ಬೆಂಗಳೂರು : ಜೂನ್.01: ವಿಶ್ವ ವಿದ್ಯಾಲಯಗಳು ಸಾಮಾಜಿಕ ಚಿಂತನೆ ಅಳವಡಿಸಿಕೊಳ್ಳದೆ ಸಮಾಜವನ್ನು ವಿಭಜಿಸುವ ರೀತಿಯಲ್ಲಿ ವರ್ತಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿ ಮಾಡಿದ ಕುಲಪತಿಗಳ ನಿಯೋಗದ ಜತೆ ವಿವಿಗಳ ಕಾರ್ಯವೈಖರಿ ನಿಜವಾದ ಉದ್ದೇಶಗಳಿಂದ ವಿಮುಖ ಆಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ ಸುಮಾರು 45 ನಿಮಿಷಗಳ ಕಾಲ ಚರ್ಚಿಸಿದರು.
ಸಾಮಾಜಿಕ ಮೌಲ್ಯ, ಸಾಮಾಜಿಕ ನ್ಯಾಯಕ್ಕಾಗಿ ವಿವಿಗಳು ತುಡಿಯಬೇಕು. ದೇಶದ ಭವಿಷ್ಯವನ್ನು ಹೆಚ್ಚು ವೈಜ್ಞಾನಿಕವಾಗಿ ರೂಪಿಸುವ ಶಕ್ತಿ ವಿವಿಗಳಿಗೆ ಇದೆ. ಆದರೆ, ತಮ್ಮ ನಿಜವಾದ ಉದ್ದೇಶಗಳಿಂದ ವಿವಿಗಳು ವಿಮುಖವಾಗಿ ಪ್ರತಿಗಾಮಿ ಆದರೆ ವಿದ್ಯಾರ್ಥಿಗಳ ಮತ್ತು ದೇಶದ ಭವಿಷ್ಯವೂ ಕರಾಳ ಆಗುತ್ತದೆ. ನಮ್ಮ ಸರ್ಕಾರ ಉನ್ನತ ಶಿಕ್ಷಣವನ್ನು ವೈಜ್ಞಾನಿಕ ತಳಹದಿಯಲ್ಲಿ ಬಲಪಡಿಸಲು ಬದ್ದವಾಗಿದೆ. ಇದಕ್ಕೆ ಹೊರತಾದದ್ದನ್ನು ಒಪ್ಪಿಕೊಳ್ಳುವುದಿಲ್ಲ ಎಂದರು.
ನಿಯೋಗದಲ್ಲಿ ಮಡಿಕೇರಿ ವಿವಿಯ ಪ್ರೊ. ಅಶೋಕ್ ಆಲೂರು, ಕೊಪ್ಪಳ ವಿವಿಯ ಡಾ.ಬಿ.ಕೆ.ರವಿ, ಬಾಗಲಕೋಟೆ ವಿವಿಯ ಪ್ರೊ.ದೇಶಪಾಂಡೆ, ಹಾವೇರಿ ವಿವಿಯ ಡಾ.ಜಂಗಮಶೆಟ್ಟಿ, ಬೀದರ್ ವಿವಿಯ ಪ್ರೊ.ಬಿರಾದಾರ್, ಹಾಸನ ವಿವಿಯ ಪ್ರೊ.ತಾರಾನಾಥ್ , ಚಾಮರಾಜನಗರ ವಿವಿಯ ಕುಲಪತಿ ಪ್ರೊ.ಗಂಗಾಧರ್ ಇದ್ದರು.