ಸಿಎಂ ಸಿದ್ದರಾಮಯ್ಯ ಮೇಲೆ ಶಾಸಕ ಬಿ.ಆರ್.ಪಾಟೀಲ್ ಬೇಸರಗೊಂಡಿದ್ದಾರೆ. ಇದಕ್ಕಾಗಿ ಸಿಎಂ ರಾಜಕೀಯ ಸಲಹೆಗಾರ ಹುದ್ದೆಗೆ ಬಿ.ಆರ್.ಪಾಟೀಲ್ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬಿ.ಆರ್ ಪಾಟೀಲ್, ನಮ್ಮ ಕ್ಷೇತ್ರಕ್ಕೆ ಅನುದಾನ ಸರಿಯಾಗಿ ಬರ್ತಿಲ್ಲ.. ಶಾಸಕನಾಗಿ ಅಭಿವೃದ್ಧಿ ಕೆಲಸ ಮಾಡೋಕೆ ಆಗ್ತಿಲ್ಲ.. ಎಲ್ಲವನ್ನೂ ಮಾಧ್ಯಮಗಳ ಮುಂದೆ ಹೇಳಲ್ಲ ಎಂದಿದ್ದಾರೆ..
ಬಿ. ಆರ್. ಪಾಟೀಲ್ ರಾಜೀನಾಮೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಮಾತನಾಡಿದ್ದು, ಸಿಎಂ ರಾಜಕೀಯ ಸಲಹೆಗಾರ ಸ್ಥಾನಕ್ಕೆ ರಿಸೈನ್ ಮಾಡಿದ್ದು ಯಾಕೆ ಅನ್ನೋದು ಗೊತ್ತಿಲ್ಲ. ರಾಜೀನಾಮೆ ಕೊಟ್ಟಿದ್ದಕ್ಕೆ ಕಾರಣವನ್ನು ಸಿಎಂ ಸಿದ್ದರಾಮಯ್ಯ ಬಳಿ ಹೇಳಿಕೊಂಡಿರುತ್ತಾರೆ. ಅವರಿಗೆ ಅಸಮಾಧಾನ ಇರುವ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ ಸಚಿವ ಪರಮೇಶ್ವರ್.
ಸಿಎಂ ರಾಜಕೀಯ ಸಲಹೆಗಾರ ಹುದ್ದೆಗೆ ಬಿ.ಆರ್.ಪಾಟೀಲ್ ರಾಜೀನಾಮೆ ವಿಚಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಅವರ ಮಗನಿಗೆ ಕರೆ ಮಾಡಿ ಮಾತಾಡಿದ್ದೇನೆ. ಯಾವ ಕಾರಣಕ್ಕೆ ಅವರು ರಾಜೀನಾಮೆ ಕೊಟ್ಟಿದ್ದಾರೆ ಗೊತ್ತಿಲ್ಲ ಎಂದಿದ್ದಾರೆ.
ಇನ್ನು ಬಿ.ಆರ್ ಪಾಟೀಲ್ ರಾಜೀನಾಮೆ ಕೊಟ್ಟಿರೊದು ಮಾಧ್ಯಮಗಳ ಮೂಲಕ ಗೊತ್ತಾಯ್ತು. ಅವರಿಗೆ ಕರೆ ಮಾಡಲು ಪ್ರಯತ್ನ ಮಾಡಿದೆ, ಅವರು ಸಂಪರ್ಕಕ್ಕೆ ಸಿಕ್ಕಿಲ್ಲ, ಅವರ ಮಗನಿಗೆ ಕರೆಮಾಡಿ ಮಾತಾಡಿದೆ. ಬಿ.ಆರ್ ಪಾಟೀಲ್ ಸಿಎಂಗೆ ಬಹಳ ಆತ್ಮೀಯರಿದ್ದಾರೆ. ಅನುದಾನ ಕೊಡ್ತಾ ಇಲ್ಲ ಅನ್ನೋ ಬಿಆರ್ ಪಾಟೀಲ್ ಹೇಳಿಕೆಗೆ ಬಗ್ಗೆ ಮಾತನಾಡಿ, ಕಲ್ಯಾಣ ಕರ್ನಾಟಕ ಯೋಜನೆಯಲ್ಲಿ ಅನುದಾನ ಕೇಳಿದ್ರೇನೋ ಗೊತ್ತಿಲ್ಲ. ಸಿಎಂಗೆ ಆತ್ಮೀಯರಿರುವ ಕಾರಣ ಒಂದು ವೇಳೆ ಅನುದಾನದ ಸಮಸ್ಯೆ ಇದ್ರೆ ಸಿಎಂ ಬಗೆಹರಿಸ್ತಾರೆ ಎಂದಿದ್ದಾರೆ.
ಶನಿವಾರ ಮಡಿಕೇರಿಯಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಬಿ.ಆರ್ ಪಾಟೀಲ್ ರಾಜೀನಾಮೆ ಪತ್ರ ಕಚೇರಿಗೆ ಬಂದಿತ್ತು. ಆದರೆ ನಾನು ಅದನ್ನು ನೋಡಿಲ್ಲ, ಬೆಂಗಳೂರಿಗೆ ಹೋದ ಬಳಿಕ ನೋಡ್ತೇನೆ ಎಂದಿದ್ದರು. ಇದೀಗ ಮಂಡಿನೋವಿನಿಂದ ಬಳಲುತ್ತಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಎರಡು ದಿನಗಳ ಕಾಲ ರೆಸ್ಟ್ ಹೇಳಿದ್ದು, ಇಂದು ಕಚೇರಿಗೆ ಹೋಗ್ತಾರಾ..? ಅಥವಾ ಬಿ.ಆರ್ ಪಾಟೀಲ್ ಅವರನ್ನೇ ಕರೆಸಿಕೊಂಡು ಮಾತನಾಡ್ತಾರಾ..? ಅಥವಾ ರಾಜೀನಾಮೆ ಅಂಗೀಕಾರ ಮಾಡ್ತಾರಾ..? ಅನ್ನೋದನ್ನು ಕಾದು ನೋಡ್ಬೇಕು.