ಒಂದು ಕಡೆ ಚೀನಾ ನೆಲದಿಂದ ಬಂದ ಕರೋನಾ ವೈರಾಣು ವ್ಯಾಪಕತೆ ಈಗ ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದರೆ, ಮತ್ತೊಂದು ಕಡೆ ಅದೇ ಚೀನಾದಾ ಪೀಪಲ್ಸ್ ಲಿಬರೇಷನ್ ಆರ್ಮಿ(ಚೀನಾ ಸೇನೆ) ಲಡಾಕ್ ವಲಯದ ಗಾಲ್ವನ್ ಕಣಿವೆಯಲ್ಲಿ ಭಾರತೀಯ ಗಡಿಯೊಳಕ್ಕೆ ಆಕ್ರಮಣಕಾರಿ ಹೆಜ್ಜೆ ಇಡುವ ಮೂಲಕ ಭಾರತ ಮತ್ತು ಚೀನಾ ಸಂಘರ್ಷದತ್ತ ವಿಶ್ವ ಚಿತ್ತ ಸೆಳೆದಿದೆ.
ಕಣಿವೆ ಪ್ರದೇಶದಲ್ಲಿ ಏಷ್ಯಾದ ಎರಡು ಪ್ರಬಲ ರಾಷ್ಟ್ರಗಳ ನಡುವೆ ಕಳೆದ ಐದು ವಾರಗಳಿಂದ ಉದ್ವಿಗ್ನ ಸ್ಥಿತಿ ಮುಂದುವರಿದಿದ್ದು, ಮಂಗಳವಾರ ಉಭಯ ಸೇನಾ ಪಡೆಗಳ ಯೋಧರ ನಡುವೆ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಮತ್ತು ಚೀನಾ ಕಡೆಯಿಂದಲೇ ಸರಿಸುಮಾರು ಅಷ್ಟೇ ಮಂದಿ ಸಾವು ಕಂಡಿರುವುದಾಗಿ ವರದಿಗಳು ಹೇಳಿವೆ. ಹಾಗಾಗಿ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ರಾಜತಾಂತ್ರಿಕ ಮತ್ತು ಸೇನಾ ಸಂಘರ್ಷ ಇದೀಗ ತಾರಕಕ್ಕೇರಿದ್ದು, ಕಳೆದ ಐದು ದಶಕದಲ್ಲಿ ಇದೇ ಮೊದಲ ಬಾರಿಗೆ ಭಾರತ- ಚೀನಾ ಗಡಿಯಲ್ಲಿ ಯೋಧರ ರಕ್ತ ಹರಿದಿದೆ.
ರಕ್ಷಣಾ ತಜ್ಞರ ಖಚಿತ ಮಾಹಿತಿಯ ಪ್ರಕಾರ, ಈವರೆಗೆ ಸಂಪೂರ್ಣ ಭಾರತದ ಭಾಗವೇ ಆಗಿದ್ದ ಮತ್ತು ಯಾವುದೇ ಬಗೆಯ ವಿವಾದಕ್ಕೆ ಆಸ್ಪದವಿಲ್ಲದಂತಿದ್ದ ಲಡಾಕ್ ವಲಯದ ಗಾಲ್ವನ್ ಕಣಿವೆಯ ಬಹುತೇಕ ಭಾಗವನ್ನು(ಸುಮಾರು 60 ಚದರ ಕಿಮೀ ಪ್ರದೇಶ) ಚೀನಾ ತನ್ನ ವಶಕ್ಕೆ ಪಡೆದುಕೊಂಡಿದ್ದು, ಅಲ್ಲಿ ಚೀನಾ ಪಡೆಗಳು ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಗಡಿ ಗುರುತು ಮತ್ತು ಗೋಪುರ ನಿರ್ಮಾಣ ಕಾರ್ಯದಲ್ಲಿ ತೊಡಗಿವೆ. ಭಾರತೀಯ ಸೇನಾ ಮುಖ್ಯಸ್ಥರ ‘ಎಲ್ಲವೂ ಸರಿಯಾಗೇ ಇದೆ. ಯಾವುದೇ ಆತಂಕವಿಲ್ಲ’ ಎಂಬ ಹೇಳಿಕೆ(ಜೂನ್ 13ರಂದು), ರಾಜಕೀಯ ನಾಯಕರ ವೀರಾವೇಶದ ಭಾಷಣ ಮತ್ತು ‘ಆಸ್ಥಾನಸಖಿ ಮಾಧ್ಯಮಗಳ ಲಾಲಿ ಹಾಡು’ಗಳ ಹೊರತಾಗಿಯೂ ವಾಸ್ತವವಾಗಿ ಗಡಿಯಲ್ಲಿ ದೇಶ ಅರ್ಧ ಶತಮಾನದಲ್ಲಿ ಕಾಣದೇ ಇದ್ದ ಅತಿಕ್ರಮ ಮತ್ತು ದಬ್ಬಾಳಿಕೆಯನ್ನು ಕಂಡಿದೆ.
ಟವಿ ಸ್ಟುಡಿಯೋಗಳಲ್ಲಿ ಕೂತು, ಕ್ಯಾಮರಾಗಳ ಮುಂದೆ ‘ಗೆಟ್ ಔಟ್’ ಘೋಷಣೆಯೊಂದಿಗೆ ಗಂಟಲು ಹರಿದುಕೊಳ್ಳುವ ಆಂಕರುಗಳು, ಪ್ಯಾನಲಿಸ್ಟುಗಳು ಒಂದು ಕಡೆಯಾದರೆ, ಚೀನಾ ವಸ್ತು ಬಹಿಷ್ಕರಿಸಿ, ನಿಷೇಧಿಸಿ ಎನ್ನುತ್ತಾ ಅದೇ ಚೀನಾ ತಯಾರಿಸಿದ ಮೊಬೈಲುಗಳಲ್ಲೇ ಸೆಲ್ಪೀ ಕ್ಲಿಕ್ಕಿಸಿ ಸೋಷಿಯಲ್ ಮೀಡಿಯಾಕ್ಕೆ ಅಪ್ಲೋಡ್ ಮಾಡುವ ದೇಶಭಕ್ತರ ಚೀರಾಟ ಮತ್ತೊಂದೆಡೆ. ಇಂತಹ ಪ್ರಹಸನಗಳ ನಡುವೆ ದೇಶ ಈಗಾಗಲೇ ಐತಿಹಾಸಿಕ ಹಿನ್ನಡೆ ಅನುಭವಿಸಿಬಿಟ್ಟಿದೆ.
ಮುಖಭಂಗದಿಂದ ಪಾರಾಗುವ ಯತ್ನವಾಗಿ ಪ್ರಧಾನಿ ಮೋದಿಯವರು ಬುಧವಾರ , ಭಾರತೀಯ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುತ್ತಾ, ನಮ್ಮ ಯೋಧರ ತ್ಯಾಗ ಮತ್ತು ಬಲಿದಾನ ವ್ಯರ್ಥವಾಗುವುದಿಲ್ಲ ಎಂದಿದ್ದಾರೆ. ಆದರೆ, ಆ ಬಳಿಕ ಸಂಜೆಯವರೆಗೆ ನಡೆದ ಸಂಘರ್ಷ ಸ್ಥಗಿತಗೊಳಿಸುವ, ಉಭಯ ರಾಷ್ಟ್ರಗಳ ನಡುವಿನ ಪರಿಸ್ಥಿತಿ ತಿಳಿಗೊಳಿಸುವ ಉದ್ದೇಶದ ಭಾರತದ ಎರಡು ಪ್ರಯತ್ನಗಳಿಗೂ ಚೀನಾ ಸಕಾರಾತ್ಮಕ ಸ್ಪಂದನೆ ನೀಡಿಲ್ಲ.
ಆ ಪೈಕಿ ಮೊದಲನೆಯದು ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರ ನಡುವಿನ ಮಾತುಕತೆ. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಜೊತೆ ದೂರವಾಣಿ ಸಂಭಾಷಣೆ ನಡೆಸಿದ್ದು, ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ಶೀಘ್ರವೇ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳುವ ಬಗ್ಗೆ ಚರ್ಚಿಸಿದ್ದಾರೆ. ಜೈಶಂಕರ್ ಅವರು ಚೀನಾದ ಯೋಜಿತ ತಂತ್ರಗಾರಿಕೆಯ ಈ ನಡೆ ದುರಾದೃಷ್ಟಕರ ಮತ್ತು ಹಿಂಸೆಯ ನಡೆ ಉಭಯ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧಕ್ಕೆ ದೊಡ್ಡ ಪೆಟ್ಟು ಕೊಡಲಿದೆ ಎಂದು ಹೇಳಿದ್ದರೆ, ಚೀನಾದ ಸಚಿವರು, ಉಭಯ ರಾಷ್ಟ್ರಗಳ ನಡುವೆ ಈ ಹಿಂದೆ ಆಗಿರುವ ರಾಜತಾಂತ್ರಿಕ ಮತ್ತು ಸೇನಾ ಒಪ್ಪಂದಗಳನ್ನು ಗೌರವಿಸಬೇಕು ಮತ್ತು ಪರಸ್ಪರ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಬೇಕಿದೆ ಎಂದು ಹೇಳಿರುವುದಾಗಿ ವರದಿಯಾಗಿದೆ.
ಆದರೆ, ಈ ಮಾತುಕತೆಗಳ ಬೆನ್ನಲ್ಲೇ ಬುಧವಾರ ಸಂಜೆ ಗಾಲ್ವನ್ ವಲಯದಲ್ಲಿ ಉಭಯ ಸೇನಾ ಪಡೆಗಳ ಮೇಜರ್ ಜನರಲ್ ಗಳ ನಡುವೆ ನಡೆದ ಮಾತುಗಳು ಕೂಡ ಯಾವುದೇ ತೀರ್ಮಾನಕ್ಕೆ ಬರುವಲ್ಲಿ ಸಫಲವಾಗಿಲ್ಲ. ಹಾಗಾಗಿ ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯಾಗಲೀ, ಉಭಯ ಪಡೆಗಳ ನಡುವಿನ ಸಂಘರ್ಷದ ಸ್ಥಿತಿಯಾಗಲೀ ತಿಳಿಗೊಂಡಿಲ್ಲ ಎಂದು ತಡರಾತ್ರಿಯ ವರದಿಗಳು ಹೇಳಿವೆ. ಈ ನಡುವೆ ಭಾರತೀಯ ಸೇನಾ ಪಡೆಗಳು ಲಡಾಕ್ ನಿಂದ ಅರುಣಾಚಲಪ್ರದೇಶದ ವರೆಗಿನ ಚೀನಾದ ಗಡಿಯುದ್ದಕ್ಕೂ ಸಮರ ಸ್ಥಿತಿ ಘೋಷಿಸಿದ್ದು ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜಾಗಿರುವಂತೆ ಯೋಧರಿಗೆ ಸೂಚನೆ ನೀಡಿದೆ.
ಈ ನಡುವೆ, ಭಾರತೀಯ ಆಡಳಿತ ಮತ್ತು ಸೇನೆ ಚೀನಾಕ್ಕೆ ತಕ್ಕ ಪಾಠ ಕಲಿಸುವ ವೀರಾವೇಶದ ಮಾತುಗಳನ್ನು ಹೇಳುತ್ತಿದ್ದರೂ, ಮಾಧ್ಯಮಗಳು ದಿನವಿಡೀ ಭಾರತದ ಸಾಮರ್ಥ್ಯದ ಬಗ್ಗೆ ಭಾರೀ ಚಿತ್ರಣ ನೀಡುತ್ತಿದ್ದರೂ, ವಾಸ್ತವವಾಗಿ ಕಳೆದ 2017ರ ಡೋಕ್ಲಾಮ್ (ಭೂತಾನ್ ಗಡಿ) ಸಂಘರ್ಷದ ವೇಳೆಯಿಂದಲೂ ಗಡಿಯಲ್ಲಿ ನಿರಂತರ ಆಕ್ರಮಣ ನೀತಿ ಪಾಲಿಸುತ್ತಿದ್ದರೂ ಭಾರತ ಚೀನಾದ ವಿರುದ್ಧ ತಕ್ಕ ತಯಾರಿ ಮಾಡಿಕೊಂಡಿಲ್ಲ. ಸೇನೆಯ ಬಗ್ಗೆ, ದೇಶದ ಬಲದ ಬಗ್ಗೆ ಆಡುತ್ತಿರುವ ಮಾತುಗಳಿಗೂ ವಾಸ್ತವವಾಗಿ ಸೇನೆಯ ಸನ್ನದ್ಧತೆಯ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಚೀನಾವನ್ನು ಎದುರಿಸುವ ನಿಟ್ಟಿನಲ್ಲಿ ಭಾರತ ತಯಾರಿಯನ್ನೇ ಮಾಡಿಕೊಂಡಿಲ್ಲ ಎಂದೂ ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವಾಸ್ತವವಾಗಿ ಕಳೆದ ಒಂದು ತಿಂಗಳಿನಿಂದಲೇ ಚೀನಾ ಸೇನೆ ಗಾಲ್ವನ್ ವಲಯದಲ್ಲಿ ಸುಮಾರು 60 ಚದರ ಕಿಮೀ ನಷ್ಟು ಪ್ರದೇಶವನ್ನು ಆಕ್ರಮಿಸಿ ವಾಸ್ತವಿಕ ಗಡಿ ನಿಯಂತ್ರಣ ರೇಖೆಯನ್ನೂ ಉಲ್ಲಂಘಿಸಿ ಗಡಿ ಗೋಪುರಗಳನ್ನು ನಿರ್ಮಿಸಿದೆ. ಇದೀಗ ಸೇನಾ ಸಂಘರ್ಷ ನಡೆದರೂ, ಚೀನಾ ಪಡೆಗಳು ಅಲ್ಲಿಂದ ಕಾಲು ತೆಗೆದಿಲ್ಲ. ಜೊತೆಗೆ ನಾಳೆ ಮಾತುಕತೆ ಮೂಲಕವೂ, ಸಂಘರ್ಷದ ಮೂಲಕವೋ ಚೀನಾ ಅಲ್ಲಿಂದ ಹಿಂದೆ ಸರಿದರೂ ಆ ಯಾರಿಗೂ ಸೇರದೇ ಇರುವ ಸುಮಾರು 20 ಚದರ ಕಿಮೀ ಪ್ರದೇಶದಲ್ಲಿ ಚೀನಾ ತನ್ನ ಪಾರುಪಥ್ಯ ಮುಂದುವರಿಸುವ ಸಾಧ್ಯತೆ ಇದ್ದೇ ಇದೆ. ಅಷ್ಟಕ್ಕೂ ಚೀನಾದ ಈ ಆಕ್ರಮಣದ ಉದ್ದೇಶ ನಿರ್ದಿಷ್ಟವಾಗಿ ಗಾಲ್ವನ್ ಕಣಿವೆ ಪ್ರದೇಶದವನ್ನು ಕೈವಶಮಾಡಿಕೊಳ್ಳುವುದೇನಲ್ಲ. ಬದಲಾಗಿ ಜಮ್ಮುಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಒಡೆದು, ಲಡಾಕ್ ವಲಯವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿ, ಚೀನಾ ಮತ್ತು ಪಾಕಿಸ್ತಾನಗಳೂ ತಮ್ಮ ಪ್ರದೇಶ ಎಂದು ವಾರಸುದಾರಿಕೆ ಸಾಧಿಸುತ್ತಿರುವ ಪ್ರದೇಶಗಳನ್ನು ಕೂಡ ಭಾರತ ತನ್ನ ನೆಲ ಎಂದು ಘೋಷಿಸಿರುವುದು ಚೀನಾ ಮತ್ತು ಪಾಕಿಸ್ತಾನವನ್ನು ಕೆರಳಿಸಿದೆ. ಹಾಗಾಗಿ ಆ ವಿಷಯದ ಬಗ್ಗೆ ಅಂತಾರಾಷ್ಟ್ರೀಯ ಗಮನ ಸೆಳೆಯಲು ಚೀನಾ ಮತ್ತು ಪಾಕ್ ಈ ಸಂಘರ್ಷದ ತಂತ್ರ ಹೆಣೆದಿವೆ. ಹಾಗಾಗಿ ಈ ವಿವಾದ ಹೇಗೆ ಅಂತ್ಯಕಂಡರೂ ಅದರ ಲಾಭ ಚೀನಾಕ್ಕೆ ಆಗಲಿದೆ ಎಂಬ ವಾದವೂ ಇದೆ.
ಆದರೆ, ಪಾಕಿಸ್ತಾನದಂತೆ ಚೀನಾದೊಂದಿಗಿನ ಸಂಘರ್ಷ ಕೋಮು ರಾಜಕಾರಣದ ಲಾಭ ತಂದುಕೊಡುವುದಿಲ್ಲ. ಚುನಾವಣೆಗಳಲ್ಲಿ ಮತ ಬಾಚಲು ಭಾವನಾತ್ಮಕ ಸಂಗತಿಯಾಗಿ ಬಳಕೆಯಾಗುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಭಾರತದಲ್ಲಿ ಸಾಕಷ್ಟು ಹೂಡಿಕೆ ಮಾಡಿರುವ ಚೀನಾದ ಕಂಪನಿಗಳು ಈಗಾಗಲೇ ಸ್ವದೇಶಿ ಬಳಸಿ ಘೋಷಣೆಯಿಂದಾಗಿ ಸಾಕಷ್ಟು ಕುಪಿತಗೊಂಡಿವೆ. ಇನ್ನು ಈ ವಿಷಯದಲ್ಲೂ ಚೀನಾ ವಸ್ತು ನಿಷೇಧದಂತಹ ಘೋಷಣೆಗಳೂ ಜೋರಾದರೆ, ಈಗಾಗಲೇ ವಿದೇಶಿ ಬಂಡವಾಳ ಹೂಡಿಕೆ ನಷ್ಟ ಅನುಭವಿಸುತ್ತಿರುದ ದೇಶಕ್ಕೆ ಆರ್ಥಿಕವಾಗಿ ಮತ್ತೊಂದು ಪೆಟ್ಟು ಬೀಳಬಹುದು ಎಂಬೆಲ್ಲಾ ಲೆಕ್ಕಾಚಾರಗಳು ಆಳುವರದ್ದು.
ಆ ಹಿನ್ನೆಲೆಯಲ್ಲಿ ಚೀನಾ ಆಕ್ರಮಣದ ವಿಷಯ ರಾಜಕೀಯವಾಗಿ ಬಿಜೆಪಿಗಾಗಲೀ, ಪ್ರಧಾನಿ ಮೋದಿಯವರಿಗಾಗಲೀ ‘ಲಾಭದಾಯಕ’ವಾಗಿ ಕಾಣಿಸುತ್ತಿಲ್ಲ. ಹಾಗಾಗಿಯೇ ತಿಂಗಳುಗಳ ಆಕ್ರಮಣದ ಬಳಿಕವೂ ಬಿಜೆಪಿ ನಾಯಕರು ಚೀನಾದ ವಿರುದ್ಧ ಬಹುತೇಕ ಮುಗುಮ್ಮಾಗೇ ಇದ್ದಾರೆ ಮತ್ತು ಅದರ ಕೃಪಾಪೋಷಿತ ಮಾಧ್ಯಮ ಎಂದಿನಂತೆ ಸಬ್ ಚೆಂಗಾ ಸಿ’ ಭಜನೆಯಲ್ಲಿ ಮುಳುಗಿವೆ!