ಪಾಟ್ನಾ: ಬಿಹಾರದ ಸಾರ್ವಜನಿಕ ಆರೋಗ್ಯ ಸೇವೆಯು ತನ್ನ ಎಡವಟ್ಟುಗಳಿಂದ ಅಗಾಗ್ಗೆ ಸುದ್ದಿಯಾಗುತ್ತಲಿದೆ. ಈಗ ಅದರ ಅವಮಾನದ ಪಟ್ಟಿಗೆ ಇನ್ನೊಂದು ಘಟನೆ ಸೇರ್ಪಡೆಯಾಗಿದೆ. ಸಾಂಕ್ರಾಮಿಕ ರೋಗದೊಂದಿಗೆ ಹರಡಿದ ಕೋಮು ಧ್ವೇಷವು ಗರ್ಭಿಣಿಯೊಬ್ಬಳ ಚೊಚ್ಚಲ ಮಗುವನ್ನು ಬಲಿ ಪಡೆದುಕೊಂಡಿದೆ.
ಬಿಹಾರದ ಖಾಝಿಪುರ ಗ್ರಾಮದ ಗುಲ್ಶನ್ ಖತೂನ್ ಮುಸ್ಲಿಮಳೆನ್ನುವ ಕಾರಣಕ್ಕೆ ಆಸ್ಪತ್ರೆಗಳಿಂದ ನಿರ್ಲಕ್ಷ್ಯಕ್ಕೊಳಗಾಗಿ ತನ್ನ ಗರ್ಭದ ಉಸಿರನ್ನು ಕಳೆದುಕೊಂಡ ನತದೃಷ್ಟ ಮಹಿಳೆ.
ಗುಲ್ಶನ್‌ಗೆ ಹೆರಿಗೆ ನೋವು ಕಾಣಿಸಿಕೊಂಡದ್ದರಿಂದ ಸಮೀಪದ ಪ್ರಾಥಮಿಕ ಆರೋಗ್ಯಕ್ಕೆ ಕೇಂದ್ರಕ್ಕೆ ಹಾಗೂ ಅಲ್ಲಿ ದಾಖಲಾತಿಗೆ ನಿರಾಕರಿಸಿದಕ್ಕೆ ಜಿಲ್ಲೆಯ ಮುಖ್ಯ ಆಸ್ಪತ್ರೆಗಳಲ್ಲೊಂದಾದ ಸದರ್ ಆಸ್ಪತ್ರೆಗೂ ಕೊಂಡೊಯ್ಯಲಾಗಿತ್ತು, ಆದರೆ ಆಸ್ಪತ್ರೆ ಸಿಬ್ಬಂದಿಗಳಲ್ಲಿದ್ದ ಮುಸ್ಲಿಂ ಧ್ವೇಷವು ಆಕೆಯ ಮಗುವನ್ನು ಬಲಿಪಡೆದುಕೊಂಡಿತು.
ಎಪ್ರಿಲ್ 29 ರಂದು ಹೆರಿಗೆ ನೋವು ಕಾಣಿಸಿಕೊಂಡ ಗುಲ್ಶನ್‌ಳನ್ನು ಆಕೆಯ ತಾಯಿ ಮತ್ತು ಸಂಬಂಧಿಕ ಮಹಿಳೆ ಆಟೋವೊಂದರಲ್ಲಿ ಸಿಮ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಆಕೆಯನ್ನು ಪ್ರಾಥಮಿಕ ಚಿಕಿತ್ಸೆಗೆ ಒಳಪಡಿಸಲಾಯಿತು. ತದನಂತರ ಗುಲ್ಶನ್ ಮುಸ್ಲಿಮಳೆನ್ನುವುದು ಅರಿತ ಅಲ್ಲಿನ ಸೂಲಗಿತ್ತಿ ಚಿಕಿತ್ಸೆ ನೀಡುವುದನ್ನು ನಿಲ್ಲಿಸಿ, ಕರೋನಾ ಹರಡುವ ಮುಸ್ಲಿಮರಿಗೆ ತಾನು ಚಿಕಿತ್ಸೆ ನೀಡುವುದಿಲ್ಲವೆಂದು, ಆಸ್ಪತ್ರೆಯಿಂದ ತೆರಳುವಂತೆ ಸೂಚಿಸಿದ್ದಾಳೆ.
ಆರೋಗ್ಯ ಕೇಂದ್ರ ಆಂಬ್ಯುಲೆನ್ಸ್ ವ್ಯವಸ್ಥೆಯು ಮಾಡಿಕೊಡದ್ದರಿಂದ ಮೊದಲು ಬಂದ ಆಟೋದಲ್ಲೇ ಆಕೆಯನ್ನು ಜಿಲ್ಲೆಯ ಸರ್ಕಾರಿ ನಿಯಂತ್ರಿತ ಮುಖ್ಯ ಆಸ್ಪತ್ರೆಗಳಲ್ಲೊಂದಾದ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ದುರದೃಷ್ಟವಶಾತ್ ಅಲ್ಲಿಯೂ ಆಕೆಗೆ ಸರಿಯಾದ ಚಿಕಿತ್ಸೆ ನೀಡಿಲ್ಲವೆಂದು ಗುಲ್ಶನ್ ಆರೋಪಿಸಿದ್ದಾರೆ.

ಗುಲ್ಶನ್ ಹೇಳಿಕೆಯ ಪ್ರಕಾರ ಹಲವು ಗಂಟೆಗಳ ಕಾಲ ಆಕೆಯನ್ನು ಪ್ರತ್ಯೇಕ ವಾರ್ಡಿನಲ್ಲಿರಿಸಲಾಗಿತ್ತು. ಅಷ್ಟು ಗಂಟೆಗಳ ಕಾಲ ಹೆರಿಗೆ ನೋವಿನಿಂದ ಅಲ್ಲಿ ಮಲಗಿದ ಆಕೆಗೆ ಅಲ್ಲಿ ದೊರೆತಿರುವ ಚಿಕಿತ್ಸೆ “ಅಲ್ಟ್ರಾಸೊನಾಗ್ರಫಿ” ಪರೀಕ್ಷೆ ಮಾಡಲು ನೀಡಿದ ಸಲಹೆ ಮಾತ್ರ!, ಅಲ್ಲದೆ ಅಲ್ಟ್ರಾಸೊನಾಗ್ರಫಿ ಪರೀಕ್ಷೆ ನಡೆಸುವ ವ್ಯವಸ್ಥೆ ಅಲ್ಲಿಲ್ಲವೆಂದು ಅದಕ್ಕಾಗಿ ಬೇರೆಯೇ ಖಾಸಗಿ ಆಸ್ಪತ್ರೆಗೆ ಹೋಗಬೇಕೆಂದು ಸೂಚಿಸಲಾಗಿದೆ.
ಗುಲ್ಶನ್‌ನ ಹೆರಿಗೆ ನೋವು ಇಟ್ಟುಕೊಂಡು ಆ ಮೂರು ಮಹಿಳೆಯರು ಚಿಕಿತ್ಸೆಗಾಗಿ ಇರುಳಿಡೀ ಅಲೆದಾಡಿದ್ದಾರೆ. ಆದರೆ ಎಲ್ಲಾ ಕ್ಲಿನಿಕ್ ಮತ್ತು ಆಸ್ಪತ್ರೆಗಳು ಮುಚ್ಚಿದ್ದವು. ಕಡೆಗೆ ಸ್ಥಳೀಯರ ಸಲಹೆಯ ಮೇರೆಗೆ ಆಕೆಯನ್ನು ಜಿಲ್ಲೆಯ ಹೊರಗಡೆ ಇರುವ ಆದಿತ್ಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಆಕೆ ಗರ್ಭದಲ್ಲಿಯೇ ಅಸುನೀಗಿರುವ ಮಗುವನ್ನು ಹೆತ್ತಿದ್ದಾರೆ.
ಆದಿತ್ಯ ಆಸ್ಪತ್ರೆಯ ಮೂಲದ ಪ್ರಕಾರ ಚೊಚ್ಚಲ ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿದ ತಕ್ಷಣವೇ ಚಿಕಿತ್ಸೆ ನೀಡಬೇಕು, ತಡ ಮಾಡಿದರೆ ಗರ್ಭದಲ್ಲೇ ಶಿಶು ಮರಣಹೊಂದುವ ಸಾಧ್ಯತೆ ಇದೆ. ಅಲ್ಲದೆ ಗರ್ಭಿಣಿಯರಿಗೆ ಮಾನಸಿಕ ಆಘಾತ ನೀಡಿದರೂ ಗರ್ಭದಲ್ಲಿ ಶಿಶು ಸಾಯುವ ಸಂಭವ ಹೆಚ್ಚು, ಗುಲ್ಶನ್ ಚೊಚ್ಚಲ ಬಸುರಿ, ಆಕೆಯ ಪ್ರಕರಣದಲ್ಲಿ ತಕ್ಷಣ ಚಿಕಿತ್ಸೆಯನ್ನು ನಿರಾಕರಿಸಲಾಗಿದೆ ಅಲ್ಲದೆ ಧರ್ಮದ ಕಾರಣಕ್ಕೆ ಹಿಯಾಳಿಸಿ ಅತ್ತಿಂದಿತ್ತ ಅಲೆದಾಡಿಸಿ ಮಾನಸಿಕ ಹಿಂಸೆ ನಿಡಲಾಗಿದೆ. ಮಗು ಸಾಯುವುದಕ್ಕೆ ಇದೂ ಕಾರಣವಿರಬಹುದೆಂದು ಆಕೆಗೆ ಚಿಕಿತ್ಸೆ ನೀಡಿದ ವೈದ್ಯರು ದಿ ವೈರ್ ಬಳಿ ಹೇಳಿದ್ದಾರೆ.
ವಲಸೆ ಕಾರ್ಮಿಕರಾಗಿ ದುಡಿಯುವ ಗುಲ್ಶನ್‌ರ ಗಂಡ ಹಾಗೂ ತಂದೆ ಲಾಕ್‌ಡೌನ್‌ನಿಂದಾಗಿ ಹೈದರಾಬಾದಿನಲ್ಲಿ ಬಾಕಿಯಾಗಿದ್ದಾರೆ. ಅತ್ತ ಮಹಿಳೆಯರಲ್ಲಿ ಯಾವ ಉಳಿತಾಯವೂ ಉಳಿದಿರಲಿಲ್ಲ, ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಿಸಿದ್ದರಿಂದ ಖಾಸಗಿ ಆಸ್ಪತ್ರೆಗೆ 10 ಸಾವಿರ ಹಾಗೂ ಆಸ್ಪತ್ರೆ ಹುಡುಕಿ ಆಟೋದಲ್ಲಿ ಅಲೆದಾಡಿದ್ದರಿಂದ ಬಾಡಿಗೆ 2 ಸಾವಿರ ಹೊಂದಿಸಲು ಹೈರಾಣಾಗಿಬಿಟ್ಟಿದ್ದಾರೆ.
Also Read: ಲಾಕ್‌ಡೌನ್: 900 ಕಿ.ಮೀ ಪ್ರಯಾಣ ಮಾಡಿದ ಗರ್ಭಿಣಿ, ಆಸ್ಪತ್ರೆಗೆ ದಾಖಲಿಸಲು ವೈದ್ಯರಿಂದ ನಿರಾಕರಣೆ
ನನ್ನ ಪತಿ ಹಾಗೂ ತಂದೆ ಹೈದರಾಬಾದಿನಲ್ಲಿ ಬಾಕಿಯಾಗಿರುವಾಗಲೇ ಈ ದುರ್ಘಟನೆ ನಡೆಯಿತು, ಅವರು ಅಲ್ಲಿ ಕಲ್ಲು ಪುಡಿಮಾಡುವ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಚಿಕಿತ್ಸೆ ನೀಡುವುದಕ್ಕಿಂತ ಮುಸ್ಲಿಂ ಧ್ವೇಷವೇ ಅವರಿಗೆ ಮುಖ್ಯವಾಯಿತು. ನನ್ನ ಕನಸು ಮತ್ತು ಭರವಸೆಯ ಖುಷಿಗಳೆಲ್ಲವೂ ಭಯಾನಕ ಹಾಗೂ ದುಃಖತಪ್ತವಾಗಿ ಬದಲಾದವು ಎಂದು ಹತಾಶರಾದ ಗುಲ್ಶನ್ ಹೇಳಿದ್ದಾರೆ.
ಆಕೆಯನ್ನು ಮುಸ್ಲಿಮಳೆನ್ನುವ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಿರುವುದು ಸಂಪೂರ್ಣವಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ರೋಗಿಗಳ ವಿರುದ್ಧದ ಯಾವುದೇ ಪೂರ್ವಾಗ್ರಹವು ಆರೋಗ್ಯ ಸಚಿವಾಲಯವು 2019 ಮಾರ್ಚ್ ರಲ್ಲಿ ಅಂಗೀಕರಿಸಿದ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ರೋಗಿಗಳ ಎಂಟನೇ ಹಕ್ಕಿನ ಪ್ರಕಾರ ಧರ್ಮದ ಆಧಾರದ ಮೇಲೆ ಯಾವುದೇ ರೋಗಿಗಳಿಗೆ ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ.
ಇಸ್ಲಾಮೋಫೋಬಿಯಾ ಹಾಗೂ ಧ್ವೇಷ ಇನ್ನೂ ಜಗತ್ತನ್ನು ನೋಡದ ಮಗುವನ್ನು ಅನ್ಯಾಯವಾಗಿ ಬಲಿ ಪಡೆದುಕೊಂಡಿತು. ಹಳ್ಳಿ ಹಳ್ಳಿಗಳಿಗೂ ಮುಸ್ಲಿಮರ ಕುರಿತು ಪೂರ್ವಾಗ್ರಹವನ್ನು ಮತ್ತು ಧ್ವೇಷವನ್ನು ತಲುಪಿಸುವಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳು ಮುಖ್ಯಪಾತ್ರ ವಹಿಸಿವೆ. ಮುಖ್ಯವಾಗಿ ಕರೋನಾ ಸಾಂಕ್ರಾಮಿಕ ರೋಗ ಭಾರತದಲ್ಲಿ ಹರಡಲು ಪ್ರಾರಂಭಿಸಿದ ಬಳಿಕ.
ಕೃಪೆ: ದಿ ವೈರ್
Also Read: ಮರದ ಕೆಳಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ ವಲಸೆ ಕಾರ್ಮಿಕ ಮಹಿಳೆ.!






