ಅನಂತ್ ಕುಮಾರ್ ಹೆಗಡೆ, ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ ಸಂಸದ. ಮಾಜಿ ಕೇಂದ್ರ ಸಚಿವ. ಕಳೆದ ಶನಿವಾರ ವೀರ್ ಸಾರ್ವಕರ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅನಂತ ಕುಮಾರ್, ಮಹಾತ್ಮ ಗಾಂಧಿಯ ಸ್ವಾತಂತ್ರ್ಯ ಹೋರಾಟದ ಬಗ್ಗೆ ತುಚ್ಛವಾಗಿ ಮಾತನಾಡಿದ್ರು. ನೀವು ಬಂಧಿಸಿದಂತೆ ಮಾಡಿ, ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಬ್ರಿಟೀಷರ ಜೊತೆ ಹೊಂದಾಣಿಕೆ ಹೋರಾಟ ಮಾಡಿಕೊಂಡು ಬಂದವರು ಮಹಾತ್ಮರಾಗಿದ್ದಾರೆ ಎಂದು ಹಂಗಿಸಿದ್ದರು. ಅನಂತ್ ಕುಮಾರ್ ಹೆಗಡೆ ಮಾತಿಗೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿ ಕ್ಷಮಾಪಣೆ ಕೇಳುವಂತೆ ಆಗ್ರಹ ಮಾಡಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಗಡೆ ಸಂಸದನಾಗಲು ನಾಲಾಯಕ್ ಎಂದಿದ್ದರು. ನಾಥೂರಾಮ್ ಗೋಡ್ಸೆ ಸಂತತಿಯವರಿಂದ ಬೇರೇನು ನಿರೀಕ್ಷೆ ಮಾಡಲು ಸಾಧ್ಯವೆಂದು ವ್ಯಂಗ್ಯವಾಗಿ ಹೇಳಿದ್ದರು. ಇದೀಗ ಎಚ್ಚೆತ್ತಿರುವ ಬಿಜೆಪಿ ಹೈಕಮಾಂಡ್ ನಾಯಕರು ಅನಂತ ಕುಮಾರ್ ಹೆಗಡೆ ಅವರಿಂದ ಕಾರಣ ಕೇಳಿ ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ. ಜೊತೆಗೆ ಮಂಗಳವಾರ ನಿಗದಿಯಾಗಿರುವ ಬಿಜೆಪಿ ಸಂಸದೀಯ ಮಂಡಳಿ ಸಭೆಗೆ ಹಾಜರಾಗದಂತೆ ಸೂಚನೆ ಕೊಟ್ಟಿದೆ.
ಅನಂತ್ ಕುಮಾರ್ ಹೆಗಡೆ ಈ ರೀತಿಯ ಹೇಳಿಕೆ ಕೊಡುತ್ತಿರೋದು ಇದೇ ಮೊದಲೇನಲ್ಲ. 2017ರಲ್ಲಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿದ್ದ ಅನಂತ ಕುಮಾರ್ ಹೆಗಡೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಜಾತ್ಯಾತಿತವಾದಿ ಎಂದು ಕರೆಸಿಕೊಳ್ಳುವ ಬುದ್ಧಿಜೀವಿಗಳಿಗೆ ಅಪ್ಪ ಅಮ್ಮ ಯಾರು ಎನ್ನುವುದು ಗೊತ್ತಿರಲ್ಲ. ಸಂವಿಧಾನದಲ್ಲೂ ಸಾಕಷ್ಟು ಲೋಪಗಳಿವೆ. ನಾವು ಸಂವಿಧಾನದವನ್ನು ಬದಲಾವಣೆ ಮಾಡಲು ಈಗ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಸಂವಿಧಾನ ಬದಲಾವಣೆ ಮಾಡ್ತೇವೆ ಎಂದು ಅಬ್ಬರಿಸಿದ್ರು. ಆ ಬಳಿಕ ಸಂಸತ್ತಿನಲ್ಲೂ ಅನಂತ ಕುಮಾರ್ ಹೆಗಡೆ ಮಾತು ಪ್ರತಿಧ್ವನಿಸಿತ್ತು. ಆ ಬಳಿಕ ಕೇಂದ್ರ ಬಿಜೆಪಿ ನಾಯಕರು ಅನಂತ ಕುಮಾರ್ ಹೆಗಡೆ ಹೇಳಿಕೆ ವೈಯಕ್ತಿಕ. ಪಕ್ಷ ಸಂವಿಧಾನ ಬದಲಾವಣೆ ಮಾತನ್ನು ಬೆಂಬಲಿಸುವುದಿಲ್ಲ ಎಂದು ಅಂತರ ಕಾಯ್ದುಕೊಳ್ಳುವ ಕೆಲಸ ಮಾಡಿತ್ತು. ಸಂವಿಧಾನ ಬದಲಾವಣೆ ಚಿಂತನೆ ನಮ್ಮದಲ್ಲ ಎಂದ ಬಳಿಕ ಅನಂತ ಕುಮಾರ್ ಹೆಗಡೆ ನಾನು ಸಂವಿಧಾನ ಬದಲಾವಣೆ ಮಾಡ್ತೇವೆ ಎಂದು ಹೇಳಿಲ್ಲ, ನನ್ನ ಮಾತನ್ನು ತಿರುಚಲಾಗಿದೆ ಎಂದು ಮಾತಿನಿಂದಲೇ ಉಲ್ಟಾ ಹೊಡೆದಿದ್ದರು.
ಅನಂತ ಕುಮಾರ ಹೆಗಡೆ ಹೇಳಿಕೆ ಕೇವಲ ಸಂವಿಧಾನ ಬದಲಾವಣೆಗೆ ಮಾತ್ರ ಸೀಮಿತವಾಗಲಿಲ್ಲ. ಮತ್ತೊಮ್ಮೆ ನಾಥೂರಾಮ್ ಗೋಡ್ಸೆ ಬಗ್ಗೆ ತಮ್ಮ ಚಾಳಿಯನ್ನು ಮುಂದುವರಿಸಿದ್ದರು. ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಗಾಂಧಿಯನ್ನು ಹತ್ಯೆ ಮಾಡಿದ್ದ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದರು. ಆ ಮಾತನ್ನು ಬೆಂಬಲಿಸಿ ಮಂಗಳೂರು ಸಂಸದ ಇಂದಿನ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಒಂದು ಟ್ವೀಟ್ ಮಾಡಿದ್ದರು. ನಾಥೂರಾಮ್ ಗೋಡ್ಸೆ ಕೊಂದಿದ್ದು ಒಬ್ಬರನ್ನು, ಅಜ್ಮಲ್ ಕಸಬ್ ಕೊಂದಿದ್ದು 170 ಜನರನ್ನು, ರಾಜೀವ್ ಗಾಂಧಿ ಕೊಂದಿದ್ದು ಬರೋಬ್ಬರಿ 17,000 ಸಾವಿರ ಜನರನ್ನು. ಈಗ ನೀವೇ ಹೇಳಿ ಈಗ ಯಾರು..? ಕ್ರೂರ ಕೊಲೆಗಾರ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು. ಇದನ್ನೇ ಬಳಸಿಕೊಂಡ ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ, ʻಕಳೆದ 7 ದಶಕದಲ್ಲಿ ನಾಥೂರಾಮ್ ಗೋಡ್ಸೆ ಬಗ್ಗೆ ಈ ತಲೆಮಾರು ಮೊದಲ ಬಾರಿಗೆ ಬದಲಾದ ಹೊಸ ಗ್ರಹಿಕೆಯ ಪರಿಸರದಲ್ಲಿ ಚರ್ಚೆ ಮಾಡುತ್ತಿದೆ. ಕೊನೆಗೂ ಗೋಡ್ಸೆ ಬಗೆಗಿನ ಇಂತಹ ಚರ್ಚೆಗಳು ಸಂತಸ ನೀಡುತ್ತಿವೆʼ ಎಂದು ಬರೆದುಕೊಂಡಿದ್ದರು. ಇದು ವಿವಾದದ ಕಿಡಿ ಹಚ್ಚುತ್ತಿದ್ದಂತೆ ಟ್ವೀಟ್ ಡಿಲೀಟ್ ಮಾಡಿ ವಿಷಾದ ವ್ಯಕ್ತಪಡಿಸಿದ್ದರು.
ಇದೀಗ ಅದೇ ಗಾಂಧಿ ವಿಚಾರದಲ್ಲೇ ಮತ್ತೇ ತನ್ನ ಮಾತಿನ ಚಪಲ ಮುಂದುವರಿಸಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿ ಕೂಡ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದ ಹಾಗೆ ಶೊಕಾಸ್ ನೋಟಿಸ್ ಕೊಟ್ಟಿದ್ದಾರೆ. ಆ ಬಳಿಕ ಶೋಕಾಸ್ ನೋಟಿಸ್ ಕಸದ ಬುಟ್ಟಿ ಸೇರುತ್ತದೆ. ಸಂಸದ ಅನಂತ ಕುಮಾರ್ ಹೆಗಡೆ ಮತ್ತೆ ಮಾತು ಹರಿಬಿಡುತ್ತಾ ಓಡಾಡುತ್ತಾರೆ. ದೇಶಕ್ಕೆಲ್ಲಾ ಹಿತವಚನ ಹೇಳುವ ನಮ್ಮ ಪ್ರಧಾನ ಮಂತ್ರಿ ಈ ವಿಚಾರಗಳ ಬಗ್ಗೆ ಚಕಾರವನ್ನೂ ಎತ್ತುವುದಿಲ್ಲ, ಸಂಸದ ಅನಂತ ಕುಮಾರ್ ಹೆಗಡೆ ಹಾಗು ಇತರೆ ವಿವಾದಿತ ಸಂಸದರು, ನಾಯಕರನ್ನು ಕರೆದು ಬುದ್ಧಿ ಹೇಳುವ ಕೆಲಸವನ್ನೂ ಮಾಡುವುದಿಲ್ಲ. ಸ್ವತಃ ತಾವೇ ಮಹಾತ್ಮ ಗಾಂಧಿ ಎಲ್ಲರಿಗೂ ಪ್ರೇರಣೆ ಎಂದು ಹೇಳುವ ಆ ವ್ಯಕ್ತಿಗೆ ಅವಮಾನ ಆದರೂ ತಮ್ಮ ಮೌನಕ್ಕೆ ಸಡ್ಡು ಹೊಡೆಯಲ್ಲ. ಇದೆಲ್ಲವನ್ನು ನೋಡುತ್ತಿದ್ದರೆ, ಬಿಜೆಪಿ ಪಕ್ಷಕ್ಕೂ ಇದೇ ರೀತಿ ವಿವಾದ ಮಾಡುವ ನಾಯಕರ ಅವಶ್ಯಕತೆ ಇದೆ. ಕೆಲವೊಮ್ಮೆ ಸಮಾಜದ ದಿಕ್ಕು ತಪ್ಪಿಸಲು ಶೋಕಾಸ್ ನೋಟಿಸ್ ಎಂಬ ನಾಟಕವಾಡುತ್ತೆ. ಆ ಬಳಿಕ ಮತ್ತೆ ತನ್ನ ಚಾಳಿ ಮುಂದುವರಿಸಲು ಸೂಚಿಸ್ತಾರಾ..? ಎಂಬ ಅನುಮಾನ ಮೂಡತೊಡಗಿದೆ.