ಕೊಪ್ಪಳ : ನಿಧಿಗಾಗಿ ನರಬಲಿ ಕೊಡಲಾಗಿದೆ ಎಂಬ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು ಬಾಣಂತಿಯ ನಿಗೂಢ ಸಾವಿನ ಅಸಲಿ ಕೊಲೆಗಾರರನ್ನು ಪತ್ತೆ ಮಾಡುವಲ್ಲಿ ಕೊಪ್ಪಳ ಮುನೀರಾಬಾದ್ ಪೊಲೀಸರು ಯಶಸ್ವಿಯಾಗಿದ್ದಾರೆ. ಬಾಣಂತಿಯ ಸ್ವಂತ ತಾಯಿ ಹಾಗೂ ಸಹೋದರನೇ ಈ ಕೃತ್ಯ ಎಸಗಿದ್ದು ತನಿಖೆಯಲ್ಲಿ ಪ್ರಕರಣದ ಅಸಲಿಯತ್ತು ಬಯಲಾಗಿದೆ.
ಮಾರ್ಚ್ 21ನೇ ತಾರೀಖಿನಿಂದ ನೇತ್ರಾವತಿ ಎಂಬ ಹೆಸರಿನ ಒಂದೂವರೆ ತಿಂಗಳ ಬಾಣಂತಿಯು ಅರೆಬೆಂದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಕೊಪ್ಪಳ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಇಂತಹದ್ದೊಂದು ಬೆಚ್ಚಿ ಬೀಳಿಸುವ ಘಟನೆ ಸಂಭವಿಸಿತ್ತು, ಅಂದು ಯುಗಾದಿ ಅಮಾವಾಸ್ಯೆ ಬೇರೆ ಆಗಿದ್ದರಿಂದ ನಿಧಿಯ ಆಸೆಗಾಗಿ ಯಾರೋ ಬಾಣಂತಿಯನ್ನು ಕೊಲೆಗೈದಿದ್ದಾರೆ ಎಂದು ಗ್ರಾಮಸ್ಥರು ಮಾತನಾಡಿಕೊಂಡಿದ್ದರು.

ತವರು ಮನೆಯ ಸಮೀಪದಲ್ಲೇ ಇದ್ದ ಜಮೀನಿನಲ್ಲಿ ನೇತ್ರಾವತಿ ಶವ ಪತ್ತೆಯಾಗಿತ್ತು. ಈ ಪ್ರಕರಣ ಸಂಬಂಧ ಪೊಲೀಸರಿಗೆ ಕೆಲವೊಂದು ಮಹತ್ವದ ಸುಳಿವು ಕೂಡ ಸಿಕ್ಕಿದ್ದವು. ಈ ಸುಳಿವು ಬೆನ್ನತ್ತಿ ಹೊರಟ ಪೊಲೀಸರಿಗೆ ನೇತ್ರಾವತಿ ತಾಯಿ ಕನಕಮ್ಮ ಹಾಗೂ ಸಹೋದರ ಮಾರುತಿ ನಡವಳಿಕೆ ಮೇಲೆ ಅನುಮಾನ ಮೂಡಿತ್ತು.
ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಮಾರುತಿ ಹಾಗೂ ಕನಕಮ್ಮ ಅಸಲಿ ಸತ್ಯ ಬಟಾ ಬಯಲಾಗಿದೆ. ಆಸ್ಪತ್ರೆಯಲ್ಲಿ ಹೆರಿಗೆ ಖರ್ಚು ಹಾಗೂ ಬಂಗಾರ ಕೊಡುವ ವಿಚಾರದಲ್ಲಿ ಜಗಳ ಏರ್ಪಟ್ಟಿತ್ತು. ಇದೇ ಮನಸ್ತಾಪ ಮುಂದುವರಿದು ಕನಕಮ್ಮ ಹಾಗೂ ಮಾರುತಿ ನೇತ್ರಾವತಿಯನ್ನು ಕೊಲೆ ಮಾಡಿದ್ದಾರೆ, ಅನುಮಾನ ಬರಬಾರದೆಂದು ಆಕೆಯ ಶವವನ್ನು ಸುಡಲು ಯತ್ನಿಸಿದ್ದರು ಎಂದು ತನಿಖೆ ವೇಳೆ ಆರೋಪಿಗಳು ಸತ್ಯ ಬಾಯ್ಬಿಟ್ಟಿದ್ದಾರೆ. ಆರೋಪಿಗಳನ್ನು ಸದ್ಯ ನ್ಯಾಯಾಂಗ ವಶದಲ್ಲಿ ಇರಿಸಲಾಗಿದೆ.






