ಕೆಲವು ದಿನಗಳಿಂದ ಬಿಡದೆ ಕಾಡಿಸುತ್ತಿರುವ ವಿಷಯ ಒಂದಿದೆ. ಅದನ್ನು ಹೇಳಿಕೊಳ್ಳಬೇಕೆಂದು ಹಲವು ಬಾರಿ ಪ್ರಯತ್ನಿಸಿದ್ದರೂ ಇನ್ನಿಲ್ಲದ ಬೇರೆ ಪರಿಣಾಮಗಳ ಉಂಟಾಗ ಬಹುದೆಂಬ ಆತಂಕದಿಂದ ಆ ವಿಷಯವನ್ನು ಬದಿಗೆ ಸರಿಸಿದ್ದೆ. ಆದರೆ ಫೆಬ್ರವರಿ 14 ರಂದು ಅನ್ಷದ್ ಪಾಳ್ಯ ನಮ್ಮ ಮನೆಗೆ ಬಂದಿದ್ದಾಗ ಕೊನೆಗೂ ಆತನೊಡನೆ ಆ ವಿಷಯವನ್ನು ತೋಡಿಕೊಂಡೆ. ನಜ್ಮಾ ನಜೀರಳ ಬೆಳವಣಿಗೆಯನ್ನು ನೋಡಿದರೆ ಒಂದೆಡೆ ನನಗೆ ಸಂತೋಷವಾಗುತ್ತೆ, ಇನ್ನೊಂದೆಡೆ ಆತಂಕವಾಗುತ್ತೆ. ಏರ್‌ಪೋರ್ಟ್‌ನಲ್ಲಿ ನಡೆದೆ ವಿಕ್ರಮ್ ಹೆಗ್ಡೆಯ ಮುಖಾಮುಖಿ ನನಗೆ ಇಷ್ಟವಾಗಲಿಲ್ಲ. ಆದರೆ ನಾನು ಅದನ್ನು ಎಲ್ಲಯೂ ಹೇಳಲು ಹೋಗಲಿಲ್ಲ, ಏಕೆಂದರೆ ಬಹುಶಃ ನಮ್ಮಿಬ್ಬರ ನಡುವೆ ಇರುವ Generation gapನ ದೆಸೆಯಿಂದ ನಾನು ಆಕೆಯ ಕ್ರಮವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲವೇನೋ ಅಂತ ಅನಿಸಿತು ಮತ್ತು ಆಕೆ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಆಕೆಯ ಮಾತು, ಪ್ರೆಸೆಂಟೇಷನ್ ವಿಷಯ ನಿರೂಪಣೆ ಇವುಗಳ ಬಗ್ಗೆ ಕೂಡ ನನಗೆ ತುಂಬಾ ಭ್ರಮ ನಿರಸನವಾಗಿದೆ. ನನ್ನ ಅಭಿಪ್ರಾಯವನ್ನು ಆಕೆ ತೆಗೆದುಕೊಳ್ಳಲೇ ಬೇಕು ಎಂಬ ತುರ್ತು ಆಕೆಯ ಮೇಲೆ ಇಲ್ಲ. ಆದರೆ ನೀನು ಒಬ್ಬ ಅಡ್ವೊಕೇಟ್ ಆಗಿರುವುದರಿಂದ ಅನ್ಷದ್ ನನ್ನ ಮಾತಿನ ಅರ್ಥವೇನೆಂದರೆ, ವಕೀಲರ ಭಾಷೆಯಲ್ಲಿ ಆಕೆ ರ‍್ಯಾಷ್ ಅಂಡ್ ನೆಗ್ಲಿಜೆಂಟ್ ಡ್ರೈವಿಂಗ್ ಮಾಡ್ತಿದಾಳೆ ಅಂತ ನನಗೆ ಅನಿಸುತ್ತಿದೆ. ಯಾವ ಮೂಲೆಯಿಂದಲಾದರೂ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಏನು ಮಾಡೋಣ ಹೇಳು ಎಂದೆ . ನಾನು ಅವಳ ಜೊತೆಯಲ್ಲಿ ಮಾತಾಡ್ತಿನಿ ಮೇಡಂ, ಅವಳಿಗೆ ಈ ಬಗ್ಗೆ ಕನ್ವಿನ್ಸ್ ಮಾಡೊದಿಕ್ಕೆ ಪ್ರಯತ್ನ ಪಡ್ತೀನಿ ಎಂದು ಅನ್ಷದ್ ನನಗೆ ಉತ್ತರಿಸಿದ. ಆದರೆ ಆತ ಮಾತನಾಡಿದನೋ ಬಿಟ್ಟನೋ ನನಗೆ ಗೊತ್ತಾಗಲಿಲ್ಲ. ಆದರೆ ಆಕೆಯ ಗೆಳತಿ ಅಮೂಲ್ಯ ಸುದ್ದಿಯಾದಳು. ನೆನ್ನೆ ಆಫೀಸಿನಲ್ಲಿ ಕುಳಿತು ಕೆಲಸ ಮಾಡುತ್ತಿರಬೇಕಾದಲ್ಲಿ ಬಾರಿ ಬಾರಿ ನನ್ನ ಮನಸ್ಸು ಮೊಬೈಲ್‌ನತ್ತ ಆಕರ್ಷಿತವಾಗುತ್ತಿತ್ತು. ಆ ಹೊತ್ತಿನಲ್ಲಿ ನಾನು ವೃತ್ತಿ ಸಂಬಂಧಿತ ಕರೆಗಳನ್ನು ಮತ್ತು ಆನ್ಲೈನ್ ಅಗತ್ಯದ ಕೆಲಸಗಳನ್ನು ಬಿಟ್ಟರೆ ಬೇರೆ ರೀತಿಯಲ್ಲಿ ಮೊಬೈಲನ್ನು ಬಳಸುವುದಿಲ್ಲ. ಆದರೆ ಅದೇಕೋ ನಿರಂತರ ಕಾಡುವಿಕೆಯನ್ನು ತಪ್ಪಿಸಿಕೊಳ್ಳಲಾಗದೆ Facebookನ್ನು ತೆರೆದೆ. ಅಮೂಲ್ಯ ಮತ್ತು ಅವಳ ಘೋಷಣೆಗಳು ಸಾರ್ವಜನಿಕ ವೇದಿಕೆಯಲ್ಲಿ ನಡೆದ ಅವಾಂತರ ನನ್ನ ಸ್ಥೈರ್ಯ ಉಡುಗಿಸಿತ್ತು. ಒಂದೆರಡು ಕ್ಷಣ ಸುಮ್ಮನಿದ್ದು, ಮುಂದೇನೂ ದಾರಿ ಕಾಣದೆ ಹೊಸ ತಲೆ ಮಾರಿನ ಯುವಕರ ಆಲೋಚನೆ ಹೇಗಿದೆ ಅವರೊಡನೆ ವಿಷಯವನ್ನು ಚಿರ್ಚಿಸಬೇಕೆಂದು ನಮ್ಮ ಹಾಸನದ ಧರ್ಮೇಶ್ ಮತ್ತು ಹರ್ಷ ಕುಗ್ವೆಗೆ ಫೋನ್ ಮಾಡಿದೆ. ಅವರಿಬ್ಬರಿಗೂ ವಿಷಯ ತಿಳಿದಿರಲಿಲ್ಲ. ನಾನು ನೀಡಿದ ಸುದ್ಧಿ ಅವರುಗಳಿಗೆ ನಿರೀಕ್ಷಿತವಾಗಿತ್ತು ಆದರೆ ಆಘಾತಕರವಾಗಿತ್ತು. ಏಕೆಂದರೆ ಹೀಗೇನಾದರು ಆಗ ಬಹುದೆಂಬ ನಿರೀಕ್ಷೆ ಅವರಿಗೆ ಇತ್ತು.
ಕಳೆದ ಒಂದು ತಿಂಗಳ ಹಿಂದೆ ಹಾಸನದಲ್ಲಿ ಪೌರತ್ವ ಕಾಯಿದೆಗಳ ವಿರೋಧದಲ್ಲಿ ಮಹಿಳೆಯರ ಬೃಹತ್ ಪ್ರತಿಭಟನಾ ಸಭೆಯು ನಡೆಯಿತು. ಆ ಸಭೆಯಲ್ಲಿ ಕೆಲವು ಆಯ್ದ ಮಹಿಳೆಯರಿಗೆ ಮಾತನಾಡಲು ಅವಕಾಶವನ್ನು ನೀಡಲಾಗಿತ್ತು. ಹಿಜಾಬ್ ಧರಿಸಿದ್ದ ಅಥವಾ ಧರಿಸದೆ ಇದ್ದ ಅನೇಕ ಮಹಿಳೆಯರು ಎಷ್ಟೊಂದು ನಿರ್ಭಿಡೆಯಿಂದ ಕರಾರುವಾಕ್ಕಾಗಿ ವಿಷಯದ ಪರಿಣಿತಿಯನ್ನು ಹೊಂದಿದ್ದು, ವಿಷಯವನ್ನು ಪ್ರಸ್ತುತಗೊಳಿಸಿದರೆಂದರೆ, ನನಗೆ ಅತ್ಯಾಶ್ಚರ್ಯವಾಗಿ ಹೋಯಿತು. ಕನ್ನಡ, ಉರ್ದು ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಿದ ಆ ಮಹಿಳೆಯರು ಅತ್ಯಂತ ಸ್ಪಷ್ಟತೆಯಿಂದ ಪೌರತ್ವ ಕಾಯಿದೆಗಳನ್ನು ವಿಶ್ಲೇಷಿಸಿದರು. ಅಂದು ನಾನು ನೋಡಿದ ಆ ಮಹಿಳೆಯರ ಪೈಕಿ ಯುವತಿಯರು ಮತ್ತು ಗೃಹಣಿಯರು ಕೂಡ ಇದ್ದರು. ಆದರೆ ಎಲ್ಲರಲ್ಲಿಯೂ ಇದ್ದ ವಿಷಯವನ್ನು ಗ್ರಹಿಸುವ ಮತ್ತು ನಿಖರವಾಗಿ ಪ್ರಸ್ತುತ ಪಡಿಸುವ ಸಾಮರ್ಥ್ಯವನ್ನು ಕಂಡು ನಾನು ಬೆರಗಾಗಿ ಹೋದೆ. ಅಷ್ಟೇ ಅಲ್ಲದೆ ಬಹಿರಂಗ ಸಭೆಯ ವೇದಿಕೆಯ ಶಿಸ್ತನ್ನು ಕೂಡ ಅವರು ಮೈಗೂಡಿಸಿಕೊಂಡಿದ್ದರು. ಅವರಲ್ಲಿ ಯಾರೊಬ್ಬರೂ ಕೂಡ ಯಾರನ್ನು ಬೈಯುವ ಕೆಲಸವನ್ನು ಮಾಡಲಿಲ್ಲ. ಆದರೆ ಕಾರ್ಯಕ್ರಮದ ಅವಧಿಯನ್ನು ಕರಾರುವಾಕ್ಕಾಗಿ ನಿರ್ವಹಿಸಬೇಕಾದ ಹೊಣೆ ನನ್ನ ಮೇಲೆ ಇದ್ದುದರಿಂದ ಅಧ್ಯಕ್ಷೆಯಾಗಿದ್ದರೂ ಕೂಡ ನಾನು ಅವರೆಲ್ಲರಿಗೂ ’ ನಿಮ್ಮ ಸಮಯ ಮುಗಿಯಿತು’ ಎಂದು ಚೀಟಿ ಕೊಡುವ ಕೈಂಕರ್ಯ ಒಂದು ನನಗೆ ಬೇಸರ ತರಿಸಿತು. ನಾನು ಅವರಾಡುವ ಮಾತುಗಳನ್ನು ಎಷ್ಟು ಗಂಟೆ ಬೇಕಾದರೂ ಕೇಳುತ್ತಿದ್ದೆ ಮತ್ತು ಅದನ್ನು ಸಂತೋಷದಿಂದ ಕೇಳುತ್ತಿದ್ದೆ, ಆದರೆ ಸಭಾಕಾರ್ಯಕ್ರಮದ ನಿಗದಿತ ವೇಳೆಯನ್ನು ಪಾಲಿಸಬೇಕಿತ್ತು.
ಅಷ್ಟೆ ಅಲ್ಲದೆ ಇಂದು ಭಾರತಾದಾದ್ಯಂತ ಅನೇಕ ಮಹಿಳೆಯರು ಮಾತನಾಡುತ್ತಿದ್ದಾರೆ. ಜಾತಿಯ ಮಾತನ್ನು ಪ್ರಸ್ತಾಪಿಸಲೇ ಬೇಕೆಂಬ ಒತ್ತಡದ ಇರುವುದರಿಂದ ಹಿಂದೂ ಮಹಿಳೆಯರು ಕೂಡ ಅಸ್ಖಲಿತವಾಗಿ ಪೌರತ್ವ ಕಾಯಿದೆಗಳ ಬಗ್ಗೆ ಮಾತನಾಡುತ್ತಿದ್ದಾರೆ.

ಅಂಕಿಅಂಶದ ಮೇರೆಗೆ ವಾಸ್ತವ ಘಟನೆಗಳ ಮೇರೆಗೆ ರಾಜಕೀಯ ಮತ್ತು ಸಾಮಾಜಿಕ ವಿಶ್ಲೇಷಣೆಯನ್ನು ಮಾಡುತ್ತಿದ್ದಾರೆ. ಮುಸ್ಲಿಂ ಮಹಿಳೆಯರು ಕೂಡ ಮಾತನಾಡುತ್ತಿದ್ದಾರೆ. ಈ ಎಲ್ಲಾ ಮೇಲೆ ಕೇಳಿದ ವಿಶ್ಲೀಷಣೆಗಳ ಜೊತೆಯಲ್ಲಿ ಅವರು ವೈಯುಕ್ತಿಕವಾಗಿ ತಮ್ಮ ದು:ಖವನ್ನು ಕೂಡ ತೋಡಿಕೊಂಡು ಜಾತಿ ಆಧಾರಿತ ತಾರತಮ್ಯವನ್ನು ಕೂಡ ಸಾರಾಸಗಟಾಗಿ ಎತ್ತಿ ತೋರಿಸುತ್ತಿದ್ದಾರೆ. ಅವರ ಮಾತುಗಳು ನಿಜಕ್ಕೂ ಆಲಿಸುವಂತಹದಾಗಿದೆ. ’ ಬೋಲೋ ಇಂಡಿಯ ಬೋಲೋ ’ ಎಂದು ಘೋಷಣೆ ಕೂಗುವ ಅಗತ್ಯವಿಲ್ಲ. ಮಹಿಳೆಯರು ನಾವು ಹೇಳುತ್ತಿದ್ದೇವೆ ಕೇಳಿ ಎಂಬ ತಮ್ಮ ಒಡಲಾಳದ ಬೇಗೆಯನ್ನು ಜನರ ಎದುರಿಗೆ ಇಡುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನ ವತಿಯಿಂದ ನಿಯೋಜಿತರಾಗಿದ್ದ ವಕೀಲರು ಶಾಹೀನ್ ಬಾಗ್ ಮಹಿಳೆಯರನ್ನು ಭೇಟಿಯಾಗಿ ಮಾತನಾಡಿದಾಗ ಅವರ ಕಣ್ಣುಗಳು ತೇವಗೊಂಡವು ಎಂಬ ವಿಡಿಯೋಗಳನ್ನು ನಾವು ನೋಡಿದ್ದೇವೆ. ಅವರೆಲ್ಲರ ಮಾತುಗಳ ಹಿಂದೆ ಭಾಷೆಯಿದೆ, ವಿಷಯವಿದೆ, ಕಾಳಜಿಯಿದೆ ತಾರತಮ್ಯದ ವಿರುದ್ಧದ ನೋವು ಇದೆ, ಮತ್ತು ತಮ್ಮನ್ನು ಆಲಿಸಿ ಪರಿಹಾರವನ್ನ ನೀಡಲೇ ಬೇಕೆಂಬ ಆಗ್ರಹವಿದೆ. ಭಾರತದ ಮಹಿಳೆಯರು ಎಷ್ಟೊಂದು ಮಾತನಾಡುತ್ತಿದ್ದಾರೆ. ಅವರಲ್ಲಿ ಪ್ರಚಾರ ಪ್ರಿಯತೆ ಇಲ್ಲ, ನಾಟಕೀಯತೆ ಇಲ್ಲ, ತಾವುಗಳು ನಾಯಕಿಯರು ಎಂಬ ಭ್ರಮೆ ಇಲ್ಲ, ವೇದಿಕೆ ತಮಗೆ ದೊರಕಲೇ ಬೇಕು, ತಾವು ಅನಿವಾರ್ಯವೆಂಬ ಹಟಗಳಿಲ್ಲ.
ನಲವತ್ತು, ಐವತ್ತು ಸಾವಿರದ ಸಂಖ್ಯೆಯಲ್ಲಿ ಸೇರುವ ಸಭಿಕರು ಏನನ್ನು ಬಯಸುತ್ತಿದ್ದಾರೆ. ಅವರ ಹೋರಾಟದ ಸ್ವರೂಪವೇನು ಎಂದು ತಿಳಿಯ ಬೇಕಾದ ಸೂಕ್ಷ್ಮತೆ, ಅರಿವು, ವಿಸ್ತಾರ, ಓದು, ಸಂಘಟನೆಯ ಕಷ್ಟ ನಷ್ಟಗಳ ಅರಿವು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತಾವು ಉತ್ತರದಾಯಿತ್ವವನ್ನು ಹೊಂದಿದ್ದೇವೆ ಎಂಬ ಪ್ರಜ್ಞೆ ಇರಬೇಕಾದುದು ಅವಶ್ಯಕ. ಇವತ್ತಿನ ಅಮೂಲ್ಯ ಪ್ರಕರಣದ ಸಂದರ್ಭದಲ್ಲಿ ಈ ಮಾತುಗಳನ್ನು ಯಾಕೆ ಆಡುತ್ತಿದ್ದೇನೆಂದರೆ, ಯಾವ ಶಿಸ್ತಿಗೂ ಒಳಪಡದ, ಯಾವ ವೈಚಾರಿಕ ಹಿನ್ನಲೆಯನ್ನೂ ಹೊಂದಿರದ, ಯಾವ ಸೈದ್ಧಾಂತಿಕ ಬದ್ಧತೆಗೂ ಒಳಗಾಗದ ಯಾವ ಅನುಭವಗಳಿಗೂ ಪಕ್ಕಾಗದ ಕೇವಲ ತಮ್ಮ ಮಾತನಾಡುವ ಪ್ರತಿಭೆಯಿಂದ ಮಾತ್ರ ಸಾಮಾಜಿಕ ಸಂದರ್ಭದಲ್ಲಿ ಉಲ್ಕೆಗಳಂತೆ ಪ್ರಕಾಶಿಸಿದ ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳು ಅರ್ಥಮಾಡಿಕೊಳ್ಳಬೇಕಾದ ಕೆಲವು ವಿಷಯಗಳಿವೆ. ಅನುಭ ಎಂಬುದು ವ್ಯಕ್ತಿಗಳನ್ನು ಮಾಗಿಸುತ್ತದೆ. ಅಧ್ಯಯನ ಮತ್ತು ವ್ಯಾಸಂಗ ತೀರ ಅಗತ್ಯವಾದದ್ದು. ವಿಶ್ವದ ಚರಿತ್ರೆಯನ್ನು ಓದಿದ್ದೀರಾ ಅಥವಾ ಭಾರತದ ಚರಿತ್ರೆಯ ಏಳುಬೀಳುಗಳನ್ನು ಕಂಡಿದ್ದೀರ, ಕೊನೆಗೆ ಕರ್ನಾಟಕದ ಇತಿಹಾಸದ ಪರಿಚಯವಾದರು ಇದೆಯಾ, ಸಾಮಾಜಿಕ ತಾರತಮ್ಯಗಳು ಮತ್ತು ಅವುಗಳಿಂದ ಉದ್ಭವಿಸಿರುವ ಹೋರಾಟಗಳ ಅರಿವಿದೆಯೆ, ಭಾಷೆ, ಧ್ವನಿ, ಹಾವಭಾವ ಇವು ಮೂರನ್ನೇ ಬಂಡವಾಳವಾಗಿಸಿಕೊಂಡು, ನಾಟಕೀಯತೆಯಿಂದ ಬಾಯಿಗೆ ಬಂದದ್ದನ್ನು ಹೇಳುತ್ತ, ಶಿಳ್ಳೇ ಚಪ್ಪಾಳೆ ಗಿಟ್ಟಿಸುವ ಸಂಸ್ಕೃತಿ ಎಲ್ಲಿಯ ವರೆಗೆ ಯಾರನ್ನು ಬೆಳಿಸೀತು ? ಈ ಭ್ರಮಾ ಲೋಕದಿಂದ ಹೊರಬರಬೇಕಾದರೆ ಇದೊಂದು ಸೂಜಿಯ ರಂಧ್ರ ಅಗತ್ಯವಿತ್ತು. ಏಕೆಂದರೆ ಅಮೂಲ್ಯಳಾಗಲೀ ಪ್ರಕರಣದಿಂದ ಚಳವಳಿಗೆ ಹಿನ್ನಡೆಯಾಗಿದೆ ಎಂಬ ಕಳವಳ ಮತ್ತು ಆತಂಕವನ್ನು ಮೆಟ್ಟಿ ನಿಂತು ತನ್ನ ಬಾಹುಗಳನ್ನು ವಿಸ್ತರಿಸಿಕೊಳ್ಳಬಲ್ಲ ಸಾಮರ್ಥ್ಯ ಅದರಲ್ಲಿ ಭಾಗವಹಿಸುತ್ತಿರುವ ಚಳುವಳಿಗಾರರಿಗೆ ಇದೆ. ಅಮೂಲ್ಯಳಾಗಲೀ ಅಥವಾ ಇನ್ಯಾರೇ ಆಗಲೀ ವೇದಿಕೆಯನ್ನು ಹತ್ತದಿದ್ದಲ್ಲಿ ಯಾವುದೇ ನಷ್ಟ ಚಳುವಳಿಗೆ ಉಂಟಾಗುವುದಿಲ್ಲ. ಈ ಹೋರಾಟದ ಬೆನ್ನಲುಬು ಸಹಸ್ರ ಲಕ್ಷಾಂತರ ಹೆಣ್ಣುಮಕ್ಕಳಿದ್ದಾರೆ.

ಪೌರತ್ವ ವಿರೋಧಿ ಕಾರ್ಯಕ್ರಮಗಳನ್ನು ಸಭೆಗಳನ್ನು ಆಯೋಜನೆ ಮಾಡುತ್ತಿರುವ ಆಯೋಜರಲ್ಲಿ ನನ್ನದೊಂದು ಪ್ರಶ್ನೆ.ಸಭೆಯನ್ನು ಆಯೋಜನೆ ಮಾಡಿ ಭಾಷಣಾಕಾರರನ್ನು ಆಹ್ವಾನಿಸಿ, ಸಭೆಯ ಉದ್ದೇಶವನ್ನು ಪ್ರಸ್ತುತ ಪಡಿಸುವ ಮಹತ್ವದ ಕಾರ್ಯವನ್ನು ಮಾಡುತ್ತಿರುವ ನಿಮಗೆ ಆ ಎಳೆ ಹೆಣ್ಣುಮಕ್ಕಳು ನಿಮ್ಮ ಕಾರ್ಯಕ್ರಮದಲ್ಲಿ ಹೇಗೆ ಮತ್ತು ಯಾವ ಕಾರಣಕ್ಕೆ ಅವಿಭಾಜ್ಯ ಅಂಗವಾದರೂ ? ಅದೊಂದು ಮನೋರಂಜನೆಯ ಸಭೆಯೇ ಅಥವಾ ಹೋರಾಟದ ಸಭೆಯೆ ಎಂಬುದನ್ನು ನಿರ್ಧರಿಸಲು ನಿಮಗೆ ಅಸಾಧ್ಯವಾದಾಗ ಯಾವ ಪರಿಣಾಮಗಳು ಉಂಟಾಗುತ್ತವೆ ಎಂಬುದನ್ನು ಗಮನಿಸಿ ಇನ್ನೂ ಬಹುತೇಕ ಮುಸ್ಲಿಂ ಸಮುದಾಯದವರು ಸಹಸ್ರಾರು ಜನರನ್ನು ಸಂಘಟಿಸಿ ಮಾಡುತ್ತಿರುವ ಪೌರತ್ವ ವಿರೋಧಿ ಸಭೆಗಳಲ್ಲಿ ಎಳೆ ಹೆಣ್ಣುಮಕ್ಕಳನ್ನು ನಿಮ್ಮ ಸಮುದಾಯದ ನಾಯಕರು ಎಂದು ಬಿಂಬಿಸಲು ಯಾಕೆ ಅವಕಾಶ ಕೊಟ್ಟಿರೀ ? ಮತ್ತು ಅವರ ನಾಯಕತ್ವವನ್ನು ಸಮುದಾಯದ ಜನರು ಒಪ್ಪಿ ಸಭೆಗಳಲ್ಲಿ ನಿರಂತರವಾದ ಅವಕಾಶವನ್ನು ಕೊಟ್ಟು ಶಿಳ್ಳೇ ಚಪ್ಪಾಳೆಗಳಿಗೆ ಆ ಸಭೆಯ ಸ್ವರೂಪವನ್ನು ಕುಂಠಿತಗೊಳಿಸಿದುದರ ಇತಿಹಾಸ ಈಗಾಗಲೇ ದಾಖಲಾಗಿದೆ ಮುಂದೇ ಇದಕ್ಕೆ ಉತ್ತರ ಕೊಡಬೇಕಾದವರು ನೀವೇ ಆಗಿರುತ್ತೀರಿ.
ಅಮೂಲ್ಯ ನಿನಗೆ ಹೇಳುವುದೇನೆಂದರೆ, ನಿನ್ನ ತಂದೆ-ತಾಯಿಯರು ನಿನ್ನ ಬಗ್ಗೆ ಅತೀವ ಕಾಳಜಿಯನ್ನು ವಹಿಸಿ ದುಃಖ ಪಡುತ್ತಾ, ಹೋರಾಟಗಾರರಲ್ಲಿ ಅನೇಕ ಜನರಿಗೆ ಫೋನ್ ಮಾಡಿ ನಿನ್ನನ್ನು ಹುಡುಕಾಡಿರುವ ಪ್ರಸಂಗಗಳು ನನಗೆ ತಿಳಿದು ಬಂದಿದೆ. ಕೊನೆ ಪಕ್ಷ ನಿನ್ನ ತಂದೆ ತಾಯಿಯ ಬಗ್ಗೆ ಕೂಡ ನಿನಗೆ ಯಾವುದೇ ಕಾಳಜಿ ಇಲ್ಲಾ. ನಾನು ಇದುವರೆಗೆ ನಿನ್ನನ್ನು ನೋಡಿಲ್ಲ, ನೇರವಾಗಿ ನಿನ್ನ ಭಾಷಣವನ್ನು ಕೇಳಿಲ್ಲಾ ಆದರೆ ವಿಡಿಯೋಗಳಲ್ಲಿ ನೋಡಿದ್ದೇನೆ. ನೆನ್ನೆ ನಿನ್ನ ಪ್ರಕರಣದ ಸುದ್ಧಿ ಪ್ರಸಾರವಾಗುತ್ತಿದ್ದಂತೆಯೇ ನನ್ನಆಲೋಚಿಸುವ ಶಕ್ತಿ ಕ್ಷಣಕಾಲ ನಿಂತೇಹೋಯಿತು. ಆಫೀಸಿನ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗಲಿಲ್ಲ. ನಾನು ಆಫೀಸನ್ನು ಬಿಟ್ಟು ಬಂದು ನನ್ನ ಅತ್ಯಂತ ಕ್ಷೆಭೆಗೆ ಒಳಗಾದ ಮನಸ್ಸಿನೊಡನೆ ನಿನಗಾಗಿ ನಿನ್ನ ಸುರಕ್ಷತೆಗಾಗಿ ಪ್ರಾರ್ಥನೆ ಮಾಡಿದೆನೆಂದರೆ ನಂಬುತ್ತೀಯಾ? ಆ ವೇದಿಕೆಯಿಂದ ವೇದಿಕೆಯಲ್ಲಿ ಸುತ್ತುವರೆದ ಜನ, ಪೋಲೀಸರು ನಿನ್ನನ್ನು ತಳ್ಳಿಕೊಂಡು ಹೋದ ಆ ಘಟನೆ ಮತ್ತು ಅಜ್ಙಾದ ಸ್ಥಳಕ್ಕೆ ಕರೆದೊಯ್ದರು ಎಂಬ ಎಲೆಕ್ಟ್ರಾನಿಕ್ ಮಾಧ್ಯಮದ ಸುದ್ಧಿ ಎಲ್ಲವೂ ನನ್ನ ಮೇಲೆ ಅಪಾರ ಪರಿಣಾಮವನ್ನು ಬೀದ್ದು, ನಾನು ಇಡೀ ರಾತ್ರಿ ಮಲಗಲು ಸಾಧ್ಯವಾಗಲಿಲ್ಲಾ ಅನ್ನುವುದು ಕೂಡ ಅಷ್ಟೇ ನಿಜ.
ಈ ಸಂದರ್ಭದಲ್ಲಿ ಗಮನಾರ್ಹವಾದ ಇನ್ನೊಂದು ಅಂಶವೇನೆಂದರೆ, ಮೈಸೂರಿನ ನಳಿನಿ ಪ್ರಕರಣದಲ್ಲಿ, ಬೀದರ್‌ನ ಶಾಹೀನ್ ಶಾಲೆಯ ಪ್ರಕರಣದಲ್ಲಿ ಮತ್ತು ಸಿರಾಜ್ ಬಿಸರಳ್ಳಿ ಪ್ರಕರಣದಲ್ಲಿ ವಕೀಲರುಗಳ ತಂಡವೇ ಕಾನೂನು ಕ್ರಮವನ್ನು ಜರುಗಿಸಲು ಕಟೀಬದ್ಧವಾಗಿ ನಿಂತಿತ್ತು. ನಿನ್ನ ಪ್ರಕರಣದಲ್ಲಿ ಯಾರಿದ್ದಾರೆ, ಯಾಕೆ ಹೀಗಾಯಿತು, ಇನ್ನೂ ಮುಂದೆ ನಿನಗೆ ಈ ವೇದಿಕೆಗಳಾದರೂ ಸಿಗಬಹುದೇ, ಸಿಗುವ ಸಾಧ್ಯತೆ ಇದೆಯೇ ಇವುಗಳೆಲ್ಲವನ್ನು ಕೂಡ ನೀನು ಆತ್ಮನಿರೀಕ್ಷಣೆ ಮಾಡಿಕೊಳ್ಳಬೇಕಾದ ಗಳಿಗೆ ಇದೆಂದು ನನಗೆ ಅನಿಸುತ್ತದೆ. ನೀನು ಯಾಕಾಗಿ ಪಾಕಿಸ್ತಾನದ ಪರ ಘೋಷಣೆ ಹಾಕಿದಿಯೋ, ನಿನಗೆ ಮುಂದೆ ಇನ್ನೇನಾದರೂ ಹೇಳಲಿತ್ತೋ ಅದು ಕೂಡ ನನಗೆ ಗೊತ್ತಿಲ್ಲ. ಯಾವುದೋ ಒಂದು dramatic ಆದಂತಹ ವೇದಿಕೆಯ ತಂತ್ರಗಾರಿಕೆಯಿಂದ ನೀನು ಜನರನ್ನು ಬೆಚ್ಚಿ ಬೀಳಿಸಿ ಯಾವುದೋ ಒಂದು ಅಂಶವನ್ನು ಸಾಬೀತು ಪಡಿಸಲು ಪ್ರಯತ್ನಿಸುತ್ತಿದ್ದೆಯೋ ನನಗೆ ಗೊತ್ತಿಲ್ಲ. ಇದು ನಿಷ್ಪಕ್ಷಪಾತ ತನಿಖೆಯಿಂದ ಮಾತ್ರ ಹೊರ ಬರಬೇಕಿದೆ. ಏನೇ ಆಗಲಿ ನಾನು ನಿನ್ನನ್ನು ದೇಶದ್ರೋಹಿಯೆಂದು ಕರೆಯುವುದಿಲ್ಲ, ಏಕೆಂದರೆ ದೇಶದ್ರೋಹಿಗಳು ಬೇರೆ ಇದ್ದಾರೆ ಆ ದೇಶದ್ರೋಹಿಗಳ ಯಾವ ಹೆಸರನ್ನು ಬೆನ್ನಿಗೆ ಇರಿದವರ ಯಾವ ಗುರುತನ್ನು ಮತ್ತು ದೇಶವನ್ನುಮಾರಾಟ ಮಾಡಿದವರ ಯಾವ ಪರಿಚಯವನ್ನು ಕೂಡ ಹೇಳದೆ ಎಲ್ಲರೂ ಹೇಳಬೇಕಾದವರು ಅದನ್ನು ಬಚ್ಚಿಟ್ಟು ಅವರ ರಕ್ಷಣೆ ಮಾಡುತ್ತಿದ್ದಾರೆ. ಒಂದು ವರದಿ ಹೀಗೆ ಹೇಳುತ್ತೆ. ಹೀಗಾಗಿ ಅಸಲಿ ದೇಶದ್ರೋಹಿಗಳ ಮುಖಗಳು ಚೆಹರೆಗಳು ಬೇರೆಯಿವೆ ಇವೆ. ಅವರ ಮುದ್ದಾದ ಹೆಸರುಗಳು ಇಂತಿವೆ, ಸತೀಶ್ ಮಿಶ್ರಾ, ದೀಪಕ್ ತ್ರಿವೇದಿ, ಪಂಕಜ್ ಐಯ್ಯರ್, ಸಂಜೀವ್ ಕುಮಾರ್, ಸಂಜಯ್ ತ್ರಿಪಾಠಿ, ಬಬ್ಲು ಸಿಂಗ್, ವಿಕಾಸ್ ಕುಮಾರ್, ರಾಹುಲ್ಸಿಂಗ್, ಸಂಜಯ್ ರಾವತ್, ದೇವ್ ಗುಪ್ತಾ, ರಿಂಕುತ್ಯಾಗಿ, ರಿಷಿ ಮಿಶ್ರಾ, ವೇದ್ ರಾಮ್ . ಇವರೆಲ್ಲಾ ಭಾರತೀಯ ನೌಕಾದಳದ ಅಧಿಕಾರಿಗಳು. ಭಾರತದ ರಹಸ್ಯಗಳನ್ನು ಪಾಕಿಸ್ತಾನಕ್ಕೆ ಒದಗಿಸಿಕೊಟ್ಟ ಪರಮವೀರು. ಇತ್ತೀಚೆಗೆ ವಿಜಯವಾಡದಲ್ಲಿ ಅವುಗಳ ಮೇಲೆ ಕೇಸ್ ರಜಿಸ್ಟರ್ ಆಗಿ ಅವರನ್ನು ಅರೆಸ್ಟ್ ಮಾಡಲಾಗಿದೆ.
ಅವಳಂತೆ ಲಂಗುಲಗಾಮಿಲ್ಲದೆ ಮಾತನಾಡುವವರಿಗೆ ನಮ್ಮ ಕಡೆ ಛೋಟಾ ಮೂ ಬಡೀ ಬಾತ್ ” ಎನ್ತಾರೆ. ( ಚಿಕ್ಕ ಬಾಯಿಯಿಂದ ದೊಡ್ಡ ಮಾತು) ಈಗ ಅಮೂಲ್ಯ ಮತ್ತಾಕೆಯ ಗೆಳತಿಯರು ಮಾಡಬಹುದಾದ ಜರೂರು ಕೆಲಸವೊಂದಿದೆ. ಇನ್ನು ವೇದಿಕೆಗಳಲ್ಲಿ ಬಹುಶಃ ಅವರಿಗೆ ಆಹ್ವಾನ ಇರೋದಿಲ್ಲ, ಅಥವಾ ಇದ್ದರೂ ಕೆಲವು ದಿನದ ವೇದಿಕೆಸನ್ಯಾಸ ವನ್ನು ಸ್ವೀಕರಿಸಿದರೆ ಉತ್ತಮ. ವೇದಿಕೆ, ಮೈಕ್, ಅಪಾರ ಜನಸ್ತೋಮ ಎಲ್ಲವನ್ನು ಬದಿಗಿಟ್ಟು, ಹುಸಿ ನಾಯಕತ್ವದ ಬೆಲೂನನ್ನು ಆಕಾಶಕ್ಕೆ ಹಾರಿ ಬಿಟ್ಟು ಕೈ ತೊಳೆದು ತಮ್ಮ ವ್ಯಾಸಂಗದಲ್ಲಿ ನಿರತರಾಗೋದು. ಅದರ ಜೊತೆಯಲ್ಲಿ ಮಿನಿಮಮ್ ಒಂದು ವರ್ಷದವರೆಗೆ ಯಾವುದಾದರೂ ಸಂಘಟನೆ ಅಥವಾ ಎನ್ ಜಿ ಒ ಸೇರಿಕೊಂಡು, ಆಫೀಸಿನ ಕಸಗುಡಿಸಿ, ಫೈಲ್ಗಳನೆತ್ತಿ ಪೋಸ್ಟರ್ ಅಂಟಿಸಿ ಜಮಖಾನೆ ಹಾಸಿ, ಕುರ್ಚಿಗಳನೆತ್ತಿ ಜೋಡಿಸಿ, ಬ್ಯಾನರ್ಗಳ ತಡಿಕೆಗಳನ್ನು ಒಂದು ಕಡೆ ಜೋಡಿಸಿ, ಜೊತೆಯಲ್ಲಿ ಅಧ್ಯಯನ ನಡೆಸುತ್ತಾ ಸಮಾಜದ ಒಳ ಸುಳಿಗಳ ವಾಸ್ತವ ಅನುಭವಗಳನ್ನು ಪಡೆದುಕೊಳ್ಳುತ್ತಾ ಸಾಮಾನ್ಯ ಶಿಬಿರಾರ್ಥಿಯಾಗಿ ಕಮ್ಮಟಗಳಲ್ಲಿ ಭಾಗವಹಿಸುತ್ತಾ ವೈಚಾರಿಕ ಪ್ರಸ್ತುತತೆಯನ್ನು ಅಳವಡಿಸಿಕೊಳ್ಳುವುದು. ಆದ್ಯತೆಯ ಕೆಲಸವೆಂದರೆ, ವಕೀಲರ ನೆರವನ್ನು ಕೋರುವುದು ಮತ್ತು ಜಾಮೀನಿನ ಮೂಲಕ ಬಿಡುಗಡೆ ಪಡೆಯುವುದು.
ಇಷ್ಟೆಲ್ಲಾ ಏಕೆ ಹೇಳಬೇಕಾಯಿತೆಂದರೆ, ನೀನು ಬಹುದೊಡ್ಡ ಪ್ರಮಾದವನ್ನು ಎಸಗಿದ್ದೀಯಾ. ಖುದ್ದು ನಿನ್ನ ವ್ಯಕ್ತಿತ್ವಕ್ಕೆ ಮತ್ತು ಕುಟುಂಬಕ್ಕೆ ಅಪಾರ ಫಾಸಿಯಾಗಿದೆ. ಪೌರತ್ವ ವಿರೋಧಿ ಹೋರಾಟದ ಸಭೆಗಳ ಆಯೋಜಕರು ಆತ್ಮ ನಿರೀಕ್ಷೆಣೆ ಮಾಡಿಕೊಳ್ಳುವಲ್ಲಿ ತಮ್ಮ ತಪ್ಪುಗಳನ್ನು ಸರಿ ಪಡಿಸಿಕೊಳ್ಳುವಲ್ಲಿ ಶ್ರಮಿಸಬೇಕು. ಆದರೆ, ಅಮೂಲ್ಯ ಮಾಡಿರುವ ಘನ ಘೋರ ಪ್ರಮಾದ ಅಕ್ಷಮ್ಯ. ಅದಕ್ಕೆ ಈಗಾಗಲೇ ಅವಳು ಬೆಲೆ ತೆತ್ತಿದ್ದಾಳೆ. ಮುಂದೆಯೂ ಕೂಡಾ ತೆರೆಲಿದ್ದಾಳೆ. ಈ ಎಚ್ಚರಿಕೆ ಮತ್ತು ವಿವೇಚನೆ ಆಕೆಯ ಇನ್ನಿತರೇ ಗೆಳತಿಯರಿಗೂ ಅನ್ವಯವಾಗುತ್ತದೆ. ನಿನ್ನ ಹೆಸರು ಮಾತ್ರ ಅಮೂಲ್ಯವಲ್ಲ, ನಿನ್ನ ಶಕ್ತಿ, ಸಾಮರ್ಥ್ಯ, ಆಲೋಚನೆ, ವೈಕ್ತಿತ್ವ, ನಡವಳಿಕೆ ಎಲ್ಲವೂ ಮಾಗುತ್ತಾ ನಾಯಕತ್ವದ ಭ್ರಮೆಯಿಂದ ಮತ್ತು ಪ್ರಚಾರಪ್ರಿಯತೆಯಿಂದ ಹೊರಬಂದರೆ ಈ ಸಮಾಜಕ್ಕೆ ನೀನು ಅಮೂಲ್ಯವಾಗುವ ಎಲ್ಲಾ ಸಾಧ್ಯತೆಗಳು ಇವೆ.