ತಾನೇ ಚಿವುಟಿದ ಮಗುವನ್ನು ಸಮಾಧಾನ ಮಾಡುವ ಪ್ರಯತ್ನ.. ಕಾರಣ ಏನು..?

ತುಮಕೂರಿನಲ್ಲಿ ಮಾಜಿ ಸಚಿವ ವಿ ಸೋಮಣ್ಣ ಅಭ್ಯರ್ಥಿ ಆಗುವ ಆಸಕ್ತಿ ತೋರಿಸಿದ್ದರು. ಚುನಾವಣಾ ಕಾವು ಪಡೆಯುವ ಮೊದಲೇ ವಿ ಸೋಮಣ್ಣ ತುಮಕೂರು ಕ್ಷೇತ್ರವನ್ನು ಆಯ್ದುಕೊಂಡಿದ್ದರು. ಹಾಲಿ ಸಂಸದ ಬಸವರಾಜ್ ನಿವೃತ್ತರಾಗುವ ಸುಳಿವು ಸಿಕ್ಕ ಕೂಡಲೇ ಹೈಕಮಾಂಡ್ನಿಂದ ಅನುಮತಿ ಪಡೆದು ಸುತ್ತಾಡುತ್ತಿದ್ದರು. ಸಿದ್ಧಗಂಗಾ ಮಠದಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಾ ಅಡ್ಡಾಡುತ್ತಿದ್ದರೆ, ಸೋಮಣ್ಣ ವಿರುದ್ಧ ಮಾಧುಸ್ವಾಮಿಯನ್ನು ಎತ್ತಿಕಟ್ಟುವ ಕೆಲಸವನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾಡಿದ್ದರು. ಮೊದಲಿಗೆ ಲೋಕಸಭಾ ಚುನಾವಣೆ ಬಗ್ಗೆ ಆಸಕ್ತಿ ತೋರಿಸದ ಮಾಧುಸ್ವಾಮಿ, ಯಡಿಯೂರಪ್ಪ ಹೇಳಿದರು ಅನ್ನೋ ಕಾರಣಕ್ಕೆ ಚುನಾವಣೆಗೆ ನಿಲ್ಲುವ ಮನಸ್ಸು ಮಾಡಿದ್ದರು. ಇದೀಗ ಯಡಿಯೂರಪ್ಪ ಸೋಮಣ್ಣ ಪರವಾಗಿ ಬ್ಯಾಟ್ ಬೀಸಿದ್ದಾರೆ. ಮಾಧುಸ್ವಾಮಿ ಉಲ್ಟಾ ಹೊಡೆದಿದ್ದಾರೆ.

ನೊಣಂಬ ಸಮುದಾಯ ಬಿಜೆಪಿ ವಿರುದ್ಧ ನಿಲ್ಲುವ ಶಂಕೆ..
ಮಾಧುಸ್ವಾಮಿ ನೊಣಂಬ ಸಮುದಾಯಕ್ಕೆ ಸೇರಿದವರು. ಮಾಧುಸ್ವಾಮಿ ಹೇಳಿರುವ ಪ್ರಕಾರ, ನನಗೆ ಯಡಿಯೂರಪ್ಪನವರೇ ಲೋಕಸಭೆ ಚುನಾವಣೆಗೆ ನಿಲ್ಲಲು ಸೂಚನೆ ಕೊಟ್ಟಿದ್ದರು. ಎರಡ್ಮೂರು ಬಾರಿ ನಾನು ನಿರಾಕರಿಸಿದಾಗಲೂ ಒತ್ತಾಯ ಮಾಡಿ ಚುನಾವಣೆ ಮಾಡಲು ಹೇಳಿದ್ದರು. ನಾನು ಯಡಿಯೂರಪ್ಪರನ್ನ ಬೆಂಬಲಿಸಿ ಜೆಡಿಯು ಬಿಟ್ಟು ಬಿಜೆಪಿಗೆ ಬಂದವನು. ನಾನು ಈಗಲೂ ಹೇಳ್ತಿದ್ದೇನೆ. ಯಡಿಯೂರಪ್ಪ ಹೇಳಿದಕ್ಕೆ ನಾನು ಲೋಕಸಭಾ ಚುನಾವಣೆಗೆ ರೆಡಿಯಾಗಿದ್ದೆ. ಯಡಿಯೂರಪ್ಪ ಪಕ್ಷ ಬಿಡೊದು ಬೇಡ ಅಂದಿದ್ದಾರೆ. ನಾನು ಸುಮ್ಮನೆ ಆಗ್ತೀನಿ. ಬಿಜೆಪಿ ಪಕ್ಷ ಬಿಡುವುದ್ದಕ್ಕೆ ಪ್ಲ್ಯಾನ್ ಮಾಡಿದ್ದೆ. ಈ ಬಗ್ಗೆ ಯಡಿಯೂರಪ್ಪಗೂ ಹೇಳಿದ್ದೆ. ಅವರು ಬೇಡ ಅಂದಿದ್ದಾರೆ. ಯಡಿಯೂರಪ್ಪ ಜೊತೆಗೆ ಪಕ್ಷದ ವಿಚಾರ ಅಷ್ಟೇ ಚರ್ಚೆ ಮಾಡಿದ್ದೀನಿ. ಸೋಮಣ್ಣರಿಗೆ ಬೆಂಬಲ ನೀಡೋ ಬಗ್ಗೆ ಚರ್ಚೆ ಆಗಿಲ್ಲ ಎಂದಿದ್ದಾರೆ.

ಸೋಮಣ್ಣಗೆ ಬೆಂಬಲ ಕೊಡೋದು ಅವರಿಗೆ ಬಿಟ್ಟದ್ದು..!
ಮಾಧುಸ್ವಾಮಿ ಜೊತೆಗೆ ಮಾತುಕತೆ ನಡೆಸಿದ ಯಡಿಯೂರಪ್ಪ, ಮಾಧುಸ್ವಾಮಿ ಗೊಂದಲದಲ್ಲಿ ಇದ್ದರು ನಾನು ಬಂದು ಮಾತನಾಡಿದ್ದೇನೆ. ಮುಂದಿನ ದಿನಗಳಲ್ಲಿ ಮಾಧುಸ್ವಾಮಿಗೆ ಒಳ್ಳೆಯ ಸ್ಥಾನಮಾನ ಸಿಗಲಿದೆ. ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲಾ, ಖುಷಿ ಆಗಿದೆ. ನಾವು ಎಲ್ಲಾ ಚರ್ಚೆ ಮಾಡಿದ್ದೇನೆ, ಎಲ್ಲಾ ಸಮಸ್ಯೆ ಬಗೆಹರಿದಿದೆ. ಸೋಮಣ್ಣ ಪರವಾಗಿ ಕೆಲಸ ಮಾಡೋದು ಬಿಡೋದು ಅವರಿಗೆ ಬಿಟ್ಟಿದ್ದು. ಅದ್ಯಾವುದರ ಬಗ್ಗೆಯೂ ಚರ್ಚೆ ಮಾಡಿಲ್ಲ. ಮುಂದೆ ಎಲ್ಲವೂ ಸರಿ ಹೋಗಲಿದೆ ಎಂದಿದ್ದಾರೆ. ಬಹಳ ವರ್ಷಗಳಿಂದ ಪಕ್ಷ ಕಟ್ಟಿದವರು, ಅವರು ಪಕ್ಷದಲ್ಲೆ ಇರಬೇಕು. ಟಿಕೆಟ್ ಕೊಟ್ಟಿದ್ದು ರಾಷ್ಟ್ರೀಯ ನಾಯಕರು, ನಾನು ಟಿಕೆಟ್ ಕೊಟ್ಟಿಲ್ಲ ಎನ್ನುವ ಮೂಲಕ ಸೋಮಣ್ಣ ಬೆಂಬಲದ ಬಗ್ಗೆ ಚಕಾರ ಇಲ್ಲ ಎಂದಿದ್ದಾರೆ.
ಸೋಮಣ್ಣಗೆ ಯಡಿಯೂರಪ್ಪ ಬೆಂಬಲ ಇಲ್ವಾ..?
ಲೋಕಸಭಾ ಚುನಾವಣೆಯಲ್ಲಿ ಒತ್ತಡ ಹಾಕಬೇಡಿ ಅಂತಾ ಯಡಿಯೂರಪ್ಪಗೆ ಹೇಳಿದ್ದೇನೆ ಎನ್ನುವ ಮೂಲಕ ಸೋಮಣ್ಣ ಪರ ಕೆಲಸ ಮಾಡಲ್ಲ ಎನ್ನುವುದನ್ನು ಮಾಧುಸ್ವಾಮಿ ಕೂಡ ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಪಕ್ಷ ಬಿಡಲ್ಲ. ಆದರೆ ಸೋಮಣ್ಣಗೆ ಬೆಂಬಲ ನೀಡುವ ಬಗ್ಗೆ ಚಿಂತಿಸಿಲ್ಲ ಅಂತಾನೂ ಸ್ಪಷ್ಟಪಡಿಸಿದ್ದಾರೆ. ಯಡಿಯೂರಪ್ಪ ಕೂಡ ಅದನ್ನೇ ಹೇಳಿದ್ದಾರೆ. ಅಂದರೆ ಯಡಿಯೂರಪ್ಪ ಸೋಮಣ್ಣ ಗೆಲುವಿಗಾಗಿ ಸಂಧಾನ ಮಾಡಲಿಲ್ಲ. ಆದರೆ ನೊಣಂಬ ಸಮುದಾಯ ದಾವಣಗೆರೆ, ಶಿವಮೊಗ್ಗದಲ್ಲೂ ಹೆಚ್ಚಾಗಿದ್ದು, ಮಾಧುಸ್ವಾಮಿ ಮುನಿಸಿಕೊಂಡರೆ ರಾಘವೇಂದ್ರ ಗೆಲುವಿಗೆ ಅಡ್ಡಿಯಾಗುವ ಸಾಧ್ಯತೆಯಿದೆ. ಅದೇ ಕಾರಣಕ್ಕೆ ಮಾಧುಸ್ವಾಮಿ ಜೊತೆಗೆ ಸಂಧಾನ ಮಾಡಿದ್ದಾರೆ. ಸದ್ಯಕ್ಕೆ ಕಾಂಗ್ರೆಸ್ಗೆ ಹೋಗುವುದು ಬೇಡ ಎಂದಿದ್ದಾರೆ. ಅಂದರೆ ಲೋಕಸಭೆಗೆ ನಿಲ್ಲುವುದಕ್ಕೆ ಮಾಧುಸ್ವಾಮಿಯನ್ನೂ ಚಿವುಟಿದ್ದೂ ಯಡಿಯೂರಪ್ಪ, ಸದ್ಯಕ್ಕೆ ಕಾಂಗ್ರೆಸ್ಗೆ ಹೋಗಬೇಡ ಎಂದು ಸಂಧಾನ ಮಾಡುವ ಮೂಲಕ ಮಗನಿಗೆ ತೊಂದರೆ ಆಗದಂತೆ ಯೋಜನೆ ಮಾಡಿದ್ದೂ ಯಡಿಯೂರಪ್ಪ. ಇನ್ನು ಸೋಮಣ್ಣಗೆ ಬೆಂಬಲಿಸುವುದು ಅವರಿಗೆ ಬಿಟ್ಟ ವಿಚಾರ ಎನ್ನುವ ಮೂಲಕ ಸೋಮಣ್ಣ ಬಗ್ಗೆ ಕೆಂಗಣ್ಣು ಬೀರಿದ್ದೂ ಯಡಿಯೂರಪ್ಪ. ಒಟ್ಟಾರೆ, ಬಿಜೆಪಿಯಲ್ಲಿ ನಾಯಕನಿಂದ ಕಾರ್ಯಕರ್ತನ ತನಕವೂ ಗೊಂದಲ ಇದೆ ಎನ್ನುವುದು ಸಾಬೀತಾದಂತೆ ಆಗಿದೆ