ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಕಾಂಗ್ರೆಸ್ ಸೂಪರ್ ಅಧ್ಯಕ್ಷರಂತೆ ವರ್ತಿಸಿದರೆ, ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸೂಪರ್ ಸಿಎಂರಂತೆ ವರ್ತಿಸುತ್ತಿದ್ದಾರೆ ಎಂದು ರಾಜ್ಯಸಭಾ ಬಿಜೆಪಿ ಸದಸ್ಯ ಲಹರ್ ಸಿಂಗ್ ಆರೋಪಿಸಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಕಿಡಿ ಕಾರಿರುವ ಲೆಹರ್ ಸಿಂಗ್, ದುರಹಂಕಾರದಿಂದ ತಮ್ಮ ಪಕ್ಷ ಮತ್ತು ಸರ್ಕಾರದಲ್ಲಿರುವ ಹಿರಿಯರ ಮೇಲೆ ಅವರಿಬ್ಬರು ಸವಾರಿ ಮಾಡುತ್ತಿದ್ದರೂ ಸಹಿಸಿಕೊಳ್ಳಲಾಗುತ್ತಿದೆ. ದುಃಖಕರವಾದ ವಿಷಯವೆಂದರೆ ಕರ್ನಾಟಕ ಇಂದು ಅಷ್ಟೇನೂ ಪ್ರಬುದ್ಧರಲ್ಲದ ಇಬ್ಬರು ಪುತ್ರರಿಂದ ನಿಯಂತ್ರಿಸಲ್ಪಡುತ್ತಿದೆ. ಅವರಿಬ್ಬರೂ ಮೇಲಿಂದ ಮೇಲೆ ಮಾತನಾಡುತ್ತಿದ್ದಾರೆ, ಅನಗತ್ಯ ವಿವಾದಗಳನ್ನು ಹುಟ್ಟುಹಾಕುತ್ತಿದ್ದಾರೆ. ತಮ್ಮದೇ ಹೈಕಮಾಂಡ್‌ನ ಆದೇಶಗಳನ್ನು ಉಲ್ಲಂಘಿಸುತ್ತಿದ್ದಾರೆ. ಇವರನ್ನು ತಿದ್ದುವ ಸಾಮರ್ಥ್ಯ ಇವರ ತಂದೆಯಂದಿರಿಗೆ ಇಲ್ಲವೇ..? ಅಥವಾ ತಾವು ನೇರವಾಗಿ ಹೇಳಲು ಸಾಧ್ಯ ಇಲ್ಲದಿರುವುದನ್ನು ಇವರ ಮೂಲಕ ಹೇಳಿಸುತ್ತಿದ್ದಾರೆಯೇ..? ಎಂದು ಪ್ರಶ್ನಿಸಿದ್ದಾರೆ.
ಪ್ರಿಯಾಂಕ್ ಮತ್ತು ಯತೀಂದ್ರ ಇಬ್ಬರೂ ಸ್ವತಂತ್ರವಾಗಿ ವರ್ತಿಸುತ್ತಿದ್ದಾರೋ ಅಥವಾ ಅವರವರ ತಂದೆಯಂದಿರ ಮುಖವಾಣಿಗಳಾಗಿದ್ದಾರೋ ಎನ್ನುವುದು ಯಾರಿಗೂ ಖಚಿತವಾಗಿ ತಿಳಿಯುತ್ತಿಲ್ಲ. ಇವರನ್ನ ಅವರ ಸ್ವಂತ ಪಕ್ಷದವರೇ ಅಷ್ಟೇನೂ ಇಷ್ಟಪಡುವುದಿಲ್ಲ ಎನ್ನುವುದು ನನಗೆ ಅರ್ಥವಾಗಿದೆ. ಅವರಿಬ್ಬರ ತಂದೆಯಂದಿರು ಅಧಿಕಾರದಲ್ಲಿರುವ ಕಾರಣಕ್ಕೆ ಸಹಿಸಿಕೊಳ್ಳಲಾಗುತ್ತಿದೆ. ತಂದೆಯಂದಿರು ಕೆಳಗಿಳಿದ ಕ್ಷಣದಿಂದಲೇ, ಈ ಇಬ್ಬರು ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ ಎಂದು ಲಹರ್ ಸಿಂಗ್ ಭವಿಷ್ಯ ನುಡಿದಿದ್ದಾರೆ.
ಜೂನಿಯರ್ ಖರ್ಗೆ ನಿರಂತರವಾಗಿ RSS ಮತ್ತು ಬಿಜೆಪಿ ಬಗ್ಗೆ ಮಾತನಾಡುತ್ತಿದ್ದಾರೆ. ಈ ಹೇಳಿಕೆಗಳು ರಾಹುಲ್ ಗಾಂಧಿಯವರ ದ್ವೇಷ ತುಂಬಿದ ಭಾಷೆಗೆ ಹೆಚ್ಚು ಹತ್ತಿರವಾಗಿರುವಂತವು. ಜೊತೆಗೆ ಸೀನಿಯರ್‌ಗೆ ಖರ್ಗೆಯವರಿಗೆ ಇದು ಪರೋಕ್ಷವಾಗಿ ನೆಹರು-ಗಾಂಧಿ ಕುಟುಂಬದ ಮೆಚ್ಚುಗೆ ಪಡೆಯಲು ಹಾಗೂ ದೆಹಲಿಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಸೈದ್ಧಾಂತಿಕ ವಿಷಯಗಳಲ್ಲಿ ಜೂನಿಯರ್ ಖರ್ಗೆ ಅವರು ಸಿದ್ದರಾಮಯ್ಯ ಸರ್ಕಾರಕ್ಕೆ ಒಂದು ರೀತಿಯಲ್ಲಿ ಗುರುವಾಗಿದ್ದಾರೆ. RSS ಪಥಸಂಚಲನ ನಿಷೇಧದ ಬಗ್ಗೆ ಇತ್ತೀಚೆಗೆ ಪ್ರಿಯಾಂಕ್ ಹೇಳಿದಾಗ, ಕಾನೂನು ಬದ್ಧವಾಗಿ ಇದು ಸಾಧ್ಯವಾ ಎಂದು ಯೋಚಿಸದೇ ಅದನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಮುಂದಾಗಿದೆ. RSS ಮಾತ್ರವಲ್ಲದೆ ಭಾರತದ ಇತರ ಪ್ರದೇಶಗಳ ವಿರುದ್ಧವೂ ಜೂನಿಯರ್ ಖರ್ಗೆ ಅವರು ದ್ವೇಷ ಕಾರುತ್ತಿದ್ದು, ಇದರಿಂದಾಗಿಯೇ ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಂದ ಸೂಕ್ತ ಪಾಠ ಕಲಿಯಬೇಕಾಯಿತು ಎಂದು ಟೀಕಿಸಿದ್ದಾರೆ
ಇನ್ನು ರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವ ಅವರ ಅದಕ್ಷತೆಯ ಬಗ್ಗೆ ಮಾತನಾಡಲು ಕಾಂಗ್ರೆಸ್‌ನಲ್ಲಿ ಯಾರಿಗೂ ಧೈರ್ಯವಿಲ್ಲ ಎಂದು ಲಹರ್ ಸಿಂಗ್ ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ಸೈದ್ಧಾಂತಿಕ ನಿಷ್ಠೆ ಮತ್ತು ನೀತಿ ನಿರೂಪಣೆಗಳನ್ನು ನಿಯಂತ್ರಿಸಲು ಜೂನಿಯರ್ ಖರ್ಗೆ ಅವರನ್ನು ನಿಯೋಜಿಸಲಾಗಿದ್ದರೆ, ಯತೀಂದ್ರ ಅವರ ಕಾರ್ಯಸೂಚಿ ಬಹಳ ಸರಳವಾಗಿದೆ. ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರನ್ನು ಕಟ್ಟಿಹಾಕಲು ಅವರನ್ನು ಬಳಸಲಾಗುತ್ತಿದೆ. ಅವರ ತಂದೆಯ ಕುರ್ಚಿಯನ್ನು ಯಾರೂ ಕಸಿದುಕೊಳ್ಳದಂತೆ ನೋಡಿಕೊಳ್ಳುವುದೇ ಅವರ ಕೆಲಸ. ಹೀಗಾಗಿಯೇ ತಮ್ಮ ತಂದೆ ಕಾಂಗ್ರೆಸ್ ಪಕ್ಷದ ಉಳಿವಿಗೆ ಅನಿವಾರ್ಯ ಎನ್ನುವ ರೀತಿಯಲ್ಲಿ ಯತೀಂದ್ರ ಬಿಂಬಿಸುತ್ತಿದ್ದಾರೆ ಎಂದು ಲಹರ್ ಸಿಂಗ್ ಆರೋಪಿದ್ದಾರೆ.










