ಹಾಸ್ಯ ನಟನಾಗಿ ಗುರುತಿಸಿಕೊಂಡು ಇದೀಗ ನಾಯಕ ನಟನಾಗಿಯೂ ಮಿಂಚುತ್ತಿರುವ ಚಿಕ್ಕಣ್ಣ, ಸದ್ಯ ಯಾವುದೇ ಕಾರಣಕ್ಕೂ ನಟ ದರ್ಶನ್ ಅವರನ್ನು ಭೇಟಿಯಾಗುವುದಿಲ್ಲ ಹಾಗೂ ಅವರ ಕುರಿತು ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ತಾವು ಪೂರ್ಣ ಪ್ರಮಾಣದ ನಾಯಕ ನಟನಾಗಿ ಅಭಿನಯಿಸಿರುವ ‘ಲಕ್ಷ್ಮೀಪುತ್ರ’ ಚಿತ್ರದ ಪ್ರಚಾರಕ್ಕಾಗಿ ನವೆಂಬರ್ 19ರಂದು ಹೊಸಪೇಟೆಗೆ ಆಗಮಿಸಿದ್ದ ಅವರು, ನಗರದ ಡಾ. ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿರುವ ಅಪ್ಪು ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ದರ್ಶನ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಚಿಕ್ಕಣ್ಣ, “ಸದ್ಯಕ್ಕೆ ದರ್ಶನ್ ಅವರನ್ನು ಭೇಟಿಯಾಗುವುದಿಲ್ಲ. ಅವರ ಬಗ್ಗೆ ಏನನ್ನೂ ಮಾತನಾಡುವುದಿಲ್ಲ” ಎಂದು ಹೇಳಿದರು.
‘ಲಕ್ಷ್ಮೀಪುತ್ರ’ ಸಿನಿಮಾ ಇದೇ ನವೆಂಬರ್ 27ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಕನ್ನಡದ ಸಿನಿಮಾಗಳು ಬಿಡುಗಡೆಯಾಗುವ ಮುನ್ನ ಹೊಸಪೇಟೆಗೆ ಭೇಟಿ ನೀಡಿ ಅಪ್ಪು ಅವರ ಆಶೀರ್ವಾದ ಪಡೆಯುವ ಸಂಪ್ರದಾಯವಿದೆ. ಅದರಂತೆ ನಾನೂ ಕೂಡ ಪುನೀತ್ ಸರ್ ಅವರ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು.

“ಪುನೀತ್ ರಾಜ್‌ಕುಮಾರ್ ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಮಾನಸಿಕವಾಗಿ ಸದಾ ನಮ್ಮೊಂದಿಗೆ ಇದ್ದಾರೆ. ಅವರ ಆಶೀರ್ವಾದ ಯಾವಾಗಲೂ ನಮ್ಮ ಮೇಲಿರುತ್ತದೆ” ಎಂದು ಚಿಕ್ಕಣ್ಣ ಭಾವುಕರಾಗಿ ನುಡಿದರು.
ತಮ್ಮ ಹೊಸ ಚಿತ್ರದ ಕುರಿತು ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕ ನಟನಾಗಿ ಅಭಿನಯಿಸಿದ್ದೇನೆ. ಸಿನಿಮಾ ಉತ್ತಮವಾಗಿ ಮೂಡಿಬಂದಿದ್ದು, ಹಾಸ್ಯದ ಜೊತೆಗೆ ಭಾವನಾತ್ಮಕ ಸನ್ನಿವೇಶಗಳೂ ಇವೆ. ಹಿರಿಯ ನಟಿ ತಾರಾ ಸೇರಿದಂತೆ ಹಲವು ಪ್ರಮುಖ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬಂದು ಸಿನಿಮಾ ವೀಕ್ಷಿಸುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಚಿಕ್ಕಣ್ಣ ಅವರ ಭೇಟಿಯ ಸಂದರ್ಭದಲ್ಲಿ ಡಾ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಕಿಚಿಡಿ ವಿಶ್ವನಾಥ್, ಜೋಗಿ ತಾಯಪ್ಪ, ಚಿಕ್ಕಣ್ಣ ಅವರ ಆಪ್ತ ಸಹಾಯಕ ಜೀವ ಸೇರಿದಂತೆ ನೂರಾರು ಅಭಿಮಾನಿಗಳು ಉಪಸ್ಥಿತರಿದ್ದರು. ಈ ವೇಳೆ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದರು.






