ಆತಂಕ ಬಗೆಹರಿಸುವ ಬದಲು ಗೊಂದಲ ಹುಟ್ಟಿಸಿದ ರಕ್ಷಣಾ ಸಚಿವರ ಹೇಳಿಕೆ!

ಲಡಾಖ್ ಗಡಿಯಲ್ಲಿ ಚೀನಾ ಕಳೆದ ಆರು ತಿಂಗಳಿನಿಂದ ನಡೆಸುತ್ತಿರುವ ನಿರಂತರ ಗಡಿ ಉಲ್ಲಂಘನೆ ಮತ್ತು ಆಕ್ರಮಣದ ಕುರಿತು ಇದೇ ಮೊದಲ ಬಾರಿಗೆ ದೇಶದ ರಕ್ಷಣಾ ಸಚಿವರು ಅಧಿಕೃತ ಹೇಳಿಕೆ ನೀಡಿದ್ದು, ಆ ಹೇಳಿಕೆ ಕೂಡ ಈ ಹಿಂದಿನ ಪ್ರಧಾನಿ ಮೋದಿಯವರ ಹೇಳಿಕೆಯಂತೆಯೇ ಪರಸ್ಪರ ವಿರೋಧಾಭಾಸ ಮತ್ತು ದ್ವಂದ್ವದ ಕಾರಣಕ್ಕೆ ಟೀಕೆಗೆ ಗುರಿಯಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಲೋಕಸಭೆಯಲ್ಲಿ ಮಂಗಳವಾರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು, ಪ್ರತಿಪಕ್ಷಗಳ ಆಗ್ರಹಕ್ಕೆ ಮಣಿದು, ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯ ಕುರಿತು ನೀಡಿದ ದೀರ್ಘ ವಿವರಣೆ ಉತ್ತರವಿಲ್ಲದ ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ. ಭಾರತೀಯ ಯೋಧರ ಶೌರ್ಯ ಮತ್ತು ಸಾಹಸದ ಕುರಿತ ವಿವರದೊಂದಿಗೆ, ಗಡಿಯಲ್ಲಿ ಜೀವಪಣಕ್ಕಿಟ್ಟು ದೇಶ ರಕ್ಷಣೆಗೆ ನಿಂತಿರುವ ಯೋಧರಿಗೆ ಸಂಸತ್ತಿನ ಬೆಂಬಲದ ಬಲ ಬೇಕು ಎಂಬ ಸಚಿವರ ಮಾತಿಗೆ ಭಾರೀ ಕರತಾಡನದೊಂದಿಗೆ ಲೋಕಸಭೆ ಮೆಚ್ಚುಗೆಯನ್ನು ವ್ಯಕ್ತಪಡಿಸಿತು. ಆದರೆ, ಅದೇ ಹೊತ್ತಿಗೆ ಕಳೆದ ಏಪ್ರಿಲ್ ನಿಂದ ಈವರೆಗೆ ಚೀನಾ ಪಡೆಗಳು ನಡೆಸುತ್ತಿರುವ ನಿರಂತರ ಆಕ್ರಮಣ ಮತ್ತು ಗಡಿ ಒತ್ತುವರಿಯ ಕುರಿತ ಸಚಿವರ ವಿವರಗಳು ಪ್ರತಿಪಕ್ಷ ಪಾಳೆಯದಲ್ಲಿ ಸಮಾಧಾನ ಮೂಡಿಸಲಿಲ್ಲ.

ಚೀನಾ ಗಡಿಯಲ್ಲಿ ನಿರ್ದಿಷ್ಟವಾಗಿ ಗಡಿ ರೇಖೆಯ ಕುರಿತು ಹಿಂದಿನಿಂದಲೂ ಇರುವ ಅನಿಶ್ಚಿತತೆಯನ್ನು ಆ ದೇಶ ದುರುಪಯೋಗಪಡಿಸಿಕೊಳ್ಳುತ್ತಿದೆ. ಗಡಿ ವಿಷಯದಲ್ಲಿ ಪರಸ್ಪರ ಉಭಯ ರಾಷ್ಟ್ರಗಳ ನಡುವೆ ಜಾರಿಯಲ್ಲಿರುವ ಒಪ್ಪಂದಗಳು ಮತ್ತು ಮಾತುಕತೆಯಗಳ ಪ್ರಕಾರ ಇರುವ ಸಾಂಪ್ರದಾಯಿಕ ಗಡಿಯನ್ನು ಉಭಯ ರಾಷ್ಟ್ರಗಳೂ ಗೌರವಿಸಬೇಕು. ಆದರೆ, ಚೀನಾ ಈಗ ಆ ದಿಸೆಯಲ್ಲಿ ಮೊಂಡುತನ ತೋರುತ್ತಿದೆ. ಸಾಂಪ್ರದಾಯಿಕ ಗಡಿ ರೇಖೆಯ ವಿಷಯದಲ್ಲಿ ಈಗ ಉಭಯ ರಾಷ್ಟ್ರಗಳ ನಡುವೆ ಭಿನ್ನಾಭಿಪ್ರಾಯಗಳಿವೆ. ಎರಡೂ ರಾಷ್ಟ್ರಗಳು ಆ ರೇಖೆಯ ವಾಸ್ತವಿಕ ಸ್ಥಾನದ ಕುರಿತು ಭಿನ್ನ ವಾದಗಳನ್ನು ಹೊಂದಿವೆ. ಈ ಪ್ರದೇಶಗಳೂ ಸೇರಿದಂತೆ ಚೀನಾ ಗಡಿಯುದ್ದಕ್ಕೂ ಉಭಯ ರಾಷ್ಟ್ರಗಳ ಸೇನೆ ನಿಯೋಜನೆ ಮತ್ತು ಗಡಿ ರಕ್ಷಣೆಯ ವಿಷಯದಲ್ಲಿ ಕೂಡ ಅಂತಹ ಒಪ್ಪಂದಗಳೇ ಈಗಲೂ ಮಾರ್ಗಸೂಚಿಗಳಾಗಿವೆ. ಶಾಂತಿ ಮತ್ತು ಸಂಘರ್ಷದ ಹೊತ್ತಲ್ಲಿ ಹೇಗೆ ಪರಿಸ್ಥಿತಿ ನಿಭಾಯಿಸಬೇಕು ಎಂಬುದನ್ನೂ ಆ ಮಾರ್ಗಸೂಚಿಗಳೇ ಹೇಳುತ್ತವೆ. ಅಂತಹ ನಿಯಮಗಳನ್ನು ಮೀರಿ ಗಡಿಯಲ್ಲಿ ತಗಾದೆ ತೆಗೆದರೆ ಆಗ ಭಾರತ ಕೂಡ ಕೈಕಟ್ಟಿ ಕೂರುವುದಿಲ್ಲ ಎಂಬುದನ್ನು ಭಾರತ ಮತ್ತೆ ಮತ್ತೆ ಪುನರುಚ್ಚರಿಸುತ್ತಲೇ ಇದೆ ಎಂದು ಸಿಂಗ್ ಸದ್ಯದ ಸ್ಥಿತಿಯ ಕುರಿತು ವಿವರಿಸಿದರು.

ಸದ್ಯ ಗಡಿಯಲ್ಲಿ ಸೂಕ್ಷ್ಮ ಪರಿಸ್ಥಿತಿ ಮುಂದುವರಿದಿದೆ. ಹಿಂದಿನ ಎಲ್ಲಾ ಗಡಿ ಉದ್ವಿಗ್ನತೆಯ ಸ್ಥಿತಿಗಿಂತ ಈಗಿನ ಪರಿಸ್ಥಿತಿ ಭಿನ್ನ. ಆದರೆ, ಪೂರ್ವ ಲಡಾಖ್ ನ ಗಡಿಯಲ್ಲಿ ಈಗ ಉದ್ಭವಿಸಿರುವ ಪರಿಸ್ಥಿತಿ ಗಂಭೀರವಾದದು. ಸೇನಾ ಜಮಾವಣೆ ಮತ್ತು ಸಂಘರ್ಷದ ಸ್ಥಳಗಳ ವಿಷಯದಲ್ಲಿ ಈ ಪರಿಸ್ಥಿತಿ ಹಿಂದೆಂದಿಗಿಂತ ಗಂಭೀರ. ಹಾಗಾಗಿ ಹಿಂದಿನಂತೆ ಕೇವಲ ಶಾಂತಿಯುತ ಮಾತುಕತೆಯ ಮೂಲಕ ಪರಿಸ್ಥಿತಿಯನ್ನು ಸಂಪೂರ್ಣ ತಿಳಿಗೊಳಿಸುವುದು ಕಷ್ಟಸಾಧ್ಯ ಎಂದು ಅವರು ಹೇಳಿದ್ಧಾರೆ.

ಚೀನಾ ಈಗಾಗಲೇ 38 ಸಾವಿರ ಚದರ ಕಿ.ಮೀ.ನಷ್ಟು ಭಾರತದ ಭೂಭಾಗವನ್ನು ಆಕ್ರಮಿಸಿಕೊಂಡಿದೆ. ಅಲ್ಲದೆ, ಲಡಾಖ್ ಸೇರಿದಂತೆ ಇನ್ನೂ ಸುಮಾರು 90 ಸಾವಿರ ಚದರ ಕಿ.ಮೀನಷ್ಟು ಭಾರತದ ಭೂಭಾಗ ತನ್ನದೆಂದು ಹೇಳುತ್ತಿದೆ. ವಾಸ್ತವಿಕ ಗಡಿ ರೇಖೆ(ಎಲ್ ಎ ಸಿ)ಯ ವಿಷಯದಲ್ಲಿ ನಿಖರತೆ ಇಲ್ಲದೇ ಇರುವುದು ಮತ್ತು ಉಭಯ ರಾಷ್ಟ್ರಗಳ ನಡುವೆ ಆ ವಿಷಯದಲ್ಲಿ ತಮ್ಮದೇ ಆದ ವಾದಗಳಿರುವುದು ಈ ಬಿಕ್ಕಟ್ಟಿಗೆ ಕಾರಣ ಎಂದ ಸಚಿವರು, ಆದಾಗ್ಯೂ ಸಾಂಪ್ರದಾಯಿಕ ಒಪ್ಪಂದಗಳು ಮತ್ತು ಮಾತುಕತೆಗಳ ಪ್ರಕಾರ ಬಿಕ್ಕಟ್ಟನ್ನು ಪರಸ್ಪರ ಸಹಮತದೊಂದಿಗೆ ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಚೀನಾ ಸಿದ್ಧವಿಲ್ಲ. ಒಂದು ಕಡೆ ಸೇನಾ ಕಮಾಂಡರ್ ಮಟ್ಟದ ಮಾತುಕತೆಗಳು ನಡೆಯುತ್ತಿರುವಾಗಲೇ ಮತ್ತೊಂದು ಗಡಿ ಆಕ್ರಮಣದ ಪ್ರಯತ್ನಗಳು ನಡೆಸುತ್ತಿದೆ. ಭಾರೀ ಸಂಖ್ಯೆಯ ಸೇನಾ ಪಡೆಗಳನ್ನು ಗಡಿಯುದ್ದಕ್ಕೂ ಜಮಾವಣೆ ಮಾಡಿದೆ ಎಂದು ವಿವರಿಸಿದರು

ಆದರೆ ರಕ್ಷಣಾ ಸಚಿವರ ಈ ಹೇಳಿಕೆಯ ಸಾಕಷ್ಟು ಮಾಹಿತಿ ಅಸ್ಪಷ್ಟತೆ ಮತ್ತು ಗೊಂದಲಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ‘ಭಾರತದ ಗಡಿಯೊಳಗೆ ಚೀನಾ ಒಂದಿಚೂ ಕಾಲಿಟ್ಟಿಲ್ಲ, ಯಾವುದೇ ಗಡಿ ಉಲ್ಲಂಘನೆ ನಡೆದೇ ಇಲ್ಲ. ಗಡಿ ಉಲ್ಲಂಘಿಸುವ ಎದೆಗಾರಿಕೆ ಯಾರಿಗೂ ಇಲ್ಲ’ ಎಂಬ ಹೇಳಿಕೆಯಂತೆಯೇ ಹಲವು ಅನುಮಾನಗಳಿಗೆ ಎಡೆಮಾಡಿದೆ ಎಂದು ‘ದಿ ವೈರ್’ ವಿಶ್ಲೇಷಿಸಿದೆ.

ಉಭಯ ಸೇನಾ ಪಡೆಗಳ ನಡುವೆ ಏರ್ಪಟ್ಟಿದ್ದ ಸಂಘರ್ಷವನ್ನು ಶಮನಗೊಳಿಸಿ, ಪರಸ್ಪರ ಯಥಾ ಸ್ಥಿತಿಗೆ ಮರಳಲಾಯಿತು ಎಂದು ಹೇಳಿದ ಸಚಿವರು, ಅಂತಹ ಸಹಜ ಸ್ಥಿತಿಗೆ ಮರಳಿದ ನಿರ್ದಿಷ್ಟ ಪ್ರದೇಶಗಳ ಮಾಹಿತಿಯನ್ನು ನೀಡಲಿಲ್ಲ. ಉದಾಹರಣೆಗೆ, ಗಾಲ್ವಾನಾ ಕಣಿವೆಯಲ್ಲಿ ಆರಂಭಿಕ ಸಂಘರ್ಷದ ಬಳಿಕ ಉಭಯ ಪಡೆಗಳು ಸಂಘರ್ಷದಿಂದ ಹಿಂದೆ ಸರಿದು ಸಂಘರ್ಷರಹಿತ ‘ಬಫರ್ ಝೋನ್’ ನಿರ್ಮಾಣ ಮಾಡಿದವು. ಆದರೆ, ಎರಡೂ ಕಡೆಯ ಪಡೆಗಳು ಸಮಾನ ದೂರ ಹಿಂದೆ ಸರಿಯುವ ಮೂಲಕ ಈ ಬಫರ್ ಝೋನ್ ಸೃಷ್ಟಿಯಾಯಿತು. ಹಾಗಾಗಿ ಈ ಬಫರ್ ಝೋನ್ ಪೈಕಿ ಬಹುತೇಕ ಭಾಗ ಭಾರತಕ್ಕೆ ಸೇರಿದ್ಧಾಗಿತ್ತು. ಹಾಗಾಗಿ, ಅದು ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಆದರೆ, ಈ ಬಗ್ಗೆ ಸಚಿವರು ತಮ್ಮ ಹೇಳಿಕೆಯಲ್ಲಿ ಯಾವುದೇ ಪ್ರಸ್ತಾಪ ಮಾಡಲೇ ಇಲ್ಲ. ಆ ಪ್ರದೇಶದ ಕುರಿತು ಸರ್ಕಾರದ ನಿಲುವು ಏನು? ಸದ್ಯ ಅಲ್ಲಿನ ಪರಿಸ್ಥಿತಿ ಏನು? ಎಂಬ ಬಗ್ಗೆಯೂ ಅವರು ಯಾವುದೇ ಮಾಹಿತಿ ನೀಡಲಿಲ್ಲ.

ಚೀನಾದ ಸೇನಾ ಪಡೆಗಳ ಜಮಾವಣೆಯ ಬಗ್ಗೆ ವಿವರಿಸುತ್ತಾ ಸಚಿವರು, “ಎಲ್ ಎಸಿ ಮತ್ತು ಕಣಿವೆ ಪ್ರದೇಶದಲ್ಲಿ ಚೀನಾ ಭಾರೀ ಸೇನಾ ಮತ್ತು ಶಸ್ತ್ರಾಸ್ತ್ರ ನಿಯೋಜನೆ ಮಾಡುತ್ತಿದೆ. ಕಳೆದ ಏಪ್ರಿಲ್ ನಿಂದಲೂ ಅದು ನಮ್ಮ ಗಮನಕ್ಕೆ ಬಂದಿದೆ. ಪೂರ್ವ ಲಡಾಖ್, ಗೊಗ್ರಾ, ಕಾಂಗ್ ಲಾ, ಉತ್ತರ ಮತ್ತು ದಕ್ಷಿಣ ಪಾಂಗಾಂಗ್ ಸರೋವರ ಪ್ರದೇಶದಲ್ಲಿ ಸಂಘರ್ಷ ತಲೆದೋರಿತ್ತು. ಚೀನಾದ ಪ್ರಚೋದನೆಗೆ ಪ್ರತಿಯಾಗಿ ನಮ್ಮ ಪಡೆಗಳೂ ಆ ಪ್ರದೇಶಗಳಲ್ಲಿ ಪ್ರತಿ ನಿಯೋಜನೆಯಾದವು” ಎಂದು ವಿವರ ನೀಡಿದರು.

ಆದರೆ, ಈ ಎಲ್ಲಾ ಚೀನಾ ಆಕ್ರಮಣಕಾರಿ ವರಸೆಗಳ ಪೈಕಿ ಆಘಾತಕಾರಿಯಾದ ಮತ್ತು ತೀರಾ ಇತ್ತೀಚೆಗೆ ನಡೆದ ಸೆ.7ರ ಗುಂಡಿನ ದಾಳಿಯ ಕುರಿತು ಸಚಿವರು ಯಾವುದೇ ಪ್ರಸ್ತಾಪ ಮಾಡಲೇ ಇಲ್ಲ. ಸೇನಾ ಕಾರ್ಯಾಚರಣೆಯ ಸೂಕ್ಷ್ಮ ಮಾಹಿತಿಗಳೆಲ್ಲವನ್ನೂ ಸದನದಲ್ಲಿ ಮಂಡಿಸಲಾರೆ ಎಂದು ಸಚಿವರು ಹೇಳಿದ್ದರೂ, ಸೆ.7ರ ಚೀನಾ ಸೇನೆಯ ಗುಂಡಿನ ದಾಳಿಯ ಕುರಿತು ಭಾರತೀಯ ಸೇನೆಯೇ ಸೆ.8ರಂದು ಬಿಡುಗಡೆ ಮಾಡಿದ ತನ್ನ ಅಧಿಕೃತವಾಗಿ ಉಲ್ಲೇಖಿಸಿತ್ತು ಎಂಬುದು ಗಮನಾರ್ಹ. 1975ರ ಬಳಿಕ ಇದೇ ಮೊದಲ ಬಾರಿಗೆ ಗಡಿಯಲ್ಲಿ ನಡೆದ ಗುಂಡಿನ ದಾಳಿ ಇದಾಗಿದ್ದು, ಚೀನಾದ ಪಿಎಲ್ ಎ ಪಡೆಗಳು ಗಾಳಿಯಲ್ಲಿ ಕೆಲವು ಸುತ್ತಿನ ಗುಂಡು ಹಾರಿಸಿದವು ಎಂದು ಭಾರತೀಯ ಸೇನೆಯೇ ಹೇಳಿತ್ತು. ಆದರೆ, ಉಳಿದೆಲ್ಲಾ ವಿವರಗಳನ್ನು ನೀಡಿದ ಸಚಿವರು ಮಾತ್ರ ಈ ಆಘಾತಕಾರಿ ಘಟನೆಯ ಬಗ್ಗೆ ಪ್ರಸ್ತಾಪ ಮಾಡದೇ ಇರುವುದು ವಿಪರ್ಯಾಸ.

ಹಾಗೇ ರಕ್ಷಣಾ ಸಚಿವರು ತಮ್ಮ ಹೇಳಿಕೆಯಲ್ಲಿ ದೆಪ್ಸಾಂಗ್ ಪ್ರದೇಶದ ಬಗ್ಗೆಯೂ ಪ್ರಸ್ತಾಪಿಸಲೇ ಇಲ್ಲ. ಆಗಸ್ಟ್ 8ರ ಕಮ್ಯಾಂಡರ್ ಮಟ್ಟದ ಮಾತುಕತೆಯ ವೇಳೆ ಪ್ರಮುಖವಾಗಿ ಪ್ರಸ್ತಾಪವಾಗಿದ್ದ ಪ್ರದೇಶ ಇದು. ಗಡಿಯಲ್ಲಿನ ಸಂಘರ್ಷ ಶಮನಗೊಳ್ಳದೇ ಹೋದರೆ ದೆಪ್ಸಾಂಗ್ ಪ್ರದೇಶದಲ್ಲಿ ಸೇನಾ ಸಂಘರ್ಷ ತಾರಕಕ್ಕೇರಬಹುದು ಎಂದು ಭಾರತ ಆ ಮಾತುಕತೆಯ ವೇಳೆ ಎಚ್ಚರಿಕೆ ನೀಡಿತ್ತು. ದೆಪ್ಸಾಂಗ್ ಪ್ರದೇಶದಲ್ಲಿ ಚೀನಾ ಭಾರತದ ಗಡಿಯೊಳಗೆ ನುಗ್ಗಿ ಸೇನಾ ನಿಯೋಜನೆ ಮಾಡಿದೆ. ಹಾಗಾಗಿ ಭಾರತದ ಗಡಿ ರಕ್ಷಣಾ ಪಡೆಗಳ ನಿಯಮಿತ ಕರ್ತವ್ಯಪಾಲನೆಗೆ ಅಡ್ಡಿಯಾಗಿದೆ. ಗಡಿ ನಿಗಾ ಕಾರ್ಯಾಚರಣೆ ಆ ಭಾಗದಲ್ಲಿ ಸ್ಥಗಿತವಾಗಿದೆ ಎಂದು ‘ದ ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿತ್ತು. ಭೂಸೇನೆ, ಟ್ಯಾಂಕರ್ ಮತ್ತು ಶಸ್ತ್ರಾಸ್ತ್ರ ಪಡೆಗಳೊಂದಿಗೆ ಉಭಯ ರಾಷ್ಟ್ರಗಳೂ ದೆಪ್ಸಾಂಗ್ ಪ್ರದೇಶದಲ್ಲಿ ದೊಡ್ಡಮಟ್ಟದಲ್ಲಿ ಎರಡೂ ಬದಿಯಲ್ಲಿ ಜಮಾವಣೆಗೊಂಡಿದ್ದವು. ಈ ಪ್ರದೇಶದಲ್ಲಿ ಚೀನಾ ಆಕ್ರಮಣ ಇತರೆಲ್ಲಾ ಪ್ರದೇಶಕ್ಕಿಂತ ಹೆಚ್ಚು ಅಪಾಯಕಾರಿ. ವ್ಯೂಹಾತ್ಮಕವಾಗಿ ಇದು ಅತ್ಯಂತ ಮಹತ್ವದ ಪ್ರದೇಶ ಎಂದೂ ವರದಿಗಳು ಹೇಳಿದ್ದವು. ಭಾರತದ ಉತ್ತರದ ತುತ್ತತುದಿಯ ಗಡಿ ಶಿಬಿರವಾದ ದೌಲತ್ ಬೇಗ್ ಓಲ್ಡಿಯ ದಕ್ಷಿಣಕ್ಕಿರುವ ದೆಪ್ಸಾಂಗ್ ಪ್ರದೇಶ, ನಮ್ಮ ಸೇನಾಪಡೆಗಳ ಸಂಚಾರ ಮತ್ತು ಪೂರಕ ವ್ಯವಸ್ಥೆಯ ಕಾರಣಕ್ಕೆ ಅತ್ಯಂತ ಆಯಕಟ್ಟಿನ ಪ್ರದೇಶ. ಅಂತಹ ಆಯಕಟ್ಟಿನ ಪ್ರದೇಶದ ಆಕ್ರಮಣದ ಕುರಿತು ಸಚಿವರು ಪ್ರಸ್ತಾಪ ಮಾಡಲೇ ಇಲ್ಲ!

ಇನ್ನು ವಾಸ್ತವಿಕ ಗಡಿ ರೇಖೆಯನ್ನು ಬದಲಾಯಿಸಲು ಚೀನಾ ಪಡೆಗಳು ನಿರಂತರ ಯತ್ನ ನಡೆಸಿವೆ. ಆಕ್ರಮಣಕಾರಿ ಪ್ರಯತ್ನಗಳನ್ನೂ ನಡೆಸಿವೆ ಎಂದು ಪದೇಪದೇ ಹೇಳಿದ ಸಚಿವರು, ಭಾರತೀಯ ಪಡೆಗಳು ಅಂತಹ ಯತ್ನಗಳನ್ನು ಹಿಮ್ಮಟ್ಟಿಸಿವೆ ಎಂದೂ ಹೇಳಿದರು. ಅದೇ ಹೊತ್ತಿಗೆ ಭಾರತದ ಗಡಿಯೊಳಗೆ 38 ಸಾವಿರ ಚ.ಕಿ.ಮೀನಷ್ಟು ಚೀನಾ ಒಳನುಗ್ಗಿದೆ ಎಂದೂ ಹೇಳಿದರು. ಹಾಗಾದರೆ, ಈ ಹೊತ್ತಿಗೆ, ವಾಸ್ತವವಾಗಿ ವಾಸ್ತವಿಕ ಗಡಿ ರೇಖೆ(ಎಲ್ ಎಸಿ)ಯ ಯಾವ ಬದಿಯಲ್ಲಿ ಚೀನಾ ಪಡೆಗಳು ಇವೆ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಸಚಿವರ ಮಾತುಗಳಲ್ಲಿ ಇರಲಿಲ್ಲ! ಈ ವಿಷಯದಲ್ಲಿ ಕೂಡ ಅಸ್ಪಷ್ಟತೆ, ವಿರೋಧಾಭಾಸ ಎದ್ದುಕಾಣುತ್ತಿತ್ತು.

ಒಂದು ಕಡೆ ಚೀನಾ ದೇಶದ ಗಡಿಯೊಳಗೆ ನುಗ್ಗಿದೆ ಎಂದ ಸಚಿವರು, ಮತ್ತೊಂದು ಕಡೆ ಗಡಿ ಉಲ್ಲಂಘಿಸುವ ಯತ್ನ ನಡೆಸಿತು ಎಂದರು. ಜೊತೆಗೆ ಭಾರತೀಯ ಪಡೆಗಳು ಚೀನಾ ಪಡೆಗಳನ್ನು ಹಿಮ್ಮೆಟ್ಟಿಸಿದವು ಎಂದರು. ಹಾಗಾದರೆ, ಚೀನಾ ಪಡೆಗಳು ಎಲ್ ಎಸ್ ಸಿಯಿಂದ ಆಚೆಗೆ, ತಮ್ಮ ಗಡಿ ಪ್ರದೇಶದತ್ತಲೇ ಹೋಗಿರಬೇಕಲ್ಲವೆ? ಆದರೆ, ವಾಸ್ತವಿಕವಾಗಿ ಚೀನಾ ಪಡೆಗಳು ಎಲ್ ಎಸಿಯ ಭಾರತೀಯ ಬದಿಯಲ್ಲೇ ಇವೆ ಎನ್ನುತ್ತವೆ ವರದಿಗಳು!

ಇತ್ತೀಚಿನ ಸಂಘರ್ಷದಲ್ಲೇ ಚೀನ ಎಲ್ ಎಸಿಯುದ್ದಕ್ಕೂ ಲಡಾಖ್ ಪ್ರದೇಶದಲ್ಲಿ ಭಾರತಕ್ಕೆ ಸೇರಿದ ಸುಮಾರು ಒಂದು ಸಾವಿರ ಚ.ಕಿ.ಮೀ ಪ್ರದೇಶವನ್ನು ಆಕ್ರಮಿಸಿಕೊಂಡಿವೆ ಎಂದು ಕೇಂದ್ರ ಸರ್ಕಾರದ ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಈ ಹಿಂದೆ ‘ದ ಹಿಂದೂ’ ವರದಿ ಮಾಡಿತ್ತು. ಅಲ್ಲದೆ, ಚೀನಾ ಪಡೆಗಳು ಭಾರತದ ಗಡಿಯೊಳಗಿನ ಶಿಖರ ಶೃಂಗ ನೆಲೆಗಳಲ್ಲಿ ಒಂದಾದ ‘ಫಿಂಗರ್-4’ವರೆಗೆ ಆಕ್ರಮಿಸಿದ್ದು, ಅಲ್ಲಿ ಗಡಿ ಶಿಬಿರವನ್ನೂ ನಿರ್ಮಿಸಿವೆ ಎಂದೂ ಹಲವು ವರದಿಗಳು ಹೇಳಿದ್ದವು. ಹಾಗೇ ಭಾರತೀಯ ಪಡೆಗಳು ಚೀನಾ ಪಡೆಗಳಿಗೆ ಪ್ರತಿಯಾಗಿ ನಿಯೋಜನೆಯಾಗಿವೆ ಎಂದು ಹೇಳಿದ್ದರೂ, ಆ ಎಲ್ಲಾ ನಿಯೋಜನೆಗಳೂ ಭಾರತದ ಗಡಿಯೊಳಗಿನ ಶಿಖರಗಳಲ್ಲೇ ಆಗಿದೆ ಎನ್ನಲಾಗಿತ್ತು. ಹಾಗೇ ಭಾರತೀಯ ಪಡೆಗಳು, ಎಲ್ ಎಸಿಯ ದೇಶದ ಭಾಗದೊಳಗೆ ಸಾಕಷ್ಟು ದೂರ ಬಂದಿವೆ ಎನ್ನಲಾಗುತ್ತಿದ್ದ ಚೀನಾ ಪಡೆಗಳನ್ನು ಅವುಗಳ ಸದ್ಯದ ಜಾಗದಿಂದ ತೆರವುಗೊಳಿಸಿದ ಯಾವುದೇ ವರದಿಗಳು ಇರಲಿಲ್ಲ!

ಹಾಗಾಗಿ, ಇಂತಹ ಹಲವು ವಾಸ್ತವಾಂಶಗಳಿಗೂ, ಲೋಕಸಭೆಯಲ್ಲಿ ರಕ್ಷಣಾ ಸಚಿವರು ಮಂಡಿಸಿದ ವಿಚಾರಗಳಿಗೂ ಸಾಕಷ್ಟು ವ್ಯತ್ಯಾಸಗಳು ಮೇಲ್ನೋಟಕ್ಕೆ ಕಂಡುಬಂದಿವೆ. ಆ ಹಿನ್ನೆಲೆಯಲ್ಲಿ ಚೀನಾ ಆಕ್ರಮಣ ಮತ್ತು ಲಡಾಖ್ ಬಿಕ್ಕಟ್ಟಿನ ವಿಷಯದಲ್ಲಿ ಸದ್ಯ ದೇಶದ ಜನತೆಯಲ್ಲಿ ಮನೆಮಾಡಿರುವ ಆತಂಕ ಮತ್ತು ಗೊಂದಲವನ್ನು ಪರಿಹರಿಸುವ ಬದಲು, ಸಚಿವರ ಮಾತುಗಳು ಇನ್ನಷ್ಟು ಗೊಂದಲ ಮತ್ತು ಅನುಮಾನಗಳಿವೆ ಎಡೆಮಾಡಿವೆ ಎಂಬುದು ವಿಪರ್ಯಾಸ!

Please follow and like us:

Related articles

Share article

Stay connected

Latest articles

Please follow and like us: