ಬೆಂಗಳೂರು : ನಮ್ಮ ಸರ್ಕಾರ ಬಂದಾಗ ನಿಮ್ಮನ್ನು ನೋಡಿಕೊಳ್ತೇವೆ ಎಂದು ರಾಜ್ಯ ಪೊಲೀಸರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆವಾಜ್ ಹಾಕಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಪೊಲೀಸರು ಎಲ್ಲಾ ನಾಯಕರಿಗೂ ಯಾವುದೇ ತಾರತಮ್ಯ ಮಾಡದೇ ಭದ್ರತೆ ನೀಡುತ್ತಾರೆ. ಆದರೆ ಡಿ.ಕೆ ಶಿವಕುಮಾರ್ ಮಾತ್ರ ನಿನ್ನೆ ಪೊಲೀಸರಿಗೆ ಆವಾಜ್ ಹಾಕಿದ್ದಾರೆ. ಹೀಗಾಗಿ ಡಿಕೆಶಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ .
ಚುನಾವಣಾ ಆಯೋಗದ ಕಚೇರಿಯಿಂದ ಹೊರ ಬಂದ ಬಳಿಕ ಮಾತನಾಡಿದ ಅವರು, ಡಿಕೆಶಿವಕುಮಾರ್ ನೀತಿ ಸಂಹಿತೆ ಉಲ್ಲಂಘಿಸಿ ಪೊಲೀಸ್ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದಾರೆ. ಹೀಗಾಗಿ ಡಿಕೆಶಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದೇನೆ ಎಂದು ಹೇಳಿದರು.