ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್‌ಗೆ ದಿನಕ್ಕೊಂದು ತಿರುವು ಸಿಗ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲೇ ಉಡುಪಿ ಪೊಲೀಸ್ ತಂಡ ಠಿಕಾಣಿ ಹೂಡಿದೆ. ಏಪ್ರಿಲ್ 20ರಂದು ಹಿಂಡಲಗಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗೇಶ್‌ನನ್ನ ವಿಚಾರಣೆ ನಡೆಸಿತ್ತು. ಈ ವೇಳೆ ಕೆಲ ದಾಖಲೆ ವಶಪಡಿಸಿಕೊಂಡಿದ್ದು ಈ ಪೈಕಿ ಸಿಕ್ಕಿರೋ ಅದೊಂದು ದಾಖಲೆ ಕೇಸ್‌ಗೆ ತಿರುವು ನೀಡಿದೆ. ಸಂತೋಷ್ ಪಾಟೀಲ್‌ಗೆ ಹಣ ನೀಡಿರೋ ನಾಗೇಶ್ ಅದಕ್ಕೆ ಪ್ರತಿಯಾಗಿ ಸಂತೋಷ್ ಪಾಟೀಲ್‌ನ ಮನೆಯನ್ನ 32 ಲಕ್ಷ ರೂಪಾಯಿಗೆ ಜಿಪಿಎ ಮಾಡಿಕೊಂಡಿದ್ದಾರೆ. ಒಂದ್ಕಡೆ ಮನೆ ಜಿಪಿಎ ಮತ್ತೊಂದ್ಕಡೆ ಕಾಮಗಾರಿಯ ಬಿಲ್ ಆಗದೇ ಇರೋದು. ಹೀಗೆ ಒತ್ತದಲ್ಲಿದ್ದ ಸಂತೋಷ್ ಆತ್ಮಹತ್ಯೆ ಮಾಡಿಕೊಂಡನಾ ಅನ್ನೋ ಅನುಮಾನ ಶುರುವಾಗಿದೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ನಾಗೇಶ್, ಜಿಪಿಎಗೂ ಕಾಮಗಾರಿಗೂ ಯಾವ ಸಂಬಂಧ ಇಲ್ಲ ಅಂತಿದ್ದಾರೆ. ಇನ್ನು ಮತ್ತೊಂದು ಕಡೆ 108 ಕಾಮಗಾರಿಗಳ ಪಟ್ಟಿ ಸಮೇತ ಆಶಾ ಐಹೊಳೆ ಬರೆದಿದ್ದ ಅನುಮೋದನೆಗಾಗಿ ಆದೇಶಿಸಲಾಗಿದೆ ಎನ್ನಲಾದ ಸಹಿ ಪತ್ರ ಲಭ್ಯವಾಗಿದೆ.
ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಅಂದಿನ ಜಿ.ಪಂ.ಅಧ್ಯಕ್ಷೆ ಬರೆದಿದ್ದ ಪತ್ರ ಪೊಲೀಸರಿಗೆ ಲಭ್ಯವಾಗಿದೆ. 2021ರ ಫೆಬ್ರವರಿ 15ರಂದು ಆಗಿನ ಬೆಳಗಾವಿ ಜಿ.ಪಂ.ಅಧ್ಯಕ್ಷೆ ಆಶಾ ಐಹೊಳೆ ಹಿಂಡಲಗಾ ಗ್ರಾಮದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿಗೆ ವಿಶೇಷ ಅನುದಾನ ಮಂಜೂರು ಮಾಡುವಂತೆ ಪತ್ರ ಬರೆದಿದ್ದರು. 2021ರ ಫೆ.15ರಂದು 108 ಕಾಮಗಾರಿಗಳ ಪಟ್ಟಿ ಸಮೇತ ಆಶಾ ಐಹೊಳೆ ಪತ್ರ ಬರೆದಿದ್ದರು. ಅನುಮೋದನೆಗಾಗಿ ಆದೇಶಿಸಲಾಗಿದೆ ಎಂದು 2022ರ ಫೆಬ್ರವರಿ 26ರಂದು ಸಹಿ ಮಾಡಿರುವ ಲೆಟರ್ ಲಭ್ಯವಾಗಿದೆ. ಮಾ.5ರಂದು ಆದೇಶದ ಪ್ರತಿ ನೀಡಲಾಗುವುದು ಎಂದು ಕೈಬರಹದಲ್ಲಿ ಬರೆದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸೀಲ್ ಹಾಕಲಾಗಿದೆ.

ಆದರೆ, ಇದಕ್ಕೆ ಪ್ರತಿಕ್ರಿಯಿಸಿದ ಆಶಾ ಐಹೊಳೆ ಅವರು, ನಾನು ಕೊಟ್ಟ ಲೆಟರ್ ನಲ್ಲಿ 108 ಕಾಮಗಾರಿಗಳು ಯಾವವು ಅನ್ನೋ ಮಾಹಿತಿ ಇಲ್ಲ. ಜಾತ್ರೆಯ ನಿಮಿತ್ಯ ಅಭಿವೃದ್ಧಿ ಕಾಮಗಾರಿಗೆ ಅನುಮೋದನೆಗಾಗಿ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಇಲಾಖೆಯಿಂದ ಕಾಮಗಾರಿಗೆ ಅನುಮದೋನೆ ನೀಡೊರುವ ಪತ್ರ ಬಂದಿದ್ದು ನನ್ನ ಗಮನಕ್ಕೆ ಬಂದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.






