ಆನಂದ ಸಿಂಗ್ ಗೆ ಖಾತೆ ಯಾವುದು ಎಂಬ ಕೂತುಹಲ ಎಲ್ಲರಲ್ಲಿತ್ತು. ಆದರೆ ಅವರಿಗೆ ಅರಣ್ಯ ಖಾತೆ ನೀಡಿದ ಮೇಲೆ ರಾಜ್ಯಾದ್ಯಂತ ಪರಿಸರ ಪ್ರಿಯರು, ರಾಜಕೀಯ ನಾಯಕರು, ವನ್ಯಜೀವಿ ಸಂಶೋಧಕರೆಲ್ಲ ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಮೊದಲೇ ಗಣಿ ಧಣಿ ಯಾದ ಆನಂದ ಸಿಂಗ್ ಅವರಿಗೆ ಈ ಖಾತೆ ಕೊಟ್ಟರೆ ಹಲವರದು ಅರಣ್ಯರೋದನ ಪರಿಸ್ಥಿತಿಯಾಗುತ್ತದೆ ಎಂಬುದು ಸುಳ್ಳಲ್ಲ. ಗಣಿ ಧಣಿಗಳಿಗೆ ಅರಣ್ಯ ಖಾತೆ ಸಚಿವರ ಒಪ್ಪಿಗೆಯೇ ಮುಖ್ಯ, ಯಾವುದೇ ಜಾಗದಲ್ಲಿ ಗಣಿ ಕೆಲಸ ಆರಂಭಿಸ ಬೇಕೆಂದರೆ, ಮೊದಲು ಖನಿಜವನ್ನು ತೆಗೆಯಲು ಅವರು ಅರಣ್ಯ ಇಲಾಖೆಗೆ ಕ್ಲಿಯರನ್ಸ್ ಸರ್ಟಿಫಿಕೇಟ್ ಗೆ ಅಪ್ಲೈ ಮಾಡಬೇಕು. ಇದು ಸಿಗುವುದು ಸುಲಭವಲ್ಲ. ಆದರೆ ಇಂತಹ ಖಾತೆಯನ್ನು ಆನಂದ ಸಿಂಗ್ ಅವರಿಗೆ ಕೊಟ್ಟರೆ ತಾವಲ್ಲದೇ ತಮಗೆ ಗೊತ್ತಿರುವ ಗಣಿ ಉದ್ಯಮಿಗಳಿಗೂ ಅವಕಾಶ ಮಾಡಿಕೊಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ.
ನಿನ್ನೆ ಶುಕ್ರವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಕ್ಕೆ ನೀಡಿದ ಪ್ರತಿಕ್ರಿಯೆ ಹೀಗಿದೆ “ಆನಂದ ಸಿಂಗ್ ಗೆ ಕೊಟ್ಟಿರುವುದು ಅರಣ್ಯ ಖಾತೆ. ಇದರರ್ಥ ಕುರಿ ಕಾಯಲು ತೋಳವನ್ನು ಬಿಟ್ಟಂತೆ. ಇದನ್ನು ನಾವೆಲ್ಲ ಒಪ್ಪೊಕೆ ಸಾಧ್ಯನಾ, ಅವರ ಮೇಲೆ 15 ಕೇಸುಗಳಿವೆ, ಅದೂ ಅರಣ್ಯ ಕಾಯ್ದೆಯಡಿ ಗಂಭೀರ ಆರೋಪ ಎದುರಿಸುತ್ತಿರುವವರನ್ನು ಅದೇ ಖಾತೆ ಸಚಿವರನ್ನಾಗಿ ಹೇಗೆ ನೇಮಕ ಮಾಡಲಾಗುತ್ತದೆ.
ರಾಜ್ಯ ಸರ್ಕಾರಕ್ಕೆ ಮುಜುಗರ
ಈ ಮಾತಂತೂ ಸತ್ಯ. ಅರಣ್ಯ ಖಾತೆಯನ್ನು ಆನಂದ ಸಿಂಗ್ ಅವರಿಗೆ ನೀಡಿದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆಗಳಾದವು. ಪಿ. ಮಹ್ಮಮದ ಅವರ ಕೊಡಲಿ ತಲೆಯ ಚಿತ್ರ ಬಹುತೇಕರ ಡಿಪಿಗಳಲ್ಲಿ ಕಾಣಿಸತೊಡಗಿತು. ಕೆಲವು ಜನ ನಗುವ, ಸಿಟ್ಟಿಗೇಳುವ, ಬಿದ್ದು ಬಿದ್ದು ನಗುವ ಎಮೋಜಿಗಳನ್ನು ಹಾಕಿದರು. ಇದೆಲ್ಲ ಗಮನಿಸುತ್ತಿದ್ದ ಬಿಜೆಪಿ ಐಟಿ ಸೆಲ್ ಸರ್ಕಾರಕ್ಕೆ ಈ ಮಾತು ತಲುಪಿಸಿರಬಹುದು.
ಶನಿವಾರ ಮುಂಜಾನೆ ಹೈಕಮಾಂಡ್ ಕೂಡ ರಾಜ್ಯ ಸರ್ಕಾರದ ಕ್ರಮದ ಮೇಲೆ ಗರಂ ಆಗಿದ್ದು ಆನಂದ ಸಿಂಗ್ ರಿಗೆ ಅರಣ್ಯ ಖಾತೆ ಕೊಟ್ಟಿದ್ದು ಸರಿಯಾದ ಕ್ರಮವಲ್ಲ ಕೂಡಲೇ ಸರಿಪಡಿಸಿಕೊಳ್ಳಿ ಎಂಬ ಆದೇಶವನನ್ನು ಕಳುಹಿಸಿದ್ದಾರಂತೆ.
ಭೂಮಿ ಅತಿಕ್ರಮಣ ಆನಂದ್ ಸಿಂಗ್‌ಗೆ ಸಾಮಾನ್ಯ ವಿಚಾರ!
ಈ ಬಗ್ಗೆ ಆನಂದ ಸಿಂಗ್ ಅವರು ಮಾಧ್ಯಮಗಳಿಗೆ ಹೇಳಿದ್ದು ಎಲ್ಲರ ಹುಬ್ಬೇರಿಸುವಂತಾಗಿದೆ. ಅವರು ಹೇಳಿದ್ದು ಹೀಗೆ, “ವಾಹನ ಇದ್ದ ಮೇಲೆ ಸಂಚಾರ ನಿಯಮ ಉಲ್ಲಂಘನೆ ಸಾಮಾನ್ಯ. ಅದರಂತೆ ನಮ್ಮ ಗಣಿ ಕಂಪೆನಿಯೂ ಸಹ ಉಲ್ಲಂಘನೆ ಮಾಡಿದೆ. ಗಣಿ ಕೆಲಸದಲ್ಲಿ ಅರಣ್ಯ ನಿಯಮ ಉಲ್ಲಂಘನೆ ಸಹಜ” ಎಂದು ಪರೋಕ್ಷವಾಗಿ ತಮ್ಮ ಮೇಲಿನ ಆರೋಪವನ್ನು ಒಪ್ಪಿಕೊಂಡಿದ್ದಾರೆ.
ಅದಕ್ಕೆ ಒಂದಿಷ್ಟು ಸಮಜಾಯಿಷಿ ನೀಡಿದ್ದಾರೆ, “ಪೂರ್ವಜರಿಂದಲೂ ನಮ್ಮ ಕುಟುಂಬ ಗಣಿಗಾರಿಕೆ ಮಾಡುತ್ತಲೇ ಬಂದಿದೆ. ಆದ್ದರಿಂದ ಸಣ್ಣ ಪುಟ್ಟ ಪ್ರಕರಣಗಳು ಇರುತ್ತವೆ. ಈ ಪ್ರಕರಣಗಳಿಂದ ಯಾವುದೇ ತೊಂದರೆಯಾಗುವುದಿಲ್ಲ. ನನಗೆ ಕೊಟ್ಟಿರುವ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ”.
ಏನೇನಿವೆ ಇವರ ಮೇಲಿನ ಆರೋಪಗಳು?
ಆನಂದ ಸಿಂಗ್ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ನಾಮಪತ್ರದಲ್ಲಿನ ಮಾಹಿತಿಯಂತೆ ಗಣಿ ಮತ್ತು ಖನಿಜ ಕಾಯ್ದೆಯ ವಿವಿಧ ಕಲಂಗಳ ಅಡಿ 15 ಪ್ರಕರಣಗಳೂ ಬಾಕಿ ಇವೆ. ಕರ್ನಾಟಕ ಅರಣ್ಯ ಕಾಯ್ದೆಯ ಅಡಿ 11 ಮೊಕದ್ದಮೆಗಳು ಆನಂದ್ ಅವರ ಮೇಲಿವೆ.
ಬಳ್ಳಾರಿಯ ಜಯಪ್ರಕಾಶ ಮೇಟಿ ಅವರ ಪ್ರಕಾರ, “ನಾವು ಮೊದಲಿನಿಂದಲೂ ಇವರ ಆಕ್ರಮ ಗಣಿಗಾರಿಕೆ ಬಗ್ಗೆ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಕಾಡು ಉಳಿಸಿ ಎಂಬ ನಮ್ಮ ಮಾತೂ ಯಾರೂ ಕೇಳಲಿಲ್ಲ. ಹಸಿರು ಗುಡ್ಡಗಳನ್ನು ಬೆತ್ತಲೆಗೊಳಿಸಿ ಇಂದು ಬರಗಾಲ ತಾಂಡವವಾಡುವಂತೆ ಮಾಡಿದ್ದಾರೆ. ಧೂಳಿನಿಂದ ಕಂಗೆಟ್ಟ ಜನ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಇನ್ನು ಇಂತವರಿಗೆ ಅರಣ್ಯ ಖಾತೆ ಕೊಟ್ಟರೆ ಏನಾಗಬಹುದು ಎಂಬುದು ಅನೂಹ್ಯವೇ ಸರಿ”.
ಗದುಗಿನ ಮುತ್ತಣ್ಣ ಕರ್ಕಿಕಟ್ಟಿ, ಸಾಮಾಜಿಕ ಹೋರಾಟಗಾರರು ಹೇಳಿದ್ದು, “ಗುಡ್ಡವನ್ನು ಕರಗಿಸಿ, ಹಸಿರ ನುಂಗಿ, ಖನಿಜ ಮಾರುವ ಇಂತಹ ವ್ಯಾಪಾರಸ್ಥರಿಗೆ ಅರಣ್ಯ ಇಲಾಖೆ ಕೊಟ್ಟರೆ, ಬಿಟ್ಟಾರೆಯೇ, ರಾಜ್ಯದ ಉಳಿದ ಅರಣ್ಯಕ್ಕೂ ಕಣ್ಣು ಹಾಕುತ್ತಾರೆ. ಗುಡ್ಡಗಳನ್ನು ಕಡಿದು ಹಾಕುತ್ತಾರೆ. ತಮ್ಮ ವ್ಯಾಪಾರ ವಿಸ್ತರಿಸಿಕೊಳ್ಳುತ್ತಾರೆ. ಒಟ್ಟಾರೆ ಈ ಖಾತೆ ಮಾತ್ರ ಆನಂದ ಸಿಂಗ್ ರಿಗೆ ನೀಡಬಾರದು. ಇದು ಹೀಗೆ ಮುಂದು ವರೆದರೆ ನಾವೆಲ್ಲ ಬೀದಿಗಿಳಿದು ಪ್ರತಿಭಟನೆ ಮಾಡುತ್ತೇವೆ”.
ಕಪ್ಪತಗುಡ್ಡ ಆಂದೋಲನ ಹೋರಾಟಗಾರರಾದ ಹಾಗೂ ಗದುಗಿನ ಸಾಮಾಜಿಕ ಕಾರ್ಯಕರ್ತರಾದ ಮುತ್ತಣ್ಣ ಭರಡಿ ಪ್ರತಿಕ್ರಿಯಿಸಿದ್ದು ಹೀಗೆ, “ಆನಂದ ಸಿಂಗ್ ಅವರಿಗೆ ಈ ಖಾತೆ ಕೊಟ್ಟಿದ್ದು ಸರಿಯಲ್ಲ. ಅವರ ಮೇಲೆ ಹಲವಾಋಉ ಆಪಾದನೆಗಳಿವೆ. ಅದರಿಂದ ಿನ್ನೂ ಮುಕ್ತರಾಗಿಲ್ಲ. ಅದೇ ಖಾತೆ ಕೊಟ್ಟರೆ ದುರುಪಯೋಗವಾಗುತ್ತೆ. ತಾವುದೇ ರಾಜಕಾರಣಿಗಳಾಗಲಿ ಅಧಿಕಾರ ದುರುಪಯೋಗ ಸಾಮಾನ್ಯವಾಗಿದೆ. ಹಾಗಾಗಿ ಇದು ಅವರಿಗೆ ಕೊಟ್ಟಿದ್ದು ತಪ್ಪು”.
ಇದಕ್ಕೆ ಮುಖ್ಯಮಂತ್ರಿಗಳು ಏನನ್ನುತ್ತಾರೆ? ಯಾವ ರೀತಿ ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳುತ್ತಾರೆ? ಎಂಬುದು ಕುತೂಹಲಕಾರಿ ವಿಷಯ.