ಪ್ರಧಾನಿ ನರೇಂದ್ರ ಮೋದಿಗೆ ಆಪ್ತವಾಗಿರುವ ಗೌತಮ್ ಅದಾನಿ ಒಡೆತನದಲ್ಲಿರುವ ಅದಾನಿ ಸಮೂಹಕ್ಕೆ ಎನ್ ಡಿ ಎ-2 ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತಿರುವ ಸಂಗತಿ ರಹಸ್ಯವಾಗೇನೂ ಉಳಿದಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ಗೌತಮ್ ಅದಾನಿ ಸಂಪತ್ತು ನರೇಂದ್ರಮೋದಿ ಅಧಿಕಾರಕ್ಕೆ ಬಂದ ನಂತರ ಎರಡು ಕಾಲು ಪಟ್ಟು ಹೆಚ್ಚಿದೆ. 2014ರಲ್ಲಿ 50,400 ಕೋಟಿ ರುಪಾಯಿಗಳೊಂದಿಗೆ ದೇಶದ 11ನೇ ಅತಿ ಶ್ರೀಮಂತರ ಪಟ್ಟಿಯಲ್ಲಿದ್ದ ಗೌತಮ್ ಅದಾನಿ ಈಗ ದೇಶದ ಅತಿ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. 2019ರಲ್ಲಿ ಅವರ ಸಂಪತ್ತು 1.10 ಲಕ್ಷ ಕೋಟಿಗೆ ಏರಿದೆ. ಅದಾನಿ ಆಯೋಜಿಸಿದ ಕಾರ್ಯಕ್ರಮಗಳಲ್ಲಿ ಪ್ರಧಾನಿ ನರೇಂದ್ರಮೋದಿ ಪಾಲ್ಗೊಳ್ಳುವುದು, ಅವರ ಖಾಸಗಿ ವಿಮಾನ ಬಳಸುವುದು ಈಗೀಗ ವಿಶೇಷವೇನೂ ಅಲ್ಲ.
ಆದರೆ, ಅದಾನಿ ಸಮೂಹಕ್ಕೆ ಸಂಬಂಧಿಸಿದ ಆತಂಕಕಾರಿಯಾದ ಸಂಗತಿಯೊಂದನ್ನು ದೇಶದ ಪ್ರಖ್ಯಾತ ಹಿರಿಯ ನ್ಯಾಯವಾದಿ ದುಶ್ಯಂತ್ ದವೆ ಹೊರ ಹಾಕಿದ್ದಾರೆ. ಎನ್ ಡಿ ಎ-2 ಸರ್ಕಾರ ಹೇಗೆ ಅದಾನಿ ಸಮೂಹಕ್ಕೆ ಮುಕ್ತವಾಗಿ ನೆರವಾಗುತ್ತಿದೆಯೋ ಅದೇ ರೀತಿ ಸುಪ್ರೀಂ ಕೋರ್ಟ್ ಕೂಡಾ ನೆರವಾಗುತ್ತಿದೆ ಎಂಬುದು ದುಶ್ಯಂತ್ ದವೆ ಅವರ ಆರೋಪ. ದುಶ್ಯಂತ್ ದವೆ ಅವರ ಆರೋಪ ಎಷ್ಟು ಗಂಭೀರವಾಗಿದೆ ಎಂದರೆ, ಈ ಸಂಬಂಧ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ. ಈ ಪ್ರಕರಣ ಅಷ್ಟಕ್ಕೆ ನಿಂತಿಲ್ಲ. ದುಶ್ಯಂತ್ ದವೆ ಅವರು ಬರೆದಿರುವ ಪತ್ರವನ್ನು ಕೇರಳ ಹೈಕೋರ್ಟ್ ವಕೀಲರ ಸಂಘವು ಗಂಭೀರವಾಗಿ ಪರಿಗಣಿಸಿದ್ದು, ಈ ಪತ್ರವನ್ನಾಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಆಯ್ದ ಮಾಧ್ಯಮಗಳಲ್ಲಿ ಮಾತ್ರವೇ ಪ್ರಕಟವಾಗಿರುವ ಈ ವರದಿಯನ್ನು ಪ್ರತಿಧ್ವನಿ ನಿಮ್ಮ ಮುಂದಿಡುತ್ತಿದೆ.
ಗೌತಮ್ ಅದಾನಿ ಒಡೆತನದಲ್ಲಿರುವ ಅದಾನಿ ಸಮೂಹಕ್ಕೆ ಸಂಬಂಧಿಸಿದ ಕಾನೂನು ಪ್ರಕರಣಗಳನ್ನು ಸರಿಯಾದ ನ್ಯಾಯಾಲಯದ ಕಾರ್ಯವಿಧಾನವನ್ನು ಅನುಸರಿಸದೆ ಇತ್ತೀಚೆಗೆ ಸುಪ್ರೀಂ ಕೋರ್ಟ್‌ನ ಮುಂದೆ ವಿಚಾರಣೆಗೆ ಪಟ್ಟಿ ಮಾಡಲಾಗಿದೆ ಎಂಬ ವಕೀಲ ದುಶ್ಯಂತ್ ದವೆ ಆರೋಪ ಕುರಿತಂತೆ ಕ್ರಮ ಕೈಗೊಳ್ಳುವಂತೆ ಕೇರಳ ಹೈಕೋರ್ಟ್ ವಕೀಲರ ಸಂಘದ ಕಾರ್ಯಕಾರಿಣಿ ಸಮಿತಿಯು ಸುಪ್ರೀಂಕೋರ್ಟ್ ಮುಖ್ಯ ನ್ಯಾಯ ಮೂರ್ತಿಗಳಿಗೆ ಪತ್ರ ಬರೆದಿದೆ. ಉಲ್ಲೇಖಿತ ಎರಡೂ ಪ್ರಕರಣಗಳು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿದ್ದವು.
ಕೇರಳ ಹೈಕೋರ್ಟ್ ವಕೀಲರ ಸಂಘದ ಕಾರ್ಯಕಾರಿಣಿ ಸಮಿತಿ ಮುಂದೆ ಹಿರಿಯ ವಕೀಲ ಜಾರ್ಜ್ ಪಂತೋತ್ತಮ್ ಅವರು ದುಶ್ಯಂತ್ ದವೆ ಅವರು ಮುಖ್ಯನ್ಯಾಯಮೂರ್ತಿಗಳಿಗೆ ಬರೆದಿದ್ದ ಪತ್ರವನ್ನು ಮಂಡಿಸಿದ್ದರು. ಅಕ್ಟೋಬರ್ 16 ರಂದು ಕಾರ್ಯಕಾರಿಣಿ ಸಮಿತಿಯು, ಅಂತ್ಯತ ಹಿರಿಯ ನ್ಯಾಯವಾದಿಗಳಾದ ದುಶ್ಯಂತ್ ದವೆ ಅವರು ಬರೆದಿರುವ ಪತ್ರದಲ್ಲಿ ಪ್ರಸ್ತಾಪಿಸಿರುವ ಅಂಶಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿರುವುದರಿಂದ ಆ ಬಗ್ಗೆ ಮುಂದಿನ ಕ್ರಮಕೈಗೊಳ್ಳಬೇಕು. ಒಂದು ವೇಳೆ ಉಲ್ಲೇಖಿತ ಆರೋಪಗಳಲ್ಲಿ ಸತ್ಯಾಂಶ ಇಲ್ಲದಿದ್ದರೆ, ಸುಪ್ರೀಂಕೋರ್ಟ್ ನ ಸಾಂಸ್ಥಿಕ ಗಾಂಭೀರ್ಯವನ್ನು ಎತ್ತಿಹಿಡಿಯುವ ಸಲುವಾಗಿ ದುಶ್ಯಂತ್ ದವೆ ವಿರುದ್ಧವೇ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳಲ್ಲಿ ಆಗ್ರಹಿಸಿದೆ. ಇದರೊಂದಿಗೆ, ದುಶ್ಯಂತ್ ದವೆ ಪತ್ರ ಪ್ರಕರಣವು ಮತ್ತೊಂದು ಮಜಲು ಮುಟ್ಟಿದಂತಾಗಿದೆ. ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ತಾವು ನಿವೃತ್ತಿಯಾಗುವ ಮುನ್ನ ಈ ಸಂಬಂಧ ಕ್ರಮ ಕೈಗೊಳ್ಳುತ್ತಾರೆಯೇ ಎಂಬುದು ಈಗ ಕುತೂಹಲ ಮೂಡಿಸಿದೆ.
ಅದಾನಿ ಸಮೂಹದ ಎರಡು ಪ್ರಕರಣಗಳನ್ನು ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವ ದುಶ್ಯಂತ ದವೆ ಅವರು, ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಾಗ ಅಸ್ತಿತ್ವದಲ್ಲಿರುವ ಮತ್ತು ಸ್ಥಾಪಿತ ನಿಯಮಗಳನ್ನು ಪಾಲಿಸುವುದು ಮುಖ್ಯವಾಗಿದೆ, ಒಂದು ವೇಳೆ ನಿಯಮಗಳನ್ನು ಪಾಲಿಸದೇ ಹೋದರೆ, ಅಹಮದಾಬಾದ್ ಮೂಲದ ಕಾರ್ಪೊರೇಟ್ ಸಂಸ್ಥೆಗೆ ಅನುಕೂಲಕರವಾದ ತೀರ್ಪುಹೊರಬಂದು“ಸಾವಿರಾರು ಕೋಟಿ” ಲಾಭ ಆಗಬಹುದು ಎಂದು ಆಗಸ್ಟ್ ತಿಂಗಳಲ್ಲಿ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.
‘ಈ ವಿಷಯದಲ್ಲಿ ಯಾವುದೇ ವಿಶೇಷ ತುರ್ತು ಇಲ್ಲದಿದ್ದರೂ, ಮತ್ತು ವಿಚಾರಣೆಯನ್ನು ಮುಂದೂಡಬೇಕೆಂಬ ಕಕ್ಷಿದಾರರ ವಿನಯಪೂರ್ವ ಮನವಿಯನ್ನು ನಿರ್ಲಕ್ಷಿಸಿ ಈ ಎರಡು ಪ್ರಕರಣಗಳನ್ನು 2019 ರ ಮೇ ತಿಂಗಳಲ್ಲಿ ರಜಾ ನ್ಯಾಯಪೀಠವು ಆತುರದಿಂದ ಆಲಿಸಿ ವಿಲೇವಾರಿ ಮಾಡಿದೆ’ ಎಂದು ದವೆ ಆಕ್ಷೇಪಿಸಿದ್ದಾರೆ.
ಮೊದಲ ಉಲ್ಲೇಖಿತ ಪ್ರಕರಣವೆಂದರೆ ಅದಾನಿ ಗುಂಪಿನ ಭಾಗವಾಗಿರುವ ಪಾರ್ಸಾ ಕೆಂಟಾ ಕೊಲೊರೀಸ್ ಲಿಮಿಟೆಡ್ 2018 ನ ಸಿವಿಲ್ ಮೇಲ್ಮನವಿ. ಇದು ರಾಜಸ್ಥಾನ ಹೈಕೋರ್ಟ್ ರಾಜಸ್ಥಾನ ರಾಜ್ಯ ವಿದ್ಯುತ್ ಉತ್ಪಾದನಾ ನಿಗಮ್ ನಿಯಮಿತದ ಪರವಾಗಿ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಸಲಾದ ಅರ್ಜಿ. ಈ ಪ್ರಕರಣದ ವಿಚಾರಣೆ ನಮೂದಾಗಿಲ್ಲ ಎಂದು ರಿಜಿಸ್ಟ್ರಾರ್ ಆರ್ ಕೆ ಗೋಯೆಲ್ ಅವರು ಮಾರ್ಚ್ 14, 2019 ರಂದು ಮಾಡಿರುವ ನಮೂದುಗಳನ್ನು ಉಲ್ಲೇಖಿಸಿರುವ ದವೆ, ವಿಶೇಷ ಮೇಲ್ಮನವಿಗಾಗಿ ಆಗಸ್ಟ್ 24, 2018 ರಂದೇ ಅನುಮತಿ ನೀಡಲಾಗಿದ್ದರೂ ವಿಚಾರಣೆಗೆ ಬೇಸಿಗೆ ರಜೆಯ ಸಮಯದಲ್ಲಿ ವಿಚಾರಣೆ ಪಟ್ಟಿ ಮಾಡಲಾಗಿದೆ ಎಂಬುದನ್ನು ದವೆ ಅವರು ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತಂದಿದ್ದಾರೆ. ಮೇ 21 ಮತ್ತು 22 ರಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಎಂ ಆರ್ ಷಾ ಅವರ ನ್ಯಾಯಪೀಠ ಹಿರಿಯ ನ್ಯಾಯವಾದಿ ರಂಜಿತ್ ಕುಮಾರ್ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ವಾದಗಳನ್ನು ಆಲಿಸಿ ವಿಚಾರಣೆ ಮುಗಿಸಿ ತೀರ್ಪನ್ನು ಕಾಯ್ದಿರಿಸಿತು. “ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸುವ ಮುನ್ನ ಈ ಪ್ರಕರಣದಲ್ಲಿ ಹಾಜರಾಗುವ ಇತರರ ಸಮ್ಮತಿಯನ್ನು ಪಡೆಯಲಾಗಿಲ್ಲ ಎಂದು ನನಗೆ ತಿಳಿಸಲಾಗಿದೆ” ಎಂದು ಪತ್ರದಲ್ಲಿ ತಿಳಿಸಿರುವ ದವೆ, ‘ನ್ಯಾಯಪೀಠವು ಅದರ ತುರ್ತು ಅಗತ್ಯದ ಬಗ್ಗೆ ವಿಚಾರಿಸಿದೆಯೇ? ತೋರುತ್ತಿಲ್ಲ. ಹಳೆಯ ಮತ್ತು ತುರ್ತು ವಿಚಾರಣೆಗೆ ನ್ಯಾಯಪೀಠ ಇತರ ವಿಷಯಗಳನ್ನು ಕೈಗೆತ್ತಿಕೊಂಡಿದೆಯೇ? ಸ್ಪಷ್ಟವಾಗಿಲ್ಲ ‘ ಎಂದು ತಿಳಿಸಿದ್ದಾರೆ.
ದುಶ್ಯಂತ ದವೆ, ಪ್ರಸ್ತಾಪಿಸಿದ ಎರಡನೆಯ ಪ್ರಕರಣವೆಂದರೆ 2011 ರ ಸಿವಿಲ್ ಮೇಲ್ಮನವಿ ಅದಾನಿ ಪವರ್ (ಮುಂಡ್ರಾ) ಲಿಮಿಟೆಡ್ ವಿರುದ್ಧ ಗುಜರಾತ್ ವಿದ್ಯುತ್ ನಿಯಂತ್ರಣ ಆಯೋಗ ಮತ್ತು ಇತರರದ್ದು. ಮೇ 23 ರಂದು ಅದೇ ನ್ಯಾಯಪೀಠವು ಈ ವಿಷಯದ ತ್ವರಿತ ವಿಚಾರಣೆಗೆ ಸಲ್ಲಿಸಿದ 2019 ರ ಅರ್ಜಿಯನ್ನು ಪುರಸ್ಕರಿಸಿತು ಮತ್ತು ಮರುದಿನ ವಿಚಾರಣೆಗೆ ಪ್ರಕರಣವನ್ನು ಪಟ್ಟಿ ಮಾಡಿತು. ಪ್ರಕರಣ ಈ ಹಿಂದೆ ಫೆಬ್ರವರಿ 2017ರಲ್ಲಿ ಪಟ್ಟಿ ಮಾಡಲಾಗಿತ್ತು. ಮೇ 24 ರಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ ಆರ್ ಗವಾಯಿ ಮತ್ತು ಸೂರ್ಯ ಕಾಂತ್ ಅವರ ನ್ಯಾಯಪೀಠ ಮೇಲ್ಮನವಿಗಾಗಿ ಹಿರಿಯ ವಕೀಲ ಗೋಪಾಲ್ ಜೈನ್ ಮತ್ತು ಪ್ರತಿವಾದಿಗೆ ಹಿರಿಯ ವಕೀಲ ಎಂ ಜಿ ರಾಮಚಂದ್ರನ್ ಅವರ ವಿಚಾರಣೆಯನ್ನು ಆಲಿಸಿದ ನಂತರ ಪ್ರಕರಣದಲ್ಲಿ ವಾದಗಳನ್ನು ಕಾಯ್ದಿರಿಸಿತು.
ನ್ಯಾಯವಾದಿ ರಾಮಚಂದ್ರನ್ ಅವರನ್ನು ಉಲ್ಲೇಖಿಸಿರುವ ದವೆ, ಮೇ ತಿಂಗಳಲ್ಲಿ, ಪ್ರತಿವಾದಿಯ ದಾಖಲೆಯ ವಕೀಲರು ರಜೆಯ ಸಮಯದಲ್ಲಿ ಈ ವಿಷಯವನ್ನು ಕೈಗೆತ್ತಿಕೊಳ್ಳದಂತೆ ಮನವಿ ಮಾಡಿದ್ದರು ಮತ್ತು ಪ್ರಕರಣದಲ್ಲಿ ವಿವರಿಸಿದ ಹಿರಿಯ ವಕೀಲರ ಅಲಭ್ಯತೆಯನ್ನು ಗಮನಕ್ಕೆ ತರಲಾಗಿದೆ. ಈ ವಿನಂತಿಯನ್ನು ತಿರಸ್ಕರಿಸಿದ ನ್ಯಾಯಪೀಠ, ಮರುದಿನ ಅಂತಿಮ ವಿಚಾರಣೆಗೆ ಪ್ರಕರಣವನ್ನು ಪಟ್ಟಿ ಮಾಡಿತು. ಮೇ 24 ರಂದು ಸಹ, ಪ್ರತಿವಾದಿಯ ಪರವಾಗಿ ಮುಂದೂಡಿಕೆಗಾಗಿ ಮತ್ತೆ ಮನವಿ ಮಾಡಲಾಯಿತು. ಆದರೆ, ಪ್ರಕರಣವನ್ನು ನೇರವಾಗಿ ಆಲಿಸಲು ನ್ಯಾಯಪೀಠವು ನಿರ್ಧರಿಸಿತು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಈ ಎರಡು ತೀರ್ಪುಗಳಿಂದ ಈ ಕಾರ್ಪೊರೇಟ್ ಕಕ್ಷಿದಾರರಿಗೆ ಆಗುವ ಲಾಭವು ಸಾವಿರಾರು ಕೋಟಿಗಳಾಗಿರುತ್ತದೆ ಎಂದು ನನಗೆ ತಿಳಿಸಲಾಗಿದೆ ಎಂದು ಪತ್ರದಲ್ಲಿ ಹೇಳಿರುವ ದುಶ್ಯಂತ್ ದವೆ ಅವರು, ಈ ಹಿಂದೆ ತಾವು ಅದಾನಿ ಸಮೂಹದ ಪರವಾಗಿ ಪ್ರಿಸಾ ಕೆಂಟಾ ಕೊಲಿಯರೀಸ್ ಪ್ರಕರಣವೂ ಸೇರಿದಂತೆ ಹಲವು ಪ್ರಕರಣಗಳಲ್ಲಿ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಿರುವುದಾಗಿಯೂ ದವೆ ಪತ್ರದಲ್ಲಿ ಬಹಿರಂಗಪಡಿಸಿದ್ದಾರೆ.
ಸ್ಪಷ್ಟವಾಗಿ, ಈ ಎರಡು ಮೇಲ್ಮನವಿಗಳ ವಿಚಾರಣೆ ಮತ್ತು ವಿಲೇವಾರಿ ಮಾಡಿರುವ ರೀತಿಯು ಸುಪ್ರೀಂ ಕೋರ್ಟ್‌ನ ಸ್ಥಾಪಿತ ರೂಢಿಗತ ವಿಧಾನ ಮತ್ತು ಸ್ಥಾಪಿತ ಕಾರ್ಯವಿಧಾನದ ಸಂಪೂರ್ಣ ಉಲ್ಲಂಘನೆಯಾಗಿದೆ. ಈ ಎರಡೂ ವಿಷಯಗಳನ್ನು ಯಾವುದೇ ಸಮರ್ಥನೆಯಿಲ್ಲದೆ ಮತ್ತು ಅವಸರದಲ್ಲಿ ಮತ್ತು ಅನುಚಿತ ರೀತಿಯಲ್ಲಿ ಪಟ್ಟಿಮಾಡಲಾಗಿದೆ ಮತ್ತು ಆಲಿಸಲಾಗಿದೆ. ಇದರ ಪರಿಣಾಮವಾಗಿ, ಸಾರ್ವಜನಿಕ ಹಿತಾಸಕ್ತಿ ಮತ್ತು ಸಾರ್ವಜನಿಕ ಆದಾಯಕ್ಕೆ ಗಂಭೀರ ಧಕ್ಕೆಯಾಗುವುದರ ಜತೆಗೆ, ಇದು ಸುಪ್ರೀಂ ಕೋರ್ಟ್‌ನ ಗೌರವ ಮತ್ತು ನ್ಯಾಯದ ಆಡಳಿತಕ್ಕೆ ಅಪಾರ ಹಾನಿ ಉಂಟುಮಾಡಿದೆ ಎಂದು ಕಟುವಾದ ಪದಗಳಲ್ಲಿ ವಿವರಿಸಿದ್ದಾರೆ.
‘ಸುಪ್ರೀಂ ಕೋರ್ಟ್ ಬೇಸಿಗೆಯ ರಜೆಯ ಸಮಯದಲ್ಲಿ ಒಂದು ದೊಡ್ಡ ಕಾರ್ಪೊರೇಟ್ ಹೌಸ್ ನ ನಿಯಮಿತ ವಿಷಯಗಳನ್ನು ಅಶ್ವರೋಹಿಗಳ ಶೈಲಿಯಲ್ಲಿ ಕೈಗೆತ್ತಿಕೊಂಡು ಮತ್ತು ಅವುಗಳನ್ನು ಅವರ ಪರವಾಗಿ ತೀರ್ಪು ನೀಡುತ್ತಿರುವುದು ಅಂತ್ಯಂತ ಆಘಾತಕಾರಿ ಸಂಗತಿ. ಅಂತಹ ವಿಷಯಗಳನ್ನು ಪಟ್ಟಿ ಮಾಡಲು ಮಾನ್ಯ ಮುಖ್ಯ ನ್ಯಾಯಾಮೂರ್ತಿಗಳಿಂದ ರಿಜಿಸ್ಟ್ರಿ ಸಮ್ಮತಿಯನ್ನು ಕೋರಲಾಗಿತ್ತೇ ಮತ್ತು ಇಲ್ಲದಿದ್ದರೆ ರಿಜಿಸ್ಟ್ರಿ ತನ್ನದೇ ಆದ ರೂಢಿಗತ ವಿಧಾನ ಮತ್ತು ಕಾರ್ಯವಿಧಾನವನ್ನು ಉಲ್ಲಂಘಿಸಿದೆಯೇ ಎಂಬ ಗಂಭೀರ ಮತ್ತು ಆತಂಕದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಆದರೆ ಎಲ್ಲಕ್ಕಿಂತ ಮಿಗಿಲಾಗಿ, ಮೇ 2019 ರ ರಜೆಯ ಸಮಯದಲ್ಲಿ ಇತರ ನ್ಯಾಯಪೀಠಗಳು ಲಭ್ಯವಿದ್ದಾಗ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ನ್ಯಾಯಪೀಠದ ಮುಂದೆ ಎರಡು ವಿಷಯಗಳನ್ನು ಏಕೆ ಪಟ್ಟಿ ಮಾಡಲಾಗಿದೆ? ಮತ್ತು ಈ ನ್ಯಾಯಪೀಠ ಏಕೆ ಅದನ್ನು ತೆಗೆದುಕೊಂಡಿತು” ಎಂದು ದವೆ ಪ್ರಶ್ನಿಸಿದ್ದಾರೆ.
ಆಯ್ದ ಪ್ರಕರಣಗಳನ್ನು ನಿರ್ದಿಷ್ಟ ಪೀಠಗಳಲ್ಲೇ ವಿಚಾರಣೆ ನಡೆಯುವಂತೆ ಪಟ್ಟಿ ಮಾಡುತ್ತಿರುವ ಆರೋಪವನ್ನು ಈ ಹಿಂದೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೇ ಬಹಿರಂಗವಾಗಿಯೇ ಮಾಡಿದ್ದರು. ಆದರೆ, ದುಶ್ಯಂತ್ ದವೆ ಅವರು ನೇರವಾಗಿ ಮತ್ತು ನಿರ್ದಿಷ್ಠ ಪ್ರಕರಣಗಳನ್ನು ಉಲ್ಲೇಖಿಸಿ ಆರೋಪ ಮಾಡಿರುವುದರಿಂದ ಈ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳು ಕ್ರಮಕೈಗೊಳ್ಳಬೇಕಿರುವುದು ನ್ಯಾಯೋಚಿತವೂ ಹೌದು.