ಭಾರತದ ಆರ್ಥಿಕತೆ ಹಿಂಜರಿತದತ್ತ ಸಾಗಿದ್ದು, ನಮ್ಮ ಜಿಡಿಪಿ ನೆರೆಯ ಬಡ ರಾಷ್ಟ್ರಗಳಿಗಿಂತ ಕೆಳಮಟ್ಟಕ್ಕೆ ಇಳಿಯುವ ಅಪಾಯದ ಹೊಸ್ತಿಲಲ್ಲಿರುವಾಗ, ಬಡತನ ನಿವಾರಣೆಗೆ ಪರಿಣಾಮಕಾರಿ ಮಾರ್ಗೋಪಾಯಗಳನ್ನೂ ರೂಪಿಸಿರುವ ಭಾರತೀಯ ಸಂಜಾತ ಅಮೆರಿಕದ ಅರ್ಥಶಾಸ್ತ್ರಜ್ಞ ಅಭಿಜಿತ್ ಮುಖರ್ಜಿ ಅವರು ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದೇಶದ ಆರ್ಥಿಕತೆ ಕುರಿತಂತೆ ನಿತ್ಯವೂ ನಕಾರಾತ್ಮಕ ಸುದ್ದಿಗಳಿಗೆ ತೆರೆದುಕೊಳ್ಳುತ್ತಿದ್ದವರಿಗೆ ಇದು ನಿಜಕ್ಕೂ ಸಂತಸ ತರುವ ಸಂಗತಿ. ಬಡತನ ನಿವಾರಣೆಯನ್ನು ಮುಖ್ಯ ಗುರಿಯನ್ನಾಗಿಸಿ ತಮ್ಮ ಸಂಗಾತಿ ಮತ್ತು ಸಹೋದ್ಯೋಗಿಗಳ ಜತೆ ಕಾರ್ಯನಿರ್ವಹಿಸುತ್ತಿರುವ ಅಭಿಜಿತ್ ಬ್ಯಾನರ್ಜಿ ಅವರ ಮೂಲ ಕಾರ್ಯಕ್ಷೇತ್ರವು ಗ್ರಾಮೀಣ ಪ್ರದೇಶ ಮತ್ತು ಗ್ರಾಮೀಣ ಅಭಿವೃದ್ಧಿ. ಹೀಗಾಗಿ ಅವರು ಗ್ರಾಮೀಣಾಭಿವೃದ್ಧಿ ಬಗ್ಗೆ ಹೆಚ್ಚು ನಿಖರವಾಗಿ ವಾಸ್ತವಿಕವಾಗಿ ವಿಶ್ಲೇಷಣೆ ಮಾಡಬಲ್ಲವರು. ಪ್ರಧಾನಿ ನರೇಂದ್ರ ಮೋದಿ 2016ರಲ್ಲಿ ಜಾರಿಗೆ ತಂದ ಅಪನಗದೀಕರಣ ಯೋಜನೆಯ ಹಿಂದಿನ ತಾರ್ಕಿಕತೆಯೇ ನನಗೆ ಅರ್ಥವಾಗಿಲ್ಲ ಎಂದು ಹೇಳುವ ನೇರ ನುಡಿಯ ವ್ಯಕ್ತಿ ಅಭಿಜಿತ್ ಬ್ಯಾನರ್ಜಿ.
ಮೆಸಾಚುಸೆಟ್ಸ್ ಇನ್ಟಿಸ್ಟೂಟ್ ಆಫ್ ಟೆಕ್ನಾಲಜಿಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿರುವ ಅಭಿಜಿತ್ ಬ್ಯಾನರ್ಜಿ ಈ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿದ್ದರು. ಅಭಿವೃದ್ಧಿ ಅರ್ಥಶಾಸ್ತ್ರವನ್ನು ಕೇಂದ್ರವಾಗಿರಿಸಿಕೊಂಡು ಸಂಶೋಧನೆ ಮಾಡುತ್ತಿರುವ ಬ್ಯಾನರ್ಜಿ ತಮ್ಮ ಸಂಗಾತಿ ಎಸ್ತರ್ ಡ್ಯುಪ್ಲೊ ಮತ್ತು ಮೈಕೆಲ್ ಕ್ರೆಮರ್, ಜಾನ್ ಎ ಲಿಸ್ಟ್ ಮತ್ತು ಸೆಂಧಿಲ್ ಮುಲ್ಲೈನಾಥನ್ ಜತೆ ಸೇರಿ ಅರ್ಥಶಾಸ್ತ್ರದಲ್ಲಿ ಸಾಂದರ್ಭಿಕ ಸಂಬಂಧಗಳನ್ನು ಕಂಡು ಹಿಡಿಯಲು ಕ್ಷೇತ್ರ ಪ್ರಯೋಗಗಳ ಮೂಲಕ ಪ್ರಮುಖ ವಿಧಾನವನ್ನು ರೂಪಿಸಿದ್ದಾರೆ. ಅಮೆರಿಕನ್ ಅಕಾಡೆಮಿ ಆಪ್ ಆರ್ಟ್ಸ್ ಅಂಡ್ ಸೈನ್ಸ್ ಫೆಲೋ ಆಗಿ ಆಯ್ಕೆಯಾಗಿರುವ ಬ್ಯಾನರ್ಜಿ 2009ರಲ್ಲಿ ಇನ್ಫೊಸಿಸ್ ಪ್ರತಿಷ್ಠಾನ ಕೊಡಮಾಡುವ ಇನ್ಫೊಸಿಸ್ ಬಹುಮಾನವನ್ನು ಸಾಮಾಜಿಕ ವಿಜ್ಞಾನ ವಿಭಾಗದಲ್ಲಿ ಪಡೆದಿದ್ದಾರೆ.
ಪ್ರಶಸ್ತಿ ಪಡೆದ ನಂತರ ಖಾಸಗಿ ಬ್ಯುಸಿನೆಸ್ ಚಾನಲ್ ಗೆ ನೀಡಿದ ಸಂದರ್ಶದನಲ್ಲಿ ಅಭಿಜಿತ್ ಬ್ಯಾನರ್ಜಿ ಹೇಳಿದ ಮಾತುಗಳಿವು:
ಜಿಡಿಪಿ ಶೇ.5ರ ಮಟ್ಟಕ್ಕೆ ಕುಸಿತ:
ಪ್ರಸಕ್ತ ವಿತ್ತೀಯ ವರ್ಷದಲ್ಲಿ ಜಿಡಿಪಿ ಶೇ. 5ರ ಮಟ್ಟಕ್ಕೆ ಇಳಿದಿರುವುದು ಅತ್ಯಂತ ಚಿಂತೆಗೀಡು ಮಾಡುವ, ಗಂಭೀರವಾದ, ಆತಂಕದ ಸಂಗತಿ ಎಂದು ಭಾವಿಸುತ್ತೇನೆ. ನಿಧಾನಗತಿಯ ಬೆಳವಣಿಗೆಯಿಂದಾಗಿ ನಗರದಿಂದ ಗ್ರಾಮೀಣ ಪ್ರದೇಶಕ್ಕೆ ಆದಾಯ ರವಾನೆಯಾಗುತ್ತಿದ್ದುದು ತಗ್ಗಿದೆ. ನಗರದ ಬೆಳವಣಿಗೆಯನ್ನು ಗ್ರಾಮೀಣ ಪ್ರದೇಶದ ಜನರು ಅವಲಂಬಿಸಿದ್ದಾರೆ. ಎಲ್ಲಾ ಅವಧಿಯಲ್ಲಿ ಕೃಷಿಯಲ್ಲಿ ಉದ್ಯೋಗ ದೊರೆಯುವುದಿಲ್ಲ. ಕೌಶಲ್ಯವಿಲ್ಲದ ಕಾರ್ಮಿಕರು ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬಂದು ಆರು ತಿಂಗಳು ದುಡಿದು ಕೈತುಂಬ ಹಣದೊಂದಿಗೆ ಹಿಂದಿರುಗುತ್ತಿದ್ದರು. ಆಗ ಅವರ ಸ್ಥಿತಿಯೂ ಸುಧಾರಿಸುತ್ತಿತ್ತು, ಆದರೆ, ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಒದಗಿಸುತ್ತಿದ್ದ ರಿಯಲ್ ಎಸ್ಟೇಟ್ ವಲಯವು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಆ ವಲಯಕ್ಕೆ ಅಗತ್ಯ ಹಣಕಾಸು ಹರಿದುಬರುತ್ತಿಲ್ಲ. ಹೀಗಾಗಿ ಗ್ರಾಮೀಣ ಭಾಗದ ಜನರಿಗೂ ಕೆಲಸವಿಲ್ಲವಾಗಿದೆ.
ನರೇಗ ಯೋಜನೆ ಕುರಿತಂತೆ:
ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅತ್ಯಂತ ಯಶಸ್ವಿಯಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಗಣನೀಯ ಪ್ರಮಾಣದಲ್ಲಿ ಆದಾಯವು ನರೇಗದಿಂದ ಬಂದಿದೆ ಎಂಬುದಕ್ಕೆ ಬಲವಾದ ಸಾಕ್ಷಿಗಳಿವೆ ಎಂದು ಭಾವಿಸುತ್ತೇನೆ. ಗ್ರಾಮೀಣ ಪ್ರದೇಶ ಜನರು ಕಡಮೆ ವೇತನಕ್ಕೆ ಕೆಲಸಕ್ಕೆ ಬರುವುದಿಲ್ಲ ಎಂಬ ಕಾರಣಕ್ಕೆ ನರೇಗ ವೇತನ ಹೆಚ್ಚಿಸಲಾಗಿದೆ. ಇದರ ಜತೆಗೆ ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಿಂದ ಹೆಚ್ಚಿನ ಅನುಕೂಲವಾಗಿದೆ. ಉದ್ಯೋಗ ಅರಸಿ ಗ್ರಾಮೀಣ ಪ್ರದೇಶ ಜನರು ನಗರ ಪ್ರದೇಶಕ್ಕೆ ತೆರಳಿ ಹೆಚ್ಚಿನ ಸಂಪಾದನೆ ಗಳಿಸಿ ವಾಪಸು ಬರಲು ಸಾಧ್ಯವಾಗಿದೆ. ಆದರೆ, ನರೇಗಾ ಯೋಜನೆಯನ್ನು ಇನ್ನೂ ಅತ್ಯುತ್ತಮವಾಗಿ ಬಳಸಿಕೊಳ್ಳಬಹುದಾಗಿತ್ತು. ಅನುದಾನದ ಮೊತ್ತವನ್ನು ಸೀಮಿತಗೊಳಿಸಲಾಗಿದೆ. ಅದು ಹೆಚ್ಚು ಚಲನಶೀಲವಾಗಬಹುದಿತ್ತು.
ಬಡತನ ಯೋಜನೆಯಲ್ಲಿ ರಾಜಕೀಯ:
ಬಡನತ ನಿವಾರಣೆ ಹೆಸರಲ್ಲಿ ಹೊಸ ಸರ್ಕಾರಗಳು ಬಂದಾಗಲೆಲ್ಲ ಹೊಸ ಯೋಜನೆಗಳನ್ನು ರಾಜಕೀಯ ಕಾರಣಕ್ಕಾಗಿ ಪ್ರಕಟಿಸುವ ಅಗತ್ಯವಿಲ್ಲ. ಹಳೆಯ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಿ ಪರಿಣಾಮಕಾರಿಯಾಗಿ ಮುಂದುವರೆಸಿಕೊಂಡು ಹೋಗಬಹುದು. ಹಳೆಯ ಯೋಜನೆಗಳು ಉತ್ತಮವಾಗಿವೆ. ಎನ್ ಡಿ ಎ ಸರ್ಕಾರದ ಅವಧಿಯಲ್ಲಿ ಗ್ರಾಮಸಡಕ್ ಯೋಜನೆ ಹೆಚ್ಚು ಪರಿಣಾಮಕಾರಿಯಾಗಿದೆ.
ರೈತರ ಖಾತೆಗೆ ನೇರ ಹಣ ವರ್ಗಾವಣೆ:
ಬೆಂಬಲ ಬೆಲೆ ನೀಡುವುದಕ್ಕಿಂತ ರೈತರಿಗೆ ಆದಾಯ ವರ್ಗಾವಣೆ ಮಾಡುವುದು ಒಳ್ಳೆಯ ನಿರ್ಧಾರ. ವಾಸ್ತವಿಕವಾಗಿ ರೈತರ ನಿವ್ವಳ ಆದಾಯವು ಅತ್ಯಲ್ಪ ಇದೆ. ಈ ಕ್ರಮದಿಂದ ಅವರ ಆದಾಯ ಹೆಚ್ಚಬಹುದು. ಬೆಂಬಲ ಬೆಲೆಗಳಿಂದ ದೂರ ಸರಿದು ಮತ್ತು ರೈತನಿಗೆ ನಗದು ನೀಡುವ ಕಡೆಗೆ ಹೋಗಲು ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ, ರೈತರು ಹೆಚ್ಚು ಹಣವನ್ನು ಹೊಂದಿರಬೇಕು, ಆಗ ಆರ್ಥಿಕತೆಗೆ ಚೇತರಿಕೆ ಬರಲು ಸಾಧ್ಯ.
ಪ್ರಶಸ್ತಿ ಪ್ರಕಟಿಸಿದ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಹೇಳಿದ್ದೇನು?
‘ಜಾಗತಿಕ ಬಡತನವನ್ನು ನಿವಾರಿಸುವ ಪ್ರಾಯೋಗಿಕ ವಿಧಾನಕ್ಕಾಗಿ ಭಾರತ- ಅಮೆರಿಕದ ಅಭಿಜಿತ ಬ್ಯಾನರ್ಜಿ, ಅವರ ಪತ್ನಿ ಎಸ್ತರ್ ಡುಫ್ಲೋ ಮತ್ತು ಮೈಕೆಲ್ ಕ್ರೆಮರ್ ಅರ್ಥಶಾಸ್ತ್ರಕ್ಕಾಗಿ ನೀಡುವ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಜಾಗತಿಕ ಬಡತನವನ್ನು ನಿವಾರಿಸುವ ಸಲುವಾಗಿ ರೂಪಿಸಿದ ಪ್ರಾಯೋಗಿಕ ವಿಧಾನಕ್ಕಾಗಿ ಈ ಮೂರರಿಗೆ 2019ನೇ ಸಾಲಿನ ನೋಬೆಲ್ ಪ್ರಶಸ್ತಿ ನೀಡಲಾಗಿದೆ. ಕೇವಲ ಎರಡು ದಶಕಗಳಲ್ಲಿ ಅಭಿಜಿತ ಬ್ಯಾನರ್ಜಿ, ಎಸ್ತರ್ ಡುಫ್ಲೋ ಮತ್ತು ಮೈಕೆಲ್ ಕ್ರೆಮರ್ ಅವರು ನಡೆಸಿರುವ ಹೊಸ ಪ್ರಯೋಗಿಕ ವಿಧಾನವು ಅಭಿವೃದ್ಧಿ ಅರ್ಥಶಾಸ್ತ್ರಕ್ಕೆ ಹೊಸದೊಂದು ಭಾಷ್ಯ ಬರೆದಿದೆ, ಜಾಗತಿಕ ಬಡತನದ ವಿರುದ್ಧ ಹೋರಾಡುವ ನಮ್ಮ ಸಾಮರ್ಥ್ಯವನ್ನು ಗಣನೀಯವಾಗಿ ಸುಧಾರಿಸಿದೆ ಎಂದು ಪ್ರಶಸ್ತಿ ಪ್ರಕಟಿಸಿರುವ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಜಗತ್ತಿನಲ್ಲಿ 700 ದಶಲಕ್ಷಕ್ಕೂ ಹೆಚ್ಚು ಜನರು ತೀರಾ ಅಲ್ಪ ಪ್ರಮಾಣದ ಆದಾಯ ಪಡೆಯುತ್ತಿದ್ದಾರೆ.’
‘ಜಗತ್ತಿನಾದ್ಯಂತ ಪ್ರತಿವರ್ಷ ಐದು ವರ್ಷ ತುಂಬುವ ಮುನ್ನವೇ , ಐದು ದಶಲಕ್ಷ ಮಕ್ಕಳು ಸಾಯುತ್ತಿದ್ದಾರೆ. ಆದರೆ, ಅಗ್ಗದ ಮತ್ತು ಸರಳ ಚಿಕಿತ್ಸೆಗಳಿಂದ ಆ ಮಕ್ಕಳ ಸಾವಿಗೆ ಕಾರಣವಾಗಬಹುದಾದ ರೋಗಳನ್ನು ಗುಣಪಡಿಸಬಹುದಾಗಿದೆ. ಜಾಗತಿಕ ಬಡತನದ ವಿರುದ್ಧ ಹೋರಾಡುವ ಅತ್ಯುತ್ತಮ ಮಾರ್ಗಗಳ ಬಗ್ಗೆ ವಿಶ್ವಾಸಾರ್ಹ ಉತ್ತರಗಳನ್ನು ಪಡೆಯಲು ಈ ವರ್ಷದ ಪ್ರಶಸ್ತಿ ವಿಜೇತರು ಹೊಸ ವಿಧಾನವನ್ನು ಪರಿಚಯಿಸಿದ್ದಾರೆ. ಈ ವಿಧಾನದಿಂದ ನಮ್ಮ ಮುಂದಿರುವ ಸಮಸ್ಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯ’.
‘1990 ರ ದಶಕದ ಮಧ್ಯಭಾಗದಲ್ಲಿ, ಕ್ರೆಮರ್ ಮತ್ತು ಅವರ ಸಹೋದ್ಯೋಗಿಗಳು ಪಶ್ಚಿಮ ಕೀನ್ಯಾದಲ್ಲಿ ಶಾಲಾ ಫಲಿತಾಂಶಗಳನ್ನು ಸುಧಾರಿಸುವಂತಹ ಹಲವಾರು ಮಧ್ಯಸ್ಥಿಕೆಗಳನ್ನು ಪರೀಕ್ಷಿಸಲು ಕ್ಷೇತ್ರ ಪ್ರಯೋಗಗಳನ್ನು ಬಳಸಿಕೊಂಡು ಪ್ರಯೋಗ-ಆಧಾರಿತ ವಿಧಾನವು ಎಷ್ಟು ಶಕ್ತಿಯುತವಾಗಿರಬಹುದು ಎಂಬುದನ್ನು ತೋರಿಸಿಕೊಟ್ಟರು. ಅಭಿಜಿತ್ ಬ್ಯಾನರ್ಜಿ ಮತ್ತು ಡುಫ್ಲೋ, ಆಗಾಗ್ಗೆ ಕ್ರೆಮರ್ ಅವರೊಂದಿಗೆ, ಹಲವು ವಿಷಯಗಳ ಬಗ್ಗೆ ಮತ್ತು ಭಾರತ ಸೇರಿದಂತೆ ಇತರ ದೇಶಗಳಲ್ಲಿ ಇದೇ ರೀತಿಯ ಅಧ್ಯಯನಗಳನ್ನು ಮಾಡಿದರು. ಅವರ ಪ್ರಾಯೋಗಿಕ ಸಂಶೋಧನಾ ವಿಧಾನಗಳು ಈಗ ಅಭಿವೃದ್ಧಿ ಅರ್ಥಶಾಸ್ತ್ರದಲ್ಲಿ ಉನ್ನತ ಸ್ಥಾನಗಳಿಸಿವೆ.’
‘ಪ್ರಶಸ್ತಿ ವಿಜೇತರು ರೂಪಿಸಿರುವ ಮಧ್ಯಸ್ಥಿಕೆ ವಿಧಾನವು ಪ್ರಾಯೋಗಿಕವಾಗಿ ಬಡತನದ ವಿರುದ್ಧ ಹೋರಾಡುವ ನಮ್ಮ ಸಾಮರ್ಥ್ಯವನ್ನು ಸಂಶೋಧನಾ ಸಂಶೋಧನೆಗಳನ್ನು ತ್ವರಿತವಾಗಿ ಸುಧಾರಿಸಿದೆ. ಅವರ ಒಂದು ಅಧ್ಯಯನದ ಪರಿಣಾಮವಾಗಿ, ಐದು ದಶಲಕ್ಷಕ್ಕೂ ಹೆಚ್ಚು ಭಾರತೀಯ ಮಕ್ಕಳು ಶಾಲೆಗಳಲ್ಲಿ ಪರಿಹಾರ ಬೋಧನೆ ಕಾರ್ಯಕ್ರಮಗಳಿಂದ ಪ್ರಯೋಜನ ಪಡೆದಿದ್ದಾರೆ’ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಹೇಳಿಕೆ ತಿಳಿಸಿದೆ.
ಇದು ಅಧಿಕೃತವಾಗಿ ನೊಬೆಲ್ ಪ್ರಶಸ್ತಿ ಅಲ್ಲ. ಬ್ಯಾಂಕ್ ಆಫ್ ಸ್ವೀಡನ್ ಆಲ್ಪ್ರೆಡ್ ನೊಬೆಲ್ ಸ್ಮರಣಾರ್ಥ ಆರ್ಥಿಕ ವಿಜ್ಞಾನ ಪ್ರಶಸ್ತಿ ಎಂದು ಪ್ರತಿಷ್ಟಾಪಿಸಿದೆ. ಆದರೆ, ಅದು ನೊಬೆಲ್ ಪ್ರಶಸ್ತಿಯ ಭಾಗವಾಗಿಬಿಟ್ಟಿದೆ. 1968ರಿಂದ ಅರ್ಥಶಾಸ್ತ್ರದಲ್ಲಿ ಸಾಧನೆಗೈದವರಿಗೆ ಬಹುಮಾನ ನೀಡಲಾಗುತ್ತಿದೆ. ಇಲ್ಲಿಯವರೆಗೆ, ಆರ್ಥಿಕ ವಿಜ್ಞಾನದಲ್ಲಿ 81 ನೊಬೆಲ್ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ನೀಡಲಾಗಿದೆ.
ಶತಕದ ಹಿಂದೆ ಮೆರಿಕ್ಯೂರಿ ದಂಪತಿಗಳು ಭೌತವಿಜ್ಞಾನಕ್ಕಾಗಿ ನೊಬೆಲ್ ಪ್ರಶಸ್ತಿ ಹಂಚಿಕೊಂಡಿದ್ದರು. ಆದಾದ ನಂತರ ಇದೇ ಮೊದಲ ಬಾರಿಗೆ ದಂಪತಿಗಳು ನೊಬೆಲ್ ಪ್ರಶಸ್ತಿ ಹಂಚಿಕೊಂಡಿರುವುದು ವಿಶೇಷ. ಕಳೆದ ಐದು ದಶಕಗಳಲ್ಲಿ ಅರ್ಥಶಾಸ್ತ್ರದಲ್ಲಿ ನೊಬೆಲ್ ಪಡೆದ ಮೊದಲ ಮಹಿಳೆಯೆಂಬ ಹೆಗ್ಗಳಿಕೆಗೂ ಎಸ್ತರ್ ಭಾಜನರಾಗಿದ್ದಾರೆ.