ಮೂಡಬಿದಿರೆಯ ಕೆ.ಅಮರನಾಥ ಶೆಟ್ಟಿ ಕರ್ನಾಟಕ ಕರಾವಳಿಯಲ್ಲಿ ಮೂಲ ಜನತಾ ಪರಿವಾರದ ಕೊನೆಯ ಕೊಂಡಿ. ಎಂಭತ್ತು ವರ್ಷಗಳ ಜೀವನ ಮುಗಿಸಿ 27 ಜನವರಿ 2020ರಂದು ಅಸ್ತಂಗತರಾಗಿದ್ದಾರೆ. ರಾಜ್ಯ ಕಂಡ ಅತ್ಯಂತ ಸರಳ, ಸಜ್ಜನ ರಾಜಕಾರಣಿ ಅಮರನಾಥ ಶೆಟ್ಟಿ. ಕರಾವಳಿ ಬಂಟ ಸಮುದಾಯ ಗುತ್ತಿನ ಮನೆಯವರಾದರೂ ವಿಭಿನ್ನ ವ್ಯಕ್ತಿತ್ವ. ಕರಾವಳಿಯ ರಾಜಕಾರಣಿಗಳಿಂದ ಭಿನ್ನವಾಗಿ ಕೇವಲ ರಾಜಕೀಯ ಮಾಡದೆ ಕನ್ನಡ, ಸಂಸ್ಕೃತಿ, ಸಿನಿಮಾ ಕ್ಷೇತ್ರದಲ್ಲಿ ಅಭಿರುಚಿ ಹೊಂದಿದವರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಜೆ.ಎಚ್.ಪಟೇಲ್, ರಾಮಕೃಷ್ಣ ಹೆಗಡೆ, ಸಿದ್ದರಾಮಯ್ಯ ಅವರ ಒಡನಾಡಿಯಾಗಿದ್ದ ಶೆಟ್ಟರು ಜನತಾಪರಿವಾರದಿಂದ ಮತ್ತೊಂದು ಪಕ್ಷಕ್ಕೆ ಕಾಲಿಟ್ಟವರಲ್ಲ. ಕರಾವಳಿ ಜಿಲ್ಲೆಗಳಲ್ಲಿ ಹಳೆಯ ತಲೆಮಾರಿನ ಕಾಂಗ್ರೆಸ್ಸೇತರ ರಾಜಕೀಯ ನಾಯಕರಲ್ಲಿ ಮಹತ್ವದ ಸ್ಥಾನ ಪಡೆದಿರುವ ಕೆಲವೇ ಕೆಲವು ಮಂದಿಯಲ್ಲಿ ಅಮರನಾಥ ಶೆಟ್ಟಿ ಒಬ್ಬರು.
1972ರಲ್ಲಿ ಸಂಸ್ಥಾ ಕಾಂಗ್ರೆಸ್ ಮೂಲಕ ವಿಧಾನಸಭಾ ಆಖಾಡಕ್ಕೆ ಇಳಿದ ಅವರು ಮೊದಲೆರಡು ಬಾರಿ ಸೋತರೂ 1983ರಲ್ಲಿ ಮೊದಲ ಬಾರಿಗೆ ಜನತಾ ಪಾರ್ಟಿ ಶಾಸಕರಾಗಿ ಮೂಲ್ಕಿ-ಮೂಡಬಿದಿರೆ ವಿಧಾನಸಭಾ ಕ್ಷೇತ್ರದಿಂದ ಗೆಲ್ಲುತ್ತಾರೆ. ಅದೇ ಚುನಾವಣೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋತು ಬಿಜೆಪಿ- ಜನತಾ ಪಾರ್ಟಿ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುತ್ತಾರೆ. ಬಿಜೆಪಿ ಶಾಸಕರ ಕಾಟ ತಾಳಲಾರದೆ ಲೋಕಸಭಾ ಚುನಾವಣೆ ಅನಂತರ ಎರಡೇ ವರ್ಷದಲ್ಲಿ ಚುನಾವಣೆ ಎದುರಿಸಿದಾಗ ಮತ್ತೆ 1985ರಲ್ಲಿ ಅಮರನಾಥ ಶೆಟ್ಟಿ ಮರು ಆಯ್ಕೆ ಆಗುತ್ತಾರೆ.
ಮೊದಲ ಅವಧಿಯಲ್ಲಿ ರಾಮಕೃಷ್ಣ ಹೆಗಡೆ ಅವರು ಶೆಟ್ಟರನ್ನು ಪ್ರವಾಸೋದ್ಯಮ ಮತ್ತು ಮುಜರಾಯಿ ಇಲಾಖೆಯ ಸಚಿವರಾಗಿ ಮಾಡುತ್ತಾರೆ. ಎರಡನೇ ಬಾರಿಗೆ ಗೆದ್ದಾಗ ಅವರಿಗೆ ಮೊದಲ ಎರಡು ವರ್ಷ ಸಚಿವ ಸ್ಥಾನ ದೊರೆಯುವುದಿಲ್ಲ. ಅನಂತರ ವರ್ಷಗಳಲ್ಲಿ ಯುವಜನ ಸೇವೆ, ಕ್ರೀಡಾ ಖಾತೆ, ಬಂದರು ಮತ್ತು ಮೀನುಗಾರಿಕೆ, ಧಾರ್ಮಿಕ ಮತ್ತು ದತ್ತಿ ಇಲಾಖೆ ಅವರ ಪಾಲಿಗೆ ದೊರೆಯುತ್ತದೆ.
1994ರಲ್ಲಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗುವ ಅಮರನಾಥ ಶೆಟ್ಟರು ದೇವೇಗೌಡ ಅವರ ಮಂತ್ರಿ ಮಂಡಲ ಸ್ಥಾನ ಪಡೆಯುವುದಿಲ್ಲ. ಅನಂತರ, ದೇವೇಗೌಡರು ಪ್ರಧಾನಿಯಾದಾಗ ಜೆ.ಎಚ್.ಪಟೇಲರು ಮುಖ್ಯಮಂತ್ರಿ ಆಗಿರುವಾಗ ಸರಕಾರದ ಅಂತಿಮ ಹಂತದಲ್ಲಿ ಕಾರ್ಮಿಕ ಸಚಿವರಾಗಿದ್ದರು.
ಅನಂತರ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಅಮರನಾಥ ಶೆಟ್ಟಿ ನಿರಂತರವಾಗಿ ಸೋಲುತ್ತಾರೆ. ಹತ್ತು ಬಾರಿ ಚುನಾವಣೆಗೆ ಸ್ಪರ್ಧಿಸಿ ಏಳು ಬಾರಿ ಸೋಲುಣ್ಣ ಬೇಕಾಗುತ್ತದೆ. ಇದಕ್ಕೆ ಪ್ರಾಮುಖ್ಯ ಕಾರಣ ಅವರು ಸೇರಿದ್ದ ಸಂಯುಕ್ತ ಜನತಾದಳ 1999ರಲ್ಲಿ ಭಾರತೀಯ ಜನತಾ ಪಾರ್ಟಿಯೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಂಡಿರುವುದು. ಸಚಿವರಾಗಿ ಸ್ಪರ್ಧಿಸಿದ ಅಮರನಾಥ ಶೆಟ್ಟಿ ಅವರನ್ನು 1999ರ ಚುನಾವಣೆಯಲ್ಲಿ ಕ್ಷೇತ್ರದ ಜನತೆ ಸೋಲಿಸಿ ಅಭಯಚಂದ್ರ ಜೈನ್ ಎಂಬವರನ್ನು ಗೆಲ್ಲಿಸುತ್ತಾರೆ.
ದೇವೇಗೌಡ ಮತ್ತು ರಾಮಕೃಷ್ಣ ಹೆಗಡೆ ಅವರಿಂದಾಗಿ ಜನತಾದಳ ಇಬ್ಭಾಗವಾದಾಗ ಕರಾವಳಿ ಮತ್ತು ಕೊಡಗಿನ ಬಹುತೇಕ ಮುಖಂಡರು ತಟಸ್ಥರಾಗುತ್ತಾರೆ. ಇವರಲ್ಲಿ ಪ್ರಮುಖ ಸಚಿವರಾಗಿದ್ದ ಜಯಪ್ರಕಾಶ್ ಹೆಗ್ಡೆ, ಬಿ.ಎ.ಮೊಯ್ದೀನ್, ಜನತಾದಳದ ರಾಜ್ಯ ಉಪಾಧ್ಯಕ್ಷರಾಗಿದ್ದ ಎಂ.ಸಂಜೀವ, ಎಂ.ಸಿ.ನಾಣಯ್ಯ ಇತ್ಯಾದಿ. ಇವರಲ್ಲಿ ಮೊಯ್ದೀನ್ ತಮ್ಮ ಹಿಂದಿನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಾರೆ. ಜೆಡಿ(ಯು) ಸೇರಿದ್ದ ಪರಿಣಾಮ ಮೂಡಬಿದಿರೆಯ ಜಾತ್ಯತೀತ ಮತದಾರರು ಆದಾಗಲೇ ಕಾಂಗ್ರೆಸ್ ಪಾಳಯಕ್ಕೆ ಬದಲಾಗಿದ್ದರು. 2004ರ ವಿಧಾನಸಭೆಗೂ ಮುನ್ನ ಎಚ್.ಡಿ.ದೇವೇಗೌಡ ಮತ್ತು ಸಿದ್ದರಾಮಯ್ಯ ಅವರು ಮೂಡಬಿದಿರೆಗೆ ಆಗಮಿಸಿ ಅಮರನಾಥ ಶೆಟ್ಟಿ ಅವರನ್ನು ಜಾತ್ಯತೀತ ಜನತಾದಳಕ್ಕೆ ಸೇರ್ಪಡೆ ಮಾಡುತ್ತಾರೆ. ಅಂದಿನ ಎಸ್.ಎಂ.ಕೃಷ್ಣ ಸರಕಾರದ ವಿರುದ್ಧ ಜನಾಭಿಪ್ರಾಯ ಇರುವ ಸೂಚನೆ ಅರಿತ ದೇವೇಗೌಡರು ರಾಜ್ಯದಾದ್ಯಂತ ಓಡಾಡಿ ಪಕ್ಷ ಸಂಘಟಿಸಿದ್ದರು.
ಆದರೆ, 2004 ವಿಧಾನಸಭಾ ಚುನಾವಣೆ ಅಮರನಾಥ ಶೆಟ್ಟಿ ಅವರಿಗೆ ಅನುಕೂಲ ಮಾಡಿಕೊಡದಿದ್ದರೂ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಧರಂ ಸಿಂಗ್ ನೇತೃತ್ವದಲ್ಲಿ ಅಧಿಕಾರ ಹಿಡಿಯಿತು. 20 ತಿಂಗಳ ಅನಂತರ ದೇವೇಗೌಡ ಪುತ್ರ ಎಚ್.ಡಿ.ಕುಮಾರಸ್ವಾಮಿ ಅಧಿಕಾರ ಪಡೆದರು. ಅನಂತರ ನಡೆದ ಇನ್ಯಾವುದೇ ಚುನಾವಣೆಯಲ್ಲಿ ಜಯಗಳಿಸಿಲು ವಿಫಲರಾದ ಅಮರನಾಥ ಶೆಟ್ಟಿ 2016ರಲ್ಲಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುತ್ತಾರೆ. 1999 ಅನಂತರ ಸತತ ನಾಲ್ಕು ಚುನಾವಣೆಯಲ್ಲಿ ಸೋತರೂ ಕೂಡ ಅಮರನಾಥ ಶೆಟ್ಟಿ ಅವರು ಸಮಾಜಸೇವೆ ಮತ್ತು ರಾಜಕೀಯ ಚಟುವಟಿಕೆಯಿಂದ ದೂರ ಆಗಿರಲಿಲ್ಲ.
ತನ್ನ ಮೂವತ್ತರ ಹರೆಯದಲ್ಲೇ ರಾಜಕೀಯ ಚಟುವಟಿಕೆ ಆರಂಭಸಿದ್ದ ಶೆಟ್ಟರು, ಪ್ರವೇಶ ಮಾಡಿದ್ದ ಅವರು, 1965ರಲ್ಲಿ ಕಾರ್ಕಳ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯತಿನ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು. ಅನಂತರ ಮೂಡಬಿದಿರೆ ಪುರಸಭೆ ಅಧ್ಯಕ್ಷರಾಗಿ ಕೂಡ ಆಡಳಿತ ನಡೆಸಿದ್ದರು. ಕಾರ್ಕಳ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಖ್ಯಸ್ಥರಾಗಿದ್ದ ಅವರು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಮೂಡಬಿದಿರೆಯ ಡಾ.ಮೋಹನ ಆಳ್ವ ಅವರ ಆಳ್ವಾಸ್ ಎಜ್ಯುಕೇಶನ್ ಫೌಂಡೇಷನಿನ ಟ್ರಸ್ಟಿ ಕೂಡ ಆಗಿದ್ದ ಅಮರನಾಥ ಶೆಟ್ಟಿ ಇತ್ತೀಚೆಗೆ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿ ತಮ್ಮ ವಿರೋಧ ವ್ಯಕ್ತಪಡಿಸಿದ್ದರು.