ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡು ಪೊಲೀಸರ ಗುಂಡೇಟಿಗೆ ಬಲಿಯಾದ ಮಂಗಳೂರಿನ ಇಬ್ಬರು ಸಂತ್ರಸ್ತರ ಕುಟುಂಬದವರಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡುವ ಭರವಸೆ ನೀಡಿ ಕುಟುಂಬಗಳಿಗೆ ಸಾಂತ್ವನ ಹೇಳಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಯೂ-ಟರ್ನ್ ಹೊಡೆದಿರುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ ಎಸ್ ಎಸ್) ನಿರ್ಣಯ ಎಂಬ ಚರ್ಚೆಗೆ ನಾಂದಿ ಹಾಡಿವೆ. ಇದಕ್ಕೆ ಪೂರಕ ಎಂಬಂತೆ ಮೈಸೂರು ಸಂಸದ ಪ್ರತಾಪ್ ಸಿಂಹ, ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಬಿಎಸ್ವೈ ಸಂಪುಟದ ಸಚಿವ ಸಿ. ಟಿ ರವಿ ಹಾಗೂ ನರೇಂದ್ರ ಮೋದಿ ಸರ್ಕಾರದಲ್ಲಿ ರಾಜ್ಯ ಖಾತೆ ರೈಲು ಸಚಿವರಾಗಿರುವ ಸುರೇಶ್ ಅಂಗಡಿಯವರು ಆಡಿರುವ ಮಾತುಗಳಿಗೂ ಬಿಎಸ್ವೈ ಪರಿಹಾರ ನೀಡದಿರಲು ನಿರ್ಧರಿಸಿರುವುದರ ಹಿಂದೆ ಸ್ಪಷ್ಟವಾದ ಸಂಬಂಧವಿರುವಂತೆ ಭಾಸವಾಗುತ್ತಿದೆ.
ಮಂಗಳೂರಿಗೆ ಭೇಟಿ ನೀಡಿದ್ದ ಬಿಎಸ್ವೈ ಪೊಲೀಸರ ಗುಂಡೇಟನ್ನು ಸಮರ್ಥಿಸಿಕೊಂಡರಾದರೂ ಸಂತ್ರಸ್ಥರಿಗೆ ಪರಿಹಾರ ಒದಗಿಸುವ ಅವರ ನಿರ್ಧಾರ ದುಃಖದಲ್ಲಿದ್ದವರಿಗೆ ಸಾಂತ್ವನ ಹೇಳುವ ನಿಟ್ಟಿನಲ್ಲಿ ಉತ್ತಮ ಹೆಜ್ಜೆಯಾಗಿ ಕಂಡಿತ್ತು. ಪೊಲೀಸರು ಮಂಗಳವಾರ ಬಿಡುಗಡೆಗೊಳಿಸಿದ ವಿಡಿಯೊಗಳ ಆಧಾರದಲ್ಲಿ ಸಂತ್ರಸ್ತರು ಕಿಡಿಗೇಡಿಗಳು, ಅವರಿಗೆ ಪರಿಹಾರ ನೀಡಲಾಗದು ಎನ್ನುವ ನಿಲುವು ತಳೆದಿದ್ದಾರೆ. ಬಿಎಸ್ವೈ ಆಶಯದಂತೆ ತನಿಖಾ ಸಂಸ್ಥೆಯೊಂದು ವಾಸ್ತವ ಸಂಗತಿಗಳನ್ನು ತೆರೆದಿಡುವ ಮುನ್ನವೇ ಬಿಎಸ್ವೈ ಪರಿಹಾರ ಘೋಷಿಸಿದ್ದ ಉದ್ದೇಶವೇನಾಗಿತ್ತು? ಈಗ ಪೊಲೀಸರು ಬಿಡುಗಡೆಗೊಳಿಸಿದ ವಿಡಿಯೊಗಳ ಆಧಾರದಲ್ಲಿ ತಮ್ಮ ನಿಲುವುನಿಂದ ಹಿಂದೆ ಸರಿಯುವುದರ ಹಿಂದಿನ ಹಕೀಕತ್ತೇನು? ನ್ಯಾಯ-ಅನ್ಯಾಯಗಳು ಹೊರಬೀಳುವ ಮುನ್ನವೇ ತತ್ ಕ್ಷಣದ ತೀರ್ಮಾನಕ್ಕೆ ಯಡಿಯೂರಪ್ಪ ಸರ್ಕಾರ ಬರಲು ಕಾರಣಗಳೇನಿರಬಹುದು? ಮುಖ್ಯಮಂತ್ರಿಯವರು ಪೊಲೀಸ್ ರಾಜ್ಯವನ್ನು ಬೆಂಬಲಿಸುತ್ತಿದ್ದಾರೆಯೇ ಅಥವಾ ಆರ್ ಎಸ್ ಎಸ್ ನೀಡುತ್ತಿರುವ ಒಳೇಟಿಗೆ ಬೆದರುತ್ತಿದ್ದಾರೆಯೇ ಎಂಬುದಕ್ಕೆ ಬಿಜೆಪಿಯ ಆಯ್ದ ನಾಯಕರು ನೀಡಿರುವ ಹೇಳಿಕೆಗಳಲ್ಲಿ ಉತ್ತರ ಅಡಗಿದೆ.
ಮಂಗಳೂರನ್ನು ಹಿಂದುತ್ವದ ಪ್ರಯೋಗ ಶಾಲೆ ಮಾಡಿಕೊಂಡಿರುವ ಆರ್ ಎಸ್ ಎಸ್ ಗೆ ಮುಖ್ಯಮಂತ್ರಿಯವರು ಸಂತ್ರಸ್ತರಿಗೆ ಪರಿಹಾರ ನೀಡುವುದು ಸುತಾರಾಂ ಇಷ್ಟವಿಲ್ಲ. ಮುಸ್ಲಿಮ್ ದ್ವೇಷವನ್ನು ತನ್ನ ಅಜೆಂಡಾವಾಗಿಸಿಕೊಂಡಿರುವ ಬಿಜೆಪಿ-ಆರ್ ಎಸ್ ಎಸ್ ಕಾರ್ಯಕರ್ತರ ಪಡೆಗೆ ಬಿಎಸ್ವೈ ಪರಿಹಾರದ ನಿರ್ಧಾರ ಸಿಟ್ಟುತರಿಸಿದೆ.

ಯಡಿಯೂರಪ್ಪ ಮಂಗಳೂರಿನಲ್ಲಿ ಪರಿಹಾರ ಘೋಷಿಸಿದ್ದಾಗಲೇ ತನಗೆ ಸಂಬಂಧ ಪಡದ ಕ್ಷೇತ್ರದ ಹಾಗೂ ನಿಷೇಧಾಜ್ಞೆ ಇರುವ ಪ್ರದೇಶದಲ್ಲಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿ ನಡೆಸಿದ್ದರು. ವಿರೋಧ ಪಕ್ಷಗಳ ಭೇಟಿಗೆ ಅವಕಾಶ ನಿರಾಕರಿಸಿದ್ದ ಪೊಲೀಸರು ಕ್ಷೇತ್ರಕ್ಕೆ ಯಾವುದೇ ರೀತಿಯಲ್ಲೂ ಸಂಬಂಧಪಡದ ಜನಪ್ರತಿನಿಧಿಯೊಬ್ಬರು ಸುದ್ದಿಗೋಷ್ಠಿ ನಡೆಸಲು ಅನುವು ಮಾಡಿಕೊಟ್ಟಿದ್ದೇಕೆ? ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಶೋಭಾ, ಗಲಭೆಯಲ್ಲಿ ಪಿಎಫ್ ಐ ಕೃತ್ಯದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಆಸ್ಪತ್ರೆಯ ಬಾಗಿಲಿಗೆ ಪೊಲೀಸರು ಒದೆಯುವ ದೃಶ್ಯಗಳು ಹಾಗೂ ಪೊಲೀಸರು ಗುಂಡು ಹಾರಿಸುವ ಮುನ್ನ ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅವರು ಪ್ರತಿಕ್ರಿಯೆ ನೀಡಿರಲಿಲ್ಲ!
ಇದರ ಬೆನ್ನಿಗೆ ಬಿಜೆಪಿಯ ಯುವ ಧುರೀಣ ತೇಜಸ್ವಿ ಸೂರ್ಯ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಿಎಎ ಪರವಾದ ಹೋರಾಟದಲ್ಲಿ “ಎದೆ ಸೀಳಿದರೆ ಎರಡು ಅಕ್ಷರವಿಲ್ಲದ, ಪಂಚರ್ ಹಾಕುವವರನ್ನು ಕರೆದುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರಲ್ಲಿ ಅವರ ಉದ್ದೇಶ ಬಡ ಮುಸ್ಲಿಮ್ ಸಮುದಾಯವನ್ನು ನಿಕೃಷ್ಟವಾಗಿ ಬಿಂಬಿಸುವ ಮೂಲಕ ಹೋರಾಟಗಾರರನ್ನು ಅವಮಾನಿಸುವುದಾಗಿತ್ತು. ಈ ಮೂಲಕ ಸಿಎಎ ವಿರೋಧಿಗಳು ಮುಸ್ಲಿಮರು ಎಂಬ ಸಂದೇಶವನ್ನು ದಾಟಿಸಿ, ಕೋಮು ಬಣ್ಣ ನೀಡುವುದು ಅವರ ಮಾತುಗಳಲ್ಲಿ ವ್ಯಕ್ತವಾಗಿದೆ. ಒಂದೊಮ್ಮೆ ತೇಜಸ್ವಿಯ ಉದ್ದೇಶ ಅದಾಗಿರಲಿಲ್ಲ ಎಂದರೆ ಪಂಚರ್ ಹಾಕುವವರು ಎಂಬ ಶಬ್ದ ಪ್ರಯೋಗದದ ಅವಶ್ಯಕತೆ ಇತ್ತೇ? ಟೀ ಮಾರುವ ವ್ಯಕ್ತಿಯೊಬ್ಬ ದೇಶದ ಪ್ರಧಾನಿಯಾದ ಎಂದು ಹೆಮ್ಮೆಯಿಂದ ಬೀಗುವ, 130 ಕೋಟಿ ಜನತೆಯ ಆಶೀರ್ವಾದವಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್ ಎಂದು ಹೇಳುವ ಮೋದಿಯ ಹೇಳಿಕೆಯನ್ನು ಸಂದರ್ಭೋಚಿತವಾಗಿ ಬಳಸುವ ಬಿಜೆಪಿ ನಾಯಕರಿಗೆ ಪಂಕ್ಚರ್ ಹಾಕುವ ವ್ಯಕ್ತಿ ಭಾರತದ ಪ್ರಜೆ ಎಂದು ದೇಶದ ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ನೋಡುತ್ತೇನೆ ಎಂದು ಸಂವಿಧಾನದ ಮೇಲೆ ಪ್ರಮಾಣ ಮಾಡಿದ ಸೂರ್ಯ ಅವರಿಗೆ ಏಕೆ ಎನಿಸಲಿಲ್ಲ?
Before reading this thread let me tell you that Bunder(Mangalore) is a place where business takesplace in crores & thousands of daily wage workers, Students & general public gather there.
Below thread is a proof that victims were not at all part of #mangaloreprotest protest.
1/n— Undefeated_Faith (@Shaad_Smith) December 25, 2019
ಚುನಾಯಿತ ಸರ್ಕಾರವೊಂದು ಇಷ್ಟು ಅಮಾನವೀಯ, ಕ್ರೂರಿ ಕೋಮುವಾದಿ ಆಗಬಾರದು.
ಮಂಗಳೂರು ಗಲಭೆಯಲ್ಲಿ ಸತ್ತವರಿಗೆ ಪರಿಹಾರ ಇಲ್ಲ ಎಂದು ಹೇಳಿರುವ @BSYBJP ನಿರೀಕ್ಷೆಯಂತೆ ತನಿಖೆಯ ಮೊದಲೇ ತೀರ್ಪು ನೀಡಿದ್ದಾರೆ.@INCKarnataka
1/2— Siddaramaiah (@siddaramaiah) December 25, 2019
ಮಂಗಳೂರು ಗಲಭೆಗೆ ಗುಂಡೇಟಿನಿಂದ ಸತ್ತವರೇ ಕಾರಣ ಎಂದು ತೀರ್ಪು ನೀಡಿರುವ ಮುಖ್ಯಮಂತ್ರಿ @BSYBJP ಅವರೇ,
ಸಿಐಡಿ ತನಿಖೆಯ ನಾಟಕ ಯಾಕೆ? ಅದನ್ನು ನಿಲ್ಲಿಸಿಬಿಡಿ.ಈಗ ಖಾತ್ರಿಯಾಗಿದೆ, ಹೆಣಬೀಳಿಸಲು ಪೊಲೀಸರಿಗೆ ಆದೇಶ ನೀಡಿದವರು ನೀವೇ ಎಂದು.
2/2@INCKarnataka— Siddaramaiah (@siddaramaiah) December 25, 2019
ಮಂಗಳೂರಿನಲ್ಲಿ ಆ'ರಕ್ಷಕ'ರಿಂದಲೇ ಪರಿಸ್ಥಿತಿಯನ್ನು ಪ್ರಕ್ಷುಬ್ಧಗೊಳಿಸಿದ ಸರ್ಕಾರ ಇಬ್ಬರು ಅಮಾಯಕರನ್ನು ಕೊಂದಿದ್ದೂ ಅಲ್ಲದೇ ಪರಿಹಾರವನ್ನೂ ವಂಚಿಸಿದೆ. ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿ ಈಗ ಇಲ್ಲ ಎನ್ನುತ್ತಿರುವ ಬಿಎಸ್ವೈ ವಚನ ಭ್ರಷ್ಟ, ಸುಳ್ಳುಗಾರ.
(1/6)— H D Kumaraswamy (@hd_kumaraswamy) December 25, 2019
ಬದುಕು, ಬರವಣಿಗೆಯ ಮೂಲಕ ಸಂಘ-ಪರಿಹಾರವನ್ನು ಮೆಚ್ಚಿಸುತ್ತಲೇ ರಾಜಕೀಯ ಭವಿಷ್ಯ ಕಂಡುಕಂಡಿರುವ ಪ್ರತಾಪ್ ಸಿಂಹ “ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೃಷ್ಟಿಸಿದ ಮರಿ ಟಿಪ್ಪುಗಳಿಂದ ಮಂಗಳೂರಿನಲ್ಲಿ ಗಲಭೆಯಾಗಿದೆ” ಎನ್ನುವ ಮೂಲಕ ತಮ್ಮ ಪಕ್ಷದ ನಾಯಕರ ಕೋಮು ದ್ವೇಷದ ಸರಣಿ ಹೇಳಿಕೆಗಳ ಪಟ್ಟಿಯನ್ನು ಉದ್ದರಿಸಿದ್ದಾರೆ. ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡ ಜಾತ್ಯತೀತ, ಧರ್ಮಾತೀತ ಮನಸುಗಳನ್ನು ಪ್ರತಾಪ್ ಸಿಂಹ “ಮರಿ ಟಿಪ್ಪುಗಳು” ಎಂದು ಸಂಬೋಧಿಸುತ್ತಿದ್ದಾರೆಯೇ? ಬ್ರಿಟಿಷರ ವಿರುದ್ಧ ಹೋರಾಡಿ ಮಡಿದ ಟಿಪ್ಪು ಸುಲ್ತಾನ್ ನನ್ನು ಖಳನಾಯಕನಾಗಿ ಬಿಂಬಿಸುವ ಕೆಲಸವನ್ನು ಬಿಜೆಪಿ ನಿರಂತರವಾಗಿ ಮಾಡುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಗಮನಾರ್ಹ ಕೊಡುಗೆ ನೀಡಿದ ಟಿಪ್ಪು ನಾಡು ಮೈಸೂರು ಪ್ರತಿನಿಧಿಸುತ್ತಿರುವ ಪ್ರತಾಪ್ ಸಿಂಹ ಹೇಳಿಕೆಯೂ ಕೋಮು ಭಾವನೆಯನ್ನು ಬಡೆದಿಬ್ಬಿಸುವ ಯತ್ನದ ಭಾಗವೇ ಆಗಿದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಸಿಎಎ ವಿರೋಧಿ ಪ್ರತಿಭಟನೆಯಿಂದ ಸಿಡಿಮಿಡಿಗೊಂಡಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿಯವರು ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಲು ಜಿಲ್ಲಾಧಿಕಾರಿ ನಿರ್ಧರಿಸಬೇಕು ಎಂಬ ಮಹತ್ವವಾದ ಸಲಹೆ ನೀಡಿದ್ದರು. ಪ್ರತಿಭಟನೆಯೂ ಸಂವಿಧಾನ ನೀಡಿರುವ ಹಕ್ಕು ಎಂಬ ಕನಿಷ್ಠ ತಿಳಿವಳಿಕೆ ಇಲ್ಲದ ಸಚಿವರ ಮನಸ್ಥಿತಿ ಎಷ್ಟರ ಮಟ್ಟಿಗೆ ಮಲಿನವಾಗಿದೆ ಎಂಬುದಕ್ಕೆ ಉದಾಹರಣೆ ಬೇಕೆ? ಸರ್ಕಾರದ ವಿರುದ್ಧ ಹೋರಾಟಕ್ಕಿಳಿದವರ ಜೊತೆ ಸಂವಹನ ನಡೆಸಿ ಅವರ ಭಿನ್ನಾಭಿಪ್ರಾಯವನ್ನು ಓಗಲಾಡಿಸಲು ಪ್ರಯತ್ನಿಸಬೇಕಾದ ಸಚಿವರು ಪ್ರತಿಭಟನಾಕಾರರಿಗೆ ಗುಂಡಿಡುವ ಸಲಹೆಯನ್ನು ಹೇಗೆ ಅರ್ಥೈಸಿಕೊಳ್ಳಬೇಕು? ಇದು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ವಿಶ್ವಾಸ್ ಹೇಳಿಕೆಗೆ ಯಾವ ರೀತಿಯಲ್ಲಿ ಹೊಂದಿಕೆಯಾಗುತ್ತದೆ?

ಇದೆಲ್ಲಕ್ಕೂ ಮಿಗಿಲಾಗಿ, ಯಡಿಯೂರಪ್ಪ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವರಾದ ಸಿ.ಟಿ. ರವಿ ಅವರು ಮೋದಿ ಸರ್ಕಾರವನ್ನು ಸಮರ್ಥಿಸುವ ಬರದಲ್ಲಿ ಅವರ ಬುಡಕ್ಕೆ ಬಾಂಬ್ ಇಟ್ಟಿದ್ದಾರೆ. “ಗುಜರಾತ್ ನ ಗೋಧ್ರ ಘಟನೆಯ ನಂತರ ಬೆಳವಣಿಗೆಗಳನ್ನು ನೆನಪಿಸಿಕೊಳ್ಳಬೇಕು” ಎಂದು ನೇರವಾಗಿ ರವಿ ಅವರು ಮುಸ್ಲಿಮ್ ಸಮುದಾಯವನ್ನು ಎಚ್ಚರಿಸಿದ್ದಾರೆ. ಇಂದಿನ ಪ್ರಧಾನಿ ಮೋದಿ 2002ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನಡೆದ ಗುಜರಾತ್ ಕೋಮು ಗಲಭೆಯಲ್ಲಿ ಹಿಂದೂ-ಮುಸ್ಲಿಮ್ ಸಮುದಾಯದ 2000ಕ್ಕೂ ಅಧಿಕ ಮಂದಿಯನ್ನು ಬರ್ಬರವಾಗಿ ಕೊಲ್ಲಲಾಗಿತ್ತು. ಬಹುತೇಕರ ಮುಸ್ಲಿಮ್ ಸಮುದಾಯವರಾಗಿದ್ದರು. ಇತ್ತೀಚೆಗೆ ಗುಜರಾತ್ ಹತ್ಯಾಕಾಂಡದ ತನಿಖೆಗಾಗಿ ಅಂದಿನ ಸರ್ಕಾರ ನೇಮಿಸಿದ್ದ ನ್ಯಾ. ನಾನಾವತಿ ಆಯೋಗವು ಮೋದಿಯವರಿಗೆ ಕ್ಲೀನ್ ಚಿಟ್ ನೀಡಿದೆ. ಇದನ್ನು ಮರೆತಿದ್ದ ಸಿ. ಟಿ. ರವಿ ಅವರು ಗುಜರಾತ್ ಹತ್ಯಾಕಾಂಡದ ಮಾದರಿಯನ್ನು ನೆನಪಿಸುವ ಮೂಲಕ ನರೇಂದ್ರ ಮೋದಿಯವರ ಪಾತ್ರ ಮತ್ತೊಮ್ಮೆ ಚರ್ಚೆಗೆ ಒಳಗಾಗುವಂತೆ ಮಾಡಿದ್ದಾರೆ.
ಇದೆಲ್ಲದರ ಮಧ್ಯೆ, ಉತ್ತರ ಪ್ರದೇಶದಲ್ಲಿ ಗಲಭೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಮುಸ್ಲಿಮ್ ಸಮುದಾಯಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕುವ ಅತ್ಯಂತ ಕೆಟ್ಟ ಸಂಪ್ರದಾಯಕ್ಕೆ ಬಿಜೆಪಿಯ ಯೋಗಿ ಆದಿತ್ಯನಾಥ ಸರ್ಕಾರ ಪೀಠಿಕೆಯಾಕಿದೆ. ಮುಸ್ಲಿಮ್ ಸಮುದಾಯಗಳನ್ನು ಕೇಂದ್ರೀಕರಿಸಿ ದಾಳಿ ನಡೆಸಿ, ಹತ್ಯೆಗೈದಿರುವ ಪೊಲೀಸರನ್ನು ತನಿಖೆ ಒಳಪಡಿಸುವ ಬದಲಿಗೆ ಅಮಾಯಕರ ಬೆನ್ನಿಗೆ ಬಿದ್ದಿರುವ ಉತ್ತರ ಪ್ರದೇಶ ಸರ್ಕಾರದ ಮಾದರಿಯನ್ನು ಯಡಿಯೂರಪ್ಪ ಮುಂದೆ ಆರ್ ಎಸ್ ಎಸ್ ನಾಯಕತ್ವ ಇರಿಸಿದೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಶೋಭಾ, ಪ್ರತಾಪ್, ಸೂರ್ಯ, ಅಂಗಡಿ ಹಾಗೂ ರವಿ ಮಾತನಾಡಿರುವುದು ಸ್ಪಷ್ಟವಾಗಿದೆ.
ಅಧಿಕಾರದ ದಾಹಕ್ಕೆ ಸಿಲುಕಿ ನ್ಯಾಯ-ನೀತಿಗಳೆಲ್ಲವನ್ನೂ ಗಾಳಿಗೆ ತೂರಿರುವ ಯಡಿಯೂರಪ್ಪ ಪರಿಹಾರ ಹಿಂಪಡೆಯುವ ಹಾಗೂ ಪೊಲೀಸರ ಅಟ್ಟಹಾಸವನ್ನು ಸಮರ್ಥಿಸುವ ದುಸ್ಸಾಹಸಕ್ಕೆ ಮುಂದಾಗಿದ್ದಾರೆ. ಆಡಳಿತಗಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಬೀಸು ಹೇಳಿಕೆ ನೀಡುತ್ತಿರುವುದು ಹಾಗೂ ನಾಗರಿಕರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಆಡಳಿತ ಪಕ್ಷದ ಸದಸ್ಯರು ವಿಶೇಷವಾಗಿ ಮುಖ್ಯಮಂತ್ರಿಯೇ ಸಮರ್ಥಿಸುವ ಪರಂಪರೆ ಆಘಾತಕಾರಿ. ಇಂಥ ಅಸಹಾಯಕ ಸ್ಥಿತಿಯಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬೇಕಾದ ಜರೂರತ್ತಿದೆ. ಜನರ ಹಕ್ಕುಗಳನ್ನು ರಕ್ಷಿಸಬೇಕಾದ ಸರ್ಕಾರವೇ ಅವುಗಳನ್ನು ಹತ್ತಿಕ್ಕಲು ಮುಂದಾಗುವುದಕ್ಕೆ ತಡೆಯೊಡ್ಡುವ ಕೆಲಸವನ್ನು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿ ಸರ್ಕಾರವನ್ನು ಉತ್ತರದಾಯಿಸಬೇಕಾದ ಕೆಲಸವನ್ನು ನ್ಯಾಯಾಲಯ ಮಾಡಬೇಕು ಎಂಬ ಸಾಮಾಜಿಕ ಹೋರಾಟಗಾರರ ಮನವಿಯನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಲಿದೆಯೇ?