‘ಪುಟಗೋಸಿ’ ವಿಪಕ್ಷನಾಯಕ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮೈತ್ರಿ ಸರ್ಕಾರವನ್ನು ಉರುಳಿಸಿದರು ಎಂದು ಹೆಚ್ಡಿ ಕುಮಾರಸ್ವಾಮಿ (HD Kumaraswamy) ನೀಡಿರುವ ಹೇಳಿಕೆಗೆ ಡಾ. ಯತೀಂದ್ರ ಸಿದ್ದರಾಮಯ್ಯ (Dr Yathindra Siddaramaiah) ತಿರುಗೇಟು ನೀಡಿದ್ದಾರೆ. ಅಲ್ಲದೆ, ಕಾಂಗ್ರೆಸ್‌ನ 17 ಜನ ಶಾಸಕರು ನಮ್ಮನ್ನು ಬಿಟ್ಟು ಹೋಗುವುದಕ್ಕೆ ಕುಮಾರಸ್ವಾಮಿ ಅವರೇ ಕಾರಣ ಎಂದು ಅವರು ಆರೋಪಿಸಿದ್ದಾರೆ.
ಹೆಚ್.ಡಿ ಕುಮಾರಸ್ವಾಮಿಯವರು ಮಾಡುತ್ತಿರುವ ಆರೋಪಗಳಿಗೆ ಯಾವುದೇ ಹುರುಳಿಲ್ಲ, ನಿಜವಾಗ್ಲೂ ನಮ್ಮ ಕಾಂಗ್ರೆಸ್ ಪಕ್ಷ ಹದಿನೇಳು ಜನ ಶಾಸಕರನ್ನ ಕಳೆದುಕೊಳ್ಳಲು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಕಾರಣ. ನಾವು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದಿದ್ದರೆ, ನಮ್ಮ 17 ಜನ ಶಾಸಕರು ನಮ್ಮ ಜೊತೆನೆ ಉಳಿಯುತ್ತಿದ್ದರು ಎಂದು ವರುಣಾ ಕ್ಷೇತ್ರದ ಶಾಸಕರಾಗಿರುವ ಯತೀಂದ್ರ ಹೇಳಿದ್ದಾರೆ.
ಕುಮಾರಸ್ವಾಮಿ ಯವರು ಮುಖ್ಯಮಂತ್ರಿಯಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜೊತೆಗೆ ಕರೆದುಕೊಂಡು ಹೋಗುವ ಕೆಲಸವನ್ನು ಮಾಡಬೇಕಿತ್ತು. ಕಾಂಗ್ರೆಸ್ ಪಕ್ಷ 80 ಸ್ಥಾನ ಗಳಿಸಿದ್ದರು ಕೂಡ ಜೆಡಿಎಸ್ ನವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ವಿ. ಹಾಗಿದ್ದ ಮೇಲೆ ಕುಮಾರಸ್ವಾಮಿಯವರು ನಮ್ಮ ಶಾಸಕರುಗಳನ್ನು ಸರಿಯಾಗಿ ನೋಡಿಕೊಳ್ಳಬೇಕಿತ್ತು.ಕುಮಾರಸ್ವಾಮಿ ಸರ್ಕಾರದಲ್ಲಿ ನಮ್ಮ ಶಾಸಕರುಗಳ ಯಾವ ಕೆಲಸಗಳು ಸರಿಯಾಗಿ ಆಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಅವರು, “ನನ್ನ ವರುಣ ಕ್ಷೇತ್ರದಲ್ಲೆ ನನ್ನ ಎಷ್ಟೋ ಕೆಲಸಗಳು ಆಗುತ್ತಿರಲಿಲ್ಲ. ಹಾಗಾಗಿ ನಮ್ಮ ಶಾಸಕರು ಬೇಸತ್ತು , ಮುಖ್ಯಮಂತ್ರಿಗಳು ಕೈಗೆ ಸಿಗುತ್ತಿಲ್ಲ , ನಮ್ಮ ಕಷ್ಟಗಳನ್ನು ಕೇಳುತ್ತಿಲ್ಲ, ನಮ್ಮ ಪಕ್ಷದ ಸಹಕಾರದಿಂದ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದರೂ ನಮ್ಮ ಸಮಸ್ಯೆಗಳನ್ನು ಮುಖ್ಯಮಂತ್ರಿಗಳು ಆಲಿಸುತ್ತಿಲ್ಲ, ಸ್ಪಂದಿಸುತ್ತಿಲ್ಲ ಎಂದು ಬೇಸತ್ತು, ನಮ್ಮ ಎಷ್ಟೋ ಶಾಸಕರು ಕೈಬಿಟ್ಟು ಹೋದರೇ ಹೊರತು ಇದರಲ್ಲಿ ಸಿದ್ದರಾಮಯ್ಯನವರ ಪಾತ್ರ ಏನೂ ಇಲ್ಲ” ಎಂದಿದ್ದಾರೆ.
ಕುಮಾರಸ್ವಾಮಿಯವರೇ ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕನ ಸ್ಥಾನ ತಗೊಂಡು ಏನು ಮಾಡಬೇಕು.ಅದೇನೂ ಮುಖ್ಯಮಂತ್ರಿ ಸ್ಥಾನನಾ? ವಿಪಕ್ಷ ನಾಯಕನ ಸ್ಥಾನದಲ್ಲಿ ಏನ್ ಬೆನಿಫಿಟ್ಸ್ ಸಿಗುತ್ತೆ. ಸಮ್ಮಿಶ್ರ ಸರ್ಕಾರ ಇದ್ದಿದರೇ ಅಟ್’ಲಿಸ್ಟ್ ಅಧಿಕಾರದಲ್ಲಿ ಇರ್ತಿದ್ವಿ, ಮಾತುಗಳು ನಡೆಯುತಿತ್ತು, ನಮ್ಮ ಪಕ್ಷದ ಶಾಸಕರಿಗೆ ಕೆಲಸ ಮಾಡಿಸಿಕೊಡಬಹುದಿತ್ತು. ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು ಆ ಮೂಲಕ ಕಾಂಗ್ರೆಸ್ ಶಾಸಕರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಕೆಲಸ ಮಾಡಿಸಿಕೊಡಬಹುದಿತ್ತು. ವಿರೋಧಪಕ್ಷದ ನಾಯಕನ ಸ್ಥಾನ ತೆಗೆದುಕೊಂಡು ಏನು ಮಾಡಬೇಕು. ಕುಮಾರಸ್ವಾಮಿ ಮಾಡುತ್ತಿರುವುದು ಒಂದು ರೀತಿಯ ನಗೆಪಾಟಿಲಿನ ಆರೋಪ ಅಂತ ಅನ್ಸುತ್ತೆ ಎಂದು ಕುಹಕವಾಡಿದ್ದಾರೆ.
ಈಗ ಚುನಾವಣೆ ಬರ್ತಿವೆ, ಉಪ ಚುನಾವಣೆ ಬರ್ತಿದೆ, ಅದರೊಳಗೆ ಜೆಡಿಎಸ್ ಗೆ ಕಾಂಗ್ರೆಸ್ ಪಕ್ಷವೇ ಪ್ರಭಲ ವಿರೋಧಿ. ಜೊತೆಗೆ ಜೆಡಿಎಸ್ ಗೆ ಬಿಜೆಪಿ ಪಕ್ಷದ ಮೇಲೆ ಒಳಗೊಳಗೆ ಒಲವಿದೆ, ಹಾಗಾಗಿ ಕಾಂಗ್ರೆಸ್ ಪಕ್ಷವನ್ನು ವಿರೋಧ ಮಾಡಬೇಕು.ಹಾಗಾಗಿ ಬಾಯಿಗೆ ಬಂದಂತಹ ಆರೋಪಗಳನ್ನು ಮಾಡ್ತಾರೆ. ಕುಮಾರಸ್ವಾಮಿಯವರು ಅವರ ಪಕ್ಷದ ಅಭ್ಯರ್ಥಿಗಳನ್ನು ಹಾಕಲು ಖಂಡಿತವಾಗಿಯೂ ಯಾವ ದೊಣ್ಣೆ ನಾಯಕನ ಅಪ್ಪಣೆಯನೂ ತೆಗೆದುಕೊಳ್ಳಬೇಕಿಲ್ಲ. ಹಾಗೆಯೇ ನಾವು ಕೂಡ ಜೆಡಿಎಸ್ ಪಕ್ಷದ ತಪ್ಪುಗಳನ್ನ, ಅವರು ಮಾಡುತ್ತಿರುವ ರಾಜಕೀಯನ, ಜೆಡಿಎಸ್ ಪಕ್ಷದವರಿಗೆ ಬೇರೆ ಪಕ್ಷದವರೊಂದಿಗಿರುವ ಒಳಒಪ್ಪಂದಗಳನ್ನ ಜನರಿಗೆ ತಿಳಿಸುವುದಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆನೂ ತೆಗೆದುಕೊಳ್ಳಬೇಕಿಲ್ಲ. ನಮಗೆ ಅನಿಸಿದ್ದನ್ನು ನಾವು ಹೇಳೇ ಹೇಳುತ್ತೇವೆ ಎಂದು ಅವರು ಹೇಳಿದ್ದಾರೆ.