ʼಟ್ರಿಕ್‌ ಫೋಟೋಗ್ರಫಿʼ ಎಕ್ಸ್‌ಪರ್ಟ್ ಶ್ರೀಕಾಂತ್ ಇನ್ನು ನೆನಪು ಮಾತ್ರ

ಹೆಚ್ಚಿನ ತಂತ್ರಜ್ಞಾನದ ಲಭ್ಯತೆ ಇಲ್ಲದ ಆಗಿನ ಕಾಲದಲ್ಲಿ ಒಂದೇ ಫ್ರೇಮ್‍ನಲ್ಲಿ ನಟನ ಎರಡು ಪಾತ್ರಗಳನ್ನು ತರುವುದು ಬಹಳ ತ್ರಾಸದಾಯಕ ಕೆಲಸ. ಅದು ಛಾಯಾಗ್ರಾಹಕನಿಗೆ ಬಹುದೊಡ್ಡ ಸವಾಲು. ಇಂತಹ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಿದವರು ಶ್ರೀಕಾಂತ್. ಉತ್ತಮ ಛಾಯಾಗ್ರಹಣ ಕೈಚಳಕದೊಂದಿಗೆ ಗುರುತಿಸುವ ‘ಸಾಕ್ಷಾತ್ಕಾರ’, ‘ಗೆಜ್ಜೆಪೂಜೆ’, ‘ಬಬ್ರುವಾಹನ’, ‘ಎಡಕಲ್ಲು ಗುಡ್ಡದ ಮೇಲೆ’, ‘ಉಪಾಸನೆ’ ಮುಂತಾದ ಸಿನಿಮಾಗಳು ಶ್ರೀಕಾಂತ್ ಅವರ ಕಸುಬುದಾರಿಕೆಗೆ ಸಾಕ್ಷ್ಯ ನುಡಿಯುತ್ತವೆ. ಅವರ ಲೈಟಿಂಗ್, ಛಾಯಾಗ್ರಹಣ ಚಿತ್ರಕಥೆಗೆ ಬೇಕಾದ ಹಿನ್ನೆಲೆ ಒದಗಿಸುತ್ತದೆ. ಛಾಯಾಗ್ರಹಣ, ಲೈಟಿಂಗ್ ಅಭ್ಯಾಸ ಮಾಡುವವರಿಗೆ ಶ್ರೀಕಾಂತ್ ಕ್ಯಾಮರಾ ಕಲೆಗಾರಿಕೆ ಒಂದೊಳ್ಳೆ ಪಾಠ. ಹೀಗೆ ಸಿನಿಮಾ ಛಾಯಾಗ್ರಹಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಶ್ರೀಕಾಂತ್. ಮಾಸ್ಕ್, ಡಬ್ಬಲ್ ಆಕ್ಟಿಂಗ್ ಹಾಗೂ ಇನ್ನಿತರೆ ತಂತ್ರಗಳನ್ನು ಅಚ್ಚುಕಟ್ಟಾಗಿ ತೆರೆಗೆ ತರುತ್ತಿದ್ದ ಶ್ರೀಕಾಂತ್ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಛಾಯಾಗ್ರಾಹಕ.

ಶ್ರೀಕಾಂತ್ ತಂದೆ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಮದ್ದೂರಿನಲ್ಲಿ ಅವರ ಕುಟುಂಬ ನೆಲೆಸಿದ್ದಾಗ ಶ್ರೀಕಾಂತ್ ಜನಿಸಿದರು. ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಬಿಎಸ್‍ಸಿ ಪದವಿ ಪೂರೈಸಿದರು. ‘ರಾಶಿ’ ಸಹೋದರರು ಖ್ಯಾತಿಯ ನಿರ್ದೇಶಕ ರಾಮನಾಥ್ ಅವರು ಕಾಲೇಜಿನಲ್ಲಿ ಶ್ರೀಕಾಂತ್ ಅವರ ಜೊತೆಗಾರರು. ರಾಮನಾಥ್ ಅವರ ಗೆಳೆತನ ಅವರ ಸಿನಿಮಾಸಕ್ತಿಗೆ ಇಂಬು ನೀಡಿತ್ತು. 1956ರಲ್ಲಿ ಮದರಾಸಿನ ಗೋಲ್ಡನ್ ಸ್ಟುಡಿಯೋ ಸೇರಿದ ಅವರು ಒಂದಷ್ಟು ಸಮಯ ಛಾಯಾಗ್ರಹಣ ಸಹಾಯಕರಾಗಿ ಕೆಲಸ ಮಾಡಿದರು. ಶ್ರೀಕಾಂತ್ ಸ್ವತಂತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಮೊದಲ ಸಿನಿಮಾ ‘ಜೀವನ ತರಂಗ’.

ಕನ್ನಡ, ತೆಲುಗಿನ ಅರವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಅವರು ಕಾರ್ಯನಿರ್ವಹಿಸಿದ್ದಾರೆ. ಶ್ರೀಕಾಂತ್ ಅಂಡ್ ಶ್ರೀಕಾಂತ್ ಸಿನಿಮಾ ಬ್ಯಾನರ್‍ನಲ್ಲಿ ಅವರು ಹೆಚ್ಚಾಗಿ ಗುರುತಿಸಿಕೊಂಡಿದ್ದರು. ‘ಮಾರ್ಗದರ್ಶಿ’, ‘ಗೆಜ್ಜೆಪೂಜೆ’, ‘ಉಪಾಸನೆ’ ಚಿತ್ರಗಳ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಶ್ರೀಕಾಂತ್ ಮೂರು ಬಾರಿ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ಕೆಲಸ ಮಾಡಿದ ರಾಜಕುಮಾರ್ ಅವರ ಕೊನೆಯ ಸಿನಿಮಾ ‘ಜೀವನ ಚೈತ್ರ’. “ಕನ್ನಡ ಚಿತ್ರರಂಗ ಕಂಡ ಟ್ರಿಕ್ ಫೋಟೋಗ್ರಫಿ ಸ್ಪೆಷಲಿಸ್ಟ್ ಶ್ರೀಕಾಂತ್. ಕನ್ನಡದ ಮತ್ತೊಬ್ಬ ಪ್ರಮುಖ ಛಾಯಾಗ್ರಾಹಕ ಡಿ.ವಿ.ರಾಜಾರಾಂ ಮತ್ತು ಶ್ರೀಕಾಂತ್ ಆತ್ಮೀಯ ಸ್ನೇಹಿತರು. ಮದರಾಸಿನಲ್ಲಿ ಇಬ್ಬರೂ ರೂಂಮೇಟ್ಸ್. ಲೈಟಿಂಗ್‍ನಲ್ಲಿ ಇಬ್ಬರೂ ಎಕ್ಸ್‌ ಪರ್ಟ್‍ಗಳು. ‘ಮಗ ಮೊಮ್ಮಗ’ ಚಿತ್ರದಲ್ಲಿ ನಾನು ಅವರಿಗೆ ಸಹಾಯಕ ಛಾಯಾಗ್ರಾಹಕನಾಗಿ ಕೆಲಸ ಮಾಡಿದ್ದೆ. ಮುಂದೆ ನಾನು ಛಾಯಾಗ್ರಹಣ ಮಾಡಿದ ‘ಅಣ್ಣಾವ್ರ ಮಕ್ಕಳು’ ಚಿತ್ರಕ್ಕೆ ಅವರಿಂದ ಕೆಲವು ಟ್ರಿಕ್ ವರ್ಕ್ ಮಾಡಿಸಿದ್ದೆ. ಅವರ ಫೋಟೋಗ್ರಫಿಯಿಂದ ನಾನು ಬಹಳಷ್ಟು ಕಲಿತಿದ್ದೇನೆ” ಎನ್ನುತ್ತಾರೆ ಹಿರಿಯ ಸಿನಿಮಾ ಛಾಯಾಗ್ರಾಹಕ ಬಿ.ಎಸ್.ಬಸವರಾಜ್.

ಹಿರಿಯ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು ಶ್ರೀಕಾಂತ್ ಛಾಯಾಗ್ರಹಣ ನಿರ್ವಹಿಸಿದ ಹಲವು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಅವರೊಬ್ಬ ಅತ್ಯುತ್ತಮ ತಂತ್ರಜ್ಞ ಎಂದು ಗುರುತಿಸುತ್ತಾರೆ. “ಹಿಂದಿ ಚಿತ್ರರಂಗದಲ್ಲಿ ಲೈಟಿಂಗ್ ಕುರಿತಾಗಿ ನಾವು ಹೇಗೆ ವಿ.ಕೆ.ಮೂರ್ತಿ ಅವರನ್ನು ಗುರುತಿಸುತ್ತೇವೋ, ಹಾಗೆ ಕನ್ನಡದಲ್ಲಿ ಡಿ.ವಿ.ರಾಜಾರಾಂ ಮತ್ತು ಶ್ರೀಕಾಂತ್ ಅವರನ್ನು ಗುರುತಿಸುತ್ತೇವೆ. ವಿಶೇಷವಾಗಿ ಟ್ರಿಕ್ ಫೋಟೋಗ್ರಫಿಯಲ್ಲಿ ಶ್ರೀಕಾಂತ್ ನಿಪುಣರು. ಛಾಯಾಗ್ರಾಹಕ ಡಿ.ವಿ.ರಾಜಾರಾಂ ಅವರೊಂದಿಗೆ ಸೇರಿ ಶ್ರೀಕಾಂತ್ ಸಿನಿಟೆಕ್ ಸಂಸ್ಥೆ ಆರಂಭಿಸಿದ್ದರು. ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅಮೂಲ್ಯವಾದುದು” ಎನ್ನುತ್ತಾರೆ ಅಶ್ವತ್ಥ ನಾರಾಯಣ.

ಪ್ರೀಮಿಯರ್ ಸ್ಟುಡಿಯೋದಲ್ಲಿ ʼ ಉಪಾಸನೆʼ ಚಿತ್ರದ ಮುಹೂರ್ತದಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮತ್ತು ಇತರೆ ತಂತ್ರಜ್ಞರೊಂದಿಗೆ ಶ್ರೀಕಾಂತ್. (ಫೋಟೋ ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ)

ರಾಶಿ ಸಹೋದರರು (ರಾಮನಾಥ ಮತ್ತು ಶಿವರಾಂ) ನಿರ್ಮಿಸಿದ ʼಗೆಜ್ಜೆಪೂಜೆʼ ಚಿತ್ರಕ್ಕೆ ಶ್ರೀಕಾಂತ್ ಅವರದ್ದೇ ಛಾಯಾಗ್ರಹಣ. ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ಈ ಸಿನಿಮಾಗೆ ಚಿತ್ರೀಕರಣ ನಡೆದಿತ್ತು. “ಅದು ನಲವತ್ತು ದಿನಗಳ ಒಂದೇ ಶೆಡ್ಯೂಲ್‍ನ ಚಿತ್ರೀಕರಣ. ಶ್ರೀಕಾಂತ್‍ರ ಛಾಯಾಗ್ರಹಣ ನೈಪುಣ್ಯತೆಯನ್ನು ನೀವು ಚಿತ್ರದುದ್ದಕ್ಕೂ ಗುರುತಿಸಬಹುದು. ನಿರ್ದೇಶಕನ ವಿಷನ್ ಅರಿತು ಕೆಲಸ ಮಾಡುವ ಕ್ಯಾಮರಾಮನ್ ಅವರು. ಪುಟ್ಟಣ್ಣನವರು ಶ್ರೀಕಾಂತ್‍ರನ್ನು ಬಹುವಾಗಿ ಇಷ್ಟಪಡುತ್ತಿದ್ದರು. ‘ಎಡಕಲ್ಲು ಗುಡ್ಡದ ಮೇಲೆ’ ಸಿನಿಮಾದಲ್ಲಿನ ಅವರ ಛಾಯಾಗ್ರಹಣದ ಬಗ್ಗೆ ತಮಿಳು ತಂತ್ರಜ್ಞರು ಅಚ್ಚರಿಯಿಂದ ಮಾತನಾಡಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಲೈಟ್ ಮಾಸ್ಕಿಂಗ್ ಟೆಕ್ನಿಕ್‍ನಲ್ಲಿ ಅವರನ್ನು ಸರಿಗಟ್ಟುವವರೇ ಇರಲಿಲ್ಲ. ಮದರಾಸಿನಲ್ಲಿ ನಾವೆಲ್ಲರೂ ಅಕ್ಕಪಕ್ಕದ ಬೀದಿಯಲ್ಲಿ ನೆಲೆಸಿದ್ದವರು. ಅವರ ಅಗಲಿಕೆ ತುಂಬಾ ನೋವು ತಂದಿದೆ. ಕನ್ನಡ ಸಿನಿಮಾ ಛಾಯಾಗ್ರಹಣದ ಪ್ರಮುಖ ತಾರೆಯೊಂದು ಕಳಚಿದಂತಾಗಿದೆ” ಎನ್ನುತ್ತಾರೆ ಶಿವರಾಂ.

Please follow and like us:

Related articles

Share article

Stay connected

Latest articles

Please follow and like us: