ಶಾಸಕ ಯತ್ನಾಳ ಈ ಹಿಂದೆ ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ಪಾಲ್ಗೊಂಡಿದ್ದಾರೆ. ಹಾಗಾದರೆ ಯತ್ನಾಳ್ ಅವರು ಮೂರನೇ ಟಿಪ್ಪು ಸುಲ್ತಾನ್ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ್ ಟಾಂಗ್ ನೀಡಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಯತ್ನಾಳ್ ಕೂಡ ಟಿಪ್ಪು ಸುಲ್ತಾನ ಜಯಂತಿಯಲ್ಲಿ ಪಾಲ್ಗೊಂಡಿರುವ ಫೋಟೋಗಳು ಇವೆ. ಹಾಗಾದರೆ ಅವರನ್ನು ಮೂರನೇ ಟಿಪ್ಪು ಸುಲ್ತಾನ್ ಎನ್ನಬಹುದು ಎಂದು ಹೇಳಿದರು.
ಸಿದ್ದರಾಮಯ್ಯ ಅವರನ್ನು ಎರಡನೇ ಟಿಪ್ಪು ಸುಲ್ತಾನ್ ಎಂದು ಜರಿಯುವ ಇದೇ ಯತ್ನಾಳ್ ಈ ಹಿಂದೆ ಟಿಪ್ಪು ಸುಲ್ತಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಫೋಟೋಗಳು ನನ್ನ ಬಳಿ ಇವೆ. ಮಾಧ್ಯಮದವರೇ ಯಾರೋ ನನಗೆ ಅವುಗಳನ್ನು ಕಳಿಸಿದ್ದಾರೆ. ಎಲ್ಲವೂ ನಿಮ್ಮ ಬಳಿಯೇ ಇದ್ದರೂ ನಮ್ಮ ಬಾಯಿಂದ ಹೇಳಿಸುತ್ತೀರಿ ಎಂದು ಬಿಜೆಪಿ ಶಾಸಕ ಯತ್ನಾಳಗೆ ತಿರುಗೇಟು ನೀಡಿದರು.

ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸುವ ಮುನ್ನ ಹೊಂದಾಣಿಕೆ, ಸೌಹಾರ್ದತೆ ಇತ್ತು. ಇದೀಗ ಕದಡಲಾಗಿದ್ದು, ಶಿಕ್ಷಣದ ನೆಲೆಗಳಲ್ಲಿ ಜಾತಿ, ಧರ್ಮ, ಪಕ್ಷ ಅಂತೆಲ್ಲ ವೈಮನಸ್ಸು ಸೃಷ್ಟಿಸಲಾಗಿದೆ. ಪರಿಣಾಮ ಹಿಜಾಬ್ ವಿಷಯ ಇದೀಗ ಕೋರ್ಟ್ ಮೆಟ್ಟಿಲೇರಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.






