ಕೇಂದ್ರ ಸರ್ಕಾರ ದೇಶದ ಮಧ್ಯಮ ದುಡಿಯುವ ವರ್ಗದ ನೌಕರರ ಮೇಲೆ ಕಣ್ಣು ಹಾಕಿದೆ. ತಿಂಗಳಿಗೆ ಅಲ್ಪಸ್ವಲ್ಪ ದುಡಿದು ತಿನ್ನುತ್ತಿದ್ದ ಈ ಶ್ರಮಿಕ ವರ್ಗದಿಂದಲೂ ತೆರಿಗೆ ರೂಪದಲ್ಲಿ ಹಣ ವಸೂಲಿ ಮಾಡಲು ಮುಂದಾಗಿದೆ. ಇದಕ್ಕಾಗಿ ಸರ್ಕಾರ ವಿಧಿಸಿರುವ ಷರತ್ತು ಏನೆಂದರೆ ತಿಂಗಳಿಗೆ 20,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಸಂಬಳ ಪಡೆಯುವ ಎಲ್ಲರೂ ತಮ್ಮ ಪಾನ್ ಮತ್ತು ಆಧಾರ್ ವಿವರಗಳನ್ನು ನೌಕರಿ ನೀಡಿರುವ ಉದ್ಯೋಗದಾತನಿಗೆ ಸಲ್ಲಿಸಬೇಕು. ಒಂದು ವೇಳೆ ಸಲ್ಲಿಸದೇ ಇದ್ದಲ್ಲಿ ಅಥವಾ ಈ ಮಾಹಿತಿಗಳು ಇಲ್ಲದೇ ಇದ್ದಲ್ಲಿ ಶೇ.20 ರಷ್ಟು ಸಂಬಳವನ್ನು ಕಟ್ ಮಾಡಲಾಗುತ್ತದೆ. ಇಂತಹದ್ದೊಂದು ಶಾಕಿಂಗ್ ನೀತಿ ಜಾರಿಗೆ ಬಂದಿದೆ.
ಈ ಮೂಲಕ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜನತೆ ಮೇಲೆ ದಿನಕ್ಕೊಂದು ಕಾನೂನನ್ನು ಜಾರಿ ಮಾಡುತ್ತಲೇ ಬರುತ್ತಿದೆ. ಇದೀಗ ಉದ್ಯೋಗಸ್ಥರ ಮೇಲೆ ಕಣ್ಣಾಕಿರುವ ಸರ್ಕಾರ ನೌಕರರು ತಮ್ಮ ಉದ್ಯೋಗ ನೀಡಿದ ಕಂಪನಿಗೆ ಪಾನ್ ಮತ್ತು ಆಧಾರ್ ವಿವರಗಳನ್ನು ನೀಡದಿದ್ದರೆ ಅವರ ಸಂಬಳದಲ್ಲಿ ಭಾರೀ ಪ್ರಮಾಣದಲ್ಲಿ ದುಡ್ಡನ್ನು ಕಡಿತಗೊಳಿಸಲಾಗುತ್ತದೆ. ಅಂದರೆ, ಶೇಕಡಾ ಟಿಡಿಎಸ್ ಅನ್ನು ಕಡಿತಗೊಳಿಸಲಿದೆ. ಈ ನೀತಿ ಜನವರಿ 16 ರಿಂದ ದೇಶಾದ್ಯಂತ ಜಾರಿಗೆ ಬಂದಿದೆ.
ಈ ಸಂಬಂಧ ಉದ್ಯೋಗದಾತರಿಗೆ ಸುತ್ತೋಲೆ ಕಳುಹಿಸಿರುವ ಆದಾಯ ತೆರಿಗೆ ಇಲಾಖೆಯು ಪಾನ್ ಮತ್ತು ಆಧಾರ್ ವಿವರಗಳನ್ನು ನೀಡದಿರುವ ನೌಕರರ ಸಂಬಳದಲ್ಲಿ ಶೇ.20 ರಷ್ಟು ಕಡಿತ ಮಾಡಿ ಆ ಹಣವನ್ನು ಟಿಡಿಎಸ್ ಆಗಿ ತನಗೆ ಕಳುಹಿಸುವಂತೆ ಸೂಚನೆ ನೀಡಿದೆ.
ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು ಈ ನೀತಿಯನ್ನು ರೂಪಿಸಿದ್ದು, ವಾರ್ಷಿಕ 2.5 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಆದಾಯವಿರುವ ನೌಕರರಿಗೆಲ್ಲರಿಗೂ ಈ ನೀತಿಯನ್ನು ಅನ್ವಯವಾಗುವಂತೆ ಮಾಡಿದೆ. ಅಂದರೆ ತಿಂಗಳಿಗೆ 20000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಸಂಬಳ ಪಡೆಯುವವರು ಕಡ್ಡಾಯವಾಗಿ ತಮ್ಮ ಪಾನ್ ಮತ್ತು ಆಧಾರ್ ವಿವರಗಳನ್ನು ನೀಡಬೇಕಿದೆ.
ಈ ವಿಭಾಗದಲ್ಲಿ ಟಿಡಿಎಸ್ ಪೇಮೆಂಟ್ ಮತ್ತು ಆದಾಯದ ಮೇಲೆ ಕಣ್ಣಿಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ನೀತಿಯನ್ನು ಜಾರಿಗೆ ತಂದಿದೆ. 2018-19 ನೇ ಹಣಕಾಸು ಸಾಲಿನಲ್ಲಿ ಒಟ್ಟು ಸಂಗ್ರಹವಾದ ನೇರ ತೆರಿಗೆಯಲ್ಲಿ ಈ ವಿಭಾಗದಲ್ಲಿ ಶೇ.37 ರಷ್ಟು ಮಾತ್ರ ತೆರಿಗೆ ಸಂಗ್ರಹವಾಗಿತ್ತು. ಈ ಹಿನ್ನೆಲೆಯಲ್ಲಿ ಟಿಡಿಎಸ್ ಸಂಗ್ರಹ ಪ್ರಮಾಣವನ್ನು ಹೆಚ್ಚು ಮಾಡುವುದು ಮತ್ತು ತೆರಿಗೆ ವಂಚಿಸುವುದನ್ನು ತಡೆಗಟ್ಟುವ ಸಲುವಾಗಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 206-ಎಎ ಪ್ರಕಾರ ನೌಕರರು ತಮ್ಮ ಪಾನ್ ಮತ್ತು ಆಧಾರ್ ವಿವರಗಳನ್ನು ಕಡ್ಡಾಯವಾಗಿ ನೀಡಬೇಕಿದೆ.
ನೌಕರರು ತಮ್ಮ ಪಾನ್ ಮತ್ತು ಆಧಾರ್ ವಿವರಗಳನ್ನು ಕೊಡಬೇಕಾಗಿರುವುದು ಕಡ್ಡಾಯ. ಒಂದು ವೇಳೆ ನೌಕರರು ಕೊಡದಿದ್ದರೆ ಅದಕ್ಕೆ ಉದ್ಯೋಗದಾತರೇ ನೇರ ಹೊಣೆಯಾಗಬೇಕಾಗುತ್ತದೆ. ಅಲ್ಲದೇ, ವಿವರಗಳನ್ನು ನೀಡದಿರುವ ನೌಕರರ ಸಂಬಳದಲ್ಲಿ ಶೇ.20 ರಷ್ಟು ಹಣವನ್ನು ಕಟ್ ಮಾಡುವ ಜವಾಬ್ದಾರಿಯೂ ಉದ್ಯೋಗದಾತರ ಮೇಲಿದೆ ಎಂದು ಆದಾಯ ತೆರಿಗೆ ಇಲಾಖೆಯ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಇನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ತೆರಿಗೆ ಪಾವತಿಸುವ ನೌಕರರಿಗೆ ಶೇ.4 ರಷ್ಟು ಶಿಕ್ಷಣ ಮತ್ತು ಆರೋಗ್ಯ ಸೆಸ್ ನಿಂದ ವಿನಾಯ್ತಿ ನೀಡಲಾಗುತ್ತದೆ.
ಸಾಲವನ್ನು ನೀಡುವ ಸಂದರ್ಭದಲ್ಲಿ ಪಾನ್ ಅಥವಾ ಆಧಾರ್ ವಿವರಗಳು ಇಲ್ಲದಿರುವುದರಿಂದ ಹಲವು ಬಗೆಯ ಸಮಸ್ಯೆಗಳು ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ ನೌಕರರಿಗೆ ನೀಡುವ ಟಿಡಿಎಸ್ ಸ್ಟೇಟ್ ಮೆಂಟ್ ನಲ್ಲಿ ಪಾನ್ ಅಥವಾ ಆಧಾರ್ ವಿವರಗಳನ್ನು ನಮೂದಿಸುವಂತೆ ಉದ್ಯೋಗದಾತ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.
ಕೇಂದ್ರ ಸರ್ಕಾರ ಒಂದು ಕಡೆ ಆಧಾರ್ ಕಡ್ಡಾಯವಲ್ಲ ಎಂದು ಹೇಳುತ್ತದೆ. ಮತ್ತೊಂದು ಕಡೆ ಸರ್ಕಾರದ ಕಾರ್ಯಕ್ರಮಗಳಿಗೆ ಕಡ್ಡಾಯ ಎಂದು ಹೇಳುತ್ತದೆ. ಇನ್ನು ಹಲವಾರು ನ್ಯಾಯಾಲಯಗಳೂ ಸಹ ಆಧಾರ್ ಅನ್ನು ಒಂದು ಕಡ್ಡಾಯ ದಾಖಲೆಯಾಗಿ ಪರಿಗಣಿಸುವಂತಿಲ್ಲ ಎಂದು ಆದೇಶಗಳನ್ನು ನೀಡಿವೆ. ಆದರೆ, ಇದೀಗ ವೇತನ ಪಡೆಯುವ ನೌಕರರು ಕಡ್ಡಾಯವಾಗಿ ಪಾನ್ ಮತ್ತು ಆಧಾರ್ ವಿವರಗಳನ್ನು ನೀಡಬೇಕೆಂದು ಸುತ್ತೋಲೆ ನೀಡುವ ಮೂಲಕ ಕೇಂದ್ರ ಸರ್ಕಾರ ಮತ್ತೊಮ್ಮೆ ದೇಶದ ಜನತೆಯನ್ನು ಗೊಂದಲಕ್ಕೆ ಬೀಳುವಂತೆ ಮಾಡಿದೆ.