ಹಂಪಿ ಅಂದರೆ ಭಾರತದ ಮೂಲೆ ಮೂಲೆಗಳಿಂದಷ್ಟೇ ಅಲ್ಲ ವಿದೇಶಿಯರನ್ನು ಆಕರ್ಷಿಸುತ್ತಿರುವ ಐತಿಹಾಸಿಕ ತಾಣ. ಅದರ ಉತ್ಸವ ಮಾತ್ರ ಅನಿವಾರ್ಯತೆ ಎಂಬಂತೆ ಆಚರಿಸಲಾಗುತ್ತಿದೆ. ದಿನಾಂಕ ಮುಂದೂಡಿ ಕೊನೆಗೂ ಮುಹೂರ್ತ ನಿಗದಿಪಡಿಸಿದ್ದು ಜನವರಿ 10 ಮತ್ತು 11 ರಂದು. ಅದು ಬರೀ ಎರಡು ದಿವಸವಂತೆ. ಹೀಗೆ ಮಾಡಿದರು ಕಲಾ ಪ್ರಿಯರು ಹಾಗೂ ಸಾರ್ವಜನಿಕರು ಬಹುಸಂಖ್ಯೆಯಲ್ಲಿ ಕೂಡುವರೆ ಎಂಬುದು ಈ ಬಾರಿ ಯಕ್ಷ ಪ್ರಶ್ನೆಯಾಗಿದೆ.
ಈಗ ಮಾಡಬೇಕಾಗಿದ್ದು ಹಂಪಿ ಉತ್ಸವ 2019, ಅದು ನಡೆಯುತ್ತಿರುವುದು 2020ರಲ್ಲಿ. ಇದು ಅವೈಜ್ಞಾನಿಕ ಎಂಬುದು ಈ ಭಾಗದ ಜನರ ಅನಿಸಿಕೆ. ಉತ್ಸವಕ್ಕೆ ಸರ್ಕಾರ ಕೋಟ್ಯಂತರ ಹಣ ಖರ್ಚು ಮಾಡುತ್ತದೆ. ಚುಮು ಚುಮು ಚಳಿ ಶುರುವಾಗುವ ಹೊತ್ತಿನಲ್ಲಿ ಈ ಉತ್ಸವ ನಿಗದಿಪಡಿಸಿದ್ದಕ್ಕೂ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕಾರಣ ಈ ಭಾಗದಲ್ಲಿ ಕೊರೆಯುವ ಚಳಿ ಹೆಚ್ಚಾಗಿರುವುದರಿಂದ ಮಹಿಳೆಯರು ಮತ್ತು ಮಕ್ಕಳು ಉತ್ಸವಕ್ಕೆ ಬಾರದೆ ಇರಬಹುದು. ಮಹಿಳೆಯರು ಮತ್ತು ಮಕ್ಕಳು ಉತ್ಸವಕ್ಕೆ ಬರದಿದ್ದರೆ ಉತ್ಸವದಲ್ಲಿ ಜನರ ಕೊರತೆ ಎದ್ದು ಕಾಣುತ್ತದೆ. ಕಲಾರಸಿಕರಿಗೆ ರಸ ಭಂಗ ವಾಗುತ್ತದೆ.
ನವೆಂಬರ್ ತಿಂಗಳಿನಲ್ಲಿ ಇಲ್ಲಿಯ ವಾತಾವರಣ ಹೆಚ್ಚು ಅನುಕೂಲಕರವಾಗಿದ್ದು, ಇದೇ ಸಮಯದಲ್ಲಿ ಹೆಚ್ಚು ಪ್ರವಾಸಿಗರು ಜಮಾಯಿಸುತ್ತಿದ್ದರು. ಇದನ್ನೆಲ್ಲ ಚರ್ಚಿಸಿ ಅಂದಿನ ಮುಖ್ಯಮಂತ್ರಿ ಎಂ ಪಿ ಪ್ರಕಾಶ್ ಈ ನವೆಂಬರ್ 3 ಮತ್ತು 4 ರಂದು ಪ್ರತಿವರ್ಷ ಆಚರಿಸೋಣ ಎಂದಿದ್ದರು.
ಬಳ್ಳಾರಿಯ ನಾಗಪ್ಪ ಉಪ್ಪಾರ, ಸಾಮಾಜಿಕ ಕಾರ್ಯಕರ್ತರು ಹೇಳುವ ಪ್ರಕಾರ, “ಬಳ್ಳಾರಿ ಜನರು ಬಿಸಿಲ ಪ್ರಿಯರು ಹೆಚ್ಚು, ಬಿಸಿಲು ಹೆಚ್ಚಾದರೂ ತಡೆದುಕೊಳ್ಳುವ ಜನರು. ಆದರೆ ಚಳಿ ಇಲ್ಲಿಯವರಿಗೆ ಸರಿಹೊಂದಲ್ಲ. ಅದು ಜನವರಿ ಕೊರೆಯುವ ಚಳಿ, ನಮಗೆಲ್ಲ ಆಗಿ ಬರೋಲ್ಲ. ಇನ್ನು ಉತ್ಸವ.. ಸಂಜೆ ಹಾಗೂ ರಾತ್ರಿಯೆಲ್ಲಾ ಕಾರ್ಯಕ್ರಮಗಳಿರುತ್ತವೆ. ಮಕ್ಕಳಿಗೆ ನೆಗಡಿ, ಜ್ವರ ಖಚಿತ, ಅದಕ್ಕೆ ಈ ಬಾರಿ ನಾವು ಹೋಗಬಾರದೆಂದು ನಿರ್ಧರಿಸಿದ್ದೇವೆ”.

ಕಲಾವಿದ ಸಂಗಪ್ಪ, ಪ್ರತಿ ಬಾರಿ ಸಂಗೀತ ಕಾರ್ಯಕ್ರಮ ನೀಡುವವರು ಹೇಳುವುದು ಹೀಗೆ, “ಕಲಾವಿದರೆಲ್ಲ ಹಂಪಿ ಉತ್ಸವ ಯಾವಾಗ ಎಂದು ಕಾಯುತ್ತಿರುತ್ತೇವೆ. ನಮಗೆ ಸಂಭಾವನೆ ಬೇಡ, ಸೂಕ್ತ ಸಮಯದಲ್ಲಿ ಉತ್ಸವ ನಡೆದರೆ ಸಾಕು. ಈ ಭಾಗದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮುತುವರ್ಜಿ ವಹಿಸಿ ಮುಂದಿನ ಬಾರಿಯಾದರೂ ಸರಿಯಾದ ಸಮಯದಲ್ಲಿ ಅದ್ದೂರಿ ಮೂರು ದಿನಗಳ ಉತ್ಸವವನ್ನು ನಡೆಸಿಕೊಡುವವರೇ ನೋಡೋಣ”.
ಹಂಪಿಯ ವ್ಯಾಪಾರಸ್ಥ ರಾಜು ಹನುಮರಡ್ಡಿ ಅವರ ಪ್ರಕಾರ, “ಈ ಬಾರಿ ಚುನಾವಣೆಯಿಂದಾಗಿ ಉತ್ಸವ ಮುಂದೂಡಲಾಯಿತು. ಕಳೆದ ಬಾರಿ ಲೋಕಸಬಾ ಉಪಚುನಾವಣೆ, ಹೀಗೆ ಒಂದಲ್ಲ ಎರಡಲ್ಲ ಎಲ್ಲ ಕಾರಣಗಳು ಹಂಪಿ ಉತ್ಸವಕ್ಕೆ ಯಾಕೆ ಅಡ್ಡಿ. ಮೈಸೂರು ದಸರಾ ಹಾಗೂ ಇನ್ನೂ ಅನೇಕ ಉತ್ಸವಗಳು ಕರ್ನಾಟಕದಲ್ಲಿ ನಡೆಯುತ್ತವೆ. ಅವೆಲ್ಲ ಸರಿಯಾದ ಸಮಯದಲ್ಲಿ ನಡೆಯುತ್ತದೆ. ಕಲಾರಸಿಕರಿಗೆ, ಜನರಿಗೆ ಹಾಗೂ ನಮ್ಮಂತಹ ವ್ಯಾಪಾರಸ್ಥರಿಗೆ ಪ್ರತಿ ವರ್ಷಕ್ಕೊಮ್ಮೆ ಉತ್ತಮ ಆದಾಯ ತಂದುಕೊಡುವ ಈ ಉತ್ಸವ ನಮಗೆ ಕನಸಿನಂತಾಗಿದೆ. ನಮ್ಮ ವ್ಯಾಪಾರ ಬಿಡಿ, ಜನಪ್ರತಿನಿಧಿಗಳು ತಮಗೆ ಮತ ಹಾಕುವ ಜನರ ಭಾವನೆಗಳನ್ನೂ ಗೌರವಿಸದಿರುವರೆ, ಪದೇ ಪದೇ ಉತ್ಸವ ಮುಂದೂಡಿ, ಮೂರು ದಿನದ ಉತ್ಸವವನ್ನುಎರಡೇ ದಿನ ಆಚರಿಸುವುದು ಉತ್ಸವದ ಮೇಲೆ ಕರಿಛಾಯೆ ಬಿದ್ದಂತಾಗುವುದಲ್ಲವೇ”.
ಪ್ರತಿ ಬಾರಿ ಹಿಂಗೆ!!
1987ರಲ್ಲಿ ಎಂ.ಪಿ ಪ್ರಕಾಶ್ ಅವರ ಮುತುವರ್ಜಿಯಿಂದಾಗಿ ಹಂಪಿ ಉತ್ಸವವನ್ನು ಆರಂಭಿಸಲಾಗಿತ್ತು. 1988ರಲ್ಲಿ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ನಜೀರ್ ಸಾಬ್ ನಿಧನರಾದರೆಂದು ಆಚರಿಸಲಿಲ್ಲ. 2000 ನೇ ಇಸವಿಯಲ್ಲಿ ಡಾ. ರಾಜ್ ಕುಮಾರ ಅವರನ್ನು ಅಪಹರಿಸಲಾಗಿದ್ದರಿಂದ ಹಂಪಿ ಉತ್ಸವವನ್ನು ಆಚರಿಸಲಿಲ್ಲ. 2002ರಲ್ಲಿ ಬರದ ನೆವದಿಂದ ಉತ್ಸವ ಮಾಡಲಾಗಲಿಲ್ಲ. 2003 ರಲ್ಲಿ ಜನವರಿ 26ಕ್ಕೆ ನಿಗದಿ ಮಾಡಲಾಗಿತ್ತು. ಉತ್ಸವವೇನೋ ವೈಭವದಿಂದ ಆರಂಭವಾಯಿತು. ಆದರೆ ಅಂದು ಮೊದಲನೆಯ ದಿನವೇ ಸ್ಥಳೀಯ ತಾಲೂಕು ಪಂಚಾಯತ್ ಅಧ್ಯಕ್ಷರಾಗಿದ್ದ ಸೂರ್ಯನಾರಾಯಣ ಅವರು ನಿಧನರಾಗಿದ್ದರಿಂಧ ರದ್ದುಗೊಳಿಸಲಾಯಿತು. 2009 ರಲ್ಲಿ ಉತ್ತರ ಕರ್ನಾಟದಲ್ಲಿ ಪ್ರವಾಹ ಬಂತು, ಉತ್ಸವ ಕೈಬಿಟ್ಟರು. 2011 ರಲ್ಲಿ ರೆಡ್ಡಿ ಸಹೋದರರ ರಾಜಕೀಯ ಪರಿಸ್ಥಿತಿ ಬದಲಾವಣೆ ಯಾದಕಾರಣ ಹಂಪಿ ಉತ್ಸವಕ್ಕೆ ವೈಭವದ ಕೊರತೆಯಾಯಿತು. 2012ರಲ್ಲಿ ರಾಜಕೀಯ ಸ್ಥಿತಿಗಳು ಬದಲಾವಣೆಗಳ ಕಾರಣದಿಂದ ಉತ್ಸವವನ್ನೇ ಕೈಬಿಡಬೇಕಾಗಿ ಬಂತು.

2013ರಲ್ಲಿಯೂ ಹೀಗೆ ಆಗಿತ್ತು. ಜನವರಿ 18 ರಿಂದ 20ರ ವರೆಗೆ ಆಚರಿಸಲು ನಿರ್ಧಾರವಾಗಿತ್ತು. ಅದಕ್ಕೆ ಕೆಲ ಸಭೆಗಳೂ ನಡೆದವು. ನಂತರ ಆಗಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಂತಿಮ ದಿನಾಂಕಕ್ಕೆ ಒಪ್ಪಿಗೆ ನೀಡಲಿಲ್ಲ. ನಂತರ ಬಿಜೆಪಿ ಸರ್ಕಾರದ ಆಂತರಿಕ ಬೆಳವಣಿಗೆಗಳು ಉತ್ಸವಕ್ಕೆ ಅಡ್ಡಿಯಾದವು.
ಆದರೆ 2008 ರಲ್ಲಿ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಂಪಿ ಉತ್ಸವನ್ನು ಅದ್ಧೂರಿಯಿಂದ ಆಚರಿಸಿದರು. ಬಿಜೆಪಿ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ ಅಂದು ಚಾಲನೆ ನೀಡಿದ್ದು, ಹಂಪಿ ಉತ್ಸವ ರಾಷ್ಟ್ರದ ಗಮನ ಸೆಳೆಯಿತು. ನಂತರ 2010 ಜನವರಿ ಯಲ್ಲಿಯೂ ವೈಭವದಿಂದ ಆಚರಿಸಲಾಯಿತು.