ಬೆಂಗಳೂರು: ಹಿರಿಯ ಕನ್ನಡ ಸಿನಿಮಾ ನಿರ್ದೇಶಕ ಜೋ ಸೈಮನ್(Joe Simon) ಹೃದಯಾಘಾತದಿಂದ(heart attack) ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ನಿನ್ನೆ ಸಂಜೆ 4.30ರ ಸುಮಾರಿಗೆ ಅವರಿಗೆ ಹೃದಯಾಘಾತವಾಗಿದ್ದು, ಫಿಲಂ ಚೇಂಬರ್ ಸಭೆಯಲ್ಲಿ(Film Chamber meeting) ಕೊನೆಯುಸಿರೆಳೆದಿದ್ದಾರೆ.

ಫಿಲಂ ಚೇಂಬರ್ ಸಭೆಯಲ್ಲಿ ಆಗಿದ್ದೇನು..?
ಬೆಂಗಳೂರಿನ ಫಿಲಂ ಚೇಂಬರ್‌ನಲ್ಲಿ (Karnataka Film Chamber of Commerce) ನಿನ್ನೆ ಎಕ್ಸಿಕ್ಯುಟಿವ್ ಕಮಿಟಿ ಸಭೆ ನಡೆಯುತ್ತಿತ್ತು. ಮಧ್ಯಾಹ್ನ 3 ಗಂಟೆಗೆ ಆರಂಭವಾದ ಸಭೆಯಲ್ಲಿ ಸುಮಾರು 50 ಮಂದಿ ಸದಸ್ಯರು ಭಾಗಿಯಾಗಿದ್ದರು. ಜೋ ಸೈಮನ್ ಕೂಡ ಸಭೆಯಲ್ಲಿ ಹಾಜರಿದ್ದರು. ಈ ವೇಳೆ ಜೋ ಸೈಮನ್ ಹಾಗೂ ಫಿಲಂ ಚೇಂಬರ್ ಸದಸ್ಯರೊಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಫಿಲಂ ಚೇಂಬರ್‌ನಲ್ಲಿ 90ನೇ ವರ್ಷದ ಆಚರಣೆಯನ್ನು ಅದ್ಧೂರಿಯಾಗಿ ನಡೆಸಲು ಚರ್ಚೆ ನಡೆದಿದ್ದು, ಈ ವೇಳೆ ಜೋ ಸೈಮನ್ ಇಂತಹ ಕಾರ್ಯಕ್ರಮಗಳಿಗೆ ಕೋಟ್ಯಂತರ ರೂಪಾಯಿ ವ್ಯಹಿಸುವ ಬದಲು ಕನ್ನಡ ಚಿತ್ರರಂಗದ ಹಿರಿಯ ನಟ-ನಟಿಯರಿಗೆ ಎರಡು ಸಾವಿರ ಹಣ ನೀಡಬಹುದು ಎನ್ನುವ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಜೋ ಸೈಮನ್ ಅವರ ಮಾತಿಗೆ ಫಿಲಂ ಚೇಂಬರ್ ಸದಸ್ಯರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದು, ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ ಎನ್ನಲಾಗಿದೆ.

ಇದರಿಂದ ಅಸ್ವಸ್ಥಗೊಂಡಿದ್ದ ಜೋ ಸೈಮನ್ ಅವರು ವಾಶ್ ರೂಂ ಬಳಿ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅಲ್ಲಿದ್ದವರು ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದರು. ವೈದ್ಯರು ತುರ್ತು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಸಂಜೆ 4.30ರ ಸುಮಾರಿಗೆ ಅವರು ನಿಧನರಾದರು.

ಇತ್ತೀಚಿಗೆ ಫಿಲಂ ಚೇಂಬರ್ ಎಕ್ಸಿಕ್ಯುಟಿವ್ ಕಮಿಟಿ ಸಭೆಯ ಬಗ್ಗೆ ಕೆಲ ಹಿರಿಯ ನಟರು ಹಾಗೂ ನಿರ್ದೇಶಕರಿಗೆ ಅಸಮಾಧಾನವಿದ್ದು, ಈ ಕಾರಣದಿಂದಲೇ ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಸಭೆಗೆ ಮಾಧ್ಯಮಗಳ ಪ್ರವೇಶವನ್ನು ನಿರ್ಭಂಧಿಸಿದ್ದಾರೆ ಎನ್ನುವ ಆರೋಪಗಳು ಕೂಡ ಕೇಳಿ ಬರುತ್ತಿದೆ.






