ನಗರದ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆಯಾದ ವಿಕ್ಟೋರಿಯಾ ಆಸ್ಪತ್ರೆಯ ಕರ್ಮಕಾಂಡ ಒಂದೆರಡಲ್ಲ. ಈ ಹಿಂದೆಯೂ ಹಲವು ಬಾರಿ ಅವ್ಯವಸ್ಥೆಯ ಕಾರಣಕ್ಕೆ ಸುದ್ದಿಯಾಗಿದ್ದ ವಿಕ್ಟೋರಿಯಾ ಆಸ್ಪತ್ರೆ ಇದೀಗ ಮತ್ತೆ ಸುದ್ದಿಯಲ್ಲಿದೆ. ಶುಶ್ರೂಷೆ ಅರಸಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಹೀನಾಯವಾಗಿ ನಡೆಸುಕೊಳ್ಳುತ್ತಿರುವ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿದೆ.
ಆಸ್ಪತ್ರೆಯ ಈ ಭಯಾನಕ ಸ್ಥಿತಿ ನೋಡಿದ್ರೆ ಎದೆ ಝಲ್ ಅನ್ನದೇ ಇರದು. ಜೀವ ಕೈಯಲ್ಲಿಡಿದು ವಿಕ್ಟೋರಿಯಾ ಅಸ್ಪತ್ರೆಯ ಮೆಟ್ಟಿಲೇರುವ ಜನರಿಗೆ ನರಕ ತೋರಿಸಲಾಗುತ್ತಿದೆ. ಜನ ಸಾಮಾನ್ಯರ ಜೀವಕ್ಕೆ ಇವರು ಕೊಡುವ ಬೆಲೆಯೇ ಇಷ್ಟು ಎಂಬ ಅನುಮಾನ ಕಾಡ ತೊಡಗಿದೆ. ಈ ಹಿಂದೆಯೂ ಸಾಕಷ್ಟು ಬಾರಿ ವಿಕ್ಟೋರಿಯಾ ಆಸ್ಪತ್ರೆ ಇಂಥಾ ಘಟನೆಗಳಿಗೆ ಸುದ್ದಿಯಾಗಿದ್ದರೂ ಕೂಡ ಇದೀಗ ಮತ್ತೆ ಅಂಥಾ ಘಟನೆಗಳು ಮರುಕಳಿಸಿದೆ. ನಿನ್ನೆ ಸಂಜೆ ಓರ್ವ ವ್ಯಕ್ತಿ ಅನಾರೋಗ್ಯದಿಂದ ಆಸ್ಪತ್ರೆಗೆ ಬಂದಿದ್ದಾನೆ. ತಕ್ಷಣವೇ ವಿಚಾರಿಸಿ ರೋಗಿಯನ್ನು ನೋಡಿಕೊಳ್ಳಬೇಕಿದ್ದ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿಗಳು ಆತನ ಬಗ್ಗೆ ಕ್ಯಾರೇ ಎನ್ನಲಿಲ್ಲ. ಇದರ ಬಗ್ಗೆ ತಕ್ಷಣವೇ ಸ್ಥಳಕ್ಕೆ ಧಾವಿಸಿ ಪ್ರತಿಭಟಿಸಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖಂಡರುಗಳು, ಇದರ ಬಗ್ಗೆ ಆಕ್ರೋಶ ಹೊರ ಹಾಕಿದರು. ವಿಕ್ಟೋರಿಯಾ ಆಸ್ಪತ್ರೆಯೊಂದು ಅವ್ಯವಸ್ಥೆಯ ಆಗರ ಎಂದು ಆರೋಪಿಸಿದರು.
ಶವದ ಪಕ್ಕದಲ್ಲೇ ಟ್ರೀಟ್ಮೆಂಟ್ ಕೊಡ್ತಿರೋ ಆರೋಪ..!?
ಇನ್ನು ಒಂದೇ ಹಾಸಿಗೆಯಲ್ಲಿ ಸತ್ತ ಶವದ ಪಕ್ಕನೇ ಚಿಕಿತ್ಸೆಯನ್ನೂ ಇಲ್ಲಿ ಕೊಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಸತ್ತ ವ್ಯಕ್ತಿಯ ಶವ ತೆರವು ಮಾಡದೇ, ಮತ್ತೊಬ್ಬ ರೋಗಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೆಆರ್ಎಸ್ ಪಕ್ಷ ಆರೋಪಿಸುತ್ತಿದೆ. ಹೊರಗಿನಿಂದ ಬರುವ ರೋಗಿಗಳಿಗೆ ಕೂರಲೂ ಒಂದು ಸೂಕ್ತ ವ್ಯವಸ್ಥೆ ಈ ಆಸ್ಪತ್ರೆಯಲ್ಲಿ ಇಲ್ಲದಂತಾಗಿದೆ. ಪರಿಣಾಮ, ರೋಗಿಗಳು ಮೆಟ್ಟಿಲ ಮೇಲೆಯೇ ಗೋಳಾಡುವಂತಾಗಿದೆ. ಜೀವನ್ಮರಣದ ಮಧ್ಯೆ ಹೋರಾಡುವ ಬಡ ರೋಗಿಗಳ ಗೋಳಾಟ ಕೇಳೋರಿಲ್ಲ ಇಲ್ಲಿ. ನಡಿಯಲೂ ಆಗದ ರೋಗಿಗಳಿಗೆ ಕಡ್ಡಾಯವಾಗಿ ಸ್ಟ್ರಕ್ಚರ್ ಒದಗಿಸಬೇಕು. ಅದಕ್ಕೂ ಇಲ್ಲಿ ಹಣದ ಬೇಡಿಕೆ ಇಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಆದರೆ ಈ ಎಲ್ಲದರ ಬಗ್ಗೆ ಪ್ರತಿಕ್ರಿಯಿಸಿರುವ ವಿಕ್ಟೋರಿಯಾ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ರಮೇಶ್ ಕೃಷ್ಣ, ನಿನ್ನ ನಡೆದ ಘಟನೆ ತಿಳಿದ ಕೂಡಲೇ ಸಂಬಂಧಪಟ್ಟವರು ಭೇಟಿ ಕೋಟ್ಟು ಸೂಕ್ತ ವ್ಯವಸ್ಥೆ ಮಾಡಿಕೊಡಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಯಾವುದೇ ವ್ಯವಸ್ಥೆಗಳ ಕೊರತೆ ಇಲ್ಲ. ಇಲ್ಲಿ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಳ್ಳಲಾಗಿದೆ. ಇದರ ಸದುಪಯೋಗವನ್ನು ಜನರು ಮಾಡಿಕೊಳ್ಳಲಿ ಎಂಬ ಹಾರಿಕೆ ಉತ್ತರವನ್ನು ಕೊಟ್ಟಿದ್ದಾರೆ.
ಒಟ್ಟಾರೆ ನಾವೆಂದೂ ಸರಿ ಹೋಗಲ್ಲ ಎನ್ನುವ ನಡವಳಿಕೆಯನ್ನು ವಿಕ್ಟೋರಿಯಾ ಸಿಬ್ಬಂದಿಗಳು ಹಾಗೂ ಹಿರಿಯ ಅಧಿಕಾರಿಗಳು ಮುಂದುವರಿಸಿದಂತೆ ಕಾಣುತ್ತಿದೆ. ಹೊರ ರೋಗಿಗಳು ಬಂದು ನರಕಯಾತನೆ ಅನುಭವಿಸುತ್ತಿದ್ದರೂ, ಅದಕ್ಕೆ ಪೂರಕ ದಾಖಲೆಗಳಿದ್ದರೂ ವಿಕ್ಟೋರಿಯಾ ಆಸ್ಪತ್ರೆ ಮಾತ್ರ ಇಲ್ಲಿ ಎಲ್ಲವೂ ಸರಿ ಇದೆ. ಯಾವ ಸಮಸ್ಯೆಯೂ ಇಲ್ಲ ಎಂದು ನುಣುಚಿಕೊಳ್ಳುತ್ತಿದ್ದಾರೆ. ಜನರ ಹಣವನ್ನು ಸಂಬಳ ರೂಪದಲ್ಲಿ ಪಡೆದುಕೊಳ್ಳುವ ಇಂಥಾ ಸರ್ಕಾರಿ ನೌಕರರು ನಡೆಸುವ ಅಂಧಾ ದರ್ಬಾರ್ ಗೆ ಜನರು ತಮ್ಮ ಜೀವವನ್ನೇ ಬಲಿ ಕೊಡಬೇಕಾದ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಇದರ ಬಗ್ಗೆ ಆರೋಗ್ಯ ಸಚಿವರು ಆದಷ್ಟು ಬೇಗ ಗಮನ ಹರಿಸಿ ಈ ಎಲ್ಲಾ ಸಮಸ್ಯೆಗಳಿಗೆ ಅಂತ್ಯ ಆಡುವ ಅಗತ್ಯವಿದೆ.