದೆ ಕಂಗಾಲಾಗಿದೆ. ಈ ನಡುವೆ ಕರೋನಾ ಸಂಕಷ್ಟದ ಸಮಯವನ್ನು ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಿ ಎಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಸಿಎಎಸ್‌ಸಿ ( ದಿ ಸೆಂಟ್ರಲ್ ಫಾರ್ ಅಕೌಂಟಬಿಲಿಟಿ & ಸಿಸ್ಟಮ್ ಚೇಂಜ್ ) ಸಂಘಟನೆ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಕೆ ಮಾಡಿದೆ. ಸಂವಿಧಾನದ 360ನೇ ವಿಧಿ ಅನ್ವಯ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಅವಕಾಶ ಇದೆ. ಹೀಗಾಗಿ ಕೇಂದ್ರ ಆರ್ಥಿಕ ತುರ್ತು ಪರಿಸ್ಥಿತಿ ಎಂದು ಘೋಷಿಸುವಂತೆ ಸೂಚನೆ ಕೊಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಈಗಾಗಲೇ ಕರೋನಾ ವೈರಸ್ ಸೋಂಕಿನ ಭೀತಿಯಿಂದ ಸುಪ್ರೀಂಕೋರ್ಟ್ ವಿಚಾರಣೆ ನಿಲ್ಲಿಸಲಾಗಿದೆ. ಅವಶ್ಯಕತೆ ಇದ್ದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಮಾಡಲಾಗ್ತಿದೆ. ಹಾಗಾಗಿ ಈ ಅರ್ಜಿಯನ್ನೂ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕವೇ ವಿಚಾರಣೆ ನಡೆಸಿ ತುರ್ತು ಆದೇಶ ಮಾಡುವಂತೆ ಮನವಿ ಮಾಡಲಾಗಿದೆ. ಆದರೆ ಏನಿದು ಫೈನಾನ್ಸಿಯಲ್ ಎಮೆರ್ಜೆನ್ಸಿ? ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.
ತುರ್ತು ಪರಿಸ್ಥಿತಿ ಯಾವಾಗ ಹೇಗೆ ಹಾಕ್ತಾರೆ..?
ನಮ್ಮ ಭಾರತದ ಸಂವಿಧಾನದ ಅಡಿಯಲ್ಲಿ ಮೂರು ರೀತಿಯ ಎಮರ್ಜೆನ್ಸಿ ಘೋಷಿಸಲು ಅವಕಾಶ ಕಲ್ಪಿಸಲಾಗಿದೆ. ಮೊದಲನೆಯದು ರಾಷ್ಟ್ರೀಯ ತುರ್ತು ಪರಿಸ್ಥಿತಿ, ಆರ್ಟಿಕಲ್ 352 ನೇ ವಿಧಿ ಅನ್ವಯ ಯುದ್ಧ, ಆಕ್ರಮಣ, ಮಿಲಿಟರಿ ದಂಗೆ ರೀತಿಯ ಘಟನೆಗಳು ನಡೆದಾಗ ದೇಶ ರಕ್ಷಣೆಗಾಗಿ ಮಾಡಲಾಗುತ್ತದೆ.
ಘೋಷಣೆ ಮಾಡಿದ ಒಂದು ತಿಂಗಳ ಒಳಗಾಗಿ ಸಂಸತ್ತಿನ ಉಭಯ ಸದನಗಳ ಮೂರನೆ ಎರಡರಷ್ಟು ಮಂದಿಯಿಂದ ಒಪ್ಪಿಗೆ ಪಡೆಯುವುದು ಅನಿವಾರ್ಯ. ಎರಡನೆಯದು ರಾಜ್ಯ ಸರ್ಕಾರವೊಂದು ಆಡಳಿತ ನಡೆಸಲು ವಿಫಲವಾದಾಗ ಅಥವಾ ರಾಜ್ಯವು ಕೇಂದ್ರ ಸರ್ಕಾರದ ನಿರ್ದೇಶನ ಪಾಲಿಸದೆ ಇದ್ದಾಗ, ಅಥವಾ ಸಂವಿಧಾನಿಕ ಬಿಕ್ಕಟ್ಟು ಉಂಟಾದ ಸಂದೃಭದಲ್ಲಿ ರಾಜ್ಯಪಾಲರು ರಾಷ್ಟ್ರಪತಿಗೆ ರಾಜ್ಯದ ಪರಿಸ್ಥಿತಿ ಬಗ್ಗೆ ವಿವರಣೆ ಕೊಡುತ್ತಾರೆ. ವರದಿ ಪರಿಶೀಲಿಸಿದ ಬಳಿಕ ರಾಷ್ಟ್ರಪತಿ ಅವರು ರಾಜ್ಯದ ಮೇಲೆ 356 ನೇ ವಿಧಿ ಅನ್ವಯ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುತ್ತಿದ್ದಾರೆ. ಅಂತಿಮವಾಗಿ ಆರ್ಥಿಕ ತುರ್ತು ಪರಿಸ್ಥಿತಿ. ರಾಷ್ಟ್ರ ಅಥವಾ ರಾಷ್ಟ್ರದ ಯಾವುದೇ ಭಾಗದಲ್ಲಿ ಆರ್ಥಿಕ ಬಿಕ್ಕಟ್ಟು ಅಥವಾ ಭದ್ರತೆಗೆ ಧಕ್ಕೆಯುಂಟಾದಾಗ ರಾಷ್ಟ್ರಪತಿಯವರು 360ನೇ ವಿಧಿ ಅನುಗುಣವಾಗಿ ಆರ್ಥಿಕ ತುರ್ತು ಪರಿಸ್ಥಿತಿ ಹೇರಬಹುದು.
ಆರ್ಥಿಕ ತುರ್ತು ಪರಿಸ್ಥಿತಿ ಪರಿಣಾಮಗಳು?
ಒಂದು ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಉಂಟಾದಾಗ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗುತ್ತದೆ. ಒಮ್ಮೆ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ ಆದರೆ, ಮುಂದಿನ 2 ತಿಂಗಳೊಳಗೆ ಸಂಸತ್ತಿನಲ್ಲಿ ಒಪ್ಪಿಗೆ ಪಡೆಯಬೇಕು. ಅದಾದ ಬಳಿಕ ರಾಜ್ಯ ಸರ್ಕಾರ ಯಾವುದೇ ಆರ್ಥಿಕ ವ್ಯವಹಾರ ನಡೆಸಲು ಶಕ್ತವಾಗುವುದಿಲ್ಲ. ಎಲ್ಲಾ ವ್ಯವಹಾರ ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಹೋಗಲಿದೆ. ಕೇಂದ್ರ ಸರ್ಕಾರಕ್ಕೆ ಅವಶ್ಯಕ ಎಂದರೆ ಸರ್ಕಾರಿ ನೌಕರರ ವೇತನವನ್ನು ಕಡಿತಗೊಳಿಸಬಹುದು. ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಾಧೀಶರ ವೇತನವನ್ನೂ ಕಡಿತಗೊಳಿಸಬಹುದು. ಸರ್ಕಾರದ ವೆಚ್ಚದಲ್ಲಿ ಕಡಿತ ಮಾಡುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಬಹುದು. ಈ ರೀತಿ ಭಾರತದಲ್ಲಿ ಈಗಾಗಲೇ ಮೂರು ಭಾರಿ 1962, 1971, 1975ರಲ್ಲಿ ರಾಷ್ಟ್ರಿಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಅಲ್ಲಿಂದ ಈಚೆಗೆ ಆರ್ಥಿಕ ತುರ್ತು ಪರಿಸ್ಥಿತಿ ಹೇರಿಕೆ ಮಾಡಲಾಗಿತ್ತು. ಪ್ರಧಾನಮಂತ್ರಿ ಹಾಗೂ ಇತರೆ ಕ್ಯಾಬಿನೆಟ್ ಮಂತ್ರಿಗಳು ಲಿಖಿತ ರೂಪದಲ್ಲಿ ತುರ್ತು ಪರಿಸ್ಥಿತಿಗೆ ಶಿಫಾರಸ್ಸು ಮಾಡಿದಾಗ ಮಾತ್ರ ರಾಷ್ಟ್ರಪತಿ ತುರ್ತು ಪರಿಸ್ಥಿತಿಯನ್ನು ಘೋಷಿಸಬೇಕು ಎನ್ನಲಾಗಿದೆ,
ಇದೀಗ ಕರೋನಾ ಸೋಂಕಿನ ಹೆಸರಲ್ಲಿ ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಲಾಕ್‌ಡೌನ್ ಹೆಸರಿನಲ್ಲಿ ಪೊಲೀಸರು ಜನರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಇದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆ ಆಗಲಿದೆ. ಸ್ವತಂತ್ರ ಬಂದ ಬಳಿಕ ಇದೇ ಮೊದಲ ಬಾರಿಗೆ ದಿನ ಪತ್ರಿಕೆಗಳು ಸಿಗುತ್ತಿಲ್ಲ. ಈಗ ದೇಶದಲ್ಲಿ ನಿಜ ಅರ್ಥದ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ. ಕೂಡಲೇ ಕೇಂದ್ರ ಸರ್ಕಾರ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸುವಂತೆ ಸೂಚಿಸಿ ಎಂದು ದಿ ಸೆಂಟ್ರಲ್ ಫಾರ್ ಅಕೌಂಟಬಿಲಿಟಿ & ಸಿಸ್ಟಮ್ ಚೇಂಜ್ ಪರ ವಕೀಲರು ಮನವಿ ಮಾಡಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಜನಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ನಿರ್ದೇಶಿಸಿ, ವಿದ್ಯುತ್, ನೀರು, ಗ್ಯಾಸ್, ತೆರಿಗೆಗಳನ್ನು ಮುಕ್ತಗೊಳಿಸುವಂತೆ ಸೂಚಿಸಿ ಎಂದು ಸಿಎಎಎಸ್‌ದ್ ಪರವಾಗಿ ವಕೀಲ ವಿರಾಗ್ ಗುಪ್ತಾ ಎಂಬುವವರಿಂದ ಸುಪ್ರೀಂ ಕೋರ್ಟಿಗೆ ಅರ್ಜಿಸಲ್ಲಿಕೆ ಮಾಡಿದ್ದಾರೆ.
ಈಗಾಗಲೇ ಹಣಕಾಸು ಕ್ರೋಢೀಕರಣ ಕಷ್ಟವಾಗಿದ್ದು, ಅನಿವಾರ್ಯವಾಗಿ ಆರ್ಥಿಕ ಪರಿಸ್ಥಿತಿ ಘೋಷಣೆ ಮಾಡುತ್ತಾರೆ. ಕರೋನಾ ವೈರಸ್ ಹೆದುರಿಸಲು ಸಾಕಷ್ಟು ಸಮಸ್ಯೆ ಆಗುತ್ತಿದೆ ಎಂದು ಆಂಗ್ಲ ಮಾಧ್ಯಮ ವೆಬ್‌ಸೈಟ್ ಒಂದು ವರದಿ ಮಾಡಿತ್ತು. ಆ ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀರಾರಾಮನ್ ನಿರಾಕರಿಸಿದ್ರು, ಇದೀಗ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದ್ದು, ಕೋರ್ಟ್ ಏನು ಹೇಳುತ್ತದೆ ಎಂದು ಕಾದು ನೋಡಬೇಕಿದೆ.