ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ. ಜನರ ಖರೀದಿ ಶಕ್ತಿ ಕುಂದುತ್ತಿದೆ. ಒಟ್ಟು ನಿವ್ವಳ ಉತ್ಪನ್ನ (ಜಿಡಿಪಿ) ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ತ್ವರಿತಗತಿಯಲ್ಲಿ ಕುಸಿಯುತ್ತಿದೆ. ಒಟ್ಟಾರೆ ದೇಶದ ಆರ್ಥಿಕತೆ ಹಿಂಜರಿತದತ್ತ ದಾಪುಗಾಲು ಹಾಕುತ್ತಿದೆ. ಇಷ್ಟಾದರೂ ಷೇರುಪೇಟೆ ಆಕಾಶದತ್ತ ಜಿಗಿಯುತ್ತಿದೆ. ಭಾರತೀಯ ಷೇರುಮಾರುಕಟ್ಟೆಯ ಬೃಹತ್ 30 ಕಂಪನಿಗಳನ್ನೊಳಗೊಂಡ ಬಾಂಬೆ ಸ್ಟಾಕ್ ಎಕ್ಸ್ಚೆಂಜ್ ನ (ಬಿಎಸ್ಇ) ಸಂವೇದಿ ಸೂಚ್ಯಂಕ- ಸೆನ್ಸೆಕ್ಸ್ ಸರ್ವಕಾಲಿಕ ಗರಿಷ್ಠಮಟ್ಟಕ್ಕೇರಿದೆ. ಮತ್ತು ಕಳೆದೊಂದು ತಿಂಗಳಿಂದ ಹೊಸ ಹೊಸ ದಾಖಲೆ ಮಾಡುತ್ತಾ ಏರುತ್ತಲೇ ಇದೆ. ಸೋಮವಾರದ ಆರಂಭ ವಹಿವಾಟಿನಲ್ಲಿ 529 ಅಂಶಗಳಷ್ಟು ಜಿಗಿದ ಸೆನ್ಸೆಕ್ಸ್ 40,931 ಜಿಗಿದು 41,000ದ ಗುರಿಮುಟ್ಟುವ ಹಾದಿಯಲ್ಲಿತ್ತು. ಈ ವಾರಾಂತ್ಯದೊಳಗೆ 41000ದ ಗಡಿದಾಟಿದರೂ ಅಚ್ಚರಿಯಿಲ್ಲ!
ನ್ಯಾಷನಲ್ ಸ್ಟಾಕ್ ಎಕ್ಸ್ಚೆಂಜ್ (ಎನ್ಎಸ್ಇ)ನ ಬೃಹತ್ 50 ಕಂಪನಿಗಳನ್ನೊಳಗೊಂಡ ಸಂವೇದಿ ಸೂಚ್ಯಂಕ ನಿಫ್ಟಿ ಸಹ ಸರ್ವಕಾಲಿಕ ಗರಿಷ್ಠಮಟ್ಟದ ದಾಖಲೆಯತ್ತ ದಾಪುಗಾಲು ಹಾಕುತ್ತಿದೆ. ಸೋಮವಾರದ ವಹಿವಾಟಿನಲ್ಲಿ 159.40 ಅಂಶಗಳಷ್ಟು ಜಿಗಿದ ನಿಫ್ಟಿ ದಿನದ ವಹಿವಾಟಿನಲ್ಲಿ 12,084.50 ಅಂಶಗಳಿಗೇರಿತ್ತು. ಸರ್ವಕಾಲಿಕ ಗರಿಷ್ಠಮಟ್ಟ ಮುಟ್ಟಲು 20 ಅಂಶಗಳಷ್ಟೇ ಬಾಕಿ ಇದೆ. ಈ ವಾರಾಂತ್ಯದ ವಹಿವಾಟಿನಲ್ಲಿ ನಿಫ್ಟಿ ಮತ್ತೊಂದು ಸರ್ವಕಾಲಿಕ ಗರಿಷ್ಠ ದಾಖಲೆ ಮಾಡುವ ಸಾಧ್ಯತೆ ಇದೆ.
ಬಿಎಸ್ಇ ಮತ್ತು ಎನ್ಎಸ್ಇಯಲ್ಲಿ ಹಲವು ವಲಯವಾರು ಮತ್ತು ಮಾರುಕಟ್ಟೆ ಬಂಡವಾಳಾಧಾರಿತ ಹಲವು ಸೂಚ್ಯಂಕಗಳಿವೆ. ಆದರೆ, ಸೆನ್ಸೆಕ್ಸ್ ಮತ್ತು ನಿಫ್ಟಿ ಅತಿಹೆಚ್ಚು ಮಾರುಕಟ್ಟೆ ಬಂಡವಾಳವನ್ನೊಳಗೊಂಡ ವಿವಿಧ ವಲಯಗಳ ಕಂಪನಿಗಳ ಷೇರುಗಳ ಸೂಚ್ಯಂಕಗಳಾಗಿವೆ. ಹಾಗಾಗಿ ಈ ಎರಡೂ ಸೂಚ್ಯಂಕಗಳು ಭಾರತದ ಷೇರುಮಾರುಕಟ್ಟೆಯ ಪ್ರಾತಿನಿಧಿಕ ಸೂಚ್ಯಂಕಗಳಾಗಿವೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಳಿತವನ್ನಾಧಿರಿಸಿಯೇ ಬಹುತೇಕ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೂಡಿಕೆ ಮಾಡುತ್ತಾರೆ ಇಲ್ಲವೇ ಹೂಡಿಕೆ ಹಿಂಪಡೆಯುತ್ತಾರೆ.
ಹಾಗಾದರೆ ಷೇರು ಮಾರುಕಟ್ಟೆ ಸೂಚ್ಯಂಕಗಳು ದೇಶದ ಆರ್ಥಿಕ ಪರಿಸ್ಥಿತಿಯನ್ನು ಪ್ರತಿನಿಧಿಸುತ್ತವೆಯೇ? ಭಾರತದ ಷೇರುಪೇಟೆ ಸೂಚ್ಯಂಕಗಳು ಸರ್ವಕಾಲಿಕ ಗರಿಷ್ಠಮಟ್ಟದಲ್ಲಿ ಇದ್ದರೂ ದೇಶದ ಆರ್ಥಿಕತೆ ಏಕೆ ಕುಸಿಯುತ್ತಿದೆ. ಮತ್ತು ಆರ್ಥಿಕ ಹಿಂಜರಿತದತ್ತ ದಾಪುಗಾಲು ಹಾಕುತ್ತಿರುವುದೇಕೆ?
ಸಾಮಾನ್ಯವಾಗಿ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಷೇರುಪೇಟೆ ಸೂಚ್ಯಂಕಗಳು ಬಹುತೇಕ ಆಯಾ ದೇಶದ ಆರ್ಥಿಕತೆಯನ್ನು ಪ್ರತಿಬಿಂಬಿಸುತ್ತವೆ. ಏಕೆಂದರೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಷೇರುಪೇಟೆಗಳಲ್ಲಿನ ಹೂಡಿಕೆಯು ಆಯಾ ದೇಶಗಳ ಜಿಡಿಪಿಯ ಶೇ.20ಕ್ಕಿಂತಲೂ ಹೆಚ್ಚಿರುತ್ತದೆ. ಉದಾಹರಣೆಗೆ ಅಮೆರಿಕಾದಲ್ಲಿ ಷೇರುಪೇಟೆಯಲ್ಲಿನ ಹೂಡಿಕೆಯ ಆ ದೇಶದ ಜಿಡಿಪಿಯ ಶೇ.22.25ರಷ್ಟಿದೆ. ಈ ಪ್ರಮಾಣವು ಏರಿಳಿಯುತ್ತಲೇ ಇರುತ್ತದೆ. 2008ರಲ್ಲಾದ ಜಾಗತಿಕ ಆರ್ಥಿಕ ಹಿಂಜರಿತದ ನಂತರದಲ್ಲಿ ಈ ಪ್ರಮಾಣವು ಶೇ.17.8ಕ್ಕೆ ಕುಸಿದಿತ್ತು. ಇದು ಅತಿ ಕನಿಷ್ಠ ಪ್ರಮಾಣ. www.theglobaleconomy.com ಅಂಕಿ ಅಂಶಗಳ ಪ್ರಕಾರ ಪ್ರಸ್ತುತ ಅಮೆರಿಕದಲ್ಲಿನ ಷೇರುಪೇಟೆಯಲ್ಲಿನ ಹೂಡಿಕೆಯ ಜಿಡಿಪಿಯ ಶೇ.22ರಷ್ಟಿದೆ. ಹೀಗಾಗಿ ಅಭಿವೃದ್ಧಿ ಹೊಂದಿದ ದೇಶದಲ್ಲಿನ ಷೇರುಮಾರುಕಟ್ಟೆಗಳು ಆಯಾ ದೇಶದ ಆರ್ಥಿಕ ಪರಿಸ್ಥಿತಿಯನ್ನು ಪ್ರಾತಿನಿಧಿಕವಾಗಿ ಪ್ರತಿಬಿಂಬಿಸುತ್ತವೆ. ಆದರೆ, ಭಾರತ ಮತ್ತು ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ (ಮಾರುಕಟ್ಟೆ ಪರಿಭಾಷೆಯಲ್ಲಿ ಈ ದೇಶಗಳನ್ನು ಉದಯಿಸುತ್ತಿರುವ ಮಾರುಕಟ್ಟೆ ದೇಶಗಳು ಎನ್ನಲಾಗುತ್ತದೆ) ಷೇರುಪೇಟೆಯಲ್ಲಿ ಹೂಡಿಕೆ ಪ್ರಮಾಣ ಜಿಡಿಪಿಗೆ ಹೋಲಿಸಿದರೆ ತೀರಾ ಅತ್ಯಲ್ಪ ಇರುತ್ತದೆ. ಹೀಗಾಗಿ ಷೇರುಪೇಟೆ ಸೂಚ್ಯಂಕಗಳ ಏರಿಳಿತಗಳು ದೇಶದ ವಾಸ್ತವಿಕ ಆರ್ಥಿಕ ಪರಿಸ್ಥಿತಿಯನ್ನು ಪ್ರತಿಬಿಂಬಿಸುವುದಿಲ್ಲ. ಸಾಮಾನ್ಯವಾಗಿ ಷೇರುಪೇಟೆಯಲ್ಲಿನ ಹೂಡಿಕೆ ವಿಷಯಕ್ಕೆ ಬಂದಾಗ ಜಗತ್ತಿನ ಎಲ್ಲಾ ಹೂಡಿಕೆದಾರರು, ಆರ್ಥಿಕ ವಿಶ್ಲೇಷಕರು ಸಂವೇದಿ ಸೂಚ್ಯಂಕಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ಆದರೆ, ದೇಶದಲ್ಲಿನ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡುವಾಗ ದೇಶದ ಜಿಡಿಪಿ ಮತ್ತು ಆ ದೇಶದ ರುಪಾಯಿ ಮೌಲ್ಯವನ್ನು ಪರಿಗಣಿಸುತ್ತಾರೆ. ವಿದೇಶಿ ಹೂಡಿಕೆದಾರರು ಷೇರುಪೇಟೆಯಲ್ಲಿ ಹೂಡಿಕೆ ಮಾಡುವುದಕ್ಕೂ ದೇಶದ ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ ಹೂಡಿಕೆ ಮಾಡುವುದಕ್ಕೂ ವ್ಯತ್ಯಾಸ ಇರುತ್ತದೆ.
ಹಾಗಾದರೆ ಭಾರತದಲ್ಲಿನ ಷೇರುಪೇಟೆ ಮೇಲಿನ ಹೂಡಿಕೆ ಪ್ರಮಾಣ ಎಷ್ಟಿದೆ? ಸಿಎಲ್ಎಸ್ಎ ಅಂಕಿ ಅಂಶಗಳ ಪ್ರಕಾರ, ಕಳೆದೊಂದು ದಶಕದಲ್ಲಿ ಭಾರತದಲ್ಲಿನ ಷೇರುಪೇಟೆ ಮೇಲಿನ ಹೂಡಿಕೆಯು ಜಿಡಿಪಿಯ ಶೇ.3.5ರಷ್ಟಿದೆ. 2018ರಲ್ಲಿ ಇದು ಶೇ.4.6ರಷ್ಟು ಇತ್ತು. ಈಗಲೂ ಅದು ಶೇ.5ರಷ್ಟನ್ನು ದಾಟಿಲ್ಲ. ಇದು ವರ್ಷದಿಂದ ವರ್ಷಕ್ಕೆ ಏರಿಳಿತ ಕಂಡಿದೆ. 2008 ಜಾಗತಿಕ ಆರ್ಥಿಕ ಕುಸಿತದ ನಂತರ ಶೇ.2.4ಕ್ಕೆ ಕುಸಿದಿತ್ತು.
ಸೂಚ್ಯಂಕಗಳು ಸರ್ವಕಾಲಿಕ ಗರಿಷ್ಠಮಟ್ಟ ಮುಟ್ಟಿದರೂ ಅವು ಭಾರತದ ವಾಸ್ತವಿಕ ಆರ್ಥಿಕ ಪರಿಸ್ಥಿತಿಯನ್ನು ಪ್ರತಿಬಿಂಬಿಸಲಾರವು. ಏಕೆಂದರೆ ಭಾರತದಲ್ಲಿನ ಹೂಡಿಕೆ ಪೈಕಿ ಅತಿ ಕನಿಷ್ಠ ಹೂಡಿಕೆ ಇರುವುದೇ ಷೇರುಪೇಟೆಗಳಲ್ಲಿ. ದೇಶದ ಜಿಡಿಪಿಯ ಶೇ.53.8ರಷ್ಟು ಹೂಡಿಕೆಯು ಸ್ಥಿರಾಸ್ತಿಗಳ ಮೇಲಿದೆ. ನಂತರದ ಸ್ಥಾನ ಬ್ಯಾಂಕುಗಳಲ್ಲಿನ ಠೇವಣಿಗಳ ಮೇಲೆ. ಇದು ಶೇ.15.9ರಷ್ಟಿದೆ. ಭಾರತೀಯ ಅತ್ಯಂತ ಮೆಚ್ಚಿನ ಮತ್ತೊಂದು ಹೂಡಿಕೆ ವಿಧಾನ ಎಂದರೆ ಚಿನ್ನ. ಭಾರತೀಯರ ಚಿನ್ನದ ಮೇಲಿನ ಹೂಡಿಕೆಯು ಜಿಡಿಪಿಯ ಶೇ.11.3ರಷ್ಟಿದೆ. ವಿಮೆಯಲ್ಲಿ ಶೇ.6.1ರಷ್ಟು ಹೂಡಿಕೆ ಮಾಡಿದ್ದರೆ, ಭವಿಷ್ಯ ನಿಧಿಯಲ್ಲಿ (ಪಿಎಫ್) ಶೇ.5.1ರಷ್ಟು ಹೂಡಿಕೆ ಮಾಡಿದ್ದಾರೆ. ಕೊನೆಗೆ ಬರುವುದು ಷೇರುಪೇಟೆ ಮೇಲಿನ ಹೂಡಿಕೆ. ಉಳಿದ ಶೇ.3.1 ನಗದು ರೂಪದಲ್ಲಿದೆ.
2008ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತವಾದಾಗ ಅಭಿವೃದ್ಧಿ ಹೊಂದಿದ ದೇಶಗಳು ತಲ್ಲಣಗೊಂಡಿದ್ದವು. ಅವುಗಳ ಷೇರುಮಾರುಕಟ್ಟೆ ತೀವ್ರವಾಗಿ ಕುಸಿದಿತ್ತು. ಆದರೆ, ಜಾಗತಿಕ ಹಿಂಜಿರಿತ ಪರಿಣಾಮ ಭಾರತದ ಷೇರುಪೇಟೆ ಮೇಲೆ ಗರಿಷ್ಠ ಪ್ರಮಾದಲ್ಲಾದರೂ ಒಟ್ಟಾರೆ ಆರ್ಥಿಕತೆಯ ಮೇಲಿನ ಪರಿಣಾಮವು ಅತ್ಯಂತ ಕನಿಷ್ಠಮಟ್ಟದಲ್ಲಿತ್ತು. ಅದಕ್ಕೆ ಮುಖ್ಯ ಕಾರಣ ಭಾರತದಲ್ಲಿ ಷೇರುಪೇಟೆಗಳ ಮೇಲಿನ ಹೂಡಿಕೆಯು ಅತ್ಯಲ್ಪ ಇದ್ದದ್ದು ಮತ್ತು ದೇಶೀಯ ಹೂಡಿಕೆ ಮತ್ತು ಆರ್ಥಿಕತೆಯು ಸ್ಥಿರವಾಗಿದ್ದು. ಜಾಗತಿಕ ಹಿಂಜರಿತವಾದ ಹೊತ್ತಿನಲ್ಲಿ ದೇಶೀಯ ಉಳಿತಾಯ ಪ್ರಮಾಣವು ಶೇ.25ಕ್ಕಿಂತಲೂ ಹೆಚ್ಚಿತ್ತು. ಆದರೆ, ಆರ್ಥಿಕತೆ ಸ್ಥಿರತೆಯನ್ನು ದೇಶೀಯ ಉಳಿತಾಯ ಪ್ರಮಾಣವು ಪ್ರತಿನಿಧಿಸುತ್ತದೆ. 2011-12ರಲ್ಲಿ ಶೇ.23.6ರಷ್ಟಿದ್ದ ಉಳಿತಾಯ ಪ್ರಮಾಣವು 2014ರಿಂದ ತ್ವರಿತವಾಗಿ ಕುಸಿತ ಕಂಡಿದೆ. ಇದು 2017-18ರ ಸಾಲಿನಲ್ಲಿ ಶೇ.17.2ಕ್ಕೆ ಕುಸಿದಿದೆ. ಇದಕ್ಕೆ ವ್ಯತಿರಿಕ್ತವಾಗಿ ಭಾರತೀಯರ ಅಸುರಕ್ಷತಾ ಸಾಲದ ಪ್ರಮಾಣವು ತ್ವರಿತಗತಿಯಲ್ಲಿ ಏರುತ್ತಿದೆ. 2016-17ರಲ್ಲಿ 3.76 ಲಕ್ಷ ಕೋಟಿ ಇದ್ದದ್ದು 2017-18ರಲ್ಲಿ 5.08 ಲಕ್ಷ ಕೋಟಿಗೆ ಏರಿದೆ.
ಜನಸಾಮಾನ್ಯರ ಉಳಿತಾಯವು ತಗ್ಗಿ, ಸಾಲದ ಪ್ರಮಾಣ ಹೆಚ್ಚುತ್ತಿರುವಂತೆಯೇ ಅದಕ್ಕೆ ವ್ಯತಿರಿಕ್ತವಾಗಿ ದೇಶದಲ್ಲಿನ ಶ್ರೀಮಂತರ ಸಂಪತ್ತು ಹೆಚ್ಚುತ್ತಲೇ ಇದೆ. ಪ್ರಸ್ತುತ ಷೇರುಪೇಟೆ ಸೂಚ್ಯಂಕಗಳು ಸರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿರುವುದರ ಜತೆಗೆ ಭಾರತದ ಅತಿದೊಡ್ಡ ಶ್ರೀಮಂತರಾದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಸಂಪತ್ತು ಕಳೆದ ಐದು ವರ್ಷಗಳಲ್ಲಿ ದುಪ್ಪಟ್ಟಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ನ ಮಾರುಕಟ್ಟೆ ಬಂಡವಾಳವು 10 ಲಕ್ಷಕೋಟಿ ಮುಟ್ಟುವತ್ತ ಸಾಗಿದೆ. ಸೋಮವಾರದ ಷೇರುಪೇಟೆ ವಹಿವಾಟು ಮುಕ್ತಾಯಗೊಂಡಾಗ ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಬಂಡವಾಳವು 9,89,352.45 ಕೋಟಿಗೇರಿತ್ತು. ಮೋದಿ ಸರ್ಕಾರದ ಅವಧಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಬಂಡವಾಳವು ಸುಮಾರು ನಾಲ್ಕು ಪಟ್ಟು ಹೆಚ್ಚಳವಾಗಿದೆ. ಪ್ರಧಾನಿ ನರೇಂದ್ರಮೋದಿಗೆ ಆಪ್ತರಾದ ಗೌತಮ್ ಅದಾನಿ ಒಡೆತನದ ಅದಾನಿ ಸಮೂಹದ ಕಂಪನಿಗಳ ಮಾರುಕಟ್ಟೆ ಬಂಡವಾಳವೂ ಎರಡರಿಂದ ಮೂರುಪಟ್ಟು ಹೆಚ್ಚಳವಾಗಿದೆ.
ಇದರರ್ಥ ಷೇರುಪೇಟೆ ಆಕಾಶಕ್ಕೆ ಜಿಗಿದಷ್ಟು ಶ್ರೀಮಂತರು ಮತ್ತು ಶ್ರೀಮಂತರ ಕಂಪನಿಗಳ ಷೇರುದಾರರ ಸಂಪತ್ತು ವೃದ್ಧಿಸುತ್ತದೆ ಹೊರತು ಬಡಪಾಯಿ ಭಾರತೀಯರ ಬಡತನ ನೀಗುವುದಿಲ್ಲ. ನರೇಂದ್ರ ಮೋದಿ ಸರ್ಕಾರವು ಕಾರ್ಪೊರೆಟ್ ತೆರಿಗೆ ಕಡಿತ ಮಾಡಿದ ನಂತರ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಾರೆ. ಏಕೆಂದರೆ ಶ್ರೀಮಂತರಿಗೆ ಕಡಿತ ಮಾಡಿದ ಕಾರ್ಪೊರೆಟ್ ತೆರಿಗೆಯ 1.40 ಲಕ್ಷ ಕೋಟಿ ಹಣದ ಕೊರತೆಯನ್ನು ಪ್ರತಿ ವರ್ಷ ಜನಸಾಮಾನ್ಯರ ಮೇಲೆ ತೆರಿಗೆ ಹೇರಿ ಸರಿದೂಗಿಸಲಿದೆ ಪ್ರಧಾನಿ ನರೇಂದ್ರಮೋದಿ ಸರ್ಕಾರ!