ಮೇಕೆದಾಟು ಯೋಜನೆಗಾಗಿ ಬೃಹತ್ ಪಾದಯಾತ್ರೆ ರೂಪಿಸಿದ್ದ ಕಾಂಗ್ರೆಸ್ನ ಹತ್ತಿಕ್ಕಲ್ಲೆಂದೇ ರಾಜ್ಯ ಸರ್ಕಾರ ಕರೋನಾ ಕಠಿಣ ಕ್ರಮ ಆದೇಶ ಮಾಡಿದೆ ಎಂದು ವಿಪಕ್ಷಗಳು ಕಿಡಿಕಾರುತ್ತಿದ್ದು ಇದಕ್ಕೆ ಬಿಜೆಪಿ ಮಂತ್ರಿಗಳು ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ಗೆ ರಾಜ್ಯದಲ್ಲಿ ಪ್ರತ್ಯೇಕ ನಿಯಮ ಮಾಡಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರೆ, ಬೆಂಗಳೂರಲ್ಲೇ ಕರೋನಾ ವೇಗವಾಗಿ ಹಬ್ಬುತ್ತಿದೆ ಹಾಗಾಗಿ ಪಕ್ಷದ ಕಾರ್ಯಕರ್ತರ ಸ್ವಾಸ್ಥ್ಯದ ಹಿತದೃಷ್ಟಿಯಿಂದಾದರೂ ಕೈ ಬಿಡಬೇಕು ಎಂದು ಸಚಿವ ಈಶ್ವರಪ್ಪ ಮನವಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ,, ಸರ್ಕಾರದ ನಿರ್ದೇಶನ ಜಾರಿಯಾಗಿದೆ ಎಲ್ಲರೂ ಪಾಲನೆ ಮಾಡಬೇಕು, ಇಂತಹ ಜೀವನ್ಮರಣ ಹೋರಾಟದ ನಡುವೆಯೂ ನಾನು ರಾಜಕಾರಣದ ದಾರಿ ಹುಡುಕುತ್ತಿದ್ದೇನೆ ಎಂದರೆ ಆ ಪಕ್ಷದ ಮನಸ್ಥಿತಿ ಏನಿದೆ ಎಂದು ಗೊತ್ತಾಗುತ್ತೆ. ಯಾವುದೇ ಪಾದಯಾತ್ರೆ, ಸಭೆ ಸಮಾರಂಭಗಳನ್ನ ನಡೆಸೋ ಹಾಗಿಲ್ಲ ಎಂದು ಹೇಳಲಾಗಿದೆ. ಅವರಿಗೆ ಅಂತ ಪ್ರತ್ಯೇಖವೇನಿಲ್ಲ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಸಹ ನಿರ್ದೇಶನ ನೀಡಿದೆ. ಇದರ ಹಿಂದೆ ಯಾವುದೇ ರಾಜಕೀಯ ದುರುದ್ದೇಶ ಇಲ್ಲ. ಎಲ್ಲದನ್ನೂ ರಾಜಕೀಯ ಲೆಕ್ಕಾಚಾರದಲ್ಲಿ ನೋಡಿದರೆ ಸರಿ ಹೋಗದು. ತಜ್ಞರ ವರದಿ ಆಧಾರದ ಮೇಲೆ ಈ ನಿಯಮಾವಳಿಗಳನ್ನ ರೂಪಿಸಲಾಗಿದೆ ಎಂದು ಹೇಳಿದರು.
ಇನ್ನು ಸಚಿವ ಕೆಎಸ್ ಈಶ್ವರಪ್ಪ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅಧಿಕಾರ ನಡೆಸಿ ಅನುಭವ ಇರುವವರು. ಇಂಥವರು ಸರ್ಕಾರಕ್ಕೆ ಕರೋನಾ ತಡೆ ನಿಟ್ಟಿನಲ್ಲಿ ಸಲಹೆ ನೀಡಬೇಕು. ಆದರೆ ಬೆಂಗಳೂರಿನಲ್ಲಿ ಇಷ್ಟೊಂದು ಕರೋನಾ ಉಲ್ಭಣ ಇರೋ ಸಂದರ್ಭದಲ್ಲಿ ಪಾದಯಾತ್ರೆ ಎಲ್ಲಿಂದ ಆರಂಭ ಮಾಡ್ತೀರಿ..? ಆ ಪಾದಯಾತ್ರೆ ಆರಂಭ ಮಾಡುವಾಗ ಎಷ್ಟು ಜನ ಸೇರ್ತಾರೆ, ಆ ಸ್ಥಳಗಳಲ್ಲಿ ಕರೋನಾ ಸೋಂಕು ಹೇಗಿದೆ ಎಂಬುದನ್ನ ತಿಳಿದುಕೊಳ್ಳಬೇಕು. ಕಾಂಗ್ರೆಸ್ ಕಾರ್ಯಕರ್ತರೇ ಕರೋನಾ ಸೋಂಕಿಗೆ ಬಲಿಯಾಗ್ತಾರೆ. ಕಾಂಗ್ರೆಸ್ ಮುಖಂಡರು ಇದನ್ನ ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದು. ಮೇಕೆದಾಟು ಹೋರಾಟಕ್ಕೆ ಖಂಡಿತಾ ನನ್ನ ಬೆಂಬಲ ಇದೆ. ವಿರೋಧ ಪಕ್ಷವೇನು ಹೋರಾಟ ಮಾಡಬೇಕೋ ಅದನ್ನ ಮಾಡಲಿ. ಆದರೆ ಬೆಂಗಳೂರಲ್ಲೇ ಕರೋನಾ ಹೆಚ್ಚುತ್ತಿದೆ ಎಂದು ಸರ್ಕಾರ ಬಿಗಿ ಕಾನೂನುಗಳನ್ನ ತರಲು ಹೊರಟ ಸಂದರ್ಭದಲ್ಲಿ ಈ ತರಹ ರಾಜಕೀಯ ಮಾಡೋದು ಸರಿ ಅಲ್ಲ. ಅವರು ಸಿಎಂ ಬಸವರಾಜ್ ಬೊಮ್ಮಾಯಿ ಅವರ ಜೊತೆ ಕೂತು ಚರ್ಚೆ ಮಾಡಲಿ. ಸಿದ್ದರಾಮಯ್ಯ ಸಿಎಂ ಆಗಿದ್ದವರು ಇದರಲ್ಲಿ ರಾಜಕೀಯ ಮಾಡಬಾರದು ಎಂದಿದ್ದಾರೆ.
ಮುಂದುವರೆದು, ಸಾವಿರಾರು ಜನರು ಮೇಕೆದಾಟು ಪಾದಯಾತ್ರೆಗೆ ತೆರಳಿದರೆ ಆತಂಕ ಖಂಡಿತಾ. ಇದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಕರ್ಫ್ಯೂ ಎಂದು ಕರೆಯುವುದು ಬಾಲಿಶ. ಕೊರೋನಾಕ್ಕೆ ಎಲ್ಲರೂ ಬಲಿಯಾಗಿದ್ದಾರೆ. ಹರೆಯದವರೇ ಮೃತರಾಗಿರೋದನ್ನ ಕಂಡರೆ ಕಣ್ಣೀರು ಬರುತ್ತದೆ. ಎಲ್ಲೆಲ್ಲಿ ಉಲ್ಭಣವಾಗುತ್ತಿದೆಯೋ ಅಲ್ಲೆಲ್ಲಾ ಸರ್ಕಾರ ಬಿಗಿ ಕ್ರಮ ತೆಗೆದುಕೊಳ್ಳಬೇಕು. ಈ ಮಾತನ್ನ ಸಿದ್ದರಾಮಯ್ಯಗೂ ಹೇಳ್ತೀನಿ, ಡಿಕೆ ಶಿವಕುಮಾರ್ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಗಮನಕ್ಕೂ ತರುತ್ತೇನೆ ಎಂದು ಈಶ್ವರಪ್ಪ ಹೇಳಿದರು.