ದೇಶದಲ್ಲಿ ಎದುರಾಗಿರುವ ಕರೋನಾ ತುರ್ತು ಪರಿಸ್ಥಿತಿ ನಿಭಾಯಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಡವುತ್ತಲೇ ಇದೆ. ಅದರ ಪರಿಣಾಮವಾಗಿ ಬೀದಿ ಬೀದಿಗಳಲ್ಲಿ ಸಾಯುವ ಕಾರ್ಮಿಕರ ಸಂಖ್ಯೆ ಅಧಿಕವಾಗತೊಡಗಿದೆ. ಈ ಕುರಿತು ಈ ಮೊದಲೇ ʼಪ್ರತಿಧ್ವನಿʼ ಸಮಗ್ರ ವರದಿ ಬಿತ್ತರಿಸಿತ್ತು. ಒಂದೊಮ್ಮೆ ಕರೋನಾ ಸೋಂಕಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಹಸಿವಿನಿಂದ ಬೀದಿಲಿ ಸಾಯೋರ ಲೆಕ್ಕ ಹಾಕಲೂ ಸಿದ್ಧರಾಗಿ ಎಂದು ಪ್ರತಿಧ್ವನಿ ಎಚ್ಚರಿಸಿತ್ತು. ಸದ್ಯ ಅಂತಹದ್ದೇ ದುರಂತ ದೇಶದ ಹಲವೆಡೆ ತಲೆದೋರುತ್ತಿದೆ. 20 ಕ್ಕೂ ಅಧಿಕ ಮಂದಿ ಕೂಲಿ ಕಾರ್ಮಿಕರು ಹಾಗೂ ಅವರ ಮಕ್ಕಳು, ಮಡದಿಯರು ಸಾವನ್ನಪ್ಪಿದ್ದಾರೆ. ಕರ್ಮ ಭೂಮಿಯಿಂದ ಜನ್ಮಭೂಮಿಗೆ ಗುಳೆ ಹೊರಟ್ಟಿದ್ದ ಸಂದರ್ಭ ಆದ ಅನಾಹುತಗಳು, ಹಸಿವು ತಾಳಲಾರದೆ ಮತ್ತು ಪೊಲೀಸ್ ದೌರ್ಜನ್ಯಗಳಿಗೆ ಸಾವನ್ನಪ್ಪಿರುವ ಘಟನೆ ದೇಶದ ಹಲವೆಡೆ ನಡೆದಿದೆ.
ಮಾರ್ಚ್ 23 ರ ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಏಕಾಏಕಿ ದೇಶಾದ್ಯಂತ ಕರ್ಫ್ಯೂ ಮಾದರಿಯ ಲಾಕ್‌ಡೌನ್ ಗೆ ಕರೆ ನೀಡಿದ್ದರು. ಇದರಿಂದ ಗೊಂದಲಕ್ಕೀಡಾದ ಕೂಲಿ ಕಾರ್ಮಿಕರು ತಮ್ಮೂರಿಗೆ ವಾಪಾಸ್ ತೆರಳಲು ಅಣಿಯಾಗಿದ್ದಾರೆ. ಹೀಗೆ ಹೊರಟವರು ಒಂದಿಲ್ಲೊಂದು ಅನಾಹುತಗಳಿಗೂ ಬಲಿಯಾಗಿದ್ದಾರೆ. ಮಾತ್ರವಲ್ಲದೇ ನೂರಾರು ಕಿಲೋ ಮೀಟರ್ ನಡೆದುಕೊಂಡೆ ತಮ್ಮ ತವರಿನತ್ತ ಹೆಜ್ಜೆ ಇಟ್ಟವರಿದ್ದಾರೆ. ಈ ಕ್ಷಣಕ್ಕೂ ಅಪಾರ ಸಂಖ್ಯೆಯ ಕೂಲಿ ಕಾರ್ಮಿಕರು ತಮ್ಮೂರಿನತ್ತ ಹೆಜ್ಜೆ ಇರಿಸಿದ್ದಾರೆ. ಸಿಕ್ಕ ವಾಹನದಲ್ಲಿ ಇಲ್ಲವೇ ನಡೆದುಕೊಂಡೇ ಊರು ಸೇರಬೇನ್ನುವ ಇರಾದೆಯಿಂದ ಪಯಣ ಮುಂದುವರೆಸಿದ್ದಾರೆ. ಅದರಲ್ಲೂ ಮಹಾನಗರಗಳನ್ನೇ ಅರಸಿಕೊಂಡು ಬದುಕುತ್ತಿದ್ದ ಕೂಲಿ ಕಾರ್ಮಿಕರ ತಂಡವೇ ಊರಿನತ್ತ ಹೆಜ್ಜೆ ಹಾಕಿದೆ. ಹೀಗೆ ಊರಿಗೆ ತಲುಪುವ ಮುನ್ನವೇ ಕೆಲವರ ಪ್ರಾಣ ಪಕ್ಷಿಯೂ ಹಾರಿಹೋಗಿದೆ.
ದೇಶದಲ್ಲಿ ಕೋವಿಡ್-19 ತುತ್ತಾಗಿ 32 ಮಂದಿ ಸಾವನ್ನಪ್ಪಿದ್ದಾರೆ. ಅಂತೆಯೇ ಗುಳೆ ಹೊರಟ ಕಾರ್ಮಿಕರು, ಹಸಿವು ತಾಳಲಾರದೇ, ಪೊಲೀಸ್ ದೌರ್ಜನ್ಯಕ್ಕೆ ಒಟ್ಟಾರೆಯಾಗಿ 24 ಮಂದಿ ಸಾವಿಗೀಡಾಗಿದ್ದಾರೆ. ಲಾಕ್‌ಡೌನ್ ಜಾರಿಯಾಗಿ ಒಂದೇ ವಾರಕ್ಕೆ ಇಂತಹ ಪರಿಸ್ಥಿತಿಯಾದರೆ ಮುಂದೇನು ಅನ್ನೋ ಪ್ರಶ್ನೆಯೂ ಸಹಜವಾದುದೇ. ಅದರಲ್ಲೂ ಉತ್ತರ ಪ್ರದೇಶ ಸರಕಾರವಂತೂ ತನ್ನೂರಿಗೆ ಆಗಮಿಸಿದ ವಲಸೆ ಕಾರ್ಮಿಕರನ್ನು ಸಾಮೂಹಿಕವಾಗಿ ಕುಳ್ಳಿರಿಸಿ ಸೋಂಕು ನಿವಾರಕ ರಾಸಾಯನಿಕವನ್ನು ಪೈಪ್‌ಗಳ ಮೂಲಕ ಅತೀ ಬಿರುಸಿನಿಂದ (ವಾಹನಗಳನ್ನು ವಾಶ್ ಮಾಡುವ ರೀತಿ) ಸಿಂಪಡಿಸಿದೆ. ಕೂಲಿ ಕಾರ್ಮಿಕರನ್ನು ಇಷ್ಟೊಂದು ಅಮಾನವೀಯ ರೀತಿಯಲ್ಲಿ ನೋಡುವಂತಹ ದುರ್ದೈವವು ದೇಶಕ್ಕೆ ಬಂದೊದಗಿರುವುದಕ್ಕೆ ಇದೇ ಸಾಕ್ಷಿ. ಇದು ಮಾತ್ರವಲ್ಲದೇ ವಾರದೊಳಗಾಗಿ ನಡೆದ ಒಂದಿಷ್ಟು ಘಟನೆಗಳು ಇಂತಹ ಪರಿಸ್ಥಿತಿಯಲ್ಲಿ ಕೂಲಿ ಕಾರ್ಮಿಕರು, ನಿರ್ಗತಿಕರು, ಬಡವರು ಬದುಕುವುದೇ ತಪ್ಪಾ ಅನ್ನೋ ಪ್ರಶ್ನೆ ಹುಟ್ಟು ಹಾಕುವಂತಿದೆ. ಯಾಕೆಂದರೆ ಅತ್ತ ಲಾಕ್‌ಡೌನ್ ಆಗುತ್ತಲೇ ಮಹಾರಾಷ್ಟ್ರದ ಫುಟ್‌ಪಾತ್‌ನಲ್ಲಿ ಮಲಗಿದ್ದವರನ್ನು ರಾತ್ರೋರಾತ್ರಿ ಹಲ್ಲೆ ನಡೆಸಿ ಅಲ್ಲಿನ ಪೊಲೀಸರು ಓಡಿಸುತ್ತಾರೆ. ಅಂದರೆ ರೋಗ ರುಜಿನಗಳನ್ನು ತಡೆಯಬೇಕಾದರೆ ಇದೂ ಒಂದು ರೀತಿಯ ಕ್ರಮವೆಂದು ಭಾವಿಸುವ ಆಡಳಿತ ವ್ಯವಸ್ಥೆ ಅದೇ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಯಾವುದೇ ಗಮನಹರಿಸುವುದಿಲ್ಲ.
ಬಿಹಾರದಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ; ಹಸಿವು ತಾಳಲಾರದೆ ಬಾಲಕ ಸಾವು :
ಬಿಹಾರದ ಭೋಜ್‌ಪುರ್ ಜಿಲ್ಲೆಯ ಸ್ಲಂ ಪ್ರದೇಶದಲ್ಲಿ ವಾಸಿಸುತ್ತಿರುವ ದುರ್ಗಾ ಪ್ರಸಾದ್ ಮುಸಾಹರ್ ಹಾಗೂ ಸೋನಾಮತಿ ದೇವಿ ದಂಪತಿ ಪುತ್ರ ರಾಕೇಶ್ ಮುಸಾಹರ ಕಳೆದ ಮಾರ್ಚ್ 26 ರಂದು ಹಸಿವು ತಾಳಲಾರದೆ ಮೃತಪಟ್ಟಿರುವುದಾಗಿ ಪೋಷಕರು ಆರೋಪಿಸಿದ್ದಾರೆ. ದಿನಕ್ಕೆ 200 ರಿಂದ 250 ರೂಪಾಯಿ ದುಡಿಯುವ ಈ ಕುಟುಂಬಕ್ಕೆ ಸರಿಯಾದ ಸಮಯದಲ್ಲಿ ರೇಷನ್ ತಲುಪಿಲ್ಲ, ಜೊತೆಗೆ ಕಟ್ಟುನಿಟ್ಟಿನ ಲಾಕ್‌ಡೌನ್‌ನಿಂದಾಗಿ ಬೀದಿಗಿಳಿಯದ ಪರಿಸ್ಥಿತಿ, ಇದರ ಪರಿಣಾಮ ತನ್ನ ಪುತ್ರ ಸಾವನ್ನಪ್ಪಿದ್ದಾಗಿ ರಾಕೇಶ್ ತಾಯಿ ಸೋನಾಮತಿ ದೇವಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಈ ರೀತಿಯ ಘಟನೆ ನಡೆದರೂ ಈ ಬಗ್ಗೆ ಯಾವುದೇ ಹೇಳಿಕೆ ಪಡೆದುಕೊಳ್ಳಲಾಗಲೀ, ಅಥವಾ ಸಾಂತ್ವನ ನೀಡಲಾಗಲೀ ಯಾವೊಬ್ಬ ಅಧಿಕಾರಿಯೂ ಬಂದಿರಲಿಲ್ಲ. ಬಾಲಕ ಸಾಯುವ ಹೊತ್ತಿಗೆ ದೈಹಿಕವಾಗಿ ಬಳಲಿಹೋಗಿದ್ದ ಎಂದು ನೆರೆಹೊರೆಯ ಮಂದಿಯೂ ಅವರ ನೋವಿಗೆ ಧ್ವನಿ ಗೂಡಿಸುತ್ತಾರೆ. ಜ್ವರ ಹಾಗೂ ಅತಿಸಾರದಿಂದ ಬಳಲುತ್ತಿದ್ದ ಈ ಬಾಲಕನಿಗೆ ಸರಿಯಾದ ಸಮಯಕ್ಕೆ ಊಟ ಸಿಗದೇ ಇರೋದೆ ಸಾವಿಗೆ ಕಾರಣ ಅಂತಾ ಅಲ್ಲಿನ ಗ್ರಾಮಸ್ಥರೆಲ್ಲರ ಅಭಿಪ್ರಾಯ ಕೂಡ.
ಇನ್ನು ದೆಹಲಿಯ ರೆಸ್ಟೋರೆಂಟ್ ವೊಂದರಲ್ಲಿ ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದ 39 ವರುಷದ ಮೂರು ಮಕ್ಕಳ ತಂದೆಯಾಗಿರುವ ರಣವೀರ್ ಸಿಂಗ್ ಮಧ್ಯಪ್ರದೇಶ ಮೂಲದ ನೌಕರ. ಲಾಕ್‌ಡೌನ್ ಘೋಷಣೆಯಾಗುತ್ತಲೇ ತನ್ನೂರಾದ ಮಧ್ಯಪ್ರದೇಶಕ್ಕೆ ಹೊರಟಿದ್ದಾನೆ. ಆದರೆ ಸುಮಾರು 200 ಕಿಲೋ ಮೀಟರ್ ಕಾಲ್ನಡಿಗೆ ಯಾತ್ರೆ ನಡೆಸಿದ ಈತ ಆಗ್ರಾದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಅತಿಯಾದ ಬಳಲುವಿಕೆಯಿಂದಾಗಿ ಹೃದಯಾಘಾತವಾಗಿತ್ತು ಅಂತಾ ಆಗ್ರಾದ ಕಮಾಂಡಿಂಗ್ ಆಫೀಸರ್ ಸೌರಭ್ ದೀಕ್ಷಿತ್ ಮರಣೋತ್ತರ ವರದಿ ಉಲ್ಲೇಖಿಸಿ ಮಾಹಿತಿ ನೀಡುತ್ತಾರೆ.
ಇನ್ನು ರಸ್ತೆ ಅಪಘಾತಗಳಿಗೂ ವಲಸೆ ಕಾರ್ಮಿಕರು ಕಳೆದ ಒಂದು ವಾರದಲ್ಲಿ ಅನಾಯಾಸವಾಗಿ ಪ್ರಾಣ ತೆತ್ತಿದ್ದಾರೆ. ʼಎಎನ್‌ಐʼ ಉಲ್ಲೇಖಿತ ವರದಿಯಲ್ಲಿ ಮಾರ್ಚ್ 29 ರಂದು ಹರಿಯಾಣದ ಬಿಲ್ವಾಸುರ್‌ನಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದರೆ, ಇನ್ನು ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಇದರಲ್ಲಿ ಓರ್ವ ಮಹಿಳೆ ಹಾಗೂ ಇಬ್ಬರು ಮಕ್ಕಳೂ ಅಸುನೀಗಿದ್ದರು. ಇವರು ವಲಸೆ ಕಾರ್ಮಿಕರಾಗಿದ್ದು, ತಮ್ಮ ಊರಿಗೆ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾಗ ನಡೆದ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಲಾಕ್‌ಡೌನ್ ಬಿಸಿಯಿಂದ ತಪ್ಪಿಸಿಕೊಳ್ಳಲು ಆದಷ್ಟು ಬೇಗ ಮನೆ ತಲುಪುವ ಉದ್ದೇಶದಿಂದ ಹೆಜ್ಜೆ ಹಾಕುತ್ತಿದ್ದ ಇವರೆಲ್ಲ ಯಮನ ಕಣ್ಣಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪುವಂತಾಗಿತ್ತು.
ಇನ್ನು ಕಳೆದ ಶುಕ್ರವಾರ ತೆಲಂಗಾಣ ರಾಜ್ಯದ ಹೈದರಾಬಾದ್ ನಿಂದ ರಾಯಚೂರಿಗೆ ಆಗಮಿಸುತ್ತಿದ್ದ ಬೊಲೆರೋ ವಾಹನ ಡಿಕ್ಕಿಯಾಗಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದರು. ರಾಯಚೂರಿನ ಶಂಶಾಬಾದ್ ನಲ್ಲಿ ನಡೆದ ಅಪಘಾತದಲ್ಲಿ ವಲಸೆ ಕಾರ್ಮಿಕರು ದಾರುಣ ಅಂತ್ಯ ಕಾಣುವಂತಾಗಿತ್ತು. ಎಂಟು ಮಂದಿಯಲ್ಲಿ ನಾಲ್ವರು ಸಾವನ್ನಪ್ಪಿದ್ದರೆ, ಇನ್ನು ನಾಲ್ವರು ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಹದಿನೆಂಟು ತಿಂಗಳ ಹಸುಗೂಸು ಸಹಿತ ನಾಲ್ವರ ಸಾವು ರಾಯಚೂರು ಜಿಲ್ಲೆಯನ್ನೇ ಅಕ್ಷರಶಃ ಬೆಚ್ಚಿಬೀಳಿಸಿತ್ತು. ಈ ಎಲ್ಲಾ ಕೂಲಿ ಕಾರ್ಮಿಕರು ಯಾದಗಿರಿ ಜಿಲ್ಲೆಯವರು ಎಂದು ಗುರುತಿಸಲಾಗಿತ್ತು. ಏಕಾಏಕಿ ಲಾಕ್‌ಡೌನ್ ಘೋಷಣೆಯಿಂದ ಕಂಗಾಲಾದ ಈ ಕೂಲಿ ಕಾರ್ಮಿಕರು ತೆಲಂಗಾಣ ರಾಜ್ಯದಲ್ಲಿ ಕಟ್ಟುನಿಟ್ಟಿನ ಆದೇಶ ಘೋಷಣೆಯಾಗುತ್ತಿದ್ದಂತೆ ಕರ್ನಾಟಕದತ್ತ ಮುಖಮಾಡಿದ್ದರು.
ಮಾರ್ಚ್ 28 ರಂದು ನಡೆದ ಇನ್ನೊಂದು ಪ್ರಕರಣದಲ್ಲೂ ನಾಲ್ವರು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಮುಂಬೈ-ಗುಜರಾತ್ ಹೆದ್ದಾರಿಯಲ್ಲಿ ಟ್ರಕ್‌ವೊಂದರಲ್ಲಿ ಪ್ರಯಾಣಿಸಬೇಕಾದರೆ ಮುಂಜಾವ ಮೂರು ಗಂಟೆ ಹೊತ್ತಿಗೆ ನಡೆದ ಅಪಘಾತದಲ್ಲಿ ನಾಲ್ವರು ರಾಜಸ್ತಾನ ಮೂಲದ ವಲಸೆ ಕಾರ್ಮಿಕರು ವಿರಾರ್ ಎಂಬಲ್ಲಿ ನಡೆದ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದರು.ಇವರೆಲ್ಲರೂ ಮುಂಬೈನ ಟೀ ಸ್ಟಾಲ್ ಹಾಗೂ ಕ್ಯಾಂಟೀನ್‌ಗಳಲ್ಲಿ ಕೆಲಸ ಮಾಡುತ್ತಿದ್ದವರಾಗಿದ್ದರು. ಲಾಕ್‌ಡೌನ್ ಪರಿಣಾಮ ಟೀ ಸ್ಟಾಲ್ ಹಾಗೂ ಕ್ಯಾಂಟೀನ್‌ಗಳು ಬಂದ್ ಆಗಿದ್ದರಿಂದ ಇವರೆಲ್ಲರೂ ರಾಜಸ್ತಾನಕ್ಕೆ ವಾಪಾಸ್ ಹಿಂತಿರುಗುತ್ತಿದ್ದರು. ಇದೇ ಸಂದರ್ಭ ಮಹಾರಾಷ್ಟ್ರ-ಗುಜರಾತ್ ಗಡಿಭಾಗವಾದ ವಿರಾರ್‌ನಲ್ಲಿ ನಡೆದ ಅಪಘಾತದಲ್ಲಿ ಅಸುನೀಗಿದ್ದರು.
ಲಾಕ್‌ಡೌನ್ ಆಗುತ್ತಿದ್ದಂತೆ ಅದೆಷ್ಟೋ ಕೂಲಿ ಕಾರ್ಮಿಕರು ತಮ್ಮ ಊರು ಸೇರುವ ಧಾವಂತದಲ್ಲಿದ್ದರು. ಕಾರಣ ಅದೆಲ್ಲಿ ಲಾಠಿಚಾರ್ಜ್, ಗೋಲಿಬಾರ್ ಆಗುತ್ತೆ ಅನ್ನೋ ಭಯ ಅವರೆಲ್ಲರದ್ದೂ ಆಗಿತ್ತು. ಆದ್ದರಿಂದ ಸತತವಾಗಿ ನೂರಾರು ಮೈಲು ನಡೆದವರೂ ಇದ್ದಾರೆ. ಊರು ಸೇರಬೇಕೆನ್ನುವ ಧಾವಂತದಲ್ಲಿ ಆದ ಒಂದಿಷ್ಟು ಅನಾಹುತಗಳು ಸುಮಾರು 20 ರಷ್ಟು ಮಂದಿಯನ್ನು ಬಲಿಪಡೆದಿದೆ.
ಲಾಕ್‌ಡೌನ್ ಆಗುತ್ತಿದ್ದಂತೆ ತಮಿಳುನಾಡು ಹಾಗೂ ಕೇರಳ ಗಡಿಯನ್ನು ಮುಚ್ಚಲಾಗಿತ್ತು. ಇದರಿಂದಾಗಿ ಎಸ್ಟೇಟ್‌ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೂಲಿ ಕಾರ್ಮಿಕರು ತಮ್ಮೂರಿಗೆ ಪಯಣ ಬೆಳೆಸಿದ್ದಾರೆ. ಈ ಸಂದರ್ಭ ಕೇರಳ ತಲುಪುವ ಉದ್ದೇಶದಿಂದ ವಾಮ ಮಾರ್ಗವನ್ನು ಅನುಸರಿಸಿದ್ದಾರೆ. ಅಲ್ಲಿ ಕಂಡು ಬಂದ ಕಾಡ್ಗಿಚ್ಚಿನಿಂದಾಗಿ ಒಂದು ವರುಷದ ಮಗು ಸಹಿತ ನಾಲ್ವರು ಬಲಿಯಾಗಿದ್ದರು. ಇದು ಲಾಕ್‌ಡೌನ್ ಪರಿಣಾಮದಿಂದಾದ ಮೊದಲ ಅಸಹಜ ಸಾವು ಎಂದು ಹೇಳಲಾಗಿದೆ. ಇನ್ನು ಮಾರ್ಚ್ 26 ರಂದು ಪಶ್ಚಿಮ ಬಂಗಾಳದಲ್ಲಿ ಹಾಲು ತರಲೆಂದು ಮನೆ ಹೊರಗೆ ಬಂದಿದ್ದ ಹೌರಾ ನಿವಾಸಿ ಲಾಲ್ ಸ್ವಾಮಿ ಪೊಲೀಸ್ ದೌರ್ಜನ್ಯದಿಂದ ಸಾವನ್ನಪ್ಪಿದ್ದ. ಅದಲ್ಲದೇ ನಮ್ಮದೇ ರಾಜ್ಯದ, ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪ ತವರು ಜಿಲ್ಲೆಯಾದ ಶಿವಮೊಗ್ಗ ಜಿಲ್ಲೆಯಲ್ಲಿಯೇ ಪೊಲೀಸರು ನಡೆಸಿದ ಲಾಠಿಚಾರ್ಜ್‌ನಿಂದಾಗಿ ಸುಣ್ಣದಕೊಪ್ಪದ ಲಕ್ಷ್ಮಣ ನಾಯ್ಕ ಎಂಬ ರೈತ ಬಲಿಯಾಗಿದ್ದಾರೆ.
ಒಟ್ಟಿನಲ್ಲಿ ದೇಶಾದ್ಯಂತ ಕರೋನಾ ವೈರಸ್ ಒಂದು ಕಡೆ ತನ್ನ ರೌದ್ರ ನರ್ತನ ಮುಂದುವರೆಸಿದರೆ, ಇನ್ನೊಂದೆಡೆ ಬಡ ಕೂಲಿ ಕಾರ್ಮಿಕರು ಹಸಿವು ಹಾಗೂ ಇನ್ನಿತರ ಅನಾಹುತಗಳಿಗೆ ಬಲಿಯಾಗುತ್ತಿದ್ದಾರೆ. ಕೇಂದ್ರ ಸರಕಾರ ಬಿಡುಗಡೆಗೊಳಿಸಿರುವ ಹಣ ಇನ್ನೂ ಕೂಲಿ ಕಾರ್ಮಿಕರ ಕೈ ಸೇರಿಲ್ಲ. ಕರ್ನಾಟಕ ರಾಜ್ಯವೊಂದರಲ್ಲೇ 1.32 ಕೋಟಿ ಸಂಘಟಿತ ಕಾರ್ಮಿಕರಿದ್ದಾರೆ ಎಂದು ಅಂದಾಜಿಸಲಾಗಿದೆ. ದಿನವೊಂದಕ್ಕೆ 250 ರಿಂದ 500 ರವರೆಗೂ ದುಡಿಯುವ ಈ ಕಾರ್ಮಿಕರು ಇದೀಗ ಬೀದಿಗೆ ಬೀಳುವ ಸ್ಥಿತಿಯಲ್ಲಿದ್ದಾರೆ. ಇನ್ನೊಂದೆಡೆ ಪೊಲೀಸ್ ದೌರ್ಜನ್ಯದ ಭಯವೂ ಜನರನ್ನು ಇನ್ನಷ್ಟು ಮನೆಯಲ್ಲಿಯೇ ಹಸಿವು ತಾಳಿಕೊಂಡು ಕೂರುವಂತೆ ಮಾಡುತ್ತಿದೆ. ಕೇಂದ್ರ ಹಾಗೂ ಆಯಾಯ ರಾಜ್ಯ ಸರ್ಕಾರಗಳು ಬಡ ಕೂಲಿ ಕಾರ್ಮಿಕರ ಬಗ್ಗೆ ಲಕ್ಷ್ಯ ವಹಿಸದೇ ಹೋದರೆ ಕೋವಿಡ್-19 ಸೋಂಕು ಪೀಡಿತ ಮಂದಿಯ ಸಾವಿನ ಸಂಖ್ಯೆಯನ್ನೂ ಈ ಬಡಪಾಯಿ ಕೂಲಿ ಕಾರ್ಮಿಕರ ಸಾವಿನ ಸಂಖ್ಯೆ ಮೀರಿಸೀತು ಅನ್ನೋ ಆತಂಕವೂ ಶುರುವಾಗಿದೆ..